ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಬೆಂಗಳೂರಿನಲ್ಲಿ ಭಾರತೀಯ ಫಾರ್ಮ ಮತ್ತು ಭಾರತೀಯ ವೈದ್ಯಕೀಯ ಉಪಕರಣಗಳ ಸಮ್ಮೇಳನ – 2019 ಉದ್ಘಾಟನೆ 

प्रविष्टि तिथि: 18 FEB 2019 6:07PM by PIB Bengaluru

ಬೆಂಗಳೂರಿನಲ್ಲಿ ಭಾರತೀಯ ಫಾರ್ಮ ಮತ್ತು ಭಾರತೀಯ ವೈದ್ಯಕೀಯ ಉಪಕರಣಗಳ ಸಮ್ಮೇಳನ – 2019 ಉದ್ಘಾಟನೆ 

ಬೆಂಗಳೂರು, ಫೆಬ್ರವರಿ 18, 2019 

ಭಾರತ ಜನರಿಕ್ ಔಷಧಗಳ ಪೂರೈಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಬೃಹತ್ ರಾಷ್ಟ್ರವಾಗಿದ್ದು, ಇದು ಹಲವು ಲಸಿಕೆಗಳಲ್ಲಿ ಶೇಕಡ 50ರಷ್ಟು ಜಾಗತಿಕ ಬೇಡಿಕೆಯನ್ನು ಪೂರೈಸುತ್ತದೆ. ಅಮೆರಿಕದ ಜನರಿಕ್ ಔಷಧಗಳ ಬೇಡಿಕೆಯ ಶೇಕಡ 40ರಷ್ಟು, ಬ್ರಿಟನ್ನಿನ ಎಲ್ಲ ಔಷಧಗಳ ಶೇಕಡ 25ರಷ್ಟನ್ನು ಭಾರತ ಪೂರೈಸುತ್ತದೆ. ಭಾರತ, ಅಮೆರಿಕ ಮತ್ತು ಚೀನಾ ಈ ಮೂರು ರಾಷ್ಟ್ರಗಳು ಅತ್ಯಂತ ವೇಗದ ಪ್ರಗತಿ ಸಾಧಿಸುವ ಸಾಮರ್ಥ್ಯ ಹೊಂದಿವೆ. ಸ್ಪರ್ಧೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದರೆ, ಮೊದಲ ಎರಡು ಅಗ್ರ ಸ್ಥಾನದಲ್ಲಿ ಅಮೆರಿಕ ಮತ್ತು ಜರ್ಮನಿ ಇವೆ. ಖ್ಯಾತಿ ಅಥವಾ ಕೀರ್ತಿ ಶ್ರೇಯಾಂಕದಲ್ಲಿ ಭಾರತ 6ನೇ ಸ್ಥಾನದಲ್ಲಿದ್ದರೆ ಚೀನಾ 10ನೇ ಸ್ಥಾನದಲ್ಲಿದೆ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಹೇಳಿದರು. ಬೆಂಗಳೂರಿನಲ್ಲಿ ಅವರು ಎರಡು ದಿನಗಳ ಭಾರತೀಯ ಫಾರ್ಮ ಮತ್ತು ಭಾರತೀಯ ವೈದ್ಯಕೀಯ ಉಪಕರಣಗಳ ಸಮ್ಮೇಳನ – 2019 ಉದ್ಘಾಟಿಸಿ ಮಾತನಾಡಿದ ಸಚಿವರು, ಭಾರತ ಹಲವು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಕೈಗೆಟಕುವ ದರದಲ್ಲಿ ಜನರಿಕ್ ಔಷಧಗಳ ರಫ್ತಿನಲ್ಲಿ ಮುಂಚೂಣಿಯಲ್ಲಿದೆ ಮತ್ತು ನಾವು ನಮ್ಮ ಹೊಣೆಗಾರಿಕೆಗಳ ನಿರ್ವಹಣೆಯನ್ನು ಮುಂದುವರಿಸುತ್ತೇವೆ ಎಂದರು. 

ಉತ್ತಮ ವಿಜ್ಞಾನ, ತಂತ್ರಜ್ಞಾನ, ವ್ಯವಹಾರಿಕ ಪ್ರಜ್ಞೆ ಮತ್ತು ನೈತಿಕತೆ ಆಧಾರದ ಮೇಲೆ ನಾವು ಯೋಜನೆಗಳನ್ನು ರೂಪಿಸುವುದನ್ನು ಮುಂದುವರಿಸುವ ಆಶಯವನ್ನು ಹೊಂದಿದ್ದೇವೆ. ಭಾರತದಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ಸೃಷ್ಟಿಸುವ ಕೆಲಸವನ್ನು ನಾವು ಮುಂದುವರಿಸಿದ್ದೇವೆ. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಈಗಾಗಲೇ ಪ್ರಕಟಿಸಲಾಗಿದೆ ಮತ್ತು ಇನ್ನು ಹಲವು ನಿರ್ಧಾರಗಳನ್ನು ಪ್ರಕಟಿಸಲಾಗುವುದು ಎಂದು ಸಚಿವರು ಹೇಳಿದರು. 2017ರಲ್ಲಿ ಫಾರ್ಮ ಉದ್ಯಮ ತೀವ್ರ ಸಂಕಷ್ಟದಲ್ಲಿತ್ತು ಅದಕ್ಕೆ ಕಡಿಮೆ ಜನರಿಕ್ ಔಷಧ ಉತ್ಪಾದನಾ ಅವಕಾಶಗಳು, ಹೆಚ್ಚುತ್ತಿರುವ ಸ್ಪರ್ಧೆ, ಪೂರೈಕೆದಾರರ ಒಗ್ಗೂಡುವಿಕೆ, ನಿಯಂತ್ರಣ ಕ್ರಮಗಳ ಹೆಚ್ಚಳವನ್ನು ಭಾರತೀಯ ಔಷಧ ಉತ್ಪಾದನಾ ಸಂಸ್ಥೆಗಳು ಎದುರಿಸುತ್ತಿದ್ದವು. ಆದರೆ ಹಲವು ಸರಿಯಾದ ಕ್ರಮಗಳು ಮತ್ತು ರಫ್ತು ಸುಧಾರಣೆಯಿಂದಾಗಿ ಪ್ರಗತಿ ಹಿಂದಿನ ಹಳಿಗೆ ಮರಳಿದಂತೆ ಕಾಣುತ್ತಿದೆ. ಒಟ್ಟಾರೆ ಭಾರತೀಯ ಔಷಧ ಉತ್ಪಾದನಾ ಮೌಲ್ಯ 2018ನೇ ಹಣಕಾಸು ವರ್ಷದಲ್ಲಿ 34 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಮೌಲ್ಯಮಾಪನ ಮಾಡಲಾಗಿದ್ದು, ಅದರಲ್ಲಿ ಸ್ವದೇಶಿ ಹಾಗೂ ರಫ್ತು ಮಾರುಕಟ್ಟೆಗಳ ಪಾಲು ಬಹುತೇಕ 50:50 ಆಗಿದೆ. ಮುಂದಿನ ದಿನಗಳಲ್ಲಿ ಈ ಉದ್ಯಮ ಸಿಎಜಿಆರ್ ನಂತೆ ಶೇಕಡ 15ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದರು. 

ವೈದ್ಯಕೀಯ ಉಪಕರಣಗಳ ಉದ್ಯಮ ಕುರಿತಂತೆ ಮಾತನಾಡಿದ ಸಚಿವರು, ಪ್ರಸ್ತುತ ಭಾರತದ ವೈದ್ಯಕೀಯ ಉಪಕರಣಗಳ ಉದ್ಯಮದ ಮೌಲ್ಯ 5.2 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದ್ದು, ಇದು  96.7 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಒಟ್ಟಾರೆ ಆರೋಗ್ಯ ರಕ್ಷಣಾ ಉದ್ಯಮಕ್ಕೆ ಶೇಕಡ 4 ರಿಂದ 5ರಷ್ಟು ಕೊಡುಗೆ ನೀಡಲಿದೆ. ಪ್ರಸ್ತುತ ದೇಶದಲ್ಲಿ 750ರಿಂದ 800 ವೈದ್ಯಕೀಯ ಉಪಕರಣಗಳ ಉತ್ಪಾದನಾ ಸಂಸ್ಥೆಗಳಿವೆ. ಇವುಗಳ ಸರಾಸರಿ ಹೂಡಿಕೆ 170 ರಿಂದ 200 ಮಿಲಿಯನ್ ಆಗಿದೆ ಮತ್ತು ಒಟ್ಟಾರೆ ಸರಾಸರಿ 450 ರಿಂದ 500 ಮಿಲಿಯನ್ ವಹಿವಾಟು ನಡೆಸುತ್ತಿವೆ ಎಂದು ಸಚಿವರು ಹೇಳಿದರು. 

ಭಾರತದ ಔಷಧ ಉದ್ಯಮ ಸ್ಥಿರವಾಗಿ ಬೆಳವಣಿಗೆ ಹೊಂದುತ್ತಿದ್ದು, 2009ರಲ್ಲಿ 2.02 ಬಿಲಿಯನ್ ಡಾಲರ್ ಇದ್ದ ಪ್ರಗತಿ 2015ರ ವೇಳೆಗೆ ಶೇಕಡ 15.8ರ ಸಿಎಜಿಆರ್ ಬೆಳವಣಿಗೆಯೊಂದಿಗೆ 3.9 ಮಿಲಿಯನ್ ಗೆ ಏರಿದೆ. ಉದ್ಯಮದ ಅಂದಾಜಿನಂತೆ ಭಾರತದ ವೈದ್ಯಕೀಯ ಉಪಕರಣಗಳ ಮಾರುಕಟ್ಟೆ 2025ರ ವೇಳೆಗೆ 50 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಪ್ರಗತಿಯಾಗಲಿದೆ. ಪ್ರಸ್ತುತ ಭಾರತ ಜಗತ್ತಿನ 20 ಅಗ್ರ ವೈದ್ಯಕೀಯ ಉಪಕರಣಗಳ ಮಾರುಕಟ್ಟೆಯಲ್ಲಿ ಒಂದಾಗಿದ್ದು, ಜಪಾನ್, ಚೀನಾ ಮತ್ತು ಕೊರಿಯಾ ನಂತರ ಏಷ್ಯಾದಲ್ಲಿ ಭಾರತ ನಾಲ್ಕನೇ ಅತಿದೊಡ್ಡ ವೈದ್ಯಕೀಯ ಉಪಕರಣಗಳ ಮಾರುಕಟ್ಟೆಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಬಂದರು ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಕ್ ಎಲ್. ಮಾಂಡವೀಯ ಮತ್ತು ಫಾರ್ಮಸಿಟಿಕಲ್ಸ್ ಇಲಾಖೆಯ ಕಾರ್ಯದರ್ಶಿ ಶ್ರೀ ಜೆ.ಪಿ. ಪ್ರಕಾಶ್ ಮತ್ತು ಇತರ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.

****************  
 


(रिलीज़ आईडी: 1565134) आगंतुक पटल : 115
इस विज्ञप्ति को इन भाषाओं में पढ़ें: English