ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಪ್ರಧಾನಿ ನರೇಂದ್ರ ಮೋದಿ ಸಮಗ್ರ ದೃಷ್ಟಿಕೋನಕ್ಕೆ ಸಾರ್ವಜನಿಕ ವಲಯದ ರಸಗೊಬ್ಬರ ಹಾಗು ರಾಸಾಯನಿಕ ಉದ್ದಿಮೆಗಳು ಸ್ವಯಂ ಸ್ಥಿರತೆ ಸಾಧಿಸಲು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ. ವಿ. ಸದಾನಂದಗೌಡ ಕರೆ


ರಸಗೊಬ್ಬರ ಕೊರತೆ ನೀಗಿಸಿದ ಉದ್ದಿಮೆಗಳ ಕಾರ್ಯವೈಖರಿಗೆ ಮೆಚ್ಚುಗೆ

ಹಿಂಗಾರು ಹಂಗಾಮಿನಲ್ಲಿ ಸಮರ್ಪಕ ಯೂರಿಯಾ ಮತ್ತು ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಲು ಸೂಚನೆ

Posted On: 14 OCT 2020 3:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮಗ್ರ ದೃಷ್ಟಿಕೋನಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ದಿಮೆಗಳು ಸ್ವಯಂ ಸುಸ್ಥಿರತೆ ಸಾಧಿಸಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ. ವಿ. ಸದಾನಂದಗೌಡ ಕರೆ ನೀಡಿದ್ದಾರೆ.

ಕೇಂದ್ರ ಸಾರ್ವಜನಿಕ ವಲಯದ ರಸಗೊಬ್ಬರ ಕಂಪನಿಗಳ ಅಧ್ಯಕ್ಷರು ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕರ ಸಭೆಯ ಅಧ್ಯಕ್ಷತೆ ವಹಿಸಿ, ಉದ್ದಿಮೆಗಳ ಕಾರ್ಯಕ್ಷಮತೆ ಮತ್ತು ಭವಿಷ್ಯದ ಸಿದ್ಧತೆಗಳ ಪರಾಮರ್ಶೆ ನಡೆಸಿದ ಅವರು, ಭವಿಷ್ಯದ ಉಳಿವಿಗಾಗಿ ಹಾಗೂ ಖಾಸಗಿ ವಲಯ ಮತ್ತು ಆಮದು ರಸಗೊಬ್ಬರಗಳ ಜೊತೆ ಸ್ಪರ್ಧಿಸಲು, ನ್ಯಾನೋ ರಸಗೊಬ್ಬರ ಮತ್ತು ಅಗತ್ಯಕ್ಕೆ ಅನುಗುಣವಾದ ರಸಗೊಬ್ಬರ ತಯಾರಿಕೆ ಮಾಡಲು, ತಂತ್ರಜ್ಞಾನದ ಉನ್ನತೀಕರಣ ಮಾಡುವುದು ಇಂದಿನ ಅಗತ್ಯವಾಗಿದೆ, ಇದಕ್ಕೆ ತಕ್ಕಂತೆ ಹಾಲಿ ಘಟಕಗಳನ್ನು ಪುನಶ್ಚೇತನಗೊಳಿಸಬೇಕು ಎಂದು ಪ್ರತಿಪಾದಿಸಿದರು.

ಕೊರೊನಾ ಲಾಕ್ ಡೌನ್ ಸಂಕಷ್ಟದ ಕಾಲದಲ್ಲೂ ತಮ್ಮ ಘಟಕಗಳು ಕಾರ್ಯ ನಿರ್ವಹಿಸುವಂತೆ ನೋಡಿಕೊಂಡು ರೈತರಿಗೆ ಯೂರಿಯಾ ಮತ್ತು ಇತರ ರಸಗೊಬ್ಬರದ ಲಭ್ಯತೆ ಖಾತ್ರಿ ಪಡಿಸುವಲ್ಲಿ ಉತ್ತಮ ಕೊಡುಗೆ ನೀಡಿದ ರಸಗೊಬ್ಬರ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕೇಂದ್ರ ಸಚಿವ ಶ್ರೀ ಸದಾನಂದ ಗೌಡ ಅಭಿನಂದನೆ ಸಲ್ಲಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮಗ್ರ ದೃಷ್ಟಿಕೋನಕ್ಕೆ ಅನುಗುಣವಾಗಿ ರಸಗೊಬ್ಬರಗಳ ಮಾರಾಟವನ್ನು ನಗದು ರಹಿತ ವಹಿವಾಟಿನ ಮೂಲಕ ನಡೆಸುವಂತೆ ಉತ್ತೇಜಿಸಲು ಕಾರ್ಯತಂತ್ರ ರೂಪಿಸುವಂತೆ ಅವರು ಸಾರ್ವಜನಿಕ ವಲಯದ ಉದ್ದಿಮೆಗಳ ಮುಖ್ಯಸ್ಥರುಗಳಿಗೆ ನಿರ್ದೇಶನ ನೀಡಿದರು.

ಸಂವಾದದ ವೇಳೆ ಭವಿಷ್ಯದಲ್ಲಿ ಪರಿಸರ ಸಂಬಂಧಿತ ಯಾವುದೇ ನೀತಿಗಳನ್ನು ಪರಿಚಯಿಸುವುದರಿಂದ ಉದ್ದಿಮೆಗಳ ಕಾರ್ಯಾನುಷ್ಠಾನಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿದ್ದು, ರಸಗೊಬ್ಬರ ಸಾರ್ವಜನಿಕ ವಲಯದ ಉದ್ದಿಮೆಗಳು ಪರಿಸರದ ಕಾಳಜಿಗೆ ಸಂಬಂಧಿಸಿದಂತೆ ಸಂವೇದನಾಶೀಲವಾಗಿರಬೇಕು ಎಂದರು.

ದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿ, ಬಿತ್ತನೆ ಪ್ರದೇಶ ವ್ಯಾಪ್ತಿಯಲ್ಲಿ ಗಣನೀಯ ಪ್ರಮಾಣದ ಹೆಚ್ಚಳವಾಗಿ ಯೂರಿಯಾ ಬೇಡಿಕೆ ಉತ್ತುಂಗದಲ್ಲಿದ್ದಾಗಲೂ, ದೇಶೀಯ ಕಂಪನಿಗಳ ಪ್ರಯತ್ನ ಮತ್ತು ರಸಗೊಬ್ಬರ ಇಲಾಖೆಯ ಅಧಿಕಾರಿಗಳ ಸಕ್ರಿಯ ಮತ್ತು ಸಕಾಲಿಕ ಕ್ರಮಗಳ ಫಲವಾಗಿ ಯೂರಿಯಾ ಮತ್ತು ರಸಗೊಬ್ಬರದ ಕೊರತೆ ಎದುರಾಗಲಿಲ್ಲ, ಮುಂಬರುವ ಹಿಂಗಾರು ಹಂಗಾಮಿನ ಅವಧಿಯಲ್ಲೂ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಸಲು ಸಜ್ಜಾಗುವಂತೆ ಸಾರ್ವಜನಿಕ ವಲಯದ ಉದ್ದಿಮೆಗಳ ಮುಖ್ಯಸ್ಥರುಗಳಿಗೆ ಕೇಂದ್ರ ಸಚಿವ ಶ್ರೀ ಸದಾನಂದ ಗೌಡ ಸೂಚನೆ ನೀಡಿದರು.

ರಸಗೊಬ್ಬರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಬಿಲೇಂದ್ರ ರೌಲ್, ರಸಗೊಬ್ಬರ ಪಿಎಸ್.ಯು.ಗಳು ತಮ್ಮ ವಿಪತ್ತು ನಿರ್ವಹಣೆ ಯೋಜನೆಯನ್ನು ಬಲಪಡಿಸಲು ಸತತ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ರಾಷ್ಟ್ರೀಯ ರಸಗೊಬ್ಬರ ನಿಯಮಿತದ ಸಿಎಂಡಿ ಶ್ರೀ ವೀರೇಂದ್ರ ನಾಥ ದತ್ತ, ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ನಿಯಮಿತದ ಸಿಎಂಡಿ ಶ್ರೀ ಎಸ್.ಸಿ. ಮುಡ್ಗೇರಿಕರ್, ಟ್ರವಾಂಕೂರ್ ರಸಗೊಬ್ಬರ ಮತ್ತು ರಾಸಾಯನಿಕ ನಿಯಮಿತದ ಸಿಎಂಡಿ ಶ್ರೀ ಕಿಶೋರ್ ರುಂಗ್ಟಾ, ಮದ್ರಾಸ್ ರಸಗೊಬ್ಬರ ನಿಯಮಿತದ ಸಿಎಂಡಿ ಶ್ರೀ ಯು. ಶ್ರೀನಿವಾಸನ್, ಬ್ರಹ್ಮಪುತ್ರ ಕಣಿವೆ ರಸಗೊಬ್ಬರ ನಿಗಮ ನಿಯಮಿತದ ಸಿಎಂಡಿ ಶ್ರೀ .ಕೆ. ಘೋಷ್, ಎಫ್.ಸಿ.. ಅರಾವಲಿ ಜಿಪ್ಸಮ್ ಮತ್ತು ಭಾರತೀಯ ಖನಿಜ ನಿಯಮಿತದ ಸಿಎಂಡಿ ಶ್ರೀ ಅಮರ್ ಸಿಂಗ್ ರಾಥೋಡ್ ಭಾಗಿಯಾಗಿದ್ದರು.

ಸಭೆಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಮುಖ್ಯಸ್ಥರು, ಘಟಕಗಳ ಕಾರ್ಯಕ್ಷಮತೆ ಮತ್ತು ಸುಸ್ಥಿರತೆಗಾಗಿ ತಂತ್ರಜ್ಞಾನ ಉನ್ನತೀಕರಣಕ್ಕೆ ಮಾಡಲಾಗಿರುವ ಹೂಡಿಕೆಯ ವಿವರ ನೀಡಿದರು. ತಮ್ಮ ಘಟಕಗಳಲ್ಲಿನ ಭವಿಷ್ಯದ ಯೋಜನೆಗಳು ಮತ್ತು ವಿಸ್ತರಣೆಯ ಕುರಿತಂತೆಯೂ ಸಂಕ್ಷಿಪ್ತ ಮಾಹಿತಿ ನೀಡಿದರು.

***



(Release ID: 1664321) Visitor Counter : 125


Read this release in: English