“ಸುರಕ್ಷಾ ಭರವಸೆಯ ಮಾನದಂಡ ವ್ಯವಸ್ಥೆ” ಮತ್ತು “ಸರಳ್ ಸಂಚಾರ್ ಪೋರ್ಟಲ್” ಗಳನ್ನು
ಕೇಂದ್ರ ಸಚಿವ ಶ್ರೀ ಮನೋಜ್ ಸಿನ್ಹಾ ಅವರು ಉದ್ಘಾಟಿಸಿದರು.
ಬೆಂಗಳೂರು , ನವೆಂಬರ್ 15, 2018
“ಇಂಧನ, ಸಾರಿಗೆ, ನಾಗರಿಕ ವಿಮಾನಯಾನ ಮತ್ತು ಹಣಕಾಸು ಮುಂತಾದ ದೇಶದ ನಿರ್ಣಾಯಕ ಮೂಲಸೌಕರ್ಯ ವಲಯಗಳ ಸುರಕ್ಷತಾ ವ್ಯವಸ್ಥೆಗೆ ಅಗತ್ಯ ಸಂವಹನ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಸರಕಾರ ಕಾಳಜಿ ವಹಿಸಿದೆ” ಎಂದು ಕೇಂದ್ರ ಸಂಪರ್ಕ (ಸ್ವ/ನಿ) ಹಾಗೂ ರೈಲ್ವೇ ಖಾತೆಯ ಸಹಾಯಕ ಸಚಿವ ಶ್ರೀ ಮನೋಜ್ ಸಿನ್ಹಾ ಅವರು ಹೇಳಿದರು.
ದೂರವಾಣಿ ಕ್ಷೇತ್ರದ ಸೇವೆಗಳ ಅನುಮತಿಗಾಗಿ ಮತ್ತು ಉಪರಣಗಳ ಕಡ್ಡಾಯ ಪರೀಕ್ಷೆ ಹಾಗೂ ಪ್ರಮಾಣೀಕರಣಕ್ಕಾಗಿ ಅರ್ಜಿ ಹಾಕುವ ನೂತನ ಪಾರದರ್ಶಕ ವ್ಯವಸ್ಥೆಗಾಗಿ “ ಸರಳ್ ಸಂಚಾರ್ “ (www.saralsanchar.gov.in ) ಹಾಗೂ ಪ್ರಮಾಣೀಕರಣ ಪರೀಕ್ಷಾ ವ್ಯವಸ್ಥೆಗೆ ಮತ್ತು ನಿರ್ವಹಣೆಗಾಗಿ www.mtcte.gov.in ಎಂಬ ಅಂತರ್ಜಾಲ ತಾಣವನ್ನು ಬೆಂಗಳೂರಿನಲ್ಲಿಂದು ಉದ್ಘಾಟಿಸಿ ಕೇಂದ್ರ ಸಂಪರ್ಕ (ಸ್ವ/ನಿ) ಹಾಗೂ ರೈಲ್ವೇ ಖಾತೆಯ ಸಹಾಯಕ ಸಚಿವ ಶ್ರೀ ಮನೋಜ್ ಸಿನ್ಹಾ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ “ ಸೆಕ್ಯೂರಿಟಿ ಸ್ಟಾಂಡರ್ಡ್ ಫೆಸಿಲಿಟಿ” ವ್ಯವಸ್ಥೆಗಳನ್ನು ಸಚಿವ ಶ್ರೀ ಮನೋಜ್ ಸಿನ್ಹಾ ಅವರು ಉದ್ಘಾಟಿಸಿದರು.
ಕೇಂದ್ರ ಸರಕಾರದ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ2018ಯ ಮೂರು ಅಂಗಗಳಲ್ಲಿ “ಸುರಕ್ಷಿತ ಭಾರತ”(ಸೆಕ್ಯೂರ್ ಇಂಡಿಯ) ಕೂಡಾ ಒಂದು ಭಾಗವಾಗಿದೆ. ನಿರ್ಣಾಯಕ ಮೂಲಸೌಕರ್ಯಗಳು ಭಾರತದ ಅಗತ್ಯತೆಗಳ ಮಾನದಂಡವನ್ನು ಹೊಂದುವಲ್ಲಿ “ ಸೆಕ್ಯೂರಿಟಿ ಸ್ಟಾಂಡರ್ಡ್ ಫೆಸಿಲಿಟಿ”ಗೆ ಬಹಳಷ್ಟು ಪ್ರಾಮುಖ್ಯತೆಯಿದೆ ಎಂದು ಸಚಿವ ಶ್ರೀ ಮನೋಜ್ ಸಿನ್ಹಾ ಹೇಳಿದರು.
ಉದ್ಘಾಟನೆ ಗೊಂಡ ಜಾಲತಾಣಗಳು, ಪ್ರಧಾನಮಂತ್ರಿ ಅವರ ಸಂಕಲ್ಪಕಾರ್ಯ ಯೋಜನೆಗಳಾದ “ಡಿಜಿಟಲ್ ಇಂಡಿಯಾ” ಮತ್ತು “ಈಸ್ ಆಫ್ ಡುಯಿಂಗ್ ಬಿಸಿನೆಸ್” ಗೆ ಪೂರಕವಾಗಿವೆ. ದೇಶದ ಜನತೆಗೆ ಗುಣಮಟ್ಟದ ಸೇವೆಗಳನ್ನು ಮತ್ತು ಸುರಕ್ಷತೆಗಳನ್ನು ಪೂರೈಸುವುದು ಅತ್ಯಂತ ಪ್ರಧಾನವಾಗಿದೆ. ಈ ನಿಟ್ಟಿನಲ್ಲಿ ದೂರವಾಣಿ ಉಪಕರಣಗಳ ಪರೀಕ್ಷೆ, ಮಾಪನ ಮಾನದಂಡ ಹಾಗೂ ಪ್ರಮಾಣೀಕರಣ ವ್ಯವಸ್ಥೆಗಳನ್ನು ಕೇಂದ್ರ ಸರಕಾರ ಪ್ರಾರಂಭಿಸಿದೆ ಎಂದು ಸಚಿವ ಶ್ರೀ ಮನೋಜ್ ಸಿನ್ಹಾ ಹೇಳಿದರು.