ಬಾಹ್ಯಾಕಾಶ ವಿಭಾಗ
ಭಾರತದ ಸಂಪರ್ಕ ಉಪಗ್ರಹ GSAT-30 ಯಶಸ್ವಿ ಉಡಾವಣೆ
Posted On:
17 JAN 2020 4:37PM by PIB Bengaluru
ಭಾರತ ಸರ್ಕಾರದ ವಾರ್ತಾ ಶಾಖೆ
ಬೆಂಗಳೂರು
******
17, ಜನವರಿ 2020- ಬೆಂಗಳೂರು
ಭಾರತದ ಸಂಪರ್ಕ ಉಪಗ್ರಹ GSAT-30 ಯಶಸ್ವಿ ಉಡಾವಣೆ
ಭಾರತದ ಸಂಪರ್ಕ ಉಪಗ್ರಹ ಜಿಸ್ಯಾಟ್ -30 ಅನ್ನು ಫ್ರೆಂಚ್ ಗಯಾನಾದ ಸ್ಪೇಸ್‌ಪೋರ್ಟ್‌ನಿಂದ ಇಂದು ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಭಾರತದ ಜಿಸ್ಯಾಟ್ -30 ಹಾಗೂ ಯುಟೆಲ್ ಸ್ಯಾಟ್ ನ ಯುಟೆಲ್ ಸ್ಯಾಟ್ ಕೊನೆಕ್ಟ್ ಉಪಗ್ರಹಗಳನ್ನು ಹೊತ್ತ ಉಡಾವಣಾ ವಾಹನ ಏರಿಯೇನ್ 5 ವಿಎ -251 ಫ್ರೆಂಚ್ ಗಯಾನಾದ ಕೌರು ಉಡಾವಣಾ ನೆಲೆಯಿಂದ ನಿಗದಿಯಂತೆ ಮುಂಜಾನೆ 2: 35 ಕ್ಕೆ ನಭಕ್ಕೆ ಹಾರಿತು.
38 ನಿಮಿಷ 25 ಸೆಕೆಂಡುಗಳ ಕಾಲ ಸಾಗಿದ ನಂತರ, ಜಿಸ್ಯಾಟ್-30, ಏರಿಯೇನ್ 5 ರಿಂದ ದೀರ್ಘ ವೃತ್ತಾಕಾರದ ಜಿಯೋಸಿಂಕ್ರೋನಸ್ ಕಕ್ಷೆಯಲ್ಲಿ ಬೇರ್ಪಟ್ಟಿತು. 3357 ಕೆಜಿ ತೂಕದ ಜಿಸ್ಯಾಟ್-30, ಕಕ್ಷೆಯಲ್ಲಿರುವ ಕೆಲವು ಉಪಗ್ರಹಗಳ ಕಾರ್ಯಾಚರಣೆ ಸೇವೆಗಳಿಗೆ ನಿರಂತರತೆಯನ್ನು ಒದಗಿಸುತ್ತದೆ. ಇಸ್ರೋದ ಹಿಂದಿನ INSAT / GSAT ಉಪಗ್ರಹ ಸರಣಿಗೆ ಸೇರಿದ ಜಿಸ್ಯಾಟ್-30, ಕಕ್ಷೆಯಲ್ಲಿರುವ INSAT-4A ಅನ್ನು ಸ್ಥಳಾಂತರಿಸುತ್ತದೆ.
“ಜಿಸ್ಯಾಟ್ -30 ಹೊಂದಿಕೊಳ್ಳುವ ಆವರ್ತನ ವಿಭಾಗಗಳು ಮತ್ತು ಹೊಂದಿಕೊಳ್ಳುವ ವ್ಯಾಪ್ತಿಯನ್ನು ಒದಗಿಸುವ ವಿಶಿಷ್ಟ ಸಂರಚನೆಯನ್ನು ಹೊಂದಿದೆ. ಉಪಗ್ರಹವು KU-ಬ್ಯಾಂಡ್ ಮೂಲಕ ಭಾರತದ ಮುಖ್ಯಪ್ರದೇಶ ಹಾಗೂ ದ್ವೀಪಗಳಿಗೆ ಮತ್ತು ಕೊಲ್ಲಿ ರಾಷ್ಟ್ರಗಳು, ಬಹುಪಾಲು ಏಷ್ಯನ್ ರಾಷ್ಟ್ರಗಳು ಮತ್ತು ಆಸ್ಟ್ರೇಲಿಯಾಕ್ಕೆ ಸಿ-ಬ್ಯಾಂಡ್ ಮೂಲಕ ಸಂಪರ್ಕ ಸೇವೆಗಳನ್ನು ಒದಗಿಸುತ್ತದೆ” ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದ್ದಾರೆ.
“ಜಿಸ್ಯಾಟ್ -30 ಡಿಟಿಎಚ್ ಟೆಲಿವಿಷನ್ ಸೇವೆಗಳು, ಎಟಿಎಂ, ಸ್ಟಾಕ್ ಎಕ್ಸ್ಚೇಂಜ್, ಟೆಲಿವಿಷನ್ ಅಪ್‌ಲಿಂಕಿಂಗ್ ಮತ್ತು ಟೆಲಿಪೋರ್ಟ್ ಸೇವೆಗಳು, ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್ (ಡಿಎಸ್‌ಎನ್‌ಜಿ) ಮತ್ತು ಇ-ಗವರ್ನೆನ್ಸ್ ಅಪ್ಲಿಕೇಶನ್‌ಗಳ ವಿಎಸ್‌ಎಟಿಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಉಪಗ್ರಹವನ್ನು ದೂರಸಂಪರ್ಕ ಅಪ್ಲಿಕೇಶನ್‌ಗಳ ಬೃಹತ್ ದತ್ತಾಂಶ ವರ್ಗಾವಣೆಗೆ ಸಹ ಬಳಸಲಾಗುವುದು ಎಂದು ಡಾ. ಶಿವನ್ ಹೇಳಿದರು.
”ಉಡಾವಣಾ ವಾಹನದಿಂದ ಬೇರ್ಪಟ್ಟ ಕೂಡಲೇ ಜಿಸ್ಯಾಟ್ -30 ರ ಆದೇಶ ಮತ್ತು ನಿಯಂತ್ರಣವನ್ನು ಕರ್ನಾಟಕದ ಹಾಸನದಲ್ಲಿರುವ ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ವಹಿಸಿಕೊಂಡಿದೆ. ಉಪಗ್ರಹದ ಪ್ರಾಥಮಿಕ ತಪಾಸಣೆಯ ನಂತರ ಅದು ಸಾಮಾನ್ಯವಾಗಿದೆ ಎಂದು ತಿಳಿದು ಬಂದಿದೆ.
ಮುಂದಿನ ದಿನಗಳಲ್ಲಿ, ಉಪಗ್ರಹವನ್ನು ಅದರ ಆನ್‌ಬೋರ್ಡ್ ಸಂಚಾಲನಾ ವ್ಯವಸ್ಥೆಯನ್ನು ಬಳಸಿಕೊಂಡು ಜಿಯೋಸ್ಟೇಷನರಿ ಕಕ್ಷೆಯಲ್ಲಿ (ಸಮಭಾಜಕದಿಂದ 36,000 ಕಿ.ಮೀ) ಇರಿಸಲು ಕಕ್ಷೆಯನ್ನು ಏರಿಸುವ ಕಾರ್ಯಾಚರಣೆ ನಡೆಸಲಾಗುತ್ತದೆ.
ಜಿಸ್ಯಾಟ್ -30 ರ ಕಕ್ಷೆಯನ್ನು ಏರಿಸುವ ಕಾರ್ಯಾಚರಣೆಯ ಅಂತಿಮ ಹಂತಗಳಲ್ಲಿ, ಉಪಗ್ರಹದ ಎರಡು ಸೌರ ರಚನೆಗಳು ಮತ್ತು ಆಂಟೆನಾ ಪ್ರತಿಫಲಕಗಳನ್ನು ನಿಯೋಜಿಸಲಾಗುವುದು. ಇದನ್ನು ಅನುಸರಿಸಿ, ಉಪಗ್ರಹವನ್ನು ಅದರ ಅಂತಿಮ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಕಕ್ಷೆಯ ಎಲ್ಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಉಪಗ್ರಹವು ಕಾರ್ಯನಿರ್ವಹಿಸಲಿದೆ.
ಮಾಧ್ಯಮ ಸಂಬಂಧಿ ಮಾಹಿತಿಗಾಗಿ : Phone: 080-2217 2294 | Email: isropr@isro.gov.in www.isro.gov.in |https://www.facebook.com/ISRO/ | https://twitter.com/isro
(Release ID: 1599687)
Visitor Counter : 110