ರಾಷ್ಟ್ರಪತಿಗಳ ಕಾರ್ಯಾಲಯ
ಕರ್ನಾಟಕದ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾರತದ ರಾಷ್ಟ್ರಪತಿ ಮಾನ್ಯ ಶ್ರೀ ರಾಮನಾಥ್ ಕೋವಿಂದ್ ಅವರ ಭಾಷಣ
Posted On:
09 FEB 2021 12:47PM by PIB Bengaluru
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಜತ ಮಹೋತ್ಸವ ವರ್ಷದಲ್ಲಿ ಘಟಿಕೋತ್ಸವ ಉದ್ದೇಶಿಸಿ ಭಾಷಣ ಮಾಡುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ.
ನಾನು ಪದವಿ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮಲ್ಲಿ ಕೆಲವರು ವಿಶೇಷ ಪ್ರಶಸ್ತಿ ಮತ್ತು ಪದಕಗಳನ್ನು ಪಡೆದಿದ್ದೀರಿ ಮತ್ತು ನೀವು ವಿಶೇಷ ಪ್ರಶಂಸೆಗೆ ಅರ್ಹರಾಗಿದ್ದೀರಿ. ನಾನು ಗಮನಿಸಿದಂತೆ ನಾನು ಈಗಷ್ಟೇ ಪ್ರದಾನ ಮಾಡಿದ 12 ಚಿನ್ನದ ಪದಕಗಳ ಪೈಕಿ, ಎಂಟನ್ನು ನಮ್ಮ ಹೆಣ್ಣು ಮಕ್ಕಳು ಪಡೆದಿದ್ದಾರೆ. ಈ ಘಟಿಕೋತ್ಸವದಲ್ಲಿ 111 ಚಿನ್ನದ ಪದಕಗಳ ಪೈಕಿ 87 ಪದಕಗಳನ್ನು ನಮ್ಮ ಹೆಣ್ಣುಮಕ್ಕಳು ಪಡೆದಿದ್ದಾರೆ. ಇದು ಶೇಕಡ 80ರಷ್ಟಾಗಿದ್ದು, ಅದ್ಭುತ ಸಾಧನೆಯಾಗಿದೆ. ವೈದ್ಯಕೀಯ ವಿಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ನಮ್ಮ ದೇಶವನ್ನು ಭವಿಷ್ಯದತ್ತ ಮುನ್ನಡೆಸುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಇದನ್ನು ಸಾಧ್ಯವಾಗಿಸಿದ ಪೋಷಕರು, ಬೋಧಕ ಸಿಬ್ಬಂದಿ ಮತ್ತು ಆಡಳಿತ ಸಿಬ್ಬಂದಿಯನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ.
ಆರೋಗ್ಯ ವಿಜ್ಞಾನದ ವಿದ್ಯಾರ್ಥಿಗಳಾಗಿ ನೀವು ಬೋಧಿಸುವುದು, ಕಲಿಯುವುದು ಮತ್ತು ಅಭ್ಯಾಸ ಮಾಡುವುದು ಜ್ಞಾನದ ಪ್ರಮುಖ ಶಾಖೆಗಳಲ್ಲಿ ಸೇರಿವೆ. ಎಲ್ಲ ಕಾಲಕ್ಕೂ ನೋವನ್ನು ನಿವಾರಿಸಲು ಮತ್ತು ಜೀವಗಳನ್ನು ಉಳಿಸಲು ಸಹಾಯ ಮಾಡುವ ವಿಜ್ಞಾನಗಳಲ್ಲಿ ಶ್ರೇಷ್ಠವಾದ್ದು. ನಿಮಗೆ ತಿಳಿದಿರುವಂತೆ, ಪ್ರಾಚೀನ ಭಾರತವು ಆರೋಗ್ಯ ರಕ್ಷಣೆಗಾಗಿ ಹೆಚ್ಚು ಅಭಿವೃದ್ಧಿ ಹೊಂದಿದ ಜ್ಞಾನದ ನೆಲೆಯನ್ನು ಸೃಷ್ಟಿಸಿದೆ. ಅವರು ಇದನ್ನು ಆಯುರ್ವೇದ ಎಂದು ಕರೆಯುತ್ತಾರೆ, ಅಂದರೆ ಜೀವನದ ವಿಜ್ಞಾನ ಅಥವಾ ದೀರ್ಘಾಯುಷ್ಯದ ವಿಜ್ಞಾನ.
ಕಳೆದ ಒಂದು ವರ್ಷದಲ್ಲಿ ನಿಮ್ಮ ವಿಷಯವು ಜ್ಞಾನದ ಪ್ರಮುಖ ಶಾಖೆಯಾಗಿದೆ. ಕೋವಿಡ್ -19 ಪ್ರಪಂಚದಾದ್ಯಂತ ಹಿಂದೆಂದೂ ಕಂಡು ಕೇಳರಿಯದ ಮಟ್ಟಗಳ ಸಂಕಟ ಮತ್ತು ದುಃಖವನ್ನು ಉಂಟುಮಾಡಿದೆ. ತಮ್ಮ ಜೀವಕ್ಕೆ ದೊಡ್ಡ ಅಪಾಯವಿದ್ದರೂ ಸಹ ಸವಾಲು ಎದುರಿಸಿ ನಿಂತ ನಮ್ಮ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ನಿಜವಾಗಿಯೂ, ಭಾರತ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳು ಅಸಂಖ್ಯಾತ ಜೀವಗಳನ್ನು ಉಳಿಸಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಈ ವಿಶ್ವವಿದ್ಯಾಲಯ ಸಾಂಕ್ರಾಮಿಕದ ವಿರುದ್ಧ ವೈದ್ಯರು, ದಾದಿಯರಿಂದ ಹಿಡಿದು ಆಡಳಿತಗಾರರು ಮತ್ತು ಆಸ್ಪತ್ರೆ ಸೌಲಭ್ಯ ಒದಗಿಸುವವರ ತನಕ ಎರಡು ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿರುವ ನಿಮ್ಮ ಸಂಸ್ಥೆಯ ಪಾತ್ರ ನಿಜಕ್ಕೂ ಮಹತ್ವದ್ದು. ಈ ಅಭಿಯಾನ, ಕೋವಿಡ್ 19 ರೋಗಿಗಳಿಗೆ ಗುಣಾತ್ಮಕ ಚಿಕಿತ್ಸೆ ನೀಡಲು ಏಕರೂಪದ ಸ್ಪಂದನೆ ರೂಪಿಸಲು ಅಮೂಲ್ಯ ಕೊಡುಗೆ ನೀಡಿದೆ.
ತಡವಿಲ್ಲದೆ, ನಿಮ್ಮಂತಹ ಆರೋಗ್ಯ ವಿಜ್ಞಾನಿಗಳು ಕೊರೊನಾ ವೈರಾಣುವಿನ ಮೇಲೆ ಮೇಲುಗೈ ಸಾಧಿಸಿದ್ದಾರೆ. ದಾಖಲೆಯ ಸಮಯದಲ್ಲಿ ಹಲವಾರು ಲಸಿಕೆಗಳನ್ನು ಉತ್ಪಾದಿಸಲಾಗಿದೆ. ಸ್ವಾವಲಂಬಿ ಭಾರತವಾದ ‘ಆತ್ಮ-ನಿರ್ಭರ ಭಾರತ’ ಕರೆಗೆ ಸ್ಪಂದಿಸಿದ ನಮ್ಮ ರಾಷ್ಟ್ರವು ಲಸಿಕೆಯನ್ನು ತಯಾರಿಸಿದ್ದು ಮಾತ್ರವಲ್ಲದೆ ಇತರ ರಾಷ್ಟ್ರಗಳಿಗೂ ತಲುಪಿದೆ. ಇತಿಹಾಸದಲ್ಲಿ ಅತಿದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ.
ಮಹನೀಯರೇ ಮತ್ತು ಮಹಿಳೆಯರೇ,
ವಿಶ್ವದಲ್ಲಿ ಮಾನ್ಯತೆ ಹೊಂದಿದೆ ಸಂಸ್ಥೆಗಳ ಜಾಲವನ್ನು ಹೊಂದಿರುವ ಈ ಪ್ರತಿಷ್ಠಿತ ವಿಶ್ವ ವಿದ್ಯಾಲಯ, ಆರೋಗ್ಯ ಆರೈಕೆ ಶಿಕ್ಷಣದ ರಂಗದಲ್ಲಿ ಹಲವು ಆವಿಷ್ಕಾರಗಳನ್ನು ಮಾಡಿದೆ ಎಂದು ತಿಳಿದು ನನಗೆ ಸಂತೋಷವಾಯಿತು. ಈ ಸಂಸ್ಥೆಯ ಮುಂಜೂಣಿಯಲ್ಲಿ ನಿಂತವರು ಮಾಡಿದ ನಿರಂತರ ಪ್ರಯತ್ನದ ಫಲವಾಗಿ ಇಂದು ಇದು ಜಾಗತಿಕ ವಿಶ್ವಾಸಾರ್ಹ ಬ್ರಾಂಡ್ ಆಗಿ ಹೊರಹೊಮ್ಮಿದೆ.
ಭಾರತದ ಈ ಬೃಹತ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 800ಕ್ಕೂ ಹೆಚ್ಚು ಮಾನ್ಯತೆ ಪಡೆದ ಸಂಸ್ಥೆಗಳ ಜಾಲ ಹೊಂದಿದ್ದು, ವಿಸ್ತೃತ ಶ್ರೇಣಿಯ ಅಂದರೆ ಆಯುರ್ವೇದ, ಯುನಾನಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ, ಹೋಮಿಯೋಪತಿ ಮತ್ತು ಫಾರ್ಮಸಿ ಸೇರಿದಂತೆ ಆರೋಗ್ಯ ವಿಜ್ಞಾನದಲ್ಲಿ ವ್ಯಾಪಕವಾದ ಕೋರ್ಸ್ ಗಳನ್ನು ಒಳಗೊಂಡಿದೆ ಎಂದು ನನಗೆ ತಿಳಿಸಲಾಯಿತು. ಇದು ನಿಜಕ್ಕೂ ಆರೋಗ್ಯ ರಕ್ಷಣೆಯ ಸಮಗ್ರ ದೃಷ್ಟಿಯಾಗಿದೆ.
ಈ ವಿಶ್ವವಿದ್ಯಾಲಯ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಜ್ಞಾನ ಮತ್ತು ಕೌಶಲವನ್ನು ಮುಂದುವರಿಸಲು ಮುಂಚೂಣಿಯಲ್ಲಿದೆ. ಈ ಉದ್ದೇಶಕ್ಕಾಗಿ, ಭಾರತದ ಮತ್ತು ವಿದೇಶಗಳ ಆಯ್ದ ಶ್ರೇಷ್ಠ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ.
ಇಂದಿನ ಘಟಿಕೋತ್ಸವದಲ್ಲಿ ಸುಮಾರು 28,000 ಪದವಿಧರರು, 6 ಸಾವಿರ ಸ್ನಾತಕ ಪದವೀಧರರು ಮತ್ತು 200 ಸೂಪರ್ ಸ್ಪೆಷಾಲಿಟಿ ಅಭ್ಯರ್ಥಿಗಳು, ಫೆಲೋಷಿಪ್ ಪ್ರಮಾಣಪತ್ರ ಕೋರ್ಸ್ ಮತ್ತು ಪಿ.ಎಚ್ಡಿಯಂಥ ಪದವಿಗಳನ್ನು ಪಡೆದಿದ್ದಾರೆ. ಈ ಸಂಖ್ಯೆ ಅತ್ಯಂತ ತೃಪ್ತಿದಾಯಕವಾಗಿದೆ. ಇಂದು, ಒಟ್ಟಾರೆ ಆರೋಗ್ಯ ಆರೈಕೆಯ ರಂಗದಲ್ಲಿ ವೃತ್ತಿಪರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂಬುದು ಹೃದಯಸ್ಪರ್ಶಿಯಾಗಿದೆ.
ಮಹನೀಯರೆ ಮತ್ತು ಮಹಿಳೆಯರೇ,
ಭಾರತದಲ್ಲಿ ಆರೋಗ್ಯ-ಆರೈಕೆ ವಿತರಣೆಯು ರೋಗ ತಡೆಗಟ್ಟುವಿಕೆ, ರೋಗ ಪತ್ತೆ ಮತ್ತು ಚಿಕಿತ್ಸೆ --ಎಲ್ಲಾ ಹಂತಗಳಲ್ಲಿಯೂ ಪರಿವರ್ತನೆಗೆ ಒಳಗಾಗಲು ಸಿದ್ಧವಾಗಿದೆ.. ಆರೋಗ್ಯ ಕ್ಷೇತ್ರದ ಯಾವುದೇ ಒಂದು ಘಟಕವು ಫಲಿತಾಂಶಗಳನ್ನು ನೀಡಲು ಮತ್ತು ಫಲಶ್ರುತಿಗಳನ್ನು ಸಾಧಿಸಲು ಸಾಧ್ಯವಿಲ್ಲ. ಕ್ಷೇತ್ರದ ವಿಕಾಸವು ಎಲ್ಲಾ ಭಾದ್ಯಸ್ಥರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಭಾಗವಹಿಸುವಿಕೆ ಹಾಗೂ ನಾವೀನ್ಯತೆಯ ಬಳಕೆ ಉದ್ದೇಶ ಮತ್ತು ಕಾರ್ಯಗತಗೊಳಿಸುವಿಕೆಗೆ ಕರೆ ನೀಡುತ್ತದೆ.
ಮಿಗಿಲಾಗಿ, ಒಂದು ಶತಮಾನಕ್ಕೂ ಹೆಚ್ಚು ಸಮಯದ ಪ್ರಥಮ ಪ್ರಮುಖ ಸಾಂಕ್ರಾಮಿಕವು ಅನಿರೀಕ್ಷಿತ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳಿಗೆ ಉತ್ತಮವಾಗಿ ಸಿದ್ಧರಾಗಿರಲು ನಮಗೆ ಪಾಠ ಕಲಿಸಿದೆ. ಕೋವಿಡ್ -19 ಅಪರೂಪವಾಗಿ ಸಂಭವಿಸುವ ಒಂದು ರೀತಿಯ ಆರೋಗ್ಯ-ಬಿಕ್ಕಟ್ಟು ಎಂದು ತೋರುತ್ತದೆಯಾದರೂ, ವಿಜ್ಞಾನಿಗಳ ಒಂದು ವರ್ಗ, ಮುಂದೆ ಇದೇ ರೀತಿಯ ಸವಾಲುಗಳಿಗೆ ಸಿದ್ಧರಾಗಿರಬೇಕು ಎಂದು ಎಚ್ಚರಿಸಿದೆ. ಜಗತ್ತು ಸರಿಯಾದ ಪಾಠಗಳನ್ನು ಕಲಿತಿದೆ ಎಂದು ನಾವು ಭಾವಿಸೋಣ. ಕೋವಿಡ್ ನಂತರದ ಹಂತದಲ್ಲಿ, ಸಾರ್ವಜನಿಕ ಆರೋಗ್ಯ-ಆರೈಕೆಯ ಬಗ್ಗೆ ಜಗತ್ತು ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಅಲ್ಲಿ ವಂಚಿತರಿಗೆ ಆದ್ಯತೆ ನೀಡಬೇಕಾಗುತ್ತದೆ, ವರ್ಗ ಮತ್ತು ಭೌಗೋಳಿಕತೆಯನ್ನು ಮೀರಿದ ಬಿಕ್ಕಟ್ಟನ್ನು ನಾವು ನೋಡಿದ್ದೇವೆ. ಆದರೆ ಸಾಂಕ್ರಾಮಿಕ ರೋಗವು ಇತರರು ಅಪಾಯದಲ್ಲಿದ್ದರೆ ಒಬ್ಬರು ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂಬುದನ್ನು ಜಗತ್ತಿಗೆ ಕಲಿಸಿದೆ. ಇದು ಸಾರ್ವತ್ರಿಕ ಭ್ರಾತೃತ್ವದ ಪಾಠವಾಗಿದೆ.
ಈ ಸ್ಫೂರ್ತಿ, ಪ್ರಾಸಂಗಿಕವಾಗಿ, ಸಾರ್ವತ್ರಿಕ ಪ್ರಾರ್ಥನೆ ಎಂದು ಕರೆಯಲ್ಪಡುವ ಸುಂದರವಾದ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ. ಅದರ ಭಾಗವಾಗಿ, ನಾವು ಪ್ರಾರ್ಥಿಸುತ್ತೇವೆ:
सर्वे भवन्तु सुखिनः, सर्वे सन्तु निरामयाः।
[ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ]
ಎಲ್ಲರೂ ಆನಂದವಾಗಿರಲಿ, ಎಲ್ಲರೂ ಕಾಯಿಲೆ ಮುಕ್ತವಾಗಿರಲಿ.
‘ಎಲ್ಲರೂ ಕಾಯಿಲೆಯಿಂದ ಮುಕ್ತರಾಗಲು’ ಪ್ರಯತ್ನಿಸುವುದರಲ್ಲಿ ನಿಮ್ಮ ನಿಜವಾದ ಆಶಯ ಕಂಡುಬರುತ್ತದೆ.
ಆತ್ಮೀಯ ವಿದ್ಯಾರ್ಥಿಗಳೇ,
ಇಂದು ನಿಮ್ಮ ಜೀವನದಲ್ಲಿ ಸ್ಮರಣೀಯ ದಿನ. ಚಿಕಿತ್ಸಕರಾಗಿ ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮಲ್ಲರನ್ನೂ ದೇವರು ಹರಸಲಿ. ನೀವು ಮಾನವ ಜೀವನದೊಂದಿಗೆ ವ್ಯವಹರಿಸುವ ಮತ್ತು ವೈಯಕ್ತಿಕ ಸಮಗ್ರತೆಯ ಅತ್ಯುನ್ನತ ಮಟ್ಟದ ಅಗತ್ಯವಿರುವ ಅತ್ಯಂತ ಉದಾತ್ತ ವೃತ್ತಿಯಲ್ಲಿದ್ದೀರಿ ಎಂದು ಯಾವಾಗಲೂ ಅರಿತುಕೊಳ್ಳುವ ಬುದ್ಧಿವಂತಿಕೆಯನ್ನು ದೇವರು ನಿಮಗೆ ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಇಂದು, ನಿಮ್ಮ ಶಿಕ್ಷಣ ಕೊನೆಗೊಂಡ ದಿನವಲ್ಲ, ಇಂದು ಒಂದು ಹಂತ ಮಾತ್ರ ಮುಗಿದಿದೆ. ಈಗ ನಿಜವಾದ ಶಿಕ್ಷಣ ಆರಂಭವಾಗಲಿದೆ. ವೈದ್ಯಕೀಯ ವಿಜ್ಞಾನ ದಾಪುಗಾಲು ಹಾಕುತ್ತಿದೆ ಮತ್ತು ಹಿಂದೆಂದಿಗಿಂತ ಹೆಚ್ಚು ವೇಗವಾಗಿ ಸಾಗುತ್ತಿದೆ. ವೈದ್ಯಕೀಯ ವಿಜ್ಞಾನಗಳಲ್ಲಿನ ಸಂಶೋಧನೆ ಮತ್ತು ತಾಂತ್ರಿಕ ಆವಿಷ್ಕಾರಗಳ ತ್ವರಿತ ಬೆಳವಣಿಗೆಯು ಜ್ಞಾನದ ಪ್ರಮಾಣವನ್ನು ಹೆಚ್ಚಿಸುತ್ತದೆ. ವೈರಾಣು ರೋಗಕಾರಕದ ಮಾನವನ ಆರೋಗ್ಯ ಮತ್ತು ನಡವಳಿಕೆಯ ತಿಳಿವಳಿಕೆಯನ್ನು ಕೆಲವೇ ದಿನಗಳಲ್ಲಿ ಡಿ-ಕೋಡ್ ಮಾಡಲಾಗಿದೆ, ವೈದ್ಯಕೀಯ ವಿಜ್ಞಾನದಲ್ಲಿ ಅನೂಹ್ಯ ಪ್ರಗತಿಗೆ ಧನ್ಯವಾದಗಳು. ಅಂದರೆ, ಇದು ಸ್ವಾಗತಾರ್ಹ ಬೆಳವಣಿಗೆ. ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಸುಮಾರು 13 ತಿಂಗಳುಗಳಲ್ಲಿ, ವಿಜ್ಞಾನಿಗಳು ಬೇಗನೆ ವೈರಾಣುವನ್ನು ಅನ್ನು ಅರ್ಥಮಾಡಿಕೊಂಡು, ಅದರ ಹರಡುವಿಕೆಯನ್ನು ನಿಯಂತ್ರಿಸುವ ಮಾರ್ಗಗಳನ್ನು ರೂಪಿಸಲು ಸಾಧ್ಯವಾಯಿತು ಎಂಬುದಕ್ಕೆ ನಾವು ಸಾಕ್ಷಿಯಾಗಿದ್ದೇವೆ.
ನಿಮ್ಮ ಜೀವನದುದ್ದಕ್ಕೂ ನೀವು ವಿದ್ಯಾರ್ಥಿಯಾಗಿದ್ದು ಅದು ನಿಮ್ಮಿಂದ ನಿಜವಾದ ನಮ್ರತೆಯನ್ನು ಬಯಸುತ್ತದೆ. ಇಂದಿನಿಂದ, ನೀವೂ ವೈದ್ಯರು. ನಿಮ್ಮ ಜ್ಞಾನ ಮತ್ತು ಕೌಶಲ್ಯಗಳು ಜನರಿಗೆ ರೋಗದಿಂದ ಪರಿಹಾರವನ್ನು ನೀಡುತ್ತವೆ ಮತ್ತು ಜೀವವನ್ನು ಉಳಿಸುತ್ತವೆ. ಅದಕ್ಕಾಗಿಯೇ ಜನರು ವೈದ್ಯರು ಮತ್ತು ಸಂಬಂಧಿತ ವೃತ್ತಿಪರರನ್ನು ಭೂಮಿಯ ಮೇಲಿನ ದೇವತೆಗಳೆಂದು ಪರಿಗಣಿಸುತ್ತಾರೆ. ಅವರ ನಂಬಿಕೆ ಮತ್ತು ಗೌರವವನ್ನು ಗೌರವಿಸಲು ನೀವು ಕಲಿಯುವಿರಿ. ನೀವು ಸಹಾಯ ಮಾಡಬಹುದಾದ ಎಲ್ಲ ಜನರನ್ನೂ ತಲುಪಲು ನೀವು ಪ್ರಯತ್ನಿಸುತ್ತೀರಿ. ಈ ಉದಾತ್ತ ವೃತ್ತಿಯಲ್ಲಿ ನಿಮ್ಮ ಪ್ರವೇಶವು ನಿಮಗಾಗಿ ತೆರೆದುಕೊಳ್ಳುತ್ತದೆ, ಮಾನವಕುಲದ ಸೇವೆ ಸಲ್ಲಿಸಲು ಅನಿರೀಕ್ಷಿತ ಮತ್ತು ಅಭೂತಪೂರ್ವ ಅವಕಾಶಗಳಿವೆ. ಈ ಅವಕಾಶಗಳನ್ನು ನೀವು ಹೇಗೆ ಉತ್ತಮವಾಗಿ ಬಳಸಿಕೊಳ್ಳುತ್ತೀರಿ ಎಂಬುದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಈ ವರ್ಷ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸಲಾಯಿತು. ಇದರಲ್ಲಿ ಆರೋಗ್ಯ ಮತ್ತು ಯೋಗಕ್ಷೇಮವನ್ನು ಆತ್ಮ ನಿರ್ಭರ ಭಾರತದ ಆರು ಪ್ರಮುಖ ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದೇಶದಲ್ಲಿ ಆರೋಗ್ಯ ಆರೈಕೆಯ ಮೂಲಸೌಕರ್ಯವನ್ನು ಉತ್ತೇಜಿಸುವುದಕ್ಕೆ ಬಲವಾದ ಒತ್ತು ನೀಡಲಾಗಿದೆ. ಈ ರಾಷ್ಟ್ರೀಯ ಸಂಪನ್ಮೂಲದ ಸಮರ್ಥ ಬಳಕೆ ನಿಮ್ಮ ಸಕ್ರಿಯ ಬೆಂಬಲ ಮತ್ತು ಕೊಡುಗೆಯಿಂದ ಮಾತ್ರ ಸಾಧ್ಯವಾಗುತ್ತದೆ.
ನಿಸ್ಸಂದೇಹವಾಗಿ ನಮ್ಮ ದೇಶದಲ್ಲಿ ಆರೋಗ್ಯ ಆರೈಕೆ ಸೇವೆಯ ಬೇಡಿಕೆ ಅಭೂತಪೂರ್ವವಾಗಿ ಬೆಳೆಯುತ್ತಿದೆ ಮತ್ತು ಭಾರತದಲ್ಲಿ ನೀವು ಪರಿಹರಿಸಲಿರುವ ಆರೋಗ್ಯ-ರಕ್ಷಣೆಯ ಸಮಸ್ಯೆಗಳ ವ್ಯಾಪ್ತಿಯು ಇಡೀ ವಿಶ್ವದಲ್ಲೇ ವಿಶಾಲವಾದದ್ದು. ಜಗತ್ತಿನಾದ್ಯಂತದ ಇತ್ತೀಚಿನ ಪ್ರಗತಿಗಳಿಂದ ಕಲಿಯುವ ಮೂಲಕ ನಿಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ನವೀಕರಿಸುತ್ತಿದ್ದರೆ, ನಿಮ್ಮ ವೃತ್ತಿಯಲ್ಲಿ ನೀವು ಖಂಡಿತವಾಗಿಯೂ ನಾಯಕರಾಗಿ ಹೊರಹೊಮ್ಮಬಹುದು. ಜಾಗತಿಕ ವೈದ್ಯಕೀಯ ಸಮುದಾಯದಲ್ಲಿ ನೀವು ಜ್ಞಾನ-ಸೃಷ್ಟಿಕರ್ತರಾಗಬೇಕೆಂದು ನಾನು ನಿರೀಕ್ಷಿಸುತ್ತೇನೆ.
ಈ ಮಹೋನ್ನತ ಸಂಸ್ಥೆಗೆ ಮಾರ್ಗದರ್ಶನ ನೀಡುತ್ತಿರುವುದಕ್ಕಾಗಿ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವನ್ನು ನಾನು ಪ್ರಶಂಸಿಸುತ್ತೇನೆ. ಮುಂದೆ ವಿಶ್ವವಿದ್ಯಾಲಯದ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರ ಭವಿಷ್ಯಕ್ಕಾಗಿ ನಿಮಗೆ ಮತ್ತೊಮ್ಮೆ ಶುಭ ಹಾರೈಸುತ್ತೇನೆ.
ಧನ್ಯವಾದಗಳು,
ಜೈಹಿಂದ್!
***
(Release ID: 1696442)
Visitor Counter : 192