ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ರೈತರು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಸಾವಯವ ಹಾಗೂ ನ್ಯಾನೋ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು: ಕೇಂದ್ರ ಸಚಿವ ಶ್ರೀ ಡಿ. ವಿ. ಸದಾನಂದ ಗೌಡ

2023 ರೊಳಗೆ ರಸಗೊಬ್ಬರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಲಿದೆ

Posted On: 12 SEP 2020 6:24PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಶಯದಂತೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಹಾಗೂ ನ್ಯಾನೋ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ.

ಕರ್ನಾಟಕದ ರೈತರು ಮತ್ತು ಸಹಕಾರಿಗಳನ್ನು ಉದ್ದೇಶಿಸಿ ಇಂದು ವೆಬಿನಾರ್ ನಲ್ಲಿ ಮಾತನಾಡಿದ ಸಚಿವರು ರೈತರು ಮಣ್ಣಿನ ಆರೋಗ್ಯ ಕಾರ್ಡ್ ಅನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು ಎಂದರು. ಮಣ್ಣಿನ ಆರೋಗ್ಯ ಕಾರ್ಡ್ ಮುಖಾಂತರ ಯಾವ ಭೂಮಿಗೆ ಯಾವ ಪೋಷಕಾಂಶದ ಅವಶ್ಯಕತೆ ಇದೆ ಎಂಬುದನ್ನು ಪತ್ತೆ ಮಾಡಿ, ರಸ ಗೊಬ್ಬರಗಳನ್ನು ಬಳಕೆ ಮಾಡಬೇಕು. ಇದರಿಂದಾಗಿ ಅನವಶ್ಯಕವಾಗಿ ಬಳಸುವ ರಸಗೊಬ್ಬರಗಳನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.

ರಸಗೊಬ್ಬರಗಳ ಬಳಕೆಯ ಬದಲು ಸಾವಯವ ಹಾಗೂ ನ್ಯಾನೋ ಗೊಬ್ಬರ ಬಳಸುವುದರಿಂದ ರೈತರಿಗೆ ಖರ್ಚು ಕಡಿಮೆಯಾಗುತ್ತದೆ ಹಾಗೂ ಮಣ್ಣಿ ಆರೋಗ್ಯ ಹೆಚ್ಚುತ್ತದೆ. ಈ ಗೊಬ್ಬರ ವಿಧಾನಕ್ಕೆ ಹೆಚ್ಚು ಪ್ರೋತ್ಸಾಹ ನೀಡುವಂತೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸೂಚಿಸಿದ್ದಾರೆ. ಪ್ರಧಾನ ಮಂತ್ರಿಯವರ ಆತ್ಮನಿರ್ಭರ ದೃಷ್ಟಿಕೋನಕ್ಕೆ ತಕ್ಕಂತೆ ರಸಗೊಬ್ಬರಗಳ ಉತ್ಪಾದನೆಯನ್ನು ದೇಶೀಯವಾಗಿ ಹೆಚ್ಚಿಸಲು ಮತ್ತು ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಲು ಇಫ್ಕೋ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಹೇಳಿದರು.
ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಮಣ್ಣಿನ ಆರೋಗ್ಯವನ್ನುಹೆಚ್ಚಿಸುವ ಹಾಗೂ ಉತ್ತಮ ಇಳುವರಿಗೆ ಕಾರಣವಾಗುವ ನ್ಯಾನೋ ತಂತ್ರಜ್ಞಾನದ ಬೆಳೆ ಪೋಷಕಾಂಶ ನಿರ್ವಹಣೆ ಮತ್ತು ನ್ಯಾನೋ ಗೊಬ್ಬರಗಳಂತಹ ಉಪಕ್ರಮಗಳನ್ನು ಇಫ್ಕೋ ಅಭಿವೃದ್ಧಿಪಡಿಸಿದೆ ಎಂದು ಅವರು ಹೇಳಿದರು.
2023 ರ ವೇಳೆಗೆ ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಪ್ರಧಾನಿಯವರು ಸ್ಪಷ್ಟ ಸೂಚನೆ ಕೋಟ್ಟಿದ್ದಾರೆ. ಪ್ರಸ್ತುತ ಶೇ. 70 ರಷ್ಟು ರಸಗೊಬ್ಬರ ದೇಶೀಯವಾಗಿ ಉತ್ಪಾದನೆಯಾಗುತ್ತಿದ್ದು ಉಳಿದ ಶೇ. 30 ರಷ್ಟು ರಸಗೊಬ್ಬರವೂ ದೇಶೀಯವಾಗಿಯೇ ಉತ್ಪಾದನೆಯಾಗುವತ್ತ ಗಮನ ಕೇಂದ್ರೀಕರಿಸಿದ್ದು, ಸ್ಥಗಿತಗೊಂಡಿದ್ದ ನಾಲ್ಕು ರಸಗೊಬ್ಬರ ಉತ್ಪಾದನಾ ಘಟಕಗಳನ್ನು 40, 000 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುತ್ತಿದೆ ಎಂದು ಸಚಿವ ಶ್ರೀ ಸದಾನಂದ ಗೌಡ ತಿಳಿಸಿದರು.
ಪ್ರಧಾನಿಯವರ ‘ಸ್ಥಳೀಯತೆಗೆ ಆದ್ಯತೆ’ ಗೆ ಅನುಗುಣವಾಗಿ ನೈಸರ್ಗಿಕವಾಗಿ ಬೆಳೆಯುವ ಸಮುದ್ರ ಕಳೆಯ ಬೆಳವಣಿಗೆ ಹೆಚ್ಚಿಸುವ ‘ಸಾಗರಿಕಾ’, ಜೈವಿಕ ಗೊಬ್ಬರಗಳು, ನೀಮ್ ಕೇಕ್, ಜೈವಿಕ ಕ್ರಿಮಿನಾಶಕಗಳು ಮತ್ತು ನೈಸರ್ಗಿಕ ಪೊಟಾಷ್ ಬಳಕೆಯಂತಹ ಪರಿಸರ ಸ್ನೇಹಿ ಅಭ್ಯಾಸಗಳನ್ನು ಇಫ್ಕೋ ಪ್ರೋತ್ಸಾಹಿಸುತ್ತಿದೆ. ಇದು ಪ್ರಶಂಸನೀಯವಾದುದು ಎಂದು ಅವರು ತಿಳಿಸಿದರು.
ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಸರ್ಕಾರದ ಕ್ರಮದ ಭಾಗವಾಗಿ, ಸಂಶೋಧನೆ, ಪರೀಕ್ಷೆ, ತಂತ್ರಜ್ಞಾನ ವರ್ಗಾವಣೆ ಮತ್ತು ದೇಶಾದ್ಯಂತ ಯೋಜನೆಗಳ ವಿಸ್ತರಣೆಗಾಗಿ ಇಫ್ಕೋ ಐ ಸಿ ಎಂ ಆರ್ ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಮಾಡಿದೆ. ಡಿಜಿಟಲ್ ಇಂಡಿಯಾವನ್ನು ಬೆಂಬಲಿಸಲು, ನಗದು ರಹಿತ ವಹಿವಾಟು ನಡೆಸಲು ರೈತರಿಗಾಗಿ www.iffcobazar.in  ಎಂಬ ಡಿಜಿಟಲ್ ವೇದಿಕೆಯನ್ನು ಇಫ್ಕೋ ಆರಂಭಿಸಿದೆ. ಗ್ರಾಮ ಮಟ್ಟದ ಉದ್ಯಮಿ (ವಿಎಲ್ಇ) ಗಳ ಮೂಲಕ  ಇಫ್ಕೊ ಮತ್ತು ಸಿ ಎಸ್ ಸಿ (ಸಾಮಾನ್ಯ ಸೇವಾ ಕೇಂದ್ರಗಳು) ಸಹಯೋಗವು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಅಗತ್ಯಗಳನ್ನು ಪೂರೈಸುತ್ತದೆ. ಉತ್ಪಾದಕತೆ ಮತ್ತು ಮೌಲ್ಯವರ್ಧನೆಯನ್ನು ಹೆಚ್ಚಿಸುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಸಾವಯವ ಮೌಲ್ಯ ಸರಪಳಿಯನ್ನು ಸೃಷ್ಟಿಸಲು ಇಫ್ಕೊ “ಸಿಕ್ಕಿಂ ಇಫ್ಕೋ ಆರ್ಗಾನಿಕ್ಸ್” ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ರೋಗದ ನಿಗ್ರಹಕ್ಕಾಗಿ ಇಫ್ಕೋ ದೇಶಾದ್ಯಂತ ಅಭಿಯಾನ ಕೈಗೊಂಡಿದೆ. ಮುಖಗವಸುಗಳು, ಸ್ಯಾನಿಟೈಸರ್, ವಿಟಮಿನ್ ಸಿ ಮಾತ್ರೆಗಳನ್ನು ರೈತ ಸಮುದಾಯಕ್ಕೆ ವಿತರಿಸಿದೆ ಎಂದು ಸಚಿವರು ತಿಳಿಸಿದರು.
ಇಫ್ಕೋ ಆಯೋಜಿಸಿದ್ದ ವೆಬಿನಾರ್ ನಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯು ಎಸ್ ಅವಸ್ಥಿ ಉಪಸ್ಥಿತರಿದ್ದರು.
ಕರ್ನಾಟಕದ ಎಲ್ಲ ಭಾಗಗಳಿಂದ ಸುಮಾರು 1500 ರೈತರು ವೆಬಿನಾರ್ ನಲ್ಲಿ ಭಾಗವಹಿಸಿದ್ದರು.

***

 



(Release ID: 1653649) Visitor Counter : 2083