ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಬೆಂಗಳೂರಿನ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಆಯೋಜಿಸಿದ್ದ ನೇರ ಪ್ರಸಾರದ ವೆಬಿನಾರ್ ನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’
Posted On:
11 SEP 2020 7:18PM by PIB Bengaluru
ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು ಅಂದರೆ 2020 ಸೆಪ್ಟೆಂಬರ್ 11ರಂದು ಬೆಂಗಳೂರಿನ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಆಯೋಜಿಸಿದ್ದ ‘ಆಚಾರ್ಯ ದೇವೋ ಭವ’ ಶೀರ್ಷಿಕೆಯ ನೇರ ಪ್ರಸಾರದ ವೆಬಿನಾರ್ ನಲ್ಲಿ ದೇಶಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕರನ್ನು ಉದ್ದೇಶಿಸಿ ಮಾತನಾಡಿದರು. ಮಾನ್ಯ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಶಿಕ್ಷಣ ತಜ್ಞರ ಸಮೂಹದೊಂದಿಗೆ ಅಂದರೆ ರಾಷ್ಟ್ರಾದ್ಯಂತದ ಕುಲಪತಿಗಳು / ರಿಜಿಸ್ಟ್ರಾರುಗಳು / ಪ್ರಾಧ್ಯಾಪಕರು / ಐಕ್ಯೂಎಸಿ ಮುಖ್ಯಸ್ಥರು / ಪ್ರಾಂಶುಪಾಲರು / ಅಧ್ಯಾಪಕರ ಜೊತೆ ಸಂವಾದ ನಡೆಸಿದರು. ಪ್ರಸಕ್ತ ಸಾಂಕ್ರಾಮಿಕ ಅವಧಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹಿಡಿದಿಡುವಲ್ಲಿ ವ್ಯಾಕ್ ಶ್ಲಾಘನೀಯ ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಅಂಶವನ್ನು ಗಮನಿಸಿದ ಅವರು, ಇದು ಬದಲಾಗುತ್ತಿರುವ ಸನ್ನಿವೇಶ ಮತ್ತು ವ್ಯವಸ್ಥೆಯ ಆಶೋತ್ತರಗಳಿಗೆ ಮತ್ತು ಉನ್ನತ ಶಿಕ್ಷಣದ ಬಾಧ್ಯಸ್ಥರುಗಳಿಗೆ ಅನುಗುಣವಾಗಿದೆ ಎಂದರು.
ಶಿಕ್ಷಣ ಕ್ಷೇತ್ರದ ಬೋಧಕರುಗಳನ್ನುದ್ದೇಶಿಸಿ ಮಾತನಾಡಿದ ಮಾನ್ಯ ಸಚಿವರು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪ್ರಭಾವ ಮತ್ತು ಕೊಡುಗೆಯನ್ನು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ ನಾವು ಯಾರ ಆಶೀರ್ವಾದದಿಂದ ಇಷ್ಟೆಲ್ಲಾ ಕಲಿತೆವೋ ಆ ನಮ್ಮ ಶಿಕ್ಷಕರು, ಸಮಾಲೋಚಕರು ಮತ್ತು ಪಾಲಕರನ್ನು ಅಭಿನಂದಿಸಬೇಕು ಎಂದರು. ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರ ಪಾತ್ರ ಪರಮೋಚ್ಚವಾಗಿದೆ ಮತ್ತು ನಮ್ಮ ಶ್ರೀಮಂತ ಭಾರತೀಯ ಸಂಸ್ಕೃತಿ ಶಿಕ್ಷಕರನ್ನು ದೇವರ ಸ್ವರೂಪಕ್ಕೆ ಹೋಲಿಸಿದೆ, ಇತ್ತೀಚೆಗೆ ನಾವು ಶಿಕ್ಷಕರ ದಿನವನ್ನು ಆಚರಿಸಿದ್ದೇವೆ. ಭಾರತದ ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವದು. ಈ ದಿನವನ್ನು ಪ್ರತಿವರ್ಷ 'ಶಿಕ್ಷಕರ ದಿನ' ಎಂದು ಆಚರಿಸಲಾಗುತ್ತದೆ. ಡಾ. ರಾಧಾಕೃಷ್ಣನ್ ಬಹಳ ಪ್ರಸಿದ್ಧ ಶಿಕ್ಷಕರಾಗಿದ್ದರು, ಆದ್ದರಿಂದ ನಾವು ಅವರ ಜನ್ಮದಿನವನ್ನು "ಶಿಕ್ಷಕರ ದಿನ" ಎಂದು ಆಚರಿಸುತ್ತೇವೆ; ಎಂದು ಉಲ್ಲೇಖಿಸಿದರು.
ನಾವು ಭಾರತದ ಬಗ್ಗೆ ಮಾತನಾಡುವಾಗ, ಅದು ಗುರು-ಶಿಷ್ಯ ಪರಂಪರೆಯ ದೇಶವಾಗಿರುತ್ತದೆ. ಇದು ಜ್ಞಾನದ ನೆಲೆಯಾಗಿರುತ್ತದೆ, ಪವಿತ್ರ ತಪೋಭೂಮಿಯಾಗಿರುತ್ತದೆ, ಸಾಧನೆಯ ನೆಲೆವೀಡಾಗಿರುತ್ತದೆ. ಇದು ಧ್ಯಾನದ ನೆಲವಾಗಿರುತ್ತದೆ, ನಮಿಸುವ ಭೂಮಿಯಾಗಿರುತ್ತದೆ ಮತ್ತು ಅಂಗೀಕಾರಾರ್ಹವಾದ ಭೂಮಿಯಾಗಿರುತ್ತದೆ. ಹೀಗಾಗಿ ನಾವು ನಮ್ಮ ಗುರುಗಳನ್ನು ವೈಭವೀಕರಿಸಿ, ಆಚಾರ್ಯರೆಂದು ಅವರಿಗೆ ನಮಿಸುತ್ತೇವೆ. ಇಂದು ಕಾಕತಾಳೀಯವೆಂಬಂತೆ ಮತ್ತೊಂದು ವಿಶೇಷವಿದೆ. ವಿಶ್ವ ಇತಿಹಾಸದ ಪುಟಗಳಲ್ಲಿ, ಸೆಪ್ಟೆಂಬರ್ 11, 1893 ಅನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ ಏಕೆಂದರೆ ಈ ದಿನ, ಸ್ವಾಮಿ ವಿವೇಕಾನಂದರು ಅಮೆರಿಕದ ಶಿಕಾಗೊದಲ್ಲಿ ನಡೆದ ‘ವಿಶ್ವ ಧರ್ಮಗಳ ಸಮ್ಮೇಳನ’ದಲ್ಲಿ ತಮ್ಮ ದಿವ್ಯ ಉಪನ್ಯಾಸದಿಂದ ಇಡೀ ಜಗತ್ತನ್ನು ಬೆರಗುಗೊಳಿಸಿದ್ದರು. “ನನ್ನ ಅಮೆರಿಕದ ಸಹೋದರ ಸಹೋದರಿಯರೇ” ಎಂಬ ಪದಗಳೊಂದಿಗೆ ಆರಂಭಿಸಿದ ಅವರ ಭಾಷಣ ಸ್ವಾಮಿ ವಿವೇಕಾನಂದರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿತು. ಈ ದಿನ ಸ್ವಾಮಿ ವಿವೇಕಾನಂದರು ಜಾಗತಿಕ ವೇದಿಕೆಯಲ್ಲಿ ಭಾರತದ ಧಾರ್ಮಿಕ ಕಲ್ಪನೆಗಳ ಔನ್ನತ್ಯವನ್ನು ಮತ್ತು ರೂಢಿಗಳನ್ನು ಪ್ರದರ್ಶಿಸುವ ಮೂಲಕ ಭಾರತ ಹೆಮ್ಮೆ ಪಡುವಂತೆ ಮಾಡಿದರು. ವಿಶ್ವಕ್ಕೆ ಸದೃಢ ಭಾರತದ ಚಿತ್ರಣವನ್ನು ನೀಡಿದರು. ಈ ಮೂಲಕ ಭಾರತ ಚಿಂತನೆಯ ಪ್ರಕ್ರಿಯೆಯಲ್ಲಿ ವಿಶ್ವಮಟ್ಟದಲ್ಲಿ ವಿಜಯೋತ್ಸವ ಆಚರಿಸಿತು. ಹೀಗಾಗಿಯೇ ಪ್ರತಿ ವರ್ಷ ಸೆಪ್ಟೆಂಬರ್ 11ರಂದು “ದಿಗ್ವಿಜಯ ದಿನ’ವನ್ನು ಆಚರಿಸಲಾಗುತ್ತದೆ. ಭಾರತವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಆಳವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಮಾಡಿದೆ. ಭಾರತ ವಿಶ್ವಕ್ಕೆ ಜೀವನದ ದಿಕ್ಕು, ದೃಷ್ಟಿ ಮತ್ತು ಶಿಕ್ಷಣವನ್ನು ನೀಡಿದೆ. ಇದೇ ಜ್ಞಾನ ಮತ್ತು ವಿಜ್ಞಾನದ ಆಧಾರದಲ್ಲಿ ನಮ್ಮ ಮಹಾಪುರುಷರು ಅದ್ಭುತ ಭವ್ಯ ಭಾರತ ನಿರ್ಮಿಸಿದ್ದಾರೆ ಎಂದು ಮಾನ್ಯ ಸಚಿವರು ವ್ಯಾಖ್ಯಾನಿಸಿದರು.
ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಅನುಷ್ಠಾನ ಮಾಡುವ ಮತ್ತು ಭಾರತೀಯ ಶಿಕ್ಷಣದ ಬಲವಾದ ಅಡಿಪಾಯವನ್ನು ಪುನರುಜ್ಜೀವನಗೊಳಿಸುವ ಮತ್ತು ನಮ್ಮ ಸಮಾಜವನ್ನು ಪೋಷಿಸಲು ಮತ್ತು ನಮ್ಮ ಬೇರುಗಳಿಗೆ ಸಂಪರ್ಕ ಕಲ್ಪಿಸುವ ಕಾಲ ಈಗ ಬಂದಿದೆ. ಆದರೆ ಇದು ಆಗಬೇಕಾದರೆ, ನಮ್ಮ ಶಿಕ್ಷಕರು ಮತ್ತು ಪ್ರಾಧ್ಯಾಪಕರು ಸಜ್ಜಾಗಬೇಕು. ವಿದ್ಯಾರ್ಥಿಗಳ ಕಲ್ಪನೆಗಳು ಮತ್ತು ಊಹೆಗಳನ್ನು ಮತ್ತಷ್ಟು ಉತ್ತೇಜಿಸಬೇಕು. ಅವರಲ್ಲಿ ಸುಪ್ತವಾದ ಚಿಂತನಾ ಲಹರಿ ಮತ್ತು ಕುತೂಹಲವನ್ನು ಜಾಗೃತಗೊಳಿಸಬೇಕು, ಹೊರತೆಗೆದು ಪೋಷಿಸಬೇಕು. ಇದಕ್ಕಾಗಿ, ಪ್ರಾಚೀನ ಬೋಧನಾ ವಿಧಾನಗಳ ಆಧಾರದ ಮೇಲೆ, ಹೊಸ ಶಿಕ್ಷಣ ವಿನ್ಯಾಸವನ್ನು ನಿರ್ಮಿಸಬೇಕಾಗಿದೆ, ಹೊಸ ಬೋಧನಾ ವಿಧಾನಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಹೆಚ್ಚು ಪ್ರತಿಭಾವಂತ ಮತ್ತು ಶ್ರದ್ಧಾಳು ಶಿಕ್ಷಕರು, ಮುಂದಿನ ಪೀಳಿಗೆಯ ಪ್ರತಿಭಾವಂತರನ್ನು ರೂಪಿಸುತ್ತಾರೆ. ಒಬ್ಬರು ತಮ್ಮ ಜೀವನ ಅನುಭವಗಳಿಂದ ವಿಷಯವನ್ನು ಆರಿಸುವ, ಕಾರ್ಯಾಗಾರಗಳು ಮತ್ತು ಪ್ರಯೋಗಗಳ ಮೂಲಕ ಜ್ಞಾನವನ್ನು ಸೆಳೆಯುವ ಮತ್ತು ಕುತೂಹಲವನ್ನು ಜಾಗೃತಗೊಳಿಸುವ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಆಚಾರ್ಯರು ಈ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ, ಅದರಲ್ಲಿ ಆಸಕ್ತಿ ವಹಿಸುತ್ತಾರೆ ಮತ್ತು ಅವರ ಕೊಡುಗೆಯನ್ನು ಹೆಚ್ಚಿಸುತ್ತಾರೆ, ಆಗ ಹೆಚ್ಚು ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮತ್ತು ಕುತೂಹಲ ಹೆಚ್ಚಾಗುತ್ತದೆ. ಆಗ ಅವರು ನಿಜವಾದ ಜ್ಞಾನವನ್ನು ಪಡೆಯುತ್ತಾರೆ, ಎಂದು ಸಚಿವರು ಹೇಳಿದರು ’.
ಈ ಸಮಾರಂಭದಲ್ಲಿ ಯುಜಿಸಿ ಅಧ್ಯಕ್ಷ ಪ್ರೊ. ಡಿ.ಪಿ. ಸಿಂಗ್, ನ್ಯಾಕ್ ಇಸಿಯ ಅಧ್ಯಕ್ಷ ಪ್ರೊ. ವೀರೇಂದರ್ ಎಸ್ ಚೌವ್ಹಾಣ್ ಭಾಗಿಯಾಗಿದ್ದರು, ನ್ಯಾಕ್ ನಿರ್ದೇಶಕ ಪ್ರೊ. ಎಸ್.ಸಿ. ಶರ್ಮಾ ಕಾರ್ಯಕ್ರಮದಲ್ಲಿ ಮಾತನಾಡಿ, ನಿರೂಪಿಸಿದರು.
***
(Release ID: 1653448)
Visitor Counter : 233