ಪ್ರಕಟಣಾ ದಿನಾಂಕ:
10 JUL 2020 4:58PM by PIB Bengaluru
ಆತ್ಮನಿರ್ಭರ ಭಾರತ ಪ್ಯಾಕೇಜ್ ನಡಿ ಘೋಷಿಸಿರುವ ಯೋಜನೆಗಳು ಕರ್ನಾಟಕ ರಾಜ್ಯದಲ್ಲಿ ಸಮರ್ಥ ಅನುಷ್ಠಾನಕ್ಕೆ ಜನಪ್ರತಿನಿಧಿಗಳ ಸಹಕಾರ ಮತ್ತು ಉಸ್ತುವಾರಿ ವಹಿಸಿ, ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರ ಸ್ವಾವಲಂಬಿ ಭಾರತ ಯೋಜನೆಯ ಯಶಸ್ವಿಗೆ ಸಹಕರಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸಚಿವರು ಸಂಸದರುಗಳಾದ ಶ್ರೀ ಪಿ.ಸಿ. ಮೋಹನ್ ಹಾಗೂ ಶ್ರೀ ತೇಜಸ್ವಿ ಸೂರ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಚಿವರು, ಪ್ರಧಾನಿ ಮೋದಿಯವರ ಮೊದಲ ಆದ್ಯತೆ ಜೀವ. ಸಾಧ್ಯವಾದಷ್ಟು ಜೀವಹಾನಿಯನ್ನು ಕಡಿಮೆ ಮಾಡುವುದಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮುಂಚೆ ಭಾರತದಲ್ಲಿ ಸೋಂಕು ನಿರೋಧಕ ಪಿಪಿಇ ಕಿಟ್ ಗಳನ್ನು ತಯಾರಿಸುತ್ತಿರಲಿಲ್ಲ. ಈಗ ದಿನಕ್ಕೆ 4 ಲಕ್ಷಕ್ಕಿಂತ ಅಧಿಕ ಸ್ವದೇಶಿ ಪಿಪಿಇ ಕಿಟ್ ಗಳನ್ನು ತಯಾರಿಸಲಾಗುತ್ತಿದೆ. ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಹಾಗು ಮೀಸಲಾದ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ ಎಂದರು.
ವಿಶೇಷವಾಗಿ ಬಡವರು, ಕಾರ್ಮಿಕರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಲು ಗರೀಬ್ ಕಲ್ಯಾಣ್ ಯೋಜನೆಯಡಿ ಉಚಿತ ಆಹಾರ ಧಾನ್ಯ ವಿತರಣೆಯನ್ನು ನವೆಂಬರ್ ವರೆಗೆ ವಿಸ್ತರಿಸಲಾಗಿದೆ ಪ್ರತೀ ತಿಂಗಳು ಎಲ್ಲರಿಗೂ ತಲಾ 5 ಕೆ.ಜಿ. ಅಕ್ಕಿ ಮತ್ತು ಪ್ರತೀ ಕುಟುಂಬಕ್ಕೆ ತಲಾ ಒಂದು ಕೆ.ಜಿ. ಕಡಲೆಕಾಳು ವಿತರಿಸಲು 1.5 ಲಕ್ಷ ಕೋಟಿ. ರೂ. ಹಾಗೂ ವಲಸೆ ಕಾರ್ಮಿಕರಿಗೆ ನೆರವು ನೀಡಲು 56 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.
8.19 ಕೋಟಿ ಬಡಕುಟುಂಬಗಳಿಗೆ ಉಜ್ವಲಾ ಯೋಜನೆಯಡಿ ಉಚಿತ ಅಡಿಗೆ ಅನಿಲ ಸಿಲಿಂಡರ್ ಪೂರೈಸಲು 13 ಸಾವಿರ ಕೋಟಿ ರೂಪಾಯಿ ಒದಗಿಸಲಾಗಿದೆ. ಜನಧನ್ ಖಾತೆ ಹೊಂದಿರುವ ಮಹಿಳೆಯರ ಖಾತೆಗಳಿಗೆ ತಲಾ 500 ರೂ. ನೀಡಲು 611 ಕೋಟಿ ರೂ. ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ 681 ಕೋಟಿ ರೂ. ನೆರವು ನೀಡಲಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ.ಗಳನ್ನು ಒದಗಿಸಿದ್ದು, ಈ ಯೋಜನೆಯ ಒಟ್ಟು ಗಾತ್ರ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂ.ಗಳನ್ನು ಮೀರಿದೆ ಎಂದು ಶ್ರೀ ಸದಾನಂದಗೌಡ ತಿಳಿಸಿದರು.
ದೇಶದ ರೈತರ ಕಲ್ಯಾಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ 8.7 ಕೋಟಿ ರೈತರಿಗೆ ತಲಾ 2 ಸಾವಿರ ರೂ. ನೀಡಲು 18,890 ಕೋಟಿ ರೂ. ಒದಗಿಸಲಾಗಿದೆ. ಸ್ವಾವಲಂಬಿ ಭಾರತ ಯೋಜನೆಯಡಿ ರೈತರಿಗೆ 2 ಲಕ್ಷ ಕೋಟಿ ರೂಪಾಯಿ ರಿಯಾಯತಿ ಸಾಲ ಒದಗಿಸಲಾಗುತ್ತಿದೆ. ಇದಕ್ಕಾಗಿ ಜೂನ್ ಕೊನೆಯ ವೇಳೆಗೆ 70.32 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡುಗಳನ್ನು ವಿತರಿಸಲಾಗಿದೆ. ಇದುವರೆಗೆ ಈ ಕಾರ್ಡುಗಳನ್ನು ಪಡೆದಿರುವ ರೈತರು ಒಟ್ಟು 62,870 ಕೋಟಿ ರೂಪಾಯಿ ಸಾಲ ಪಡೆಯಲು ಅರ್ಹರಾಗಿದ್ದಾರೆ. ಕೋಲ್ಡ್ ಸ್ಟೋರೇಜ್, ಕೃಷಿ ಉತ್ಪನ್ನ ಸಾಗಣೆ ವ್ಯವಸ್ಥೆ ಸೇರಿದಂತೆ ಕೃಷಿ ಮೂಲಭೂತ ಸೌಕರ್ಯಕ್ಕಾಗಿ ಒಂದು ಲಕ್ಷ ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಎಪಿಎಂಸಿ ಕಾಯ್ದೆಗೆ ಸುಧಾರಣೆ ತರಲಾಗಿದ್ದು ರೈತರು ತಮ್ಮಬೆಳೆಯನ್ನು ಹೆಚ್ಚು ಬೆಲೆ ಸಿಗುವ ದೇಶದ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗಾಗಿ 9,407 ಕೋಟಿ ರೂಪಾಯಿ ಹಾಗೂ ಪಶುಸಂಗೋಪನೆಗಾಗಿ 15 ಸಾವಿರ ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ಅವರು ಹೇಳಿದರು.
ರಸಗೊಬ್ಬರ ಉತ್ಪಾದನೆಯಲ್ಲಿಯೂ ಸ್ವಾವಲಂಬನೆ ಸಾಧಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಾರ್ಷಿಕ 12.7 ಲಕ್ಷ ಟನ್ ಯೂರಿಯಾ ಉತ್ಪಾದನೆ ಸಾಮರ್ಥ್ಯದ ರಾಮಗುಂಡಮ್ ರಸಗೊಬ್ಬರ ಕಾರ್ಖಾನೆ ಇನ್ನು ಕೆಲವೇ ತಿಂಗಳುಗಳಲ್ಲಿ ಉತ್ಪಾದನೆ ಆರಂಭಿಸಲಿದೆ. ತಲ್ಚೇರ್ ಸೇರಿದಂತೆ ಇನ್ನೂ ನಾಲ್ಕು ರಸಗೊಬ್ಬರ ಘಟಕಗಳ ಪುನಶ್ಚೇತನ ಕಾರ್ಯ ಭರದಿಂದ ಸಾಗಿದೆ ಎಂದರು.
ದೇಶದ ಅರ್ಥವ್ಯವಸ್ಥೆಗೆ ಉತ್ತೇಜನ ನೀಡಲು ಆತ್ಮನಿರ್ಭರ ಭಾರತ ಯೋಜನೆಯಲ್ಲಿ ಹಲವಾರು ಕ್ರಮಗಳನ್ನು ಪ್ರಕಟಿಸಲಾಗಿದೆ. ಎಂಎಸ್ಎಂಇಗಳಿಗೆ ತುರ್ತು ಸಾಲ ಖಾತ್ರಿ ಯೋಜನೆಯಡಿ, 4 ಸಾವಿರದ 106 ಕೋಟಿ.ರೂ. ನಿಗದಿಪಡಿಸಿದ್ದು, ಈಗಾಗಲೇ 2 ಸಾವಿರದ 439 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಎಂಎಸ್ಎಂಇಗಳಿಗೆ 3 ಲಕ್ಷ ಕೋಟಿ ರೂ. ಭದ್ರತಾ ರಹಿತ ಸಾಲ ಯೋಜನೆ ತರಲಾಗಿದೆ. 35 ಲಕ್ಷಕ್ಕೂ ಹೆಚ್ಚು ಎಂಎಸ್ಎಂಇಗಳು ಇದರ ಪ್ರಯೋಜನ ಪಡೆದಿವೆ. ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಈಗಾಗಲೇ 1.14 ಲಕ್ಷ ಎಂಎಸ್ಎಂಇಗಳಿಗೆ 56 ಸಾವಿರ ಕೋಟಿ ರೂಪಾಯಿ ಸಾಲ ವಿತರಿಸಿವೆ. ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವ ಸುಮಾರು 2 ಲಕ್ಷ ಎಂಎಸ್ಎಂಇಗಳಿಗೆ 20 ಸಾವಿರ ಕೋಟಿ ರೂಪಾಯಿ ಮರುಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಮೊದಲ ಹಂತದಲ್ಲಿ ಕರ್ನಾಟಕದ ರಾಯಚೂರು ಸೇರಿದಂತೆ ಮೂರು ಕಡೆ “ಬಲ್ಕ್ ಮೆಡಿಸಿನ್ & ಮೆಡಿಕಲ್ ಎಕ್ವಿಪ್ಮೆಂಟ್ ಪಾರ್ಕ್”ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಲಾಗಿದೆ. ಇದಕ್ಕಾಗಿ ನಮ್ಮ ಇಲಾಖೆಯು 3,000 ಕೋಟಿ ರೂಪಾಯಿ ತೆಗೆದಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಸಂಸದ ಶ್ರೀ ಪಿ.ಸಿ.ಮೋಹನ್ ಮಾತನಾಡಿ, ಜನಧನ್ ಖಾತೆಗಳಿಗೆ 500 ರೂ.ಗಳನ್ನು ನೇರವಾಗಿ ವರ್ಗಾವಣೆ ಮಾಡಿರುವುದರಿಂದ ಯಾವುದೇ ಅವ್ಯವಹಾರಗಳಿಗೆ ಆಸ್ಪದವಾಗಿಲ್ಲ. ಮಧ್ಯವರ್ತಿಗಳ ಕಾಟವಿಲ್ಲದೇ ಬಡವರು ಸಂಪೂರ್ಣ ಪ್ರಯೋಜನ ಪಡೆದಿದ್ದಾರೆ ಎಂದರು.
ಸಂಸದ ಶ್ರೀ ತೇಜಸ್ವಿ ಸೂರ್ಯ ಮಾತನಾಡಿ, ತಮ್ಮ ಕ್ಷೆತ್ರದಲ್ಲಿ 5, 767 ಎಂಎಸ್ಎಂಇಗಳಿಗೆ 463 ಕೋಟಿ ರೂ. ಗಳನ್ನು ಗರೀಬ್ ಕಲ್ಯಾಣ ಯೋಜನೆಯಡಿ ಒದಗಿಸಲಾಗಿದೆ ಎಂದರು.
***