ಉಪರಾಷ್ಟ್ರಪತಿಗಳ ಕಾರ್ಯಾಲಯ

ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು 2018 ರ ನವೆಂಬರ್ 23 ರಂದು ಬೆಂಗಳೂರಿನಲ್ಲಿ ನಡೆದ ವಿಶ್ವ ಯುವ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾಡಿದ ಸಮಾರೋಪ ಭಾಷಣ.

Posted On: 23 NOV 2018 2:18PM by PIB Bengaluru

ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು 2018 ರ ನವೆಂಬರ್ 23 ರಂದು ಬೆಂಗಳೂರಿನಲ್ಲಿ ನಡೆದ  ವಿಶ್ವ ಯುವ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾಡಿದ ಸಮಾರೋಪ ಭಾಷಣ.
 
ವಿಶ್ವ ಯುವ ಸಮಾವೇಶದಲ್ಲಿ ನಿಮ್ಮೆಲ್ಲರೊಂದಿಗೆ  ಭಾಗವಹಿಸಲು ಮತ್ತು ಭಾರತ ಹಾಗೂ ಇತರ  ದೇಶಗಳಿಂದ ಬಂದಿರುವ ಯುವಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ನನಗೆ ಅತೀವ ಸಂತೋಷವಾಗಿದೆ.

ಏಳು ಮಂದಿಗೆ ಅವರ ಮಾನವ ನೈಪುಣ್ಯತೆ ಕ್ಷೇತ್ರದ ಅತ್ಯುತ್ಕೃಷ್ಟ ಸಾಧನೆಗಾಗಿ  ಶ್ರೀ ಸತ್ಯ ಸಾಯಿ ಪ್ರಶಸ್ತಿ ನೀಡುತ್ತಿರುವುದಕ್ಕೆ ನಾನು ಹರ್ಷಿಸುತ್ತೇನೆ.

 ಇಂದು ಪವಿತ್ರ ದಿನ-ಕಾರ್ತಿಕ ಪೂರ್ಣಿಮೆ, ಕತ್ತಲನ್ನು ನಿವಾರಿಸುವ ದೀಪಗಳು ಬೆಳಗುವ ದಿನ. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಜ್ವಾಜ್ವಲ್ಯಮಾನವಾಗಿ ಬೆಳಗಿದ, ಮಾನವ ಕುಲಕ್ಕೆ ಭಕ್ತಿ ಮತ್ತು ಸೇವೆಯ ದಾರಿಯನ್ನು ತೋರಿದ  ಇಬ್ಬರು ಮಹನೀಯರ ಜನ್ಮದಿನವೂ ಆಗಿರುವುದು ಇನ್ನೊಂದು ಮಹತ್ವದ ಸಂಗತಿ. ನಾವು ವಿನೀತರಾಗಿ ಶ್ರೀ ಸತ್ಯ ಸಾಯಿ ಬಾಬಾ ಮತ್ತು ಗುರು ನಾನಕ್ ಅವರಿಗೆ ಈ ಪವಿತ್ರ ದಿನದಂದು ನಮ್ಮ ಗೌರವ ಪ್ರಣಾಮಗಳನ್ನು ಸಲ್ಲಿಸುತ್ತೇವೆ. ಅವರ ಜೀವನ ಮತ್ತು ಸಂದೇಶಗಳು ನಮ್ಮ ಈ ಕಾಲದಲ್ಲಿಯೂ ಅತ್ಯಂತ ಪ್ರಸ್ತುತವಾಗಿವೆ ಮತ್ತು ಅವು ಮುಂದಿನ ದಿನಗಳಲ್ಲಿಯೂ ಪ್ರಸ್ತುತವಾಗಿರುತ್ತವೆ.

ಭಾರತದಲ್ಲಿ , ನಾವು ಸದಾ ಪ್ರಾರ್ಥನೆ ಮಾಡುತ್ತಿರುತ್ತೇವೆ ಏನೆಂದರೆ, ಕತ್ತಲೆಯನ್ನು ದೂರ ಮಾಡಲು ಹಲವು ದೀಪಗಳನ್ನು ಹಚ್ಚುವ ಶಕ್ತಿ ಕೊಡು. ನಾವು ಹೇಳುತ್ತೇವೆ, “ತಮಸೋಮಾ ಜ್ಯೋತಿರ್ಗಮಯ”. ನಮ್ಮ ದರ್ಶನವನ್ನು,  ಚಿಂತನೆಯನ್ನು , ದೃಷ್ಟಿಯನ್ನು ರೂಪಿಸಿರುವುದರ ಹಿಂದೆ ಹಲವಾರು ಶಕ್ತಿಗಳಿವೆ. ನಮ್ಮ ಶಕ್ತಿಯನ್ನು ಅರಿತುಕೊಳ್ಳುವಲ್ಲಿ ಮತ್ತು ನಾವು ಪ್ರಾವೀಣ್ಯತೆಯ ತುತ್ತ ತುದಿಗೆ ತಲುಪುವುದನ್ನು ತಡೆಯುವ ಕೆಲವು ಮಾನವ ದುಷ್ಪ್ರೇರಣೆಗಳಿವೆ. ಅಲ್ಲಿ ಹಲವು ಅಡೆತಡೆಗಳಿವೆ, ಬಿಕ್ಕಟ್ಟಿನ ಸುಳಿಗಳಿವೆ, ಮತ್ತು ವಿವೇಕರಹಿತ ದ್ವೇಷವಿದೆ.

ನಾವು ಈ ಕತ್ತಲೆಯನ್ನು ನಿವಾರಿಸಬೇಕು ಮತ್ತು ನಮ್ಮ ಹಾದಿಗಳನ್ನು ಜ್ಞಾನ, ಅರಿವು, ತಿಳುವಳಿಕೆ ಮತ್ತು ಪ್ರೀತಿಯ ಮೂಲಕ ಬೆಳಗಬೇಕು.

ವೇದ ಕಾಲದಿಂದಲೂ ಭಾರತದ ಋಷಿವರ್ಯರು ತೋರಿಸಿದ ಹಾದಿ ಇದೇ.

ಸಂತರಾದಂತಹ  ಗುರು ನಾನಕ್ ಮತ್ತು  ಸತ್ಯ ಸಾಯಿಬಾಬಾ ಅವರು ನಮಗೆ ತೋರಿಸಿದ ದಾರಿಯೂ ಇದುವೇ.

ನಾವಿಂದು ಬಾಬಾ ಅವರ ಜನ್ಮದಿನವನ್ನು ಆಚರಿಸುತ್ತಿರುವಾಗಲೇ , ಅವರು ನಮಗೆ ಬಿಟ್ಟು ಹೋಗಿರುವ ದೊಡ್ಡ ಪರಂಪರೆಯ  ಬಳುವಳಿಯನ್ನು ನಾವು ನೆನಪಿಸಿಕೊಳ್ಳೋಣ. ಅದು ಪ್ರೀತಿ, ಅನುಕಂಪ, ಭಕ್ತಿ ಮತ್ತು ಮಾನವತೆಯ ಸೇವೆಯ ಬಳುವಳಿ. ಸಹಜೀವಿ ಮನುಷ್ಯರ ಬಗ್ಗೆ ನಿಸ್ವಾರ್ಥ ಸೇವೆ ಮುಂದುವರೆಸಿಕೊಂಡು ಹೋಗುತ್ತಿರುವ  ಲೆಕ್ಕಕಿಲ್ಲದಷ್ಟು ವ್ಯಕ್ತಿಗಳ ಮತ್ತು ಸಂಸ್ಥೆಗಳ ಮೂಲಕ ಅವರ ದೈವಿಕ ಹಾಜರಾತಿಯನ್ನು ಕಾಣುತ್ತಿರುವ ನಾವು ನಿಜವಾಗಿಯೂ ಅವರಿಂದ ಆಶೀರ್ವದಿಸಲ್ಪಟ್ಟಿದ್ದೇವೆ. ಶ್ರೀ ಸತ್ಯ ಸಾಯಿ ಸೇವಾ ಬಳಗ ಇಂತಹ ಸಂಸ್ಥೆಗಳಲ್ಲಿ ಒಂದಾಗಿರುವುದು ನನಗೆ ಸಂತೋಷ ತಂದಿದೆ. 

ಶ್ರೀ ಸತ್ಯ ಸಾಯಿ ಬಾಬಾ ಅವರ ಚಿರಂತನ ಮೌಲ್ಯದ ಸಂದೇಶಗಳಿಂದ ಪ್ರೇರಣೆ ಪಡೆದು ನಿಮ್ಮ ಸಂಘಟನೆ ಶಿಕ್ಷಣ ಕ್ಷೇತ್ರದಲ್ಲಿ, ಆರೋಗ್ಯ ರಕ್ಷಣೆ ಮತ್ತು ಫೋಷಕಾಂಶ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿರುವುದು ನನ್ನನ್ನು ಸಂಪ್ರೀತಗೊಳಿಸಿದೆ.

ಬಾಬಾ ಅವರು ಸಣ್ಣ ಹಳ್ಳಿಯಾದ ಪುಟ್ಟಪರ್ತಿಯನ್ನು ಶಿಕ್ಷಣ , ಆರೋಗ್ಯ ರಕ್ಷಣೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅತ್ಯುತ್ಕೃಷ್ಟತೆಯ ಅಂತಾರಾಷ್ಟ್ರೀಯ ಕೇಂದ್ರವನ್ನಾಗಿ ಮಾರ್ಪಡಿಸಿದರು.

ಅವರು ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡರು.

ಇಂತಹ ರೋಮಾಂಚಕಾರಿ ಪರಿವರ್ತನೆ ಸಾಧ್ಯವಾದದ್ದು ಅವರ ಸ್ವಾರ್ಥರಹಿತ ಸೇವಾ ಸ್ಫೂರ್ತಿಯಿಂದಾಗಿ, ಮಾನವ ಕುಲದ ಬಗ್ಗೆ ಅವರ ಮಿತಿ ಇಲ್ಲದ ಪ್ರೀತಿಯಿಂದಾಗಿ ಮತ್ತು ಅವರ ವಿಶ್ವವ್ಯಾಪೀ ಚಿಂತನಾ ದೃಷ್ಟಿಯಿಂದಾಗಿ.

ಇದು ಗುರುವೊಬ್ಬನ ಬಹುಮುಖಿ ಧೋರಣೆಯ ಪ್ರತೀಕ. ಅವರು ದಿಕ್ಕು ದಿಸೆಗಳನ್ನು ತೋರಿಸುತ್ತಾರೆ, ಅವಶ್ಯವಿದ್ದಾಗ ಕೈಹಿಡಿದು ನಡೆಸುತ್ತಾರೆ ಮತ್ತು ನಮ್ಮೆಲ್ಲರನ್ನೂ ಉತ್ತಮ ಜೀವನದತ್ತ ಸಾಗಲು ನೆರವಾಗುತ್ತಾರೆ. ಅವರ ಆಧ್ಯಾತ್ಮಿಕ ನಾಯಕತ್ವ ಬಲಿಷ್ಟವಾದ ಮಾನವೀಯ ತಳಹದಿಯ ಮೇಲಿದೆ. ನಮ್ಗೆಲ್ಲರಿಗೂ ಸ್ವಾಮಿ ಎಂದರೆ ಇದೇ ಅರ್ಥ. 

ಅತ್ಯುತ್ತಮ ಶಿಕ್ಷಣ, ಅತ್ಯುತ್ತಮ ಆರೋಗ್ಯ ರಕ್ಷಣೆ, ಅತ್ಯುತ್ತಮ ಸಮಾಜ ಸೇವೆಗಳನ್ನು ಸಾಮಾನ್ಯ ನಾಗರಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ.

ಅತ್ಯುತ್ತಮವಾದುದನ್ನು  ಮತ್ತು ಪ್ರಾವೀಣ್ಯತೆಯನ್ನು   ಅವರು  ಎಡೆಬಿಡದೆ ಗಮನಿಸುವಂತಹ ಎಚ್ಚರಿಕೆಯನ್ನು ಹೊಂದಿದ್ದರು. ಮತ್ತು ಆ ಪ್ರಾವೀಣ್ಯತೆಯ ಸ್ಪೂರ್ತಿಯನ್ನು ನಾವಿಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮತ್ತು ನೀವು ಸ್ಥಾಪಿಸಿದ ವಿಶ್ವವಿದ್ಯಾಲಯದಲ್ಲಿ   ಆಚರಿಸುತ್ತಿದ್ದೇವೆ.

ನಿಮ್ಮ ನಾಯಕತ್ವದಲ್ಲಿ ಸುಮಾರು 29 ಶಿಕ್ಷಣ ಸಂಸ್ಥೆಗಳು ಕರ್ನಾಟಕದ 14 ಜಿಲ್ಲೆಗಳಲ್ಲಿ ಮತ್ತು ತೆಲಂಗಾಣದ ಒಂದು  ಜಿಲ್ಲೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿವೆ  ಎಂಬುದನ್ನು ತಿಳಿದು ನನಗೆ ಅತೀವ ಸಂತೋಷವಾಗಿದೆ. ಉಚಿತ ವಿಶ್ವವಿದ್ಯಾಲಯವಲ್ಲದೆ 3,500 ಮಕ್ಕಳಿಗೆ ಸೇವೆ ಒದಗಿಸುತ್ತಿದ್ದೀರಿ. ಆರೋಗ್ಯ ವಲಯದಲ್ಲಿ ಎರಡು ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆಗಳು ಉಚಿತ ಚಿಕಿತ್ಸೆ ಒದಗಿಸುತ್ತಿವೆ ಮತ್ತು 6,000 ಕ್ಕೂ ಅಧಿಕ ಮಕ್ಕಳು  ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ, ದೇಶದ ಎಲ್ಲಾ ರಾಜ್ಯಗಳಿಗೆ ಸೇರಿದ ಸುಮಾರು 50,000 ಕ್ಕೂ ಅಧಿಕ ಮಕ್ಕಳು ಚಿಕಿತ್ಸಾ ಸೌಲಭ್ಯ ಪಡೆದಿದ್ದಾರೆ.

15 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಸುಮಾರು 1.2 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೌಷ್ಟಿಕ ಉಪಹಾರ ಒದಗಿಸುತ್ತಿರುವುದನ್ನು ಕೇಳಿ  ನಾನು ಅತ್ಯಂತ ಹರ್ಷಿತನಾಗಿದ್ದೇನೆ. ಇದರ ಜೊತೆಗೆ ಹಲವಾರು ಮಾನವ ಅಭಿವೃದ್ದಿ ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ಜಗತ್ತಿನಾದ್ಯಂತ ನಡೆಸಲಾಗುತ್ತಿದೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದ ಇನ್ನೂ ನಾಲ್ಕು ಜಿಲ್ಲೆಗಳಲ್ಲಿ ಮತ್ತೆ ನಾಲ್ಕು ಶಿಕ್ಷಣ ಸಂಸ್ಥೆಗಳು ಅಸ್ತಿತ್ವಕ್ಕೆ ಬರಲಿವೆ ಎಂದು ನಾನು ತಿಳಿದುಕೊಂಡೆ. ಈ ತಿಂಗಳ ಕೊನೆಯಲ್ಲಿ ನವಿ ಮುಂಬಯಿಯಲ್ಲಿ ಮಕ್ಕಳ ಹೃದಯ ಚಿಕಿತ್ಸಾ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಪೋಷಕಾಂಶಯುಕ್ತ ಆಹಾರ ಕಾರ್ಯಕ್ರಮವನ್ನು 2019 ರ ಮಾರ್ಚ್ ತಿಂಗಳೊಳಗೆ 5 ಲಕ್ಷ ಮಕ್ಕಳು ಮತ್ತು 1 ಲಕ್ಷ ಗರ್ಭಿಣಿಯರನ್ನು ಒಳಗೊಳ್ಳುವಂತೆ ವಿಸ್ತರಿಸುವ ಗುರಿ ಹಾಕಿಕೊಂಡಿರುವುದು ನನಗೆ ಇನ್ನಷ್ಟು ಸಂತೋಷ ತಂದಿದೆ.

ಈ ಮಾನವೀಯ ಕೆಲಸಗಳನ್ನು, ಯೋಜನೆಗಳನ್ನು ಅನುಷ್ಟಾನಕ್ಕೆ ತರಲು ಹಗಲು ರಾತ್ರಿ ಶ್ರಮಿಸುತ್ತಿರುವ ಈ ಟ್ರಸ್ಟಿನ , ಬಾಬಾ ಅವರ ಸ್ವಾರ್ಥರಹಿತ ಭಕ್ತರನ್ನು ವೈಯಕ್ತಿಕವಾಗಿ ಮುಕ್ತಕಂಠದಿಂದ ಶ್ಲ್ಯಾಘಿಸುತ್ತೇನೆ. ಶ್ರೀ ಸತ್ಯ ಸಾಯಿ ಲೋಕ ಸೇವಾ ಗುಂಪಿನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಬಿ.ಎನ್. ನರಸಿಂಹ ಮೂರ್ತಿ ಮತ್ತು ಇತರರನ್ನು ನಾನು ಹೃದಯದುಂಬಿ ಪ್ರಶಂಸಿಸುತ್ತೇನೆ. 

ಮಾನವ ಉತ್ಕೃಷ್ಟತೆಗಾಗಿರುವ ಶ್ರೀ ಸತ್ಯ ಸಾಯಿ ಪ್ರಶಸ್ತಿಯು  ವಿಶ್ವದ ವಿವಿಧ ಭಾಗಗಳಲ್ಲಿ ಸಮಾಜದ ಉದ್ದಾರಕ್ಕಾಗಿ ಅಹರ್ನಿಶೀ ಕೆಲಸ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸುವ ನಿಟ್ಟಿನಲ್ಲಿ  ಒಂದು ಅತ್ಯುತ್ತಮ ಉಪಕ್ರಮ. ಪ್ರಶಸ್ತಿ ಪುರಸ್ಕೃತರನ್ನು, ಸಮಾಜಕ್ಕೆ  ಅವರ ಅತ್ಯುನ್ನತ ಕೊಡುಗೆಗಾಗಿ ನಾನು ಅಭಿನಂದಿಸುತ್ತೇನೆ.

ನಮ್ಮ ದೇಶ ಪ್ರಗತಿಯ ಪಥದಲ್ಲಿ ಅತ್ಯಂತ ವೇಗವಾಗಿ ಮುನ್ನಡೆಯುತ್ತಿದೆ. ಮತ್ತು ಅದು ಬಲಿಷ್ಟ ಆರ್ಥಿಕ ಶಕ್ತಿಯಾಗಿ ಮೂಡಿ ಬರುತ್ತಿದೆ.

ನಮ್ಮದು ನಿಜವಾಗಿಯೂ ಆಶೋತ್ತರಗಳ ಭಾರತ. ನಮ್ಮನ್ನು ನಾವೇ ಆಳಿಕೊಳ್ಳುವ ರೀತಿಯಲ್ಲಿ ಮತ್ತು ಅನಿಶ್ಚಿತ ಆದರೆ ಸತತ ಬದಲಾಗುತ್ತಿರುವ ಜಗತ್ತಿನ ಸವಾಲುಗಳಿಗೆ ಪ್ರತಿಕ್ರಿಯಿಸುವ ಹಾದಿಯ  ಪ್ರಮುಖ ಪರಿವರ್ತನೆಯ ಶೃಂಗ ಬಿಂದುವಿನಲ್ಲಿ ನಾವಿದ್ದೇವೆ. 

ನಮ್ಮದು  ಯುವ ಭಾರತ . ನಮ್ಮ ಸುಮಾರು 65 ಪ್ರತಿಶತ ಜನಸಂಖ್ಯೆ 35 ವರ್ಷಗಳಿಗಿಂತ ಕೆಳಗಿನ ವಯೋಮಾನದ್ದು. ಇವತ್ತಿನ ವಿಶ್ವ ಯುವ ಸಮಾವೇಶದಲ್ಲಿ ಹಲವು ಯುವ ಮುಖಗಳನ್ನು ನೋಡಲು ನನಗೆ ಸಂತೋಷವಾಗುತ್ತಿದೆ.

ಯುವಕರು ಭಾರತವನ್ನು ಭವಿಷ್ಯದಲ್ಲಿ ಮುನ್ನಡೆಸುವ ಶಕ್ತಿಯ ಪ್ರತಿನಿಧಿಗಳು.

ಅವರ ಜ್ಞಾನ ಮತ್ತು ಕಲ್ಪನೆ, ಸಾಮರ್ಥ್ಯ ಮತ್ತು ಆತ್ಮವಿಶ್ವಾಸ, ಅಪಾಯವನ್ನು ಎದುರಿಸುವ ಛಾತಿ ಮತ್ತು ಬಹು ಕಾರ್ಯ ನಿಭಾವಣೆಯ ಸಾಮರ್ಥ್ಯ, ತ್ವರಿತವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಮತ್ತು ಹೊಂದಾಣಿಕೆ ಭಾರತದ ಅಭಿವೃದ್ಧಿಯ ದಿಕ್ಕನ್ನು ಬದಲಾಯಿಸಬಲ್ಲುದು.

ನಾವು ಇಂದು ಹೊಂದಿರುವ ಜನಾಂಗೀಯ ಹೆಚ್ಚುಗಾರಿಕೆಯ ಸಂಪೂರ್ಣ ಪ್ರಯೋಜನ ಯುವಕರು ಅವಶ್ಯ ಕೌಶಲ್ಯವನ್ನು ಗಳಿಸಿಕೊಂಡು ಅದಕ್ಕನುಗುಣವಾದ ಧೋರಣೆಯನ್ನು ಅಳವಡಿಸಿಕೊಂಡಾಗ , ಜ್ಞಾನ ಮತ್ತು ಅರಿವನ್ನು ಪಡೆದುಕೊಂಡಿದ್ದಾಗ ಮಾತ್ರ ನಮಗೆ ದೊರೆಯುತ್ತದೆ.

ನಿಮ್ಮ ಟ್ರಸ್ಟ್ ನಂತಹ ಸಂಸ್ಥೆಗಳು, ಸಂಘಟನೆಗಳು ಕೊಡುಗೆ ನೀಡುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆ ಯುವಕರಿಗೆ ಉತ್ತಮ  ಬುನಾದಿ ಒದಗಿಸುತ್ತದೆ ಎಂಬುದಾಗಿ ನಾನು ಪ್ರಾಮಾಣಿಕವಾಗಿ ನಂಬುತ್ತೇನೆ.

ಯುವಕರು ಕೂಡಾ ಭಾರತದ ಪರಂಪರೆಯನ್ನು ಧಿಕ್ಕರಿಸದೆ, , ವಿಶ್ವದ ಇತರ ಉತ್ತಮಾಂಶಗಳನ್ನು ಕಲಿಯುವ  ಧ್ಯೇಯದೊಂದಿಗೆ  ಕಠಿಣ ಪರಿಶ್ರಮವನ್ನು ತೋರುತ್ತಾರೆ ಎಂಬ ಬಗ್ಗೆಯೂ  ನಾನು ಭರವಸೆ ಹೊಂದಿದ್ದೇನೆ.

ಉತ್ತಮ ಮತ್ತು ಉನ್ನತ ಗುಣಮಾನಕಗಳನ್ನು ನಿಗದಿ ಮಾಡುವುದೆಂದರೆ ಅದಕ್ಕೆ ಧೈರ್ಯ ಅವಶ್ಯ. ಅವುಗಳನ್ನು ಸಾಧಿಸುವುದಕ್ಕೆ ಸಾಮರ್ಥ್ಯ ಬೇಕು. ನಿಮಗೆ ಅವೆರಡು ಇವೆ ಎಂದು ನಾನು ಆಶಿಸುತ್ತೇನೆ.

ಸರಕಾರವು ಕ್ರಿಯಾಶೀಲ ನೀತಿಗಳನ್ನು ಮತ್ತು ಕಾರ್ಯಕ್ರಮಗಳನ್ನು  ರೂಪಿಸುತ್ತಿರುವಾಗ, ಇಂತಹ ಪರಿವರ್ತನೆಗೆ ಬೇಕಾದ ವ್ಯಾಪಕ ಬೆಂಬಲ ನಾಗರಿಕ ಸಮಾಜ , ಖಾಸಗಿ ವಲಯ , ಅಕಾಡೆಮಿಕ್  ಕ್ಷೇತ್ರ ಮತ್ತು ನಿಮ್ಮ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ನಂತಹ ದತ್ತಿ ಸಂಘಟನೆಗಳು  ಕ್ರಿಯಾಶೀಲವಾಗಿ ಭಾಗವಹಿಸುವುದರಿಂದ ಮಾತ್ರವೇ ಸಾಧ್ಯವಾಗಬಹುದು.  

 ನೀವು ನಿಮ್ಮ ಉತ್ತಮ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೀರಿ ಮತ್ತು ಇನ್ನಷ್ಟು ಜನರ ಮನೆ ಮನಗಳಲ್ಲಿ, ಹೃದಯಗಳಲ್ಲಿ ದೀಪಗಳನ್ನು ಬೆಳಗುವ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವಿರೆಂದು ನಾನು ಭಾವಿಸುತ್ತೇನೆ.

ನೀವೆಲ್ಲರೂ ಮಾಡುತ್ತಿರುವ ಉತ್ತಮ ಕೆಲಸಕ್ಕೆ ನಾನು ಮಗದೊಮ್ಮೆ  ನನ್ನ ಮೆಚ್ಚುಗೆ, ಅಭಿಮಾನವನ್ನು ವ್ಯಕ್ತಪಡಿಸುತ್ತೇನೆ. ಸತ್ಯ ಸಾಯಿ ಬಾಬಾ ಅವರ ಆಶೀರ್ವಾದಗಳು ನಮ್ಮೆಲ್ಲರ ಮೇಲಿರಲಿ ಮತ್ತು ಬರಲಿರುವ ವರ್ಷಗಳಲ್ಲಿ ಇನ್ನಷ್ಟು ದೊಡ್ಡ , ಉತ್ತಮ ಕಾರ್ಯಗಳನ್ನು ನಡೆಸಲು ನಮಗೆ ಸ್ಪೂರ್ತಿಯನ್ನು ಅದು ನೀಡುವಂತಾಗಲಿ.

 ಜೈ ಹಿಂದ್


(Release ID: 1553662) Visitor Counter : 83


Read this release in: English