ಪ್ರಧಾನ ಮಂತ್ರಿಯವರ ಕಛೇರಿ

ಸೌರಾಷ್ಟ್ರ ಪಟೇಲ್ ಸಾಂಸ್ಕೃತಿಕ ಸಮಾಜದ ಅಂತಾರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ

Posted On: 06 JUL 2018 5:13PM by PIB Bengaluru

ಸೌರಾಷ್ಟ್ರ ಪಟೇಲ್ ಸಾಂಸ್ಕೃತಿಕ ಸಮಾಜದ ಅಂತಾರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸೌರಾಷ್ಟ್ರ ಪಟೇಲ್ ಸಾಂಸ್ಕೃತಿಕ ಸಮಾಜದ 8ನೇ ಅಂತಾರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಈ ವರ್ಷದ ಸೌರಾಷ್ಟ್ರ ಪಟೇಲ್ ಸಾಂಸ್ಕೃತಿಕ ಸಮಾಜದ ಅಂತಾರಾಷ್ಟ್ರೀಯ ಸಮಾವೇಶ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿದೆ. 

ಅನಿವಾಸಿ ವಿದೇಶಿ ಭಾರತೀಯರು ಅದರಲ್ಲೂ ವಿಶೇಷವಾಗಿ ಸೌರಾಷ್ಟ್ರದ ಪಟೇಲ್ ಸಮುದಾಯದ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಅನಿವಾಸಿ ಭಾರತೀಯರು ಸದಾ ಭಾರತಕ್ಕೆ ಹೆಮ್ಮೆ ತಂದಿದ್ದಾರೆ ಎಂದರು. ಅವರ ಪ್ರಯತ್ನಗಳಿಂದಾಗಿ ಭಾರತೀಯ ಪಾಸ್ ಪೋರ್ಟ್ಅನ್ನು ಜಗತ್ತಿನ ಎಲ್ಲೆಡೆ ಗೌರವಿಸುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ಪ್ರಧಾನಿ ಹೇಳಿದರು. 

ಸ್ವಚ್ಛ ಭಾರತ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಯೋಜನೆಗಳಿಂದ ದೇಶದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರೆತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿ ವರ್ಷ ಭಾರತದರ್ಶನ ಪ್ರವಾಸಕ್ಕಾಗಿ ಭಾರತಕ್ಕೆ ಭೇಟಿ ನೀಡುವಂತೆ ಕನಿಷ್ಠ 5 ವಿದೇಶಿ ಕುಟುಂಬಗಳನ್ನುಪ್ರೇರೇಪಿಸಬೇಕು ಎಂದು ಪ್ರಧಾನಿ, ಎನ್ಆರ್ಐ-ಅನಿವಾಸಿ ಭಾರತೀಯ ಸಮುದಾಯಕ್ಕೆ ಮನವಿ ಮಾಡಿದರು. ಇದು ಏಕಭಾರತ-ಶ್ರೇಷ್ಠ ಭಾರತ ಅಭಿಯಾನದ ಉದ್ದೇಶಕ್ಕೆ ಸೇವೆ ಸಲ್ಲಿಸಲು ನೆರವಾಗಲಿದೆ ಮತ್ತು ಕೊನೆಗೆ ಇದು ಭಾರತದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ಕೊಡುತ್ತದೆ ಎಂದರು. ಮಹಾತ್ಮ ಗಾಂಧೀಜಿ ಅವರ ಸ್ವಚ್ಛ ಭಾರತದ ಕನಸು ನನಸು ಮಾಡುವ ಅಭಿಯಾನದ ಯಶಸ್ಸಿಗೆ ಅನಿವಾಸಿ ಭಾರತೀಯರು ಹೇಗೆಲ್ಲ ಕೊಡುಗೆ ನೀಡಬಹುದು ಎಂಬ ಕುರಿತು ಪ್ರಧಾನಿ ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮಶತಮಾನೋತ್ಸವ ಇದೇ ಅಕ್ಟೋಬರ್ 2 ರಿಂದ ಆರಂಭವಾಗಲಿದ್ದು, ಇದನ್ನು ಭಾರತ ಆಚರಿಸಲಿದೆ ಎಂದು ಪ್ರಧಾನಿ ಹೇಳಿದರು. ಭಾರತದ ಉಕ್ಕಿನ ಮನುಷ್ಯನೆಂದೇ ಖ್ಯಾತಿಗಳಿಸಿದ್ದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಹೆಸರಿನಲ್ಲಿ ಬೃಹತ್ ಐಕ್ಯತಾ ಪ್ರತಿಮೆಯನ್ನು ನರ್ಮದಾ ನದಿ ತಟದಲ್ಲಿ ನಿರ್ಮಿಸಲಾಗುತ್ತಿದ್ದು, ಆ ಕಾರ್ಯ 2018ರ ಅಕ್ಟೋಬರ್ 31ರೊಳಗೆ ಪೂರ್ಣಗೊಳ್ಳಲಿದೆ. ಈ ಐಕ್ಯತೆಯ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಅದು ವಿಶ್ವದಲ್ಲಿಯೇ ಅತಿ ದೊಡ್ಡ ಪ್ರತಿಮೆಯಾಗಲಿದೆ ಎಂದರು.

ಸಬಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು ಈಗ ವಿಶ್ವದ ಹೊಳೆಯುವ ನಕ್ಷತ್ರವ್ನಾಗಿ ನೋಡಲಾಗುತ್ತಿದೆ ಎಂದರು. ಭಾರತ ಇಂದು ಅತ್ಯಂತ ವೇಗದ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದು, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದೆ ಎಂದು ಪ್ರಧಾನಿ ಹೇಳಿದರು. ಸರಕು ಮತ್ತು ಸೇವಾ ತೆರಿಗೆ - ಜಿ ಎಸ್ ಟಿ ಮತ್ತು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಮತ್ತಿತರ ನಿರ್ಧಾರಗಳಿಂದಾಗಿ ಪ್ರಾಮಾಣಿಕವಾಗಿ ವ್ಯಾಪಾರ ವಹಿವಾಟು ನಡೆಸುವವರಿಗೆ ತುಂಬಾ ಅನುಕೂಲವಾಗಿದೆ. ಈ ಎಲ್ಲ ಕ್ರಮಗಳಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ ವ್ಯಾಪಾರ ವಹಿವಾಟಿಗೆ ಪೂರಕ ವಾತಾವರಣ ನಿರ್ಮಾಣದಲ್ಲಿ ಭಾರತ 42 ಸ್ಥಾನ ಮೇಲೇರಿದೆ ಎಂದು ಪ್ರಧಾನಿ ಹೇಳಿದರು. 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ನವಭಾರತ ನಿರ್ಮಾಣದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳಿಗೆ ಅನಿವಾಸಿ ಭಾರತೀಯ ಸಮುದಾಯ ಕೈಜೋಡಿಸಬೇಕು ಎಂದು ಕರೆ ನೀಡಿದರು. 
 

***



(Release ID: 1538117) Visitor Counter : 74