ರಕ್ಷಣಾ ಸಚಿವಾಲಯ

ಭಾರತೀಯ ವಾಯುಪಡೆಯಿಂದ ಸಾರ್ವಜನಿಕರಿಗಾಗಿ ಜಾಲಹಳ್ಳಿಯ ವಾಯುನಿಲ್ದಾಣದಲ್ಲಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ

Posted On: 04 MAY 2021 3:12PM by PIB Bengaluru

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯಿಂದ ತತ್ತರಿಸಿರುವ ಬೆಂಗಳೂರು ಮಹಾನಗರದ ಸಾರ್ವಜನಿಕರಿಗೆ ನೆರವು ನೀಡುವ ಉದ್ದೇಶದಿಂದ ಭಾರತೀಯ ವಾಯುಪಡೆ ಜಾಲಹಳ್ಳಿಯ ವಾಯು ನಿಲ್ದಾಣದಲ್ಲಿ 100 ಹಾಸಿಗೆಗಳ ಕೋವಿಡ್ ಚಿಕಿತ್ಸಾ ಸೌಕರ್ಯವನ್ನು ಸ್ಥಾಪಿಸಲು ನಿರ್ಧರಿಸಿದೆ

ಮೊದಲಿಗೆ ಆಮ್ಲಜನಕ ಸಾಂದ್ರಕಗಳ ಸಹಿತ 20 ಹಾಸಿಗೆಗಳ ಮೂಲಕ 2021 ಮೇ 6 ರಿಂದ ಸೌಕರ್ಯ ಕಾರ್ಯಾರಂಭ ಮಾಡಲಿದೆ. ರಾಜ್ಯ ಸರ್ಕಾರ ಒಮ್ಮೆ ಆಮ್ಲಜನಕ ಪೂರೈಕೆ ಲಭ್ಯತೆಯನ್ನು ಖಾತ್ರಿಪಡಿಸಿದ ನಂತರ ಉಳಿದ 80 ಹಾಸಿಗೆಗಳು 2021 ಮೇ 20 ವೇಳೆಗೆ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದೆ. ಒಟ್ಟು 100 ಹಾಸಿಗೆಗಳ ಪೈಕಿ 10 ಐಸಿಯು ಹಾಸಿಗೆಗಳು ಮತ್ತು 40 ಹಾಸಿಗೆಗಳಿಗೆ ಪೈಪ್ಡ್ ಆಕ್ಸಿಜನ್ ಹೊಂದಿರಲಿವೆ. ಉಳಿದ 50 ಹಾಸಿಗೆಗಳಿಗೆ ಆಕ್ಸಿಜನ್ ಸಾಂದ್ರಕಗಳ ಸಂಪರ್ಕವಿರಲಿದೆ.

ಸೌಕರ್ಯವನ್ನು ವಾಯುಪಡೆಯ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯ ಪರಿಣಿತರು, ವೈದ್ಯರು, ನರ್ಸ್ ಗಳು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ನಿರ್ವಹಿಸಲಿದ್ದಾರೆ. ಸೌಕರ್ಯಕ್ಕೆ ರೋಗಿಗಳ ದಾಖಲಾತಿಯನ್ನು ಬಿಬಿಎಂಪಿ/ಕರ್ನಾಟಕ ಸರ್ಕಾರದ ಸಮನ್ವಯದೊಂದಿಗೆ ನೋಡಲ್ ಅಧಿಕಾರಿಯ ಮೂಲಕ ಮಾಡಿಕೊಳ್ಳಲಾಗುವುದು. ಕರ್ನಾಟಕ ಸರ್ಕಾರ ಸೌಕರ್ಯಕ್ಕೆ ಅಗತ್ಯ ಫಾರ್ಮಸಿ ಆಕ್ಸಿಜನ್ ಮತ್ತು ಭದ್ರತೆಯ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿದೆ.

ಭಾರತೀಯ ವಾಯುಪಡೆ ಈಗಾಗಲೇ ದೇಶದೊಳಗೆ ಮತ್ತು ವಿದೇಶಗಳಿಂದ ಪೂರೈಕೆಯಾಗುವ ಆಮ್ಲಜನಕ ಮತ್ತು ವೈದ್ಯಕೀಯ ಸಾಮಗ್ರಿಗಳ ಪೂರೈಕೆಯನ್ನು ಖಾತ್ರಿಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಇದಕ್ಕಾಗಿ ಭಾರತೀಯ ವಾಯುಪಡೆಯ ಸಾರಿಗೆ ವಿಮಾನಗಳನ್ನು ದಿನದ 24 ಗಂಟೆಗಳ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

***



(Release ID: 1715904) Visitor Counter : 58