ಆಯುಷ್

ಬಲಿಷ್ಟ ಆರೋಗ್ಯ ರಕ್ಷಣಾ ವ್ಯವಸ್ಥೆ ಒದಗಿಸಲು  ಆಯುರ್ವೇದ  ತಕ್ಷಣದ ಆವಶ್ಯಕತೆಯಾಗಿದೆ : ಶ್ರೀ ಶ್ರೀಪಾದ ಯಾಸ್ಸೋ ನಾಯಕ್

Posted On: 15 FEB 2019 6:03PM by PIB Bengaluru

ಬಲಿಷ್ಟ ಆರೋಗ್ಯ ರಕ್ಷಣಾ ವ್ಯವಸ್ಥೆ ಒದಗಿಸಲು  ಆಯುರ್ವೇದ  ತಕ್ಷಣದ ಆವಶ್ಯಕತೆಯಾಗಿದೆ : ಶ್ರೀ ಶ್ರೀಪಾದ ಯಾಸ್ಸೋ ನಾಯಕ್

                                                                             ಬೆಂಗಳೂರು, ಫೆಬ್ರವರಿ 15,2019

ಆಯುರ್ವೇದವನ್ನು ಆರೋಗ್ಯ ರಕ್ಷಣಾ ವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ಸಮಗ್ರಗೊಳಿಸುವ ನಿಟ್ಟಿನಲ್ಲಿ ಭಾರತ ಸರಕಾರವು ಕಾರ್ಯನಿರತವಾಗಿದೆ. ಬಲಿಷ್ಟ ಆರೋಗ್ಯ ರಕ್ಷಣಾ ಬೆಂಬಲ ನೀಡಲು ವಿಶೇಷ ತಜ್ಞತೆಯ ಆಯುರ್ವೇದ ಕ್ಲಿನಿಕ್ ಗಳು ಮತ್ತು ಆಸ್ಪತ್ರೆಗಳು ಈ ಸಮಯದ ಆವಶ್ಯಕತೆಗಳಾಗಿವೆ. ಬೆಂಗಳೂರು ಹಲವಾರು ಸರಕಾರಿ ಮತ್ತು ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹೊಂದಿದ್ದು, ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿದೆ . ಜೀವದ್ರವ್ಯಕ್ಕೆ  ಸಂಬಂಧಿಸಿದ ತೊಂದರೆಗಳು, ವೃದ್ದಾಪ್ಯದ ಆರೈಕೆ, ಉತ್ತಮ ಆರೋಗ್ಯವನ್ನು ಆಯುರ್ವೇದದ ಮೂಲಕ ಸೂಕ್ತವಾಗಿ ನಿಭಾಯಿಸಬಹುದಾಗಿದೆ ಎಂದು ಆಯುಷ್ (ಸ್ವತಂತ್ರ ನಿರ್ವಹಣೆ ) ಸಹಾಯಕ ಸಚಿವರಾದ ಶ್ರೀ. ಶ್ರೀಪಾದ ಯಾಸ್ಸೋ ನಾಯಕ್ ಇಂದಿಲ್ಲಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಜೀವದ್ರವ್ಯ ಖಾಯಿಲೆಗಳ ಪ್ರಾದೇಶಿಕ ಆಯುರ್ವೇದ ಸಂಶೋಧನಾ ಸಂಸ್ಥೆಯ (ಆರ್.ಎ.ಆರ್. ಐ.ಎಂ.ಡಿ.)  ಹೊಸದಾಗಿ ನಿರ್ಮಿಸಲಾದ ಆಸ್ಪತ್ರೆ, ಆಡಳಿತ ಮತ್ತು ಸಂಶೋಧನಾ ಬ್ಲಾಕ್ ಗಳನ್ನು ಉದ್ಘಾಟಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವರು , ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ . ಜಾಗತಿಕವಾಗಿ ಪ್ರತೀ ಹನ್ನೊಂದು ಮಂದಿಯಲ್ಲಿ ಓರ್ವರು ಮಧುಮೇಹ ಪೀಡಿತರಾಗಿರುವುದು ಖಂಡಿತವಾಗಿಯೂ ಗಂಭೀರ ಪರಿಸ್ಥಿತಿಯನ್ನು ಸೂಚಿಸುತ್ತದೆ. ಈ ಸಮಸ್ಯೆಗಳು ಯುವಕರಲ್ಲಿ ಇಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರು ಹಿರಿಯರಾಗುತ್ತಿದ್ದಂತೆ ಪರಿಸ್ಥಿತಿ ಹದಗೆಡಲಿದೆ. ಮುಂದಿನ 2 ದಶಕಗಳಲ್ಲಿ , ಭಾರತದಲ್ಲಿ ಹಿರಿಯರ ಸಂಖ್ಯೆ ಹೆಚ್ಚಲಿದೆ ಮತ್ತು ಇದಕ್ಕಾಗಿ ಆರೋಗ್ಯ ಬೆಂಬಲ ವ್ಯವಸ್ಥೆ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಅವಶ್ಯಕವಾಗಿದೆ. ಭಾರತದಲ್ಲಿ ಜನ ಸಂಖ್ಯೆಯ ವೃದ್ದಿಯಿಂದಾಗಿ ವೃದ್ದರ ಆರೈಕೆ ದೊಡ್ಡ ಸವಾಲಾಗಲಿದೆ. ಈ ಹಿನ್ನೆಲೆಯಲ್ಲಿ ಈ ಸಾಂಪ್ರದಾಯಿಕ ವೈದ್ಯ ವಿಜ್ಞಾನಗಳ ಸಾಮರ್ಥ್ಯವನ್ನು ಅನ್ವೇಷಿಸಿ ಬಳಸಿಕೊಳ್ಳುವುದು ಸದ್ಯದ ಆವಶ್ಯಕತೆಯಾಗಿದೆ ಎಂದು ಸಚಿವರು ನುಡಿದರು.

21ನೇ ಶತಮಾನದಲ್ಲಿ ನಾಗರಿಕರಿಗೆ ಆರೋಗ್ಯ ರಕ್ಷಣೆ ಒದಗಿಸುವುದು ಎಲ್ಲಾ ರಾಷ್ಟ್ರಗಳಿಗೂ  ಕಠಿಣ ಪರಿಶ್ರಮದ ಕೆಲಸವಾಗಿದೆ. ಹಳೆಯ ಮತ್ತು ಈಗಾಗಲೇ ಇರುವ ಖಾಯಿಲೆಗಳನ್ನು ನಿಭಾಯಿಸುವುದಲ್ಲದೆ , ನಾವೀಗ ಬದಲಾದ ಜೀವನ ವಿಧಾನದ ಮತ್ತು ಪರಿಸರ ಸಂಬಂಧಿ ಕಾರಣದಿಂದಾಗಿ  ಅತ್ಯಂತ ಜಟಿಲ ರೀತಿಯ ಖಾಯಿಲೆಗಳನ್ನೂ ಎದುರಿಸಬೇಕಾಗಿದೆ. ಜೀವಿತಾವಧಿ ಹೆಚ್ಚಳದ ಸಾಧನೆ , ದಢಾರ-ಕೋಟಲೆ , ಪ್ಲೇಗ್ ಮತ್ತು ಇತರ ಖಾಯಿಲೆಗಳ ನಿರ್ನಾಮ ಮಾಡಿದ್ದರೂ ಭಾರತದಲ್ಲಿ ಆರೋಗ್ಯ ವಲಯ ವಸ್ತುಶಃ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ.ಆಯುರ್ವೇದ ಈ ಪ್ರಶ್ನೆಗಳಿಗೆ ಸೂಕ್ತ,  ಕ್ರಿಯಾಶೀಲ  ಉತ್ತರಗಳನ್ನು ಒದಗಿಸಬಲ್ಲುದು ಎಂದೂ ಸಚಿವರು ಅಭಿಪ್ರಾಯಪಟ್ಟರು.

ಆರ್.ಎ.ಆರ್.ಐ.ಎಂ.ಡಿ. ಯ ಸಾಧನೆಗಳನ್ನು ಪಟ್ಟಿ ಮಾಡಿದ ಸಚಿವರು ಈ ಸಂಸ್ಥೆ ಆಯುಷ್ ವಲಯದ ಪ್ರಮುಖ ಸಂಶೋಧನಾ ಸೌಲಭ್ಯಗಳುಳ್ಳ ಸಂಸ್ಥೆಯಾಗಿದೆ ಎಂದರು. ಜೀವದ್ರವ್ಯ ಸಂಬಂಧಿ ಖಾಯಿಲೆಗಳ ನಿರ್ವಹಣೆಗೆ ಸಂಬಂಧಿಸಿದ ಸಂಶೋಧನೆಗೆ ಈ ಸಂಸ್ಥೆ ಆದ್ಯತೆ ನೀಡಿದೆ. ನಮ್ಮ ದೇಶ ಸಾಕಷ್ಟು ವೈದ್ಯಕೀಯ ಪರಂಪರೆಯನ್ನು ಹೊಂದಿದೆ, ಮತ್ತು ಈಗ ವಿವಿಧ ದೇಶಗಳಲ್ಲಿ ದೇಶೀಯ ವೈದ್ಯ ಪದ್ದತಿಗೆ ಸಂಬಂಧಿಸಿ ವಿಶೇಷ ಸ್ಥಾನಮಾನವನ್ನು ಹೊಂದಿದೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದಲ್ಲಿ ಆಯುರ್ವೇದ ವಿಜ್ಞಾನಗಳ ಕೇಂದ್ರೀಯ ಸಂಶೋಧನಾ ಪರಿಷತ್ತಿನ (ಸಿ.ಸಿ.ಆರ್.ಎ .ಎಸ್.) ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಆರ್.ಎ.ಆರ್.ಐ.ಎಂ.ಡಿ. ಯ ನೂತನವಾಗಿ ನಿರ್ಮಿಸಲಾದ ಆಸ್ಪತ್ರೆ, ಆಡಳಿತ ಮತ್ತು ಸಂಶೋಧನಾ ಬ್ಲಾಕ್ ಗಳನ್ನು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಟಾನ ಮತ್ತು ರಾಸಾಯನಿಕ ಹಾಗು ರಸಗೊಬ್ಬರಗಳ ಖಾತೆ ಸಚಿವರಾದ ಡಿ.ವಿ. ಸದಾನಂದ ಗೌಡ ಮತ್ತು ಆಯುಷ್ ಸಹಾಯಕ ಸಚಿವರು ಜಂಟಿಯಾಗಿ ಉದ್ಘಾಟಿಸಿದರು. ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವ ಶ್ರೀ ಇ. ತುಕಾರಾಂ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

 


(Release ID: 1565214) Visitor Counter : 113


Read this release in: English