Ministry of Mines

ಗಣಿ ಕ್ಷೇತ್ರದ ಕುಂದುಕೊರತೆ ನಿವಾರಣೆಗೆ ಕೇಂದ್ರ ಸರ್ಕಾರ ಬದ್ಧ: ಕೇಂದ್ರ ಗಣಿ ಸಚಿವ ಶ್ರೀ ಪ್ರಲ್ಹಾದ ಜೋಶಿ


ಕೆಜಿಎಫ್ ನಲ್ಲಿ ಚಿನ್ನ ಮತ್ತು ಇತರ ನಿಕ್ಷೇಪ ಪರಿಶೋಧನೆಗೆ ಎಂ.ಇ.ಸಿ.ಎಲ್.ನಿಂದ ಸಮೀಕ್ಷೆ

Posted On: 28 AUG 2020 8:16PM by PIB Bengaluru

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಕ್ಕೂಟ ವ್ಯವಸ್ಥೆಯ ಬಲವರ್ಧನೆಗೆ ಬದ್ಧವಾಗಿದ್ದು, ಪ್ರಧಾನಿಯವರ ನಿರ್ದೇಶನದಂತೆ ಗಣಿ ಸಚಿವಾಲಯ ರಾಜ್ಯಗಳಿಗೇ ತೆರಳಿ, ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಬಗೆಹರಿಸುತ್ತಿದೆ, ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡಕ್ಕೂ  ಹೆಚ್ಚಿನ ಪ್ರಯೋಜನವಾಗುತ್ತಿದೆ ಎಂದು ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಮತ್ತು ಉನ್ನತಾಧಿಕಾರಿಗಳೊಂದಿಗೆ ಕರ್ನಾಟಕದ ಗಣಿ ವಲಯದಲ್ಲಿ ದೀರ್ಘಕಾಲದಿಂದ ಕಗ್ಗಂಟಾಗಿ ಉಳಿದಿದ್ದ ಸಮಸ್ಯೆಗಳ ಕುರಿತಂತೆ ಸುದೀರ್ಘ ಚರ್ಚೆ ನಡೆಸಿದ ಅವರು, ರಾಜ್ಯದ ನಾಲ್ಕು ಪ್ರಮುಖ ಬೇಡಿಕೆಗಳು ಪರಿಹಾರವಾಗಿವೆ ಎಂದು ತಿಳಿಸಿದರು.

ಉಕ್ಕು ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆ ಎನ್.ಎಂ.ಡಿ.ಸಿ.ಗೆ ರಾಜ್ಯದ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ದೊಣೆಮಲೈನಲ್ಲಿ ಗಣಿಗಾರಿಕೆಗೆ ನೀಡಲಾಗಿದ್ದ 50 ವರ್ಷಗಳ ಗಣಿಗಾರಿಕೆ ಗುತ್ತಿಗೆ ಅವಧಿ 2018ರಲ್ಲೇ ಮುಗಿದಿದ್ದರೂ, 2015 ಜನವರಿ 12 ತಿದ್ದುಪಡಿಯಲ್ಲಿ ನವೀಕರಣಕ್ಕೆ ಅಥವಾ ಅವಧಿ ವಿಸ್ತರಣೆಗೆ ಅವಕಾಶವಿಲ್ಲದ ಕಾರಣ ಅದು  ಸಾಧ್ಯವಾಗಿರಲಿಲ್ಲ ಎಂದರು.

ಮಿಗಿಲಾಗಿ ತಿದ್ದುಪಡಿಯನ್ವಯ ಕೇಂದ್ರ ಅಥವಾ ರಾಜ್ಯ ಸರ್ಕಾರ ಒಡೆತನದ ಸಾರ್ವಜನಿಕ ವಲಯದ  ಉದ್ದಿಮೆಗಳಿಗೆ ಹಂಚಿಕೆಯ ಮೂಲಕ ಗಣಿ ಗುತ್ತಿಗೆ ಮಂಜೂರು ಮಾಡಬಹುದಾಗಿದ್ದು, ಇದಕ್ಕೆ ಭಾರತ ಸರ್ಕಾರವೇ ರಾಯಲ್ಟಿಗಿಂತ ಮಿಗಿಲಾದ ಪ್ರೀಮಿಯಂ ಅನ್ನು ನಿಗದಿ ಮಾಡುತ್ತದೆ. ಆದರೆ ಪ್ರೀಮಿಯಂ ಮೊತ್ತದ ಬಗ್ಗೆ ರಾಜ್ಯದ ಆಕ್ಷೇಪವಿತ್ತು. ಹೀಗಾಗಿ ಗಣಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉಕ್ಕು ಇಲಾಖೆಯ ಪ್ರತಿನಿಧಿ, ರಾಜ್ಯ ಸರ್ಕಾರದ ಪ್ರತಿನಿಧಿಯನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಅದು 3 ತಿಂಗಳೊಳಗೆ ತನ್ನ ವರದಿ ನೀಡಲಿದ್ದು, ಅದನ್ನು ಪೂರ್ವಾನ್ವಯವಾಗಿ ಜಾರಿಗೆ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಸಮಿತಿ ವರದಿ ನೀಡುವರೆಗೆ ಮೂರು ತಿಂಗಳಲ್ಲಿ ಗಣಿಗಾರಿಕೆ ಮುಂದುವರಿಸಲು, ಕೇಂದ್ರ ಸರ್ಕಾರ ನಿಗದಿ ಮಾಡಿದ್ದ ಶೇ. 15 ರಾಯಧನದ ಜೊತೆಗೆ ಶೇ.22.5ರಷ್ಟು ಸೇರಿಸಿ, ಒಟ್ಟು ಶೇ.37.25 ಪ್ರೀಮಿಯಂ ನೀಡಲು ನಿರ್ಧರಿಸಲಾಗಿದೆ. ಇದು ಹಾಲಿ ಇರುವುದಕ್ಕಿಂತ ಒಟ್ಟಾರೆ ಶೇ.150ರಷ್ಟು ಹೆಚ್ಚು ಎಂದು ವಿವರಿಸಿದರು.

ಇಂದು ಕೈಗೊಂಡ ಮತ್ತೊಂದು ಮಹತ್ವದ ನಿರ್ಧಾರದಲ್ಲಿ, ಕೋಲಾರ ಚಿನ್ನದ ಗಣಿಯ -ಭಾರತ್ ಗೋಲ್ಡ್ ಮೈನ್ ಕಂಪನಿಯ 11-12 ಸಾವಿರ ಎಕರೆ ಭೂಮಿಯ ಪೈಕಿ 3200 ಎಕರೆ ಜಮೀನನ್ನು ಕೈಗಾರಿಕಾ ಪಾರ್ಕ್ ಗೆ ನೀಡುವ ಕುರಿತಂತೆ ಚರ್ಚಿಸಲಾಗಿದ್ದು, ಇದಕ್ಕೂ ಮೊದಲು ಪ್ರದೇಶದಲ್ಲಿ 3 ತಿಂಗಳೊಳಗೆ ಭೌತಿಕ ಸಮೀಕ್ಷೆ ನಡೆಸಲು ರಾಜ್ಯಕ್ಕೂ ತಿಳಿಸಲಾಗಿದೆ, ಅದೇ ರೀತಿ ಕೇಂದ್ರದ ಎಂ..ಸಿ.ಎಲ್. ಸಹ 6 ತಿಂಗಳಲ್ಲಿ, ಪ್ರಸಕ್ತ ಬಳಕೆಯಾಗಿರುವ ಭೂಮಿಯ ಹೊರತಾಗಿ ಬೇರೆ ಪ್ರದೇಶದಲ್ಲಿ ನೈಸರ್ಗಿಕ ಖನಿಜ ಸಂಪತ್ತುಚಿನ್ನ ಅಥವಾ ಬೇರೆ ಲೋಹದ ಅದಿರು ಇರುವ ಸಾಧ್ಯತೆಯ ಪರಿಶೋಧನೆ ಮಾಡಲಿದೆ. ಅಲ್ಲಿ ಯಾವುದೇ ಖನಿಜ ಇದ್ದರೂ ಅದರಿಂದ ರಾಜ್ಯಕ್ಕೆ ಲಾಭವಾಗಲಿದೆ. ಅಕಸ್ಮಾತ್ ಪ್ರದೇಶ ಗಣಿಗಾರಿಕೆಗೆ ಯೋಗ್ಯವಲ್ಲ ಎಂಬ ವರದಿ ಬಂದರೆ ಕೈಗಾರಿಕಾ ಪಾರ್ಕ್ ಗೆ ಭೂಮಿ ಹಸ್ತಾಂತರಿಸಲಾಗುತ್ತದೆ ಎಂದು ಪ್ರಹ್ಲಾದ ಜೋಶಿ ತಿಳಿಸಿದರು.

ಮಧ್ಯೆ ಕರ್ನಾಟಕ ವಿದ್ಯುತ್ ನಿಗಮ -ಕೆಪಿಸಿ ಸಿಂಗ್ರೇಣಿಯಿಂದ ಕಲ್ಲಿದ್ದಲು ತರಿಸಿಕೊಳ್ಳಲಾಗುತ್ತಿದ್ದು, ಇದು ದುಬಾರಿಯಾಗಿದೆ, ಇದರಿಂದ ಪ್ರತಿ ಯುನಿಟ್ ವಿದ್ಯುತ್ ಉತ್ಪಾದನೆಯೂ ದುಬಾರಿಯಾಗುತ್ತಿದೆ ಹೀಗಾಗಿ ದರ ಮರು ಪರಿಗಣನೆಗೆ ಸಿಂಗ್ರೇಣಿಯ ಸಿಎಂಡಿಗೆ ಮನವಿ ಮಾಡಿದ್ದು,   ಹಂತದಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ, ಭಾರತ ಸರ್ಕಾರ ಮಧ್ಯ ಪ್ರವೇಶಿಸುತ್ತದೆ ಎಂದರು.

ಅದೇ ರೀತಿ ಅಲ್ಲಿಂದ ಕಲ್ಲಿದ್ದಲು ಬರುವ ವೇಳೆಗೆ ಅದರ ಗುಣಮಟ್ಟ ಕಡಿಮೆ ಆಗುವ ಬಗ್ಗೆಯೂ ಚರ್ಚೆ ನಡೆದಿದ್ದು, ಉತ್ತಮ ಮಾದರಿ ಪರೀಕ್ಷಾ ವ್ಯವಸ್ಥೆ ಕಲ್ಪಿಸಿ ಗುಣಮಟ್ಟದ ಖಾತ್ರಿ ಪಡಿಸಲಾಗುವುದು ಎಂಬ ಭರವಸೆ ನೀಡಿದರು.

ಕರ್ನಾಟಕಕ್ಕೆ ಈಗಾಗಲೇ ಮಂಜೂರಾಗಿರುವ ಮತ್ತು ಗಣಿ ಅಭಿವೃದ್ಧಿ ಕಾರ್ಯ ನಿರ್ವಾಹಕಎಂಡಿಓ ಸಮಸ್ಯೆಯಿಂದ ನನೆಗುದಿಗೆ ಬಿದ್ದಿರುವ ಭಾರಂಜ ಗಣಿಯಲ್ಲಿ ಕಲ್ಲಿದ್ದಲು ಕಳ್ಳತನ ಆಗಿದೆ ಎನ್ನಲಾದ ವಿಷಯ ಪ್ರಸ್ತಾಪಿಸಿದ ಜೋಶಿ, ಇದರ ಬಗ್ಗೆ ನಿರ್ಧರಣೆ ಮಾಡಿ ರಾಯಲ್ಟಿ ಸಮಸ್ಯೆ ಪರಿಹರಿಸಲಾಗುವುದು ಮತ್ತು ಮುಖ್ಯಮಂತ್ರಿಗಳು ಇಲ್ಲಿಯೂ ಗಣಿ ಚಟುವಟಿಕೆಗೆ ಆದೇಶ ನೀಡಿದ್ದಾರೆ ಎಂದರು.

2015 ತಿದ್ದುಪಡಿ ಬಳಿಕ ಜಿ -2 ಮಟ್ಟದಲ್ಲಿ ಕಲ್ಲಿದ್ದಲು ನಿಕ್ಷೇಪ ನೀಡಲಾಗುತ್ತಿದ್ದು, ಜಿ 3 ಮಟ್ಟದಲ್ಲಿ ನೀಡಿ ಎಂದು ಯಡಿಯೂರಪ್ಪ ಮತ್ತು ರಾಜ್ಯ ಗಣಿ ಸಚಿವ ಸಿ.ಸಿ. ಪಾಟೀಲ್ ಮನವಿ ಮಾಡಿದ್ದಾರೆ. ಈಗ ಜಿ-4 ಮಟ್ಟದಲ್ಲೇ ಸಂಯುಕ್ತ ಗಣಿ ಗುತ್ತಿಗೆ ಮತ್ತು ಪರವಾನಗಿ ನೀಡಲು ತೀರ್ಮಾನಿಸಿದ್ದು, ಇಲ್ಲಿ ಖನಿಜ ಇದ್ದಲ್ಲಿ ಗಣಿ ಚಟುವಟಿಕೆ ಮುಂದುವರಿಸಬಹುದು ಇಲ್ಲ ಕೈಬಿಡಬಹುದು. ಆದರೆ ಅದರ ಪೂರ್ಣ ದತ್ತಾಂಶ ಒದಗಿಸಬೇಕಾಗುತ್ತದೆ. ಇದರಿಂದ ರಾಜ್ಯಗಳಿಗೆ ಆಗುತ್ತಿರುವ ವಿಳಂಬ ನಿವಾರಣೆ ಆಗುತ್ತದೆ ಎಂದು ವಿವರಿಸಿದರು.

ಸುಗಮ ವಾಣಿಜ್ಯಕ್ಕೆ ಕೇಂದ್ರ  ಸರ್ಕಾರ ಒತ್ತು ನೀಡಿದ್ದು, ರಾಜ್ಯಗಳಿಗೂ ಸುಗಮ ಗಣಿಗಾರಿಕೆಯ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಇಂದಿನ ಸಭೆ ಫಲಪ್ರದವಾಗಿದೆ,   ದೀರ್ಘಕಾಲದ ಸಮಸ್ಯೆ ಪರಿಹಾರವಾಗಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಹ್ಲಾದ ಜೋಶಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಲವು ವರ್ಷಗಳಿಂದ ಪರಿಹಾರ ಸಿಗದೆ ನನೆಗುದಿಗೆ ಬಿದ್ದಿದ್ದ ಯೋಜನೆಗಳು ಕಾರ್ಯಗತವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಕಂದಾಯ ಸಚಿವ ಆರ್.ಅಶೋಕ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹಾಗೂ ಕೇಂದ್ರ ಗಣಿ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್ ಜೈನ್ ಮತ್ತಿತರ  ಅಧಿಕಾರಿಗಳು ಉಪಸ್ಥಿತರಿದ್ದರು.

***



(Release ID: 1649348) Visitor Counter : 74