ಜಲ ಸಂಪನ್ಮೂಲ ಸಚಿವಾಲಯ

ಪಂಜಾಬ್ ನಲ್ಲಿ ರಾವಿ ನದಿಗೆ ಅಡ್ಡಲಾಗಿ  ಶಹ್ ಪುರ್ ಕಂಡಿ ಜಲಾಶಯ (ರಾಷ್ಟ್ರೀಯ ಯೋಜನೆ) ಅನುಷ್ಠಾನಕ್ಕೆ ಸಂಪುಟದ ಒಪ್ಪಿಗೆ 

Posted On: 06 DEC 2018 9:18PM by PIB Bengaluru

ಪಂಜಾಬ್ ನಲ್ಲಿ ರಾವಿ ನದಿಗೆ ಅಡ್ಡಲಾಗಿ  ಶಹ್ ಪುರ್ ಕಂಡಿ ಜಲಾಶಯ (ರಾಷ್ಟ್ರೀಯ ಯೋಜನೆ) ಅನುಷ್ಠಾನಕ್ಕೆ ಸಂಪುಟದ ಒಪ್ಪಿಗೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಇಂದು ಪಂಜಾಬ್ ನಲ್ಲಿ ರಾವಿ ನದಿಗೆ ಅಡ್ಡಲಾಗಿ ಶಹ್ ಪುರ್ ಕಂಡಿ ಜಲಾಶಯ ಯೋಜನೆಯನ್ನು ಅನುಷ್ಠಾನಗೊಳಿಸಲು ತನ್ನ ಅನುಮೋದನೆ ನೀಡಿದೆ. ಇದಕ್ಕಾಗಿ ಕೇಂದ್ರದ ನೆರವಾಗಿ 485.38 ಕೋಟಿ ರೂಪಾಯಿಗಳನ್ನು (ನೀರಾವರಿ ಭಾಗವಾಗಿ) 2018-19 ರಿಂದ 2022-23ರ ಐದು ವರ್ಷಗಳ ಅವಧಿಯಲ್ಲಿ ಒದಗಿಸಲಾಗುವುದು.

 

ಈ ಯೋಜನೆಯ ಜಾರಿಯಿಂದ ಪ್ರಸ್ತುತ ಮಾಧೋಪುರ್ ಪ್ರಧಾನ ಕಾಮಗಾರಿಯ ಮೂಲಕ ಪಾಕಿಸ್ತಾನದ ಕೆಳದಂಡೆಗೆ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಲು ನೆರವಾಗಲಿದೆ.

 

 

ವಿವರ:

 

·        ಈ ಯೋಜನೆ ಪೂರ್ಣಗೊಂಡರೆ ಪಂಜಾಬ್ ರಾಜ್ಯದಲ್ಲಿ 5 ಸಾವಿರ ಹೆಕ್ಟೇರ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 32,173 ಹೆಕ್ಟೇರ್ ನೀರಾವರಿ ಸಾಮರ್ಥ್ಯ ಸೃಷ್ಟಿಯಾಗಲಿದೆ.

 

·        ಶಹ್ ಪುರ್ ಕಂಡಿ ಜಲಾಶಯ ಯೋಜನೆಗೆ  ಕೇಂದ್ರದ ಆರ್ಥಿಕ ನೆರವನ್ನು ನಬಾರ್ಡ್ ಮೂಲಕ ಹಾಲಿ ಇರುವ ವ್ಯವಸ್ಥೆಯಾದ ಎಲ್.ಟಿ.ಐ.ಎಫ್. ಅಡಿಯಲ್ಲಿ 99 ಪಿ.ಎಂ.ಕೆ.ಎಸ್.ವೈ-ಎಐಬಿಪಿ ಯೋಜನೆಯನ್ವಯ ಒದಗಿಸಲಾಗುವುದು.

 

·        ಯೋಜನೆಯ ಜಾರಿ ನಿಗಾ/ಮೇಲುಸ್ತುವಾರಿಗಾಗಿ ಹಾಲಿ ಇರುವ ಕೇಂದ್ರೀಯ ಜಲ ಆಯೋಗದ ನಿಗಾ ವ್ಯವಸ್ಥೆಯ ಜೊತೆಗೆ ಕೇಂದ್ರೀಯ ಜಲ ಯೋಗದ ಸದಸ್ಯರ ನೇತೃತ್ವದಲ್ಲಿ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಎಂಜಿನಿಯರುಗಳು ಹಾಗೂ ಇತರ ಸಂಬಂಧಿತ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು.

 

·         ನೀರಾವರಿ, ಪ್ರವಾಹ ನಿಯಂತ್ರಣ ಮತ್ತು ಬಹು ಉದ್ದೇಶದ ಯೋಜನೆ ಕುರಿತ ಎಂ.ಓ.ಡಬ್ಲ್ಯು.ಆರ್, ಆರ್.ಡಿ.ಮತ್ತು ಜಿ.ಆರ್.  ಸಲಹಾ ಸಮಿತಿಯು 31.10.2018 ರಂದು ನಡೆದ 138 ನೇ ಸಭೆಯಲ್ಲಿ 2715.70 ಕೋಟಿ ರೂಪಾಯಿ (ಫೆಬ್ರವರಿ, 2018 ದರ ಮಟ್ಟ). ಗಳ ಎರಡನೇ ಪರಿಷ್ಕೃತ ವೆಚ್ಚದ ಅಂದಾಜನ್ನು ಅಂಗೀಕರಿಸಿದೆ.

 

·        ಈ ಯೋಜನೆಯನ್ನು ಪಂಜಾಬ್ ಸರ್ಕಾರ 485.38 ಕೋಟಿ ರೂಪಾಯಿಗಳ ಕೇಂದ್ರದ ನೆರವಿನಿಂದ ಅನುಷ್ಠಾನಗೊಳಿಸಲಿದೆ. 2022ರ ಜೂನ್ ಹೊತ್ತಿಗೆ ಯೋಜನೆ ಪೂರ್ಣಗೊಳ್ಳಲಿದೆ.

 

 

ಪರಿಣಾಮಗಳು:

 

·        ರಾವಿ ನದಿಯ ಸ್ವಲ್ಪ ನೀರು ಪ್ರಸ್ತುತ ಮಾದೋಪುರ್ ಪ್ರಧಾನ ಕಾಮಗಾರಿಯ ಮೂಲಕ ಕೆಳದಂಡೆಯ ಪಾಕಿಸ್ತಾನಕ್ಕೆ ವ್ಯರ್ಥವಾಗಿ ಹರಿಯುತ್ತಿದೆ, ಇದನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಗೆ ಬಳಕೆ ಮಾಡುವ ಅಗತ್ಯವೂ ಇದೆ. ಈ ಯೋಜನೆಯ ಅನುಷ್ಠಾನವು ನೀರು ವ್ಯರ್ಥವಾಗುವುದನ್ನು ಕಡಿಮೆ ಮಾಡುತ್ತದೆ.

 

·        ಯೋಜನೆ ಪೂರ್ಣಗೊಂಡ ತರುವಾಯ ಜಮ್ಮು ಮತ್ತು ಕಾಶ್ಮೀರದಲ್ಲಿ  32173 ಹೆಕ್ಟೇರ್ ಮತ್ತು ಪಂಜಾಬ್ ನಲ್ಲಿ 5 ಸಾವಿರ ಹೆಕ್ಟೇರ್ ಹೆಚ್ಚುವರಿ ನೀರಾವರಿ ಸಾಮರ್ಥ್ಯ ಸೃಷ್ಟಿಯಾಗಲಿದೆ.

 

·        ಇದರ ಜೊತೆಗೆ, ಪಂಜಾಬ್ ನಲ್ಲಿ ಯುಬಿಡಿಸಿ ವ್ಯವಸ್ಥೆಯಡಿ  1.18 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು ಬಿಡುಗಡೆ ಮಾಡಲಾಗುವ ನೀರನ್ನು  ಈ ಯೋಜನೆಯ ಮೂಲಕ ಪರಿಣಾಮಕಾರಿಯಾಗಿ ನಿರ್ವಹಿಸಿ/ನಿಯಂತ್ರಿಸಬಹುದು ಮತ್ತು ಇದರಿಂದ ಈ ಪ್ರದೇಶ ನೀರಾವರಿಯ ಪ್ರಯೋಜನ ಪಡೆಯಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಪಂಜಾಬ್ 206 ಮೆ.ವ್ಯಾ. ಜಲ ವಿದ್ಯುತ್ ಉತ್ಪಾದಿಸಬಹುದಾಗಿದೆ. 

 

 

ವೆಚ್ಚ:

 

ಶಹ್ ಪುರ್ ಕಂಡಿ ಜಲಾಶಯ ಯೋಜನೆ ಕಾಮಗಾರಿಯ ಉಳಿಕೆ ವೆಚ್ಚ 1973.53 ಕೋಟಿ ರೂಪಾಯಿಗಳಾಗಿವೆ. (ನೀರಾವರಿ ಘಟಕಕ್ಕೆ : 564.63 ಕೋಟಿ ರೂಪಾಯಿ ವಿದ್ಯುತ್ ಘಟಕಕ್ಕೆ: 1408.90 ಕೋಟಿ ರೂಪಾಯಿ) ಈ ಪೈಕಿ 485.38 ಕೋಟಿ ರೂಪಾಯಿಗಳನ್ನು ಕೇಂದ್ರದ ನೆರವಾಗಿದೆ.

 

ಫಲಾನುಭವಿಗಳು:

 

ಪಂಜಾಬ್ ನಲ್ಲಿ 5 ಸಾವಿರ ಹೆಕ್ಟ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 32172 ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸಲಾಗುವುದು. ಯೋಜನೆಯ ಅನುಷ್ಠಾನದಿಂದ ಕೌಶಲ ರಹಿತ ಕಾರ್ಮಿಕರಿಗೆ 6.2 ಲಕ್ಷ ಮಾನವ ದಿನಗಳ ಉದ್ಯೋಗ, ಅರೆ ಕೌಶಲ ಕಾರ್ಮಿಕರಿಗೆ 6.2ಲಕ್ಷ  ಮಾನವ ದಿನಗಳ ಉದ್ಯೋಗ ಮತ್ತು ಕುಶಲ ಕಾರ್ಮಿಕರಿಗೆ 1.67 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಲಿದೆ.

 

 

ಹಿನ್ನೆಲೆ:

 

ಸಿಂಧು ನದಿ ನೀರಿನ ಹಂಚಿಕೆಗಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಿಂಧು ನದಿ ನೀರು ಒಪ್ಪಂದಕ್ಕೆ 1960ರಲ್ಲಿ ಅಂಕಿತ ಹಾಕಲಾಗಿತ್ತು. ಈ ಒಪ್ಪಂದದ ಪ್ರಕಾರ ಭಾರತಕ್ಕೆ ಪೂರ್ವ ವಾಹಿನಿಗಳಾದ ರಾವಿ, ಬೀಯಾಸ್ ಮತ್ತು ಸಟ್ಲೇಜ್ ನದಿಗಳ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವ ಹಕ್ಕಿದೆ. ಪ್ರಸ್ತುತ ರಾವಿ ನದಿಯ ಸ್ವಲ್ಪ ನೀರು ಮಾಧೋಪುರ್ ಪ್ರಧಾನ ಕಾಮಗಾರಿಯ ಮೂಲಕ ವ್ಯರ್ತವಾಗಿ ಪಾಕಿಸ್ತಾನದ ಕೆಳದಂಡೆಗೆ ಹರಿದು ಹೋಗುತ್ತಿದೆ. ಈ ಯೋಜನೆಯ ಸಾಕಾರವು ವ್ಯರ್ಥ ನೀರಿನ ಪ್ರಮಾಣ ಕಡಿಮೆ ಮಾಡಲಿದೆ.

 

ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ನಡುವೆ 1979ರಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಈ ಒಪ್ಪಂದದ ಪ್ರಕಾರ, ರಣಜಿತ್ ಸಾಗರ ಜಲಾಶಯ (ಥೈನ್ ಜಲಾಶಯ) ಮತ್ತು ಶಹ್ ಪುರ್ ಕಂಡಿ ಜಲಾಶಯ ನಿರ್ಮಾಣವನ್ನು ಪಂಜಾಬ್ ಸರ್ಕಾರ ಕೈಗೆತ್ತಿಕೊಳ್ಳಬೇಕು. ರಣಜಿತ್ ಸಾಗರ ಜಲಾಶಯ 2000 ಆಗಸ್ಟ್ ನಲ್ಲಿ ಕಾರ್ಯಗತವಾಗಿತ್ತು. ಶಹ್ ಪುರ್ ಕಂಡಿ ಜಲಾಶಯ ಯೋಜನೆಯನ್ನು ರಣಜಿತ್ ಸಾಗರ ಜಲಾಶಯದ 11 ಡಿ/ಎಸ್ ಮತ್ತು ಮಾಧೋಪುರ್ ಪ್ರಧಾನ ಕಾಮಗಾರಿಯ 8 ಕಿ.ಮೀ ಯು/ಎಸ್ ನಲ್ಲಿ ರಾವಿ ನದಿಗೆ ಅಡ್ಡಲಾಗಿ ಯೋಜಿಸಲಾಗಿತ್ತು.

 

ಈ ಯೋಜನೆಗೆ ಆರಂಭದಲ್ಲಿ ಯೋಜನಾ ಆಯೋಗ 2001ರ ನವೆಂಬರ್ ನಲ್ಲಿ ಅನುಮೋದನೆ ನೀಡಿತ್ತು. ಇದನ್ನು ಈ ಸಚಿವಾಲಯದ ತ್ವರಿತ ನೀರಾವರಿ ಪ್ರಯೋಜನ ಯೋಜನೆ (ಎ.ಐ.ಬಿ.ಪಿ.) ಅಡಿಯಲ್ಲಿ ತನ್ನ ನೀರಾವರಿ ವಿಭಾಗದಲ್ಲಿ ಸೇರಿಸಲಾಗಿತ್ತು.

 

ಶಹ್ ಪುರ್ ಕಂಡಿ ಜಲಾಶಯದ ರಾಷ್ಟ್ರೀಯ ಯೋಜನೆಯ ಪರಿಷ್ಕೃತ ವೆಚ್ಚವಾದ 2285.81 ಕೋಟಿ ರೂಪಾಯಿ ಮತ್ತು 2009-10 ರಿಂದ 2010-11ರ ಅವಧಿಯಲ್ಲಿ ಬಿಡುಗಡೆ ಮಾಡುವ ಕೇಂದ್ರದ ನೆರವು 26.04 ಕೋಟಿ ರೂಪಾಯಿಗಳಿಗೆ 24ನೇ ಆಗಸ್ಟ್ 2009ರಲ್ಲಿ ನಡೆದ ಎಂ.ಓ.ಡಬ್ಲ್ಯು ಆರ್, ಆರ್.ಡಿ. ಮತ್ತು ಜಿ.ಆರ್. ಸಲಹಾ ಸಮಿತಿ ಅನುಮೋದನೆ ನೀಡಿತ್ತು. ಆದಾಗ್ಯೂ, ಪಂಜಾಬ್ ಸರ್ಕಾರದ ಕಡೆಯಿಂದ ವಿದ್ಯುತ್ ವಿಭಾಗಕ್ಕಾಗಿ ನಿಧಿಯ ಅಲಭ್ಯತೆ ಮತ್ತು ಜಮ್ಮು ಮತ್ತು ಕಾಶ್ಮೀರದೊಂದಿಗಿನ ಅಂತರ ರಾಜ್ಯ ವಿವಾದಗಳ ಕಾರಣ ಯೋಜನೆಯ ಕಾಮಗಾರಿ ಹೆಚ್ಚಿನ ಪ್ರಗತಿ ಕಾಣಲಿಲ್ಲ.

 

ಭಾರತ ಸರ್ಕಾರದ ಮಟ್ಟದಲ್ಲಿ ಮತ್ತು ದ್ವಿಪಕ್ಷೀಯ ಮಟ್ಟದಲ್ಲಿ ಸರಣಿ ಸಭೆಗಳು ನಡೆದು, ಅಂತಿಮವಾಗಿ, 2018ರ ಸೆಪ್ಟೆಂಬರ್ 8ರಂದು ಎಂ.ಓ.ಡಬ್ಲ್ಯುಆರ್, ಆರ್.ಡಿ ಮತ್ತು ಜಿ.ಆರ್. ನವದೆಹಲಿಯ ಆಶ್ರಯದಲ್ಲಿ  ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ನಡುವೆ ಒಂದು ಒಪ್ಪಂದಕ್ಕೆ ಬರಲಾಯಿತು.

 

 



(Release ID: 1555145) Visitor Counter : 94


Read this release in: English , Tamil