ಹಣಕಾಸು ಸಚಿವಾಲಯ

ವಿಶ್ವ ದರ್ಜೆ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕೆ 2020-2025ನೇ ಸಾಲಿನ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ (ಎನ್‌ಐಪಿ)


15ನೇ ಆರ್ಥಿಕ ವರ್ಷದ ರೂ.51935 ಕೋಟಿ; 20ನೇ ಆರ್ಥಿಕ ವರ್ಷದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಒಟ್ಟು ಹೂಡಿಕೆ ರೂ 172767 ಕೋಟಿಗೆ ಹೆಚ್ಚಳ

ಡಿಸೆಂಬರ್ 13, 2020 ರ ವೇಳೆಗೆ ಭಾರತೀಯರ ಸ್ಥಳಾಂತರಕ್ಕೆ ವಂದೇ ಭಾರತ್ ಮಿಷನ್; 30 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಆಗಮನದ ವರದಿ

ಸಾಗರಮಾಲಾ ಕಾರ್ಯಕ್ರಮದಡಿ 500 ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆ; ರೂ 3.59 ಲಕ್ಷ ಕೋಟಿಗಿಂತ ಹೆಚ್ಚು ಬಂಡವಾಳ ಹೂಡಿಕೆ

ಸಾಂಕ್ರಾಮಿಕ ಸಮಯದಲ್ಲಿ ಸಾಮರ್ಥ್ಯ ವಿಸ್ತರಣೆ: 2050 ರವರೆಗೆ ಪೂರ್ವಯೋಜಿತ ಸಂಚಾರ ಅಗತ್ಯತೆಗಳನ್ನು ಪೂರೈಸಲು ರೈಲ್ವೆ ಇಲಾಖೆ ಕರಡು ರಾಷ್ಟ್ರೀಯ ರೈಲು ಯೋಜನೆಯನ್ನು ಪ್ರಾರಂಭಿಸಿದೆ

1.63 ಲಕ್ಷ ಗ್ರಾಮ ಪಂಚಾಯಿತಿಗಳ (ಜಿಪಿಎಸ್) ವ್ಯಾಪ್ತಿಯನ್ನು ಪೂರೈಸಲು ಸುಮಾರು 4.87 ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ಕೇಬಲ್ ನ್ನು ದೂರಸಂಪರ್ಕ ಇಲಾಖೆಯಿಂದ ಹಾಕಲಾಗುತ್ತಿದೆ; ಸುಮಾರು 1.51 ಲಕ್ಷ ಜಿಪಿಎಸ್ ಗಳು ಸೇವೆಗೆ ಸಿದ್ಧವಾಗಿದೆ

14 ಕೋಟಿಗೂ ಹೆಚ್ಚು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆ

ಸ್ಥಾಪಿತ ವಿದ್ಯುತ್ ಸಾಮರ್ಥ್ಯ, ಮಾರ್ಚ್-2019ರಲ್ಲಿ 3,56,100 ಮೆಗಾವ್ಯಾಟ್‌ನಿಂದ ಅಕ್ಟೋಬರ್-2020 ರಲ್ಲಿ 3,73,436 ಮೆಗಾವ್ಯಾಟ್‌ಗೆ ಹೆಚ್ಚಳ

ಪ್ರಧಾನಮಂತ್ರಿ ಆವಾಸ್ ಯೋಜನೆ

Posted On: 29 JAN 2021 3:27PM by PIB Bengaluru

ಅನಿರೀಕ್ಷಿತ ಕೋವಿಡ್-19  ಸಾಂಕ್ರಾಮಿಕ ರೋಗ ಮತ್ತು ಅದರಿಂದುಂಟಾದ ಪರಿಣಾಮಕಾರಿ ಸವಾಲುಗಳ ಮಧ್ಯೆಯೂ ಭಾರತೀಯ ಆರ್ಥಿಕತೆಯ ಮೂಲಭೂತಸೌಕರ್ಯ ಕ್ಷೇತ್ರವು ವೇಗವಾದ ಚೇತರಿಕೆಯ ಹಾದಿಯಲ್ಲಿದೆ ಎಂದು ಆರ್ಥಿಕ ಸಮೀಕ್ಷೆ ಗಮನಿಸಿದೆ. ಈ ಸಮೀಕ್ಷೆಯನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದರು.

ದೇಶದಲ್ಲಿ ಮೂಲಭೂತಸೌಕರ್ಯಗಳ ಅಭಿವೃದ್ಧಿಯು ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಮೂಲಭೂತಸೌಕರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಬಗೆಯ ಸಂಪರ್ಕ ಕೊಂಡಿಗಳನ್ನು ಸೂಕ್ತವಾಗಿ ಸ್ಥಾಪಿಸಲಾಗಿದೆ. ಹಾಗಾಗಿ , ಶೀಘ್ರಗತಿಯ ಮತ್ತು ಅಂತರ್ಗತ ಆರ್ಥಿಕ ಅಭಿವೃದ್ಧಿಗೆ ಮೂಲಸೌಕರ್ಯದಲ್ಲಿನ ಹೂಡಿಕೆ ಅತ್ಯಂತ ಅವಶ್ಯಕವಾಗಿದೆ.

ವಿಶ್ವ ದರ್ಜೆಯ ಮೂಲಭೂತ ಸೌಕರ್ಯ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಭಾರತ ಸರ್ಕಾರವು 2020-2025 ರ ಆರ್ಥಿಕ ವರ್ಷಕ್ಕೆ ರಾಷ್ಟ್ರೀಯ ಮೂಲಸೌಕರ್ಯಗಳ ಪೈಪ್‌ಲೈನ್ (ಎನ್‌ಐಪಿ) ಯನ್ನು ಪ್ರಾರಂಭಿಸಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಈ ರೀತಿಯ ಪ್ರಥಮ ಬಾರಿಯ ಉಪಕ್ರಮವು ಆರ್ಥಿಕತೆಯನ್ನು ಹೆಚ್ಚಿಸುತ್ತದೆ, ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಭಾರತೀಯ ಆರ್ಥಿಕತೆಯ ಸ್ಪರ್ಧಾತ್ಮಕತೆಯನ್ನು ವೃದ್ಧಿಸುತ್ತದೆ. ಇದಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯ ಜಂಟಿಯಾಗಿ ಹಣ ಹೂಡುತ್ತಿವೆ. 2020-2025 ರ ಅವಧಿಯಲ್ಲಿ ರೂ 111 ಲಕ್ಷ ಕೋಟಿ (1.5 ಟ್ರಿಲಿಯನ್ ಡಾಲರ್). ಯೋಜಿತ ಮೂಲಸೌಕರ್ಯ ಹೂಡಿಕೆಯೊಂದಿಗೆ ಎನ್‌ಐಪಿಯನ್ನು ಆರಂಭಿಸಲಾಯಿತು. ಇಂಧನ, ರಸ್ತೆಗಳು, ನಗರ ಮೂಲಭೂತಸೌಕರ್ಯ, ರೈಲ್ವೆ ಮುಂತಾದ ಕ್ಷೇತ್ರಗಳು ಎನ್‌ಐಪಿಯಲ್ಲಿ ಪ್ರಮುಖ ಪಾಲನ್ನು ಹೊಂದಿವೆ.

ಭಾರತದಲ್ಲಿ, ಮೂಲಭೂತ ಸೌಕರ್ಯದಲ್ಲಿ ಖಾಸಗಿ ಹೂಡಿಕೆ ಮುಖ್ಯವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ರೂಪದಲ್ಲಿ ಬಂದಿದೆ ಎಂಬುದನ್ನು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಪಿಪಿಪಿಗಳು ಮೂಲಭೂತ ಸೌಕರ್ಯಗಳ ಕೊರತೆಯನ್ನು ಪರಿಹರಿಸಲು ಸಹಾಯ ಮಾಡುತ್ತವೆ ಮತ್ತು ಮೂಲಭೂತ ಸೌಕರ್ಯ ಸೇವಾ ವಿತರಣೆಯಲ್ಲಿ ದಕ್ಷತೆಯನ್ನು ಸುಧಾರಿಸುತ್ತವೆ.  ಭಾರತ ಸರ್ಕಾರ ಕೇಂದ್ರ ವಲಯದಲ್ಲಿ ಪಿಪಿಪಿ ಯೋಜನೆಗಳ ಮೌಲ್ಯಮಾಪನಕ್ಕೆ ಜವಾಬ್ದಾರರಾಗಿರುವ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮೌಲ್ಯಮಾಪನ ಸಮಿತಿಯನ್ನು (ಪಿಪಿಪಿಎಸಿ) ಸ್ಥಾಪಿಸಿದೆ. ಆರ್ಥಿಕ ವರ್ಷ 20 ರ ಅವಧಿಯಲ್ಲಿ ಒಟ್ಟು ಯೋಜನಾ ವೆಚ್ಚ ರೂ. 4,321 ಕೋಟಿಯ 5 ಯೋಜನೆಗಳಿಗೆ ಪಿಪಿಪಿಎಸಿ ಶಿಫಾರಸ್ಸು ಮಾಡಿತ್ತು. ಈ 5 ಯೋಜನೆಗಳ ಪೈಕಿ 4 ರೈಲ್ವೆ ವಲಯದ ಯೋಜನೆಗಳು (ಪ್ರಯಾಣಿಕರ ರೈಲು ಯೋಜನೆಗಳು) ಮತ್ತು 1 ಬಂದರು ವಲಯ ಯೋಜನೆಯಾಗಿದೆ.

ಹೆಚ್ಚಿನ ಆರ್ಥಿಕ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳ ಕ್ಷೇತ್ರದ ಸ್ಥಿರತೆ ಪ್ರಮುಖವಾಗಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ, ಈ ಚೇತರಿಕೆ ಭಾರತದ ಆರ್ಥಿಕ ಅಭಿವೃದ್ಧಿಯ ಬಲಿಷ್ಠ ಯುಗದ ಪ್ರಾರಂಭ ಎಂದು ನಿರೀಕ್ಷಿಸಲಾಗಿದೆ. ಕೈಗಾರಿಕಾ ಚಟುವಟಿಕೆಗಳಲ್ಲಿ ಮತ್ತಷ್ಟು ಸುಧಾರಣೆ, ಸರ್ಕಾರದಿಂದ ವರ್ಧಿತ ಬಂಡವಾಳ ವೆಚ್ಚ, ಲಸಿಕೆ ಅಭಿಯಾನ ಮತ್ತು ದೀರ್ಘಾವಧಿಯಿಂದ ಬಾಕಿ ಉಳಿದಿರುವ ಸುಧಾರಣಾ ಕ್ರಮಗಳನ್ನು ಧೃಡವಾದ ನಿಶ್ಚಯದೊಂದಿಗೆ ಮುಂದಕ್ಕೆ ಕೊಂಡೊಯ್ಯುವುದು, ಇವೆಲ್ಲವು ಚೇತರಿಕೆಯ ಮಾರ್ಗದಲ್ಲಿ ಅಗತ್ಯವಾದ ಬೆಂಬಲವನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ದೇಶದಲ್ಲಿ ಕೈಗೊಂಡ ಸುಧಾರಣೆಗಳು ಬಹುಶಃ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವಿಸ್ತೃತವಾದದ್ದು ಎಂದು ಗಮನಸೆಳೆಯುವುದು ಸೂಕ್ತವೆನಿಸುತ್ತದೆ.

ಆರ್ಥಿಕ ವರ್ಷ 21 ರಲ್ಲಿ, ಒಟ್ಟು ಯೋಜನಾ ವೆಚ್ಚ ರೂ. 66,600.59 ಕೋಟಿಯೊಂದಿಗೆ ಪಿಪಿಪಿಎಸಿ 7 ಯೋಜನೆಗಳನ್ನು ಪ್ರಸ್ತಾಪಿಸಿದೆ. ಈ 7 ಯೋಜನೆಗಳಲ್ಲಿ 1 ದೂರಸಂಪರ್ಕ ವಲಯದ ಯೋಜನೆ, 3 ರೈಲ್ವೆ ವಲಯದ ಯೋಜನೆಗಳು (2 ನಿಲ್ದಾಣ ಪುನರಾಭಿವೃದ್ಧಿ ಯೋಜನೆಗಳು ಮತ್ತು 1 ಪ್ರಯಾಣಿಕ ರೈಲು ಯೋಜನೆ), 2 ಎಂಹೆಚ್‌ಎ ವಲಯದ ಯೋಜನೆಗಳು (ಪರಿಸರ-ಪ್ರವಾಸೋದ್ಯಮ ಯೋಜನೆಗಳು) ಮತ್ತು 1 ಬಂದರು ವಲಯದ ಯೋಜನೆಗಳಾಗಿವೆ.

2024-25ರವರೆಗೆ ಪರಿಷ್ಕರಿಸಿದ ಮೂಲಭೂತ ಸೌಕರ್ಯ ಕಾರ್ಯಸಾಧ್ಯತೆ ಗ್ಯಾಪ್ ಫಂಡಿಂಗ್ (ವಿಜಿಎಫ್) ಯೋಜನೆಯನ್ನು ಮುಂದುವರೆಸುವುದನ್ನು ಅನುಮೋದಿಸಲು ಜಿಒಐನ ಉಪಕ್ರಮವನ್ನು ಸಂಸತ್ತಿನಲ್ಲಿ ಮಂಡಿಸಲಾದ ಸಮೀಕ್ಷೆಯು ಗಮನಿಸಿದೆ. ಉದ್ದೇಶಿತ ವಿಜಿಎಫ್ ಯೋಜನೆಯ ಪುನರುಜ್ಜೀವನವು ಹೆಚ್ಚಿನ ಪಿಪಿಪಿ ಯೋಜನೆಗಳನ್ನು ಆಕರ್ಷಿಸುತ್ತದೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ (ಆರೋಗ್ಯ, ಶಿಕ್ಷಣ, ತ್ಯಾಜ್ಯ ನೀರು, ಘನತ್ಯಾಜ್ಯ ನಿರ್ವಹಣೆ, ನೀರು ಸರಬರಾಜು ಇತ್ಯಾದಿ) ಖಾಸಗಿ ಹೂಡಿಕೆಗೆ ಅನುಕೂಲ ಕಲ್ಪಿಸಲಿವೆ.

ಪ್ರಮುಖವಾಗಿ ಸಾಮಾಜಿಕ ಮೂಲಭೂತ ಸೌಕರ್ಯದಲ್ಲಿ ಖಾಸಗಿ ಭಾಗವಹಿಸುವಿಕೆಯನ್ನು ಮುಖ್ಯವಾಹಿನಿಗೆ ತರಲು ಎರಡು ಉಪ-ಯೋಜನೆಗಳನ್ನು ಪರಿಚಯಿಸುವುದಕ್ಕೆ ಪರಿಷ್ಕರಿಸಿದ ಯೋಜನೆ ಸಂಬಂಧಿಸಿದ್ದಾಗಿದೆ.  

ಆರ್ಥಿಕ ಸಮೀಕ್ಷೆಯ ಪ್ರಕಾರ, ರಸ್ತೆಗಳು ಮತ್ತು ಹೆದ್ದಾರಿಗಳು, ಕಲ್ಲಿದ್ದಲು, ರೈಲ್ವೆ, ವಾಯುಯಾನ, ದೂರಸಂಪರ್ಕ, ಬಂದರುಗಳು ಮತ್ತು ಇಂಧನ ಪ್ರಮುಖ ಮೂಲಭೂತ ಸೌಕರ್ಯದ ಕ್ಷೇತ್ರಗಳಾಗಿದ್ದು, ಕೋವಿಡ್ ವರ್ಷದಲ್ಲೂ ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ನವಚೈತನ್ಯಕ್ಕೆ ಶಕ್ತಿ ತುಂಬುತ್ತಿವೆ.

ಕ್ಷೇತ್ರವಾರು  ಮಾಹಿತಿ

ರಸ್ತೆಗಳು ಮತ್ತು ಹೆದ್ದಾರಿ ಕ್ಷೇತ್ರದಲ್ಲಿ ಒಟ್ಟು ಹೂಡಿಕೆಯು ಹಣಕಾಸು ವರ್ಷ 15 ರಿಂದ ಹಣಕಾಸು ವರ್ಷ 20 ರವರೆಗಿನ ಆರು ವರ್ಷಗಳ ಅವಧಿಯಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು ರಾಜ್ಯಗಳಾದ್ಯಂತ ರಸ್ತೆಯ ಸಾಂದ್ರತೆಯನ್ನು ಹೆಚ್ಚಳಕ್ಕೆ ಇದು ಕಾರಣವಾಯಿತು. ರಸ್ತೆ ಮಾರ್ಗಗಳಲ್ಲಿನ ಒಟ್ಟು ಹೂಡಿಕೆ ಹಣಕಾಸು ವರ್ಷ 15 ರ ರೂ 51935 ಕೋಟಿಗೆ ಹೋಲಿಸಿದಲ್ಲಿ  ಹಣಕಾಸು ವರ್ಷ 20 ರಲ್ಲಿ ರೂ 172767 ಕೋಟಿಗೆ ಏರಿಕೆಯಾಗಿದೆ.

ರಸ್ತೆ ಮಾರ್ಗದಂತೆ, ವಾಯುಯಾನ ಕ್ಷೇತ್ರವೂ ಸಹ ಹೆಚ್ಚಿನ ಬಲಿಷ್ಠತೆಯನ್ನು ತೋರಿಸಿದೆ. ಕೋವಿಡ್ -19 ರಿಂದ ಎದುರಾದ  ತೀವ್ರ ಸವಾಲುಗಳ ಹೊರತಾಗಿಯೂ, ಭಾರತೀಯ ವಾಯುಯಾನ ಉದ್ಯಮವು ಬಿಕ್ಕಟ್ಟನ್ನು ಮೆಟ್ಟಿ ನಿಂತು ಸತತ ಪರಿಶ್ರಮದಿಂದ ಮತ್ತು ದೀರ್ಘಕಾಲೀನ ಸ್ಥಿರತೆಯಿಂದಾಗಿ ಸೇವೆ ಮಾಡಲು ಸಂಪೂರ್ಣ ಬದ್ಧತೆಯನ್ನು ಪ್ರದರ್ಶಿಸಿದೆ. ಭಾರತದ ವಾಯುಯಾನ ಮಾರುಕಟ್ಟೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಭಾರತದ ದೇಶೀಯ ಸಂಚಾರ ದಟ್ಟಣೆಯು ಹಣಕಾಸು ವರ್ಷ 14 ರಲ್ಲಿ ಸುಮಾರು 61 ದಶಲಕ್ಷದಿಂದ ಹಣಕಾಸು ವರ್ಷ 20 ರಲ್ಲಿ ಸುಮಾರು 137 ದಶಲಕ್ಷಕ್ಕೇರಿ ದ್ವಿಗುಣಗೊಂಡು ವಾರ್ಷಿಕ ಶೇಕಡಾ 14 ಕ್ಕಿಂತ ಹೆಚ್ಚು ವೃದ್ಧಿಯಾಗಿದೆ. ವಿಶ್ವದಾದ್ಯಂತ ಸಿಲುಕ್ಕಿದ್ದ ಭಾರತೀಯರನ್ನು ಸ್ಥಳಾಂತರಿಸಲು ವಂದೇ ಭಾರತ್ ಮಿಷನ್ ಅನ್ನು2020 ರ ಮೇ 7 ರಂದು ಪ್ರಾರಂಭಿಸಲಾಯಿತು. ಇದು ಡಿಸೆಂಬರ್ 13, 2020 ರ ವೇಳೆಗೆ 30 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಆಗಮನವನ್ನು ವರದಿ ಮಾಡಿದೆ, ಇದು ಮಾನವ ಇತಿಹಾಸದಲ್ಲಿಯೇ ಅತಿದೊಡ್ಡ ಸ್ಥಳಾಂತರ ಕಾರ್ಯಾಚರಣೆಯಾಗಿದೆ. ತ್ವರಿತ ಮತ್ತು ನಿರ್ಣಾಯಕ ನಿರ್ಣಯಗಳು ಮತ್ತು ಸರ್ಕಾರವು ಜಾರಿಗೆ ತಂದ ಪರಿಣಾಮಕಾರಿ ಕ್ರಮಗಳಿಂದಾಗಿ ವಾಯು ಪ್ರಯಾಣಿಕರ ಪ್ರಯಾಣ ಮತ್ತು ವಿಮಾನ ಚಲನೆಗಳು 2021 ರ ಆರಂಭದಲ್ಲಿ ಕೋವಿಡ್ ಪೂರ್ವ ಮಟ್ಟವನ್ನು ತಲುಪುವ ಮುನ್ಸೂಚನೆ ಇದೆ.  

ಸರಕು ಮತ್ತು ಸೇವೆಗಳ ಅಂತರರಾಷ್ಟ್ರೀಯ ಸಾಗಣೆಗೆ ಬಂದರುಗಳು ಮತ್ತು ಹಡಗು ವಲಯವು ಬೆನ್ನೆಲುಬಾಗಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ, ಈ ವಲಯವು ಬಲವಾದ ಸ್ಥಿರತೆಯನ್ನು ತೋರಿಸಿದೆ. ಸಾಗರಮಾಲಾ ಕಾರ್ಯಕ್ರಮವು 500 ಕ್ಕೂ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ಗುರುತಿಸಿದ್ದು, ಬಂದರು ನೇತೃತ್ವದ ಅಭಿವೃದ್ಧಿಯ ಅವಕಾಶಗಳನ್ನು ಮುಕ್ತಗೊಳಿಸಬಹುದಾಗಿದೆ ಮತ್ತು ರೂ. 3.59 ಲಕ್ಷ ಕೋಟಿಗಳಿಗಿಂತ ಹೆಚ್ಚಿನ ಮೂಲಭೂತ ಸೌಕರ್ಯ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಈ ವರ್ಷದ ಭಾರತೀಯ ರೈಲ್ವೆಯ ಕಥೆ ದಿಟ್ಟತನ, ವಿಜಯಗಳು ಮತ್ತು ಸಾಮರ್ಥ್ಯ ವಿಸ್ತರಣೆಯ ಕಥೆಯಾಗಿದೆ. "ನವ ಭಾರತ ನವ ರೈಲ್ವೆ" ಉಪಕ್ರಮದಡಿಯಲ್ಲಿ ಖಾಸಗಿ ಸಂಸ್ಥೆಗಳಿಗೆ ಪಿಪಿಪಿ ಮೋಡ್ ಮೂಲಕ ರೈಲ್ವೆ ವಲಯದಲ್ಲಿ ಕಾರ್ಯನಿರ್ವಹಿಸಲು ರೈಲ್ವೆ ಇಲಾಖೆ ಅವಕಾಶ ನೀಡಿದೆ. ಈ ಉಪಕ್ರಮವು ಖಾಸಗಿ ವಲಯದಿಂದ ಸುಮಾರು ರೂ. 30,000 ಕೋಟಿ ಯ ಹೂಡಿಕೆ ಮಾಡಿಸುವ ನಿರೀಕ್ಷೆಯಿದೆ. ಇಂದು ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯೂ, ರೈಲ್ವೆ ಸಚಿವಾಲಯವು ದೀರ್ಘಾವಧಿಯ ದೃಷ್ಟಿಯೊಂದಿಗೆ ರಾಷ್ಟ್ರೀಯ ರೈಲು ಯೋಜನೆಯನ್ನು (ಎನ್‌ಆರ್‌ಪಿ) ಅಭಿವೃದ್ಧಿಪಡಿಸಿದೆ ಎಂದು ತಿಳಿಸುತ್ತದೆ. 2050 ರವರೆಗಿನ ಯೋಜಿತ ಸಂಚಾರ ಅಗತ್ಯತೆಗಳನ್ನು ಪೂರೈಸಲು 2030 ರ ವೇಳೆಗೆ ಸಾಕಷ್ಟು ರೈಲು ಮೂಲಸೌಕರ್ಯಗಳನ್ನು ಇದು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.

ಟೆಲಿಕಾಂ ಕ್ಷೇತ್ರದಲ್ಲಿ, ಭಾರತ ಸರ್ಕಾರವು ತನ್ನ ಡಿಜಿಟಲ್ ಇಂಡಿಯಾ ಅಭಿಯಾನದ ಭಾಗವಾಗಿ ಎಲ್ಲರಿಗೂ ಬ್ರಾಡ್‌ಬ್ಯಾಂಡ್‌ಗೆ ಸಾಕಷ್ಟು ಒತ್ತು ನೀಡಿದೆ ಎಂಬುದನ್ನೂ ಸಮೀಕ್ಷೆ ತಿಳಿಸಿದೆ. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಅಂತರ್ಜಾಲ ಲಭ್ಯತೆಯನ್ನು ವಿಸ್ತರಿಸುವ ಮೂಲಕ ಡಿಜಿಟಲ್ ವಿಭಜನೆಯನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಮಾರ್ಚ್ -2019 ರಲ್ಲಿನ 636.73 ದಶಲಕ್ಷಕ್ಕೆ ಹೋಲಿಸಿದರೆ, ಸೆಪ್ಟೆಂಬರ್ -2020 ರ ಅಂತ್ಯದ ವೇಳೆಗೆ ಇಂಟರ್ನೆಟ್ ಚಂದಾದಾರರ ಸಂಖ್ಯೆ (ಬ್ರಾಡ್‌ಬ್ಯಾಂಡ್ ಮತ್ತು ಕಿರಿದಾದ ಬ್ಯಾಂಡ್ ಎರಡೂ ಒಟ್ಟಾಗಿ) 776.45 ದಶಲಕ್ಷ ತಲುಪಿದೆ. ವೈರ್ಲೆಸ್ ಡೇಟಾ ಬಳಕೆ 2019 ರ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚಿನ ದರದಲ್ಲಿ ಬೆಳೆಯಿತು ಮತ್ತು 76.47 ಎಕ್ಸಾ ಬೈಟ್‌ಗಳಷ್ಟಿತ್ತು. 2020 ರ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ, ಇದು ಈಗಾಗಲೇ 75.21 ಎಕ್ಸಾ ಬೈಟ್‌ಗಳನ್ನು ತಲುಪಿದೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಗುರಿ ಸಾಧಿಸಲು ಭಾರತ ಸರ್ಕಾರ ಭಾರತ್ನೆಟ್ ಸೇರಿದಂತೆ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ. ಈ ಯೋಜನೆಯಡಿಯಲ್ಲಿ, ರಾಜ್ಯಗಳು ಮತ್ತು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಗ್ರಾಮೀಣ ಪ್ರದೇಶದ ನಾಗರಿಕರು ಮತ್ತು ಸಂಸ್ಥೆಗಳಿಗೆ ಕೈಗೆಟುಕುವ ದರದಲ್ಲಿ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸಲು, ತಾರತಮ್ಯರಹಿತವಾಗಿ ಪ್ರವೇಶಿಸಬಹುದಾದ ಬ್ರಾಡ್‌ಬ್ಯಾಂಡ್ ಲಭ್ಯತೆಗಾಗಿ ನೆಟ್‌ವರ್ಕ್ ಮೂಲಸೌಕರ್ಯವನ್ನು ಸ್ಥಾಪಿಸಲಾಗುತ್ತಿದೆ. 15.01.2021ರ ಹೊತ್ತಿಗೆ 1.63 ಲಕ್ಷ ಗ್ರಾಮ ಪಂಚಾಯಿತಿಗಳನ್ನು (ಜಿಪಿ ಗಳು) ಒಳಗೊಳ್ಳಲು ಸುಮಾರು 4.87 ಲಕ್ಷ ಕಿಲೋ ಗಳ ಉದ್ದದ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲಾಗಿದೆ ಮತ್ತು ಸುಮಾರು 1.51 ಲಕ್ಷ ಜಿಪಿಗಳು ಸೇವೆಗಾಗಿ ಸಿದ್ಧವಾಗಿವೆ.

ಅಮೆರಿಕಾ ಮತ್ತು ಚೀನಾದ ನಂತರ ಭಾರತ, ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ ದೇಶವಾಗಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ವಿಶ್ವದ ಪ್ರಾಥಮಿಕ ಇಂಧನ ಬಳಕೆಯ ಶೇಕಡಾ 5.8 ರ ಪಾಲನ್ನು ಹೊಂದುವದರೊಂದಿಗೆ, ಭಾರತೀಯ ಇಂಧನ ಬಳಕೆಯ ಬಳಿ ಪ್ರಾಥಮಿಕವಾಗಿ ಕಲ್ಲಿದ್ದಲು ಮತ್ತು ಕಚ್ಚಾ ತೈಲದ ಪ್ರಾಬಲ್ಯವಿದೆ. ಭಾರತದ ಸ್ಥಳೀಯ ಕಚ್ಚಾ ತೈಲ ಉತ್ಪಾದನೆಯು 2019 ರಲ್ಲಿನ 34.20 ಎಂಎಂಟಿ ಗೆ ಹೋಲಿಸಿದರೆ ಆರ್ಥಿಕ ವರ್ಷ 2020ರಲ್ಲಿ 32.17 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಗೆ ಇಳಿದಿದೆ. ಕೊವಿಡ್-19 ಸಾಂಕ್ರಾಮಿಕ ರೋಗವೇ ಈ ಕುಸಿತಕ್ಕೆ ಮುಖ್ಯ ಕಾರಣವಾಗಿದೆ. ಆದ್ದರಿಂದ, ಆರ್ಥಿಕ ಚೇತರಿಕೆಗೆ ಅನುಗುಣವಾಗಿ ಇದರ ಉತ್ಪಾದನೆ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ.

ಆರ್ಥಿಕ ವರ್ಷ 2020ರ ಸಮಯದಲ್ಲಿ, ಗುಣಮಟ್ಟದ ನವೀಕರಣ ಯೋಜನೆಗಳ ಅನುಷ್ಠಾನಕ್ಕಾಗಿ ಬಹುತೇಕ ಸಂಸ್ಕರಣಾಗಾರಗಳು ಸ್ಥಗಿತಗೊಳಿಸುವ ನಿರ್ಧಾರ ಹೊಂದಿದ್ದವು. 2020 ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸಂಸ್ಕರಿಸಿದ ಕಚ್ಚಾ ತೈಲ 160.36 ಎಂಎಂಟಿ ಆಗಿದ್ದು, ಇದು 2019 ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸಂಸ್ಕರಿಸಿದ ಕಚ್ಚಾ ತೈಲದ ಪ್ರಮಾಣಕ್ಕಿಂತ ಶೇ 15.8 ರಷ್ಟು ಕಡಿಮೆಯಾಗಿದೆ. ಇದರ ಹರತಾಗಿಯೂ, ಕೊವಿಡ್-19 ಲಾಕ್‌ಡೌನ್‌ ಸಮಯದಲ್ಲಿ 14 ಕೋಟಿ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸುವ ಮೂಲಕ ಸರ್ಕಾರವು ಬಡ ಕುಟುಂಬಗಳಿಗೆ ಅಗತ್ಯವಾದ ಬೆಂಬಲವನ್ನು ನೀಡಿತು ಮತ್ತು ದೇಶಾದ್ಯಂತ ನಿರಂತರವಾದ ಇಂಧನ ಸರಬರಾಜನ್ನು ಮುಂದುವರೆಸಿತು.

ವಿದ್ಯುತ್ ಕ್ಷೇತ್ರದ ಮಹತ್ತರ ಪ್ರಗತಿಯನ್ನು ಆರ್ಥಿಕ ಸಮೀಕ್ಷೆಯು ಎತ್ತಿ ತೋರಿದೆ, ಇದು ಆರ್ಥಿಕ ಚಟುವಟಿಕೆಗಳಿಗೆ ಪುಷ್ಠಿ ನೀಡಲು ಅವಶ್ಯಕವಾಗಿದೆ. ಭಾರತದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣದಲ್ಲಿ ಶ್ಲಾಘನೀಯ ಪ್ರಗತಿ ಸಾಧಿಸಲಾಗಿದೆ. ಸ್ಥಾಪಿಸಲಾದ ಒಟ್ಟು ಸಾಮರ್ಥ್ಯವು ಮಾರ್ಚ್ -2019 ರಲ್ಲಿ 3,56,100 ಮೆಗಾವ್ಯಾಟ್‌ನಿಂದ 2020 ರ ಮಾರ್ಚ್‌ನಲ್ಲಿ 3,70,106 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ. ಇದಲ್ಲದೇ, 2020ರ ಅಕ್ಟೋಬರ್ ನಲ್ಲಿ ಉತ್ಪಾದನಾ ಸಾಮರ್ಥ್ಯ 3,73,436 ಮೆಗಾವ್ಯಾಟ್‌ಗೆ ಹೆಚ್ಚಿದೆ ಮತ್ತು 2,31,321 ಮೆಗಾವ್ಯಾಟ್ ಥರ್ಮಲ್, 45,699 ಮೆಗಾವ್ಯಾಟ್ ಹೈಡ್ರೊ, 6,780 ಮೆಗಾವ್ಯಾಟ್ ಪರಮಾಣು, ಮತ್ತು 89,636 ಮೆಗಾವ್ಯಾಟ್ ನವೀಕರಿಸಬಹುದಾದ ಮತ್ತು ಇತರೆಗಳನ್ನು ಒಳಗೊಂಡಿದೆ. ಇದರ ಜೊತೆಗೆ, ಗ್ರಾಮೀಣ ವಿದ್ಯುದ್ದೀಕರಣ ರಂಗದಲ್ಲಿ ದೇಶವು ಈಗಾಗಲೇ ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದೆ, ಅವುಗಳೆಂದರೆ: ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಶೇ 100 ರಷ್ಟು ಗ್ರಾಮ ವಿದ್ಯುದೀಕರಣ ಮತ್ತು ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ) ಅಡಿಯಲ್ಲಿ ಸಾರ್ವತ್ರಿಕ ಗೃಹ ವಿದ್ಯುದ್ದೀಕರಣ

ಅತಿವೇಗವಾಗಿ ಬದಲಾಗುತ್ತಿರುವ ನಗರೀಕರಣಕ್ಕೆ ಭಾರತ ಸಾಕ್ಷಿಯಾಗಿದೆ. 2011 ರ ಜನಗಣತಿಯ ಪ್ರಕಾರ, ಭಾರತದ ನಗರಗಳಲ್ಲಿನ ಜನಸಂಖ್ಯೆ 37.7 ಕೋಟಿ ಆಗಿದ್ದು, ಇದು 2030 ರ ವೇಳೆಗೆ ಸುಮಾರು 60 ಕೋಟಿಗೆ ಬೆಳೆಯುವ ನಿರೀಕ್ಷೆಯಿದೆ. 2022 ರ ವೇಳೆಗೆ ಪ್ರತಿ ಕುಟುಂಬಕ್ಕೂ ಪಕ್ಕಾ ಮನೆ ಒದಗಿಸುವ ಕನಸನ್ನು ನನಸಾಗಿಸುವತ್ತ ಪ್ರಧಾನ್ ಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ವೇಗವಾಗಿ ಸಾಗುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ. ಇಲ್ಲಿವರೆಗೆ 109 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಅನುಮೋದಿಸಲಾಗಿದ್ದು, ಅವುಗಳಲ್ಲಿ 70 ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣಕಾರ್ಯ ಪ್ರಾರಂಭಿಸಲಾಗಿದೆ. 41 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಪೂರ್ಣಗೊಳಿಸಿ ವಿತರಿಸಲಾಗಿದೆ. ಬಜೆಟ್ ಹಂಚಿಕೆ ಮೂಲಕ 2021ರ ಆರ್ಥಿಕ ವರ್ಷಕ್ಕೆ ರೂ. 18,000 ಕೋಟಿಯ ಹೆಚ್ಚುವರಿ ಹಣವನ್ನು ಮತ್ತು ಸ್ವಾವಲಂಬಿ ಭಾರತ 3.0 ಅಡಿಯಲ್ಲಿನ ಯೋಜನೆಗಾಗಿ ಹೆಚ್ಚುವರಿ ಬಜೆಟ್ ಸಂಪನ್ಮೂಲಗಳನ್ನು ಭಾರತ ಸರ್ಕಾರ ಮೀಸಲಿರಿಸಿದೆ. ಇದರ ಜೊತೆಗೆ, ವಲಸೆ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳ ಬಳಿ ಕೈಗೆಟುಕುವ ದರದಲ್ಲಿ ಯೋಗ್ಯವಾದ ಬಾಡಿಗೆ ವಸತಿ ಹೊಂದಲು ಹಾಗೂ ವಲಸೆ ಕಾರ್ಮಿಕರ ಅಗತ್ಯತೆಗಳನ್ನು ಪರಿಹರಿಸಲು ಪಿಎಂಎವೈ-ಯು ಅಡಿಯಲ್ಲಿ ಉಪ-ಯೋಜನೆಯಡಿಯಲ್ಲಿ  ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (ಎ ಆರ್ ಹೆಚ್ ಸಿ ಗಳು) ಪ್ರಾರಂಭಿಸಲಾಗಿದೆ.

ಬಲವಾದ ಹಣಕಾಸಿನ ಸಹಕಾರ, ಉತ್ಪಾದನಾ ಮೂಲಸೌಕರ್ಯ ಕ್ಷೇತ್ರಕ್ಕೆ ಪ್ರೋತ್ಸಾಹ, ಸೂಕ್ತ ಪ್ರದೇಶಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮತ್ತು ಸರ್ವಾಂಗೀಣ ಆರ್ಥಿಕ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲು ಸುಧಾರಣೆಗಳನ್ನು ಜಾರಿಗೆತರಬೇಕೆಂದು ಆರ್ಥಿಕ ಸಮೀಕ್ಷೆ, ನಿರಂತರ ಅಗತ್ಯತೆಯ ಪ್ರಾಧಾನ್ಯತೆಯನ್ನು ಎತ್ತಿ ತೋರಿದೆ

***



(Release ID: 1693350) Visitor Counter : 564