ಪ್ರಧಾನ ಮಂತ್ರಿಯವರ ಕಛೇರಿ

‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಾಡಿದ ‘ಮನ್ ಕಿ ಬಾತ್’ – 42 ನೇ ಭಾಷಣದ ಕನ್ನಡ ಅವತರಣಿಕೆ

Posted On: 25 MAR 2018 11:41AM by PIB Bengaluru

 

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಇಂದು ರಾಮನವಮಿಯ ಶುಭದಿನ. ರಾಮನವಮಿಯ ಈ ಪವಿತ್ರ ದಿನಂದಂದು ದೇಶವಾಸಿಗಳಿಗೆ ನನ್ನ ಅನಂತಾನಂತ ಶುಭಾಷಯಗಳು. ಪೂಜ್ಯ ಬಾಪೂರವರ ಜೀವನದಲ್ಲಿ ರಾಮನಾಮದ ಶಕ್ತಿ ಎಷ್ಟಿತ್ತು ಎಂಬುದನ್ನು ನಾವು ಅವರ ಜೀವನದ ಪ್ರತಿಕ್ಷಣದಲ್ಲೂ ನೋಡಿದ್ದೇವೆ. ಹಿಂದಿನ ಜನವರಿ 26 ರಂದು ASEAN ದೇಶಗಳ ಎಲ್ಲಾ ಮಹಾನುಭಾವರು ಇಲ್ಲಿಗೆ ಬಂದಾಗ ತಮ್ಮ ಜೊತೆಯಲ್ಲಿ ಸಾಂಸ್ಕೃತಿಕ ತಂಡಗಳನ್ನು ಕರೆತಂದಿದ್ದರು ಮತ್ತು ಅವುಗಳಲ್ಲಿ ಹೆಚ್ಚಿನ ದೇಶದ ತಂಡಗಳು ರಾಮಾಯಣವನ್ನೇ ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದು ಬಹಳ ಹೆಮ್ಮೆಯ ಸಂಗತಿ. ಅಂದರೆ ರಾಮ ಮತ್ತು ರಾಮಾಯಣ ಬರೀ ಭಾರತವಷ್ಟೇ ಅಲ್ಲದೆ, ವಿಶ್ವದ ಈ ಭೂಭಾಗದ ASEAN ದೇಶಗಳಲ್ಲಿ ಇಂದಿಗೂ ಸಹ ಅಷ್ಟೇ ಪ್ರೇರಣೆ ಮತ್ತು ಪ್ರಭಾವವನ್ನು ಹುಟ್ಟು ಹಾಕುತ್ತಿದೆ. ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ರಾಮನವಮಿಯ ಶುಭಾಷಯಗಳನ್ನು ತಿಳಿಸುತ್ತಿದ್ದೇನೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿ ಬಾರಿಯಂತೆ ಈ ಬಾರಿಯೂ ಸಹ ನನಗೆ ನಿಮ್ಮೆಲ್ಲರ ಪತ್ರಗಳು, ಇ-ಮೇಲ್ ಗಳು, ದೂರವಾಣಿ ಕರೆಗಳು ಮತ್ತು ಟೀಕೆ ಟಿಪ್ಪಣಿಗಳು ಬಹಳಷ್ಟು ಸಂಖ್ಯೆಯಲ್ಲಿ ಸಿಕ್ಕಿದೆ. ಕೋಮಲ್ ಠಕ್ಕರ್ ರವರು ತಮ್ಮ ಸಂಸ್ಕೃತದ ಆನ್-ಲೈನ್ ಕೋರ್ಸ್ ನ್ನು ಪ್ರಾರಂಭಿಸುವ ಬಗ್ಗೆ ಒಥಿಉov ನಲ್ಲಿ ಬರೆದಿದ್ದನ್ನು ನಾನು ಓದಿದೆ. ಐ.ಟಿ ಪ್ರೊಫೆಷನಲ್ ಆಗಿರುವ ಜೊತೆ ಜೊತೆಗೆ ಸಂಸ್ಕೃತದ ಬಗ್ಗೆ ನಿಮಗಿರುವ ಭಾಷಾಪ್ರೇಮ ನೋಡಿ ಬಹಳ ಸಂತೋಷವಾಯಿತು. ನಾನು ಇದಕ್ಕೆ ಸಂಬಂಧಿಸಿದ ವಿಭಾಗಕ್ಕೆ ಈ ನಿಟ್ಟಿನಲ್ಲಿ ಆಗುತ್ತಿರುವ ಪ್ರಯತ್ನಗಳ ಮಾಹಿತಿಗಳನ್ನು ನಿಮ್ಮ ಬಳಿಗೆ ತಲುಪಿಸಲು ಹೇಳಿದ್ದೇನೆ. ಕೋಮಲ್ ರವರ ಸಲಹೆಯನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬಹುದು ಎನ್ನುವುದರ ಬಗ್ಗೆ ವಿಚಾರ ಮಾಡಿ ಎಂದು ನಾನು ಸಂಸ್ಕೃತದ ಬಗ್ಗೆ ಕೆಲಸ ಮಾಡುತ್ತಿರುವ ಮನದ ಮಾತು ಕಾರ್ಯಕ್ರಮದ ಶ್ರೋತೃಗಳನ್ನು ವಿನಂತಿಸಿಕೊಳ್ಳುತ್ತೇನೆ. 

ಬಿಹಾರದ, ನಳಂದಾ ಜಿಲ್ಲೆಯ ಬರಾಕರ್ ಗ್ರಾಮದ ಶ್ರೀಯುತ ಘನಶ್ಯಾಂ ಕುಮಾರ್ ರವರೇ, NarendraModiApp ನಲ್ಲಿ ಬರೆದಿರುವ ನಿಮ್ಮ ಅಭಿಪ್ರಾಯವನ್ನು ನಾನು ಓದಿದೆ. ಭೂಮಿಯಲ್ಲಿ ಕಡಿಮೆಯಾಗುತ್ತಿರುವ ನೀರಿನ ಮಟ್ಟದ ಕುರಿತು ನಡೆಸಿರುವ ನಿಮ್ಮ ಚಿಂತನೆ ನಿಜವಾಗಿಯೂ ಬಹಳ ಮಹತ್ವಪೂರ್ಣದ್ದಾಗಿದೆ. 

ಕರ್ನಾಟಕದ ಶ್ರೀಯುತ ಶಕಲ್ ಶಾಸ್ತ್ರಿಯವರೇ, “ಯಾವಾಗ ನಾವು ಈ ಭೂಮಿಯಲ್ಲಿ ಇರುವ ಪ್ರತಿ ಪ್ರಾಣಿಯ ಬಗ್ಗೆ ನಾವು ಯೋಚಿಸುತ್ತೇವೆಯೋ ಆಗ ‘ಆಯುಷ್ಮಾನ್ ಭೂಮಿ’ಯಾಗುತ್ತದೆ, ಮತ್ತು ‘ಆಯುಷ್ಮಾನ್ ಭೂಮಿ’ ಆದಾಗ ‘ಆಯುಷ್ಮಾನ್ ಭಾರತ’ವಾಗುತ್ತದೆ” ಎಂದು ನೀವು ಶಬ್ದಗಳ ಸುಂದರ ತಾಳಮೇಳಗಳೊಂದಿಗೆ ಬರೆದಿದ್ದೀರಿ. ಬೇಸಿಗೆಯಲ್ಲಿ ಪಶು ಪಕ್ಷಿಗಳಿಗೆ ನೀರನ್ನು ಇಡಲು ನೀವು ಎಲ್ಲರಿಗೂ ಒತ್ತಾಯಿಸಿದ್ದೀರಿ. ಶಕಲ್ ರವರೇ, ನಿಮ್ಮ ಭಾವನೆಗಳನ್ನು ನಾನು ಎಲ್ಲಾ ಶ್ರೋತೃಗಳಿಗೂ ತಲುಪಿಸಿದ್ದೇನೆ. 

ನಾನು ಈ ಬಾರಿ ಯುವಕರೊಂದಿಗೆ ಅವರ ಆರೋಗ್ಯದ ಬಗ್ಗೆ ಮಾತನಾಡಬೇಕು ಎಂದು ಶ್ರೀಯುತ ಯೋಗೇಶ್ ಭದ್ರೇಶರವರು ಹೇಳುತ್ತಾರೆ. ಏಷಿಯಾ ದೇಶಗಳೊಂದಿಗೆ ಹೋಲಿಸಿದರೆ ನಮ್ಮ ಯುವಕರು ದೈಹಿಕವಾಗಿ ದುರ್ಬಲರಾಗಿದ್ದಾರೆ ಎಂಬುದು ಅವರ ಅನಿಸಿಕೆ. ಯೋಗೇಶ್ ರವರೇ, ಈ ಬಾರಿ ಅರೋಗ್ಯದ ವಿಷಯವನ್ನು ತೆಗೆದುಕೊಂಡು ಎಲ್ಲರೊಂದಿಗೆ ವಿಸ್ತಾರವಾಗಿ ಮಾತನಾಡಲು, Fit India ದ ಬಗ್ಗೆ ಮಾತನಾಡಲು ನಾನು ಯೋಚಿಸಿದ್ದೇನೆ. ನೀವೆಲ್ಲಾ ಯುವಕರು ಸೇರಿ Fit India ದ ಒಂದು ಚಳುವಳಿಯನ್ನೇ ನಡೆಸಬಹುದು. 

ಕೆಲವು ದಿನಗಳ ಹಿಂದೆ ಫ್ರಾನ್ಸ್ ನ ರಾಷ್ಟ್ರಪತಿಯವರು ಕಾಶಿಗೆ ಯಾತ್ರೆ ಹೋಗಿದ್ದರು. ಆ ಯಾತ್ರೆಯ ಎಲ್ಲಾ ದೃಶ್ಯಗಳು ಮನ ಮುಟ್ಟುವಂತಿದ್ದವು, ಪ್ರಭಾವ ಬೀರುವಂತಿದ್ದವು ಎಂದು ವಾರಣಾಸಿಯ ಶ್ರೀಯುತ ಪ್ರಶಾಂತ್ ಕುಮಾರ್ ರವರು ಬರೆದಿದ್ದಾರೆ. ಆ ಯಾತ್ರೆಯ ಎಲ್ಲಾ ಫೋಟೋ ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಬೇಕು ಎಂದು ಕೂಡ ಅವರು ಒತ್ತಾಯಿಸಿದ್ದಾರೆ. ಪ್ರಶಾಂತ್ ರವರೇ, ಭಾರತ ಸರ್ಕಾರವು ಆ ಫೋಟೋ ಗಳನ್ನು ಅದೇ ದಿನ ಸಾಮಾಜಿಕ ಮಾಧ್ಯಮಗಳು ಮತ್ತು NarendraModiApp ನಲ್ಲಿ ಹಂಚಿಕೊಂಡಿದೆ. ಈಗ ನೀವು ಅವುಗಳನ್ನು ಲೈಕ್ ಮಾಡಿ ಮತ್ತು ರೀ ಟ್ವೀಟ್ ಮಾಡುವ ಮೂಲಕ ನಿಮ್ಮ ಮಿತ್ರರಿಗೆ ತಲುಪಿಸಿ. 

ಚೆನ್ನೈ ನಿಂದ ಅನಘಾ, ಜಯೇಶ್ ಮತ್ತು ಬಹಳಷ್ಟು ಮಕ್ಕಳು Exam Warrior ಪುಸ್ತಕದ ಹಿಂದೆ ಕೊಟ್ಟಿರುವ ಗ್ರಾಟಿಟ್ಯೂಡ್ ಕಾರ್ಡ್ ಗಳಲ್ಲಿ ತಮ್ಮ ಮನಸ್ಸಿನಲ್ಲಿ ಬಂದಿರುವ ವಿಚಾರಗಳನ್ನು ಬರೆದು ನನಗೇ ಕಳುಹಿಸಿಕೊಟ್ಟಿದ್ದಾರೆ. ಈ ಪತ್ರಗಳಿಂದ ನನ್ನ ಇಡೀ ದಿನದ ಆಯಾಸ ಮಾಯವಾಗಿ ಹೋಗುತ್ತದೆ ಎಂದು ನಾನು ಅನಘಾ, ಜಯೇಶ್ ಮತ್ತು ಎಲ್ಲಾ ಮಕ್ಕಳಿಗೆ ಹೇಳಲು ಬಯಸುತ್ತೇನೆ. ಎಷ್ಟೆಲ್ಲಾ ಪತ್ರಗಳು, ಎಷ್ಟೊಂದು ದೂರವಾಣಿ ಕರೆಗಳು, ಟೀಕೆ ಟಿಪ್ಪಣಿಗಳು!! ಇವುಗಳಲ್ಲಿ ನಾನು ಯಾವುದನ್ನು ಓದಲು ಸಾಧ್ಯವಾಗಿದೆಯೋ, ಯಾವುದು ಕೇಳಿದ್ದೇನೆಯೋ, ಅವುಗಳಲ್ಲಿ ನನ್ನ ಮನ ಮುಟ್ಟಿದ ಎಷ್ಟೊಂದು ವಿಚಾರಗಳು – ಬರೀ ಅವುಗಳ ಬಗ್ಗೆಯೇ ಮಾತನಾಡಿದರೂ ಕೂಡ ಬಹುಶಃ ತಿಂಗಳವರೆಗೆ ನಾನು ನಿರಂತರವಾಗಿ ಏನಾದರೊಂದು ಹೇಳುತ್ತಿರಲೇ ಬೇಕಾಗುತ್ತದೆ. 

ಈ ಬಾರಿ ಹೆಚ್ಚಾಗಿ ಪತ್ರಗಳು ಮಕ್ಕಳಿಂದ ಬಂದಿವೆ. ಅವರುಗಳು ಪರೀಕ್ಷೆಯ ಬಗ್ಗೆ ಬರೆದಿದ್ದಾರೆ. ರಜಾ ದಿನಗಳ ತಮ್ಮ ಯೋಜನೆಗಳನ್ನು ಹಂಚಿಕೊಂಡಿದ್ದಾರೆ. ಬೇಸಿಗೆಯಲ್ಲಿ ಪಶು-ಪಕ್ಷಿಗಳಿಗೆ ಕುಡಿಯುವ ನೀರಿನ ಚಿಂತನೆ ಮಾಡಿದ್ದಾರೆ. ರೈತ ಮೇಳಗಳು ಮತ್ತು ಕೃಷಿಯ ವಿಚಾರವಾಗಿ ದೇಶದೆಲ್ಲೆಡೆ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ರೈತ ಸೋದರ-ಸೋದರಿಯರ ಪತ್ರಗಳು ಬಂದಿವೆ. ನೀರಿನ ಸಂರಕ್ಷಣೆಯ ವಿಚಾರದಲ್ಲಿ ಕೆಲವು ನಾಗರೀಕರು ಸಲಹೆಗಳನ್ನು ಕಳುಹಿಸಿದ್ದಾರೆ. ನಾವು ಪರಸ್ಪರ ರೇಡಿಯೋ ದ ಮುಖಾಂತರ ಮನದ ಮಾತು ಕಾರ್ಯಕ್ರಮವನ್ನು ಪ್ರಾರಂಭಿಸಿದಾಗಿನಿಂದ ನಾನು ಒಂದು ರೀತಿಯ ನಮೂನೆಯನ್ನು ನೋಡಿಕೊಂಡು ಬಂದಿದ್ದೇನೆ. ಅದೆಂದರೆ, ಬಿಸಿಲು ಕಾಲದಲ್ಲಿ ಹೆಚ್ಚಿನ ಪತ್ರಗಳು ಬೇಸಿಗೆಯ ವಿಷಯವಾಗಿಯೇ ಇರುತ್ತವೆ. ಪರೀಕ್ಷೆಗಳಿಗೆ ಮೊದಲು ವಿದ್ಯಾರ್ಥಿ ಮಿತ್ರರ ಚಿಂತನೆಗಳನ್ನು ಒಳಗೊಂಡ ಪತ್ರಗಳು ಬರುತ್ತವೆ. ಹಬ್ಬಗಳ ಋತುವಿನಲ್ಲಿ ನಮ್ಮ ಹಬ್ಬಗಳು, ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ವಿಚಾರವಾಗಿ ಮಾತುಗಳು ಬರುತ್ತವೆ. ಅಂದರೆ, ಮನದ ಮಾತುಗಳು ಋತುಮಾನಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ ಮತ್ತು ಬಹುಶಃ ನಮ್ಮ ಮನದ ಮಾತುಗಳು ಎಲ್ಲೋ ಯಾರದೋ ಜೀವನದ ಹವಾಮಾನ ಕೂಡ ಬದಲಿಸುತ್ತದೆ ಎನ್ನುವುದು ಸಹ ಸತ್ಯ ಎನಿಸುತ್ತದೆ. ನಿಮ್ಮ ಈ ಮಾತುಗಳಲ್ಲಿ, ನಿಮ್ಮ ಈ ಅನುಭವಗಳಲ್ಲಿ, ನಿಮ್ಮ ಈ ಉದಾಹರಣೆಗಳಲ್ಲಿ ಇಷ್ಟೊಂದು ಪ್ರೇರಣೆ, ಇಷ್ಟೊಂದು ಶಕ್ತಿ, ಇಷ್ಟೊಂದು ಅಪ್ಯಾಯತೆ, ದೇಶಕ್ಕಾಗಿ ಏನನ್ನಾದರೂ ಮಾಡುವ ಸಂಕಲ್ಪ ಇರುವಾಗ ಏಕೆ ಬದಲಾಗಬಾರದು ಹೇಳಿ? ಇವುಗಳಲ್ಲಿ ಇಡೀ ದೇಶದ ಹವಾಮಾನವನ್ನೇ ಬದಲಾಯಿಸುವ ಶಕ್ತಿ ತುಂಬಿಕೊಂಡಿದೆ. ಅಸ್ಸಾಂನ ಕರೀಂ ಗಂಜ್ ನ ಅಹಮದ್ ಅಲಿ ಎನ್ನುವ ರಿಕ್ಷಾ ಚಾಲಕ ತನ್ನ ಇಚ್ಚಾಶಕ್ತಿಯ ಬಲದಿಂದ ಬಡಮಕ್ಕಳಿಗಾಗಿ 9 ಶಾಲೆಗಳನ್ನು ತೆರೆದಿದ್ದಾರೆ ಎನ್ನುವ ವಿಷಯ ನಿಮ್ಮ ಪತ್ರದ ಮೂಲಕ ಓದಲು ಸಿಕ್ಕಿದಾಗ ಈ ದೇಶದ ಅದಮ್ಯ ಇಚ್ಚಾಶಕ್ತಿಯ ದರ್ಶನ ನನಗೆ ಆಗುತ್ತದೆ. ಕಾನ್ಪುರದ ಡಾಕ್ಟರ್ ಅಜಿತ್ ಮೋಹನ್ ಚೌಧರಿಯವರು ಸ್ವತಃ ಹೋಗಿ ಪಾದಚಾರಿ ಮಾರ್ಗಗಳಲ್ಲಿ ಇರುವ ಬಡವರನ್ನು ನೋಡಿ ಅವರಿಗೆ ಉಚಿತವಾಗಿ ಔಷಧಿಯನ್ನು ಕೊಡುತ್ತಾರೆ ಎನ್ನುವ ಸಂಗತಿಯನ್ನು ಕೇಳಿದಾಗ ಈ ದೇಶದಲ್ಲಿ ಇರುವ ಬಂಧುತ್ವದ ಸವಿಯನ್ನು ಅನುಭವಿಸುವ ಅವಕಾಶ ಸಿಗುತ್ತದೆ. 13 ವರ್ಷಗಳ ಹಿಂದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಕಾರಣಕ್ಕೆ ಕೊಲ್ಕತ್ತಾದ ಕ್ಯಾಬ್ ಚಾಲಕ ಸೈದುಲ್ ಲಸ್ಕರ್ ನ ಸೋದರಿಯ ಸಾವು ಸಂಭವಿಸಿತು. ಚಿಕಿತ್ಸೆ ದೊರೆಯದ ಕಾರಣದಿಂದ ಬಡವರ ಸಾವು ಸಂಭವಿಸಬಾರದು ಎನ್ನುವ ಕಾರಣದಿಂದ ಅವನು ಆಸ್ಪತ್ರೆಯನ್ನು ಕಟ್ಟಿಸುವ ಧೃಢ ನಿರ್ಧಾರ ತೆಗೆದುಕೊಂಡ. ಸೈದುಲ್ ತನ್ನ ಈ ಗುರಿ ಸಾಧಿಸುವ ಪ್ರಯತ್ನದಲ್ಲಿ ಮನೆಯ ಒಡವೆಗಳನ್ನು ಮಾರಿದ, ದಾನದ ರೂಪದಲ್ಲಿ ಹಣ ಸಂಗ್ರಹಣೆ ಮಾಡಿದ. ಅವನ ಕ್ಯಾಬ್ ನಲ್ಲಿ ಪ್ರಯಾಣಿಸುವ ಎಷ್ಟೋ ಪ್ರಯಾಣಿಕರು ಉದಾರ ಹೃದಯದಿಂದ ದಾನ ಮಾಡಿದರು. ಒಬ್ಬಳು ಇಂಜಿನಿಯರ್ ಅಂತೂ ತನ್ನ ಮೊದಲ ಸಂಬಳವನ್ನೇ ನೀಡಿದಳು. ಈ ರೀತಿ ಧನ ಸಂಗ್ರಹಣೆ ಮಾಡಿ ಛಲವಾದಿ ಸೈದುಲ್ ಲಸ್ಕರ್ ತನ್ನ ಭಗೀರಥ ಪ್ರಯತ್ನ ಮುಂದುವರೆಸಿದ. 12 ವರ್ಷ ಪಟ್ಟ ನಿರಂತರ ಕಠಿಣ ಪರಿಶ್ರಮದ ಫಲವಾಗಿ, ಅವನ ಸಂಕಲ್ಪದ ಕಾರಣದಿಂದಾಗಿ ಇಂದು ಕೋಲ್ಕತ್ತಾದ ಹತ್ತಿರ ಪುನರಿ ಗ್ರಾಮದಲ್ಲಿ ಸುಮಾರು 30 ಹಾಸಿಗೆಗಳ ಸಾಮರ್ಥ್ಯವುಳ್ಳ ಆಸ್ಪತ್ರೆಯು ಸಿದ್ಧವಾಗಿದೆ. ಇದು ನವ ಭಾರತದ ಶಕ್ತಿ. ಉತ್ತರಪ್ರದೇಶದ ಒಬ್ಬ ಮಹಿಳೆ ಅನೇಕ ಸಂಘರ್ಷಗಳ ಹೊರತಾಗಿಯೂ 125 ಶೌಚಾಲಯಗಳನ್ನು ನಿರ್ಮಿಸಿ, ಮಹಿಳೆಯರಿಗೆ ಅವರ ಹಕ್ಕುಗಳಿಗಾಗಿ ಪ್ರೇರಣೆ ನೀಡುತ್ತಾಳೆ ಎಂದಾದಾಗ ಮಾತೃ ಶಕ್ತಿಯ ದರ್ಶನವಾಗುತ್ತದೆ. ಇಂತಹ ಅನೇಕ ಪ್ರೇರಣಾ-ಪುಂಜಗಳು ನನ್ನ ದೇಶದ ಪರಿಚಯ ಮಾಡಿಕೊಡುತ್ತದೆ. ಇಂದು ಇಡೀ ವಿಶ್ವದಲ್ಲೇ ಭಾರತವನ್ನು ನೋಡುವ ದೃಷ್ಟಿ ಬದಲಾಗಿದೆ. ಇಂದು ಭಾರತದ ಹೆಸರನ್ನು ಬಹಳ ಗೌರವದಿಂದ ಹೇಳುತ್ತಾರೆಂದರೆ ಅದರ ಹಿಂದೆ ತಾಯಿ ಭಾರತಿಯ ಇಂತಹ ಪುತ್ರ-ಪುತ್ರಿಯರ ಪರಿಶ್ರಮ ಅಡಗಿದೆ. ಇಂದು ದೇಶದೆಲ್ಲೆಡೆ ಯುವಕರಲ್ಲಿ, ಮಹಿಳೆಯರಲ್ಲಿ, ಹಿಂದುಳಿದವರಲ್ಲಿ, ಬಡವರಲ್ಲಿ, ಮಧ್ಯಮ ವರ್ಗದವರಲ್ಲಿ, ಪ್ರತಿಯೊಂದು ವರ್ಗಗಳಲ್ಲಿಯೂ ಕೂಡ ‘ಹೌದು, ನಾವು ಮುಂದುವರೆಯಬಹುದು, ನಮ್ಮ ದೇಶ ಮುಂದುವರೆಯುತ್ತದೆ‘ ಎನ್ನುವ ಭರವಸೆ ಮೂಡಿದೆ. ಆಸೆ-ನಿರೀಕ್ಷೆಗಳು ತುಂಬಿದ, ಆತ್ಮವಿಶ್ವಾಸದ ಒಂದು ಧನಾತ್ಮಕ ವಾತಾವರಣ ಸೃಷ್ಟಿಯಾಗಿದೆ. ಇದೇ ಆತ್ಮವಿಶ್ವಾಸ, ಇದೇ ಧನಾತ್ಮಕತೆ, ನವ ಭಾರತದ ನಮ್ಮ ಸಂಕಲ್ಪವನ್ನು ಸಾಕಾರಗೊಳಿಸುತ್ತದೆ, ಕನಸನ್ನು ನನಸಾಗಿಸುತ್ತದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಮುಂಬರುವ ಕೆಲವು ತಿಂಗಳುಗಳು ರೈತ ಸೋದರ ಸೋದರಿಯರಿಗೆ ಬಹಳ ಮುಖ್ಯವಾದವುಗಳು. ಆದ್ದರಿಂದ, ಬಹಳಷ್ಟು ಪತ್ರಗಳು ಕೃಷಿಯ ವಿಚಾರವಾಗಿ ಬಂದಿವೆ. ಈ ಬಾರಿ ದೂರದರ್ಶನದ DD Kisan Channel ನಲ್ಲಿ ರೈತರ ಜೊತೆಯಲ್ಲಿ ನಡೆಯುವ ಚರ್ಚೆಗಳ ವೀಡಿಯೊಗಳನ್ನು ತರಿಸಿಕೊಂಡು ನೋಡಿದೆ. ಪ್ರತಿಯೊಬ್ಬ ರೈತರೂ ದೂರದರ್ಶನದ ಈ ಆಆ ಏisಚಿಟಿ ಅhಚಿಟಿಟಿeಟ ನ ಜೊತೆಗೆ ಬೆಸೆದುಕೊಳ್ಳಬೇಕು, ಅದನ್ನು ನೋಡಬೇಕು ಮತ್ತು ಆ ಪ್ರಯೋಗಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ನನಗೆ ಅನಿಸುತ್ತಿದೆ. ಮಹಾತ್ಮ ಗಾಂಧಿಯವರಿಂದ ಹಿಡಿದು ಲಾಲ್ ಬಹದ್ದೂರ್ ಶಾಸ್ತ್ರೀಜಿ, ರಾಮ್ ಮನೋಹರ್ ಲೋಹಿಯಾ, ಚೌಧರಿ ಚರಣ್ ಸಿಂಗ್, ಚೌಧರಿ ದೇವಿಲಾಲ್ ಯಾರೇ ಅಗಲಿ- ಇವರೆಲ್ಲರೂ ಕೃಷಿ ಮತ್ತು ಕೃಷಿಕರನ್ನು ದೇಶದ ಅರ್ಥವ್ಯವಸ್ಥೆಯ ಮತ್ತು ಸಾಮಾನ್ಯ ಜನ ಜೀವನದ ಒಂದು ಮುಖ್ಯವಾದ ಭಾಗ ಎಂದು ತಿಳಿದಿದ್ದರು. ಮಣ್ಣು, ಕೃಷಿ ಭೂಮಿ ಮತ್ತು ರೈತರ ಬಗ್ಗೆ ಮಹಾತ್ಮಾ ಗಾಂಧಿಯವರಿಗೆ ಎಂತಹ ನಂಟು ಇತ್ತು ಎಂಬುದು ಅವರ ಈ ಪಂಕ್ತಿಯಲ್ಲಿ ಇಣುಕುತ್ತದೆ. ‘To forget how to dig the earth and to tend the soil, is to forget ourselves.’ ಎಂದು ಅವರು ಹೇಳಿದ್ದರು. 

ಅಂದರೆ, ‘ಭೂಮಿಯನ್ನು ಅಗೆದು ಮಣ್ಣನ್ನು ಹದ ಮಾಡುವುದನ್ನು ನಾವು ಮರೆತರೆ ನಮ್ಮನ್ನು ನಾವು ಮರೆತಂತೆ’ ಎಂದು. ಇದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಗಿಡ, ಮರ ಮತ್ತು ಔಷಧೀಯ ಸಸ್ಯಗಳ ಸಂರಕ್ಷಣೆ ಮತ್ತು ಉತ್ತಮ ಕೃಷಿ ಪದ್ಧತಿಗಳ ಅವಶ್ಯಕತೆಗಳ ಬಗ್ಗೆ ಯಾವಾಗಲೂ ಹೆಚ್ಚು ಒತ್ತಿ ಹೇಳುತ್ತಿದ್ದರು. ಡಾಕ್ಟರ್ ರಾಮ ಮನೋಹರ್ ಲೋಹಿಯಾರವರಂತೂ ನಮ್ಮ ಕೃಷಿಕರಿಗಾಗಿ ಉತ್ತಮ ಆದಾಯ, ಉತ್ತಮ ನೀರಾವರಿ ಸೌಲಭ್ಯಗಳು ಇವುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಆಹಾರ ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜನಜಾಗೃತಿಯ ಮಾತನ್ನು ಹೇಳಿದ್ದರು. 1979 ರಲ್ಲಿ ಚೌಧರಿ ಚರಣ್ ಸಿಂಗ್ ರವರು ತಮ್ಮ ಭಾಷಣದಲ್ಲಿ ಹೊಸ ತಾಂತ್ರಿಕತೆಯ ಉಪಯೋಗವನ್ನು ಮಾಡಲು, ಹೊಸ ಅವಿಷ್ಕಾರಗಳನ್ನು ಮಾಡಲು ರೈತರಲ್ಲಿ ಮನವಿ ಮಾಡಿದ್ದರು ಮತ್ತು ಇದರ ಅವಶ್ಯಕತೆಯ ಬಗ್ಗೆ ಒತ್ತು ಕೊಟ್ಟಿದ್ದರು. ನಾನು ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಆಯೋಜಿಸಲಾದ ಕೃಷಿ ಉನ್ನತಿ ಮೇಳಕ್ಕೆ ಹೋಗಿದ್ದೆ. ಅಲ್ಲಿ ಕೃಷಿಕ ಸೋದರ ಸೋದರಿಯರು ಮತ್ತು ವಿಜ್ಞಾನಿಗಳ ಜೊತೆ ನನ್ನ ಮಾತುಕತೆ, ಕೃಷಿಗೆ ಸಂಬಂಧಿಸಿದ ಅನೇಕ ಅನುಭವಗಳನ್ನು ತಿಳಿದುಕೊಳ್ಳುವುದು, ಅರ್ಥ ಮಾಡಿಕೊಳ್ಳುವುದು, ಕೃಷಿಗೆ ಸಂಬಂಧಿಸಿದ ಆವಿಷ್ಕಾರಗಳ ಬಗ್ಗೆ ತಿಳಿದುಕೊಳ್ಳುವುದು – ಇವೆಲ್ಲವೂ ನನಗೆ ಒಂದು ಆಹ್ಲಾದಕರವಾದ ಅನುಭವವಾಗಿತ್ತು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನನ್ನನ್ನು ಪ್ರಭಾವಿತಗೊಳಿಸಿದ ವಿಷಯವೆಂದರೆ ಮೇಘಾಲಯ ಮತ್ತು ಅಲ್ಲಿನ ರೈತರ ಕಠಿಣ ಪರಿಶ್ರಮ. ಕಡಿಮೆ ಪ್ರದೇಶವಿರುವ ಈ ರಾಜ್ಯವು ಬಹು ದೊಡ್ಡ ಕೆಲಸ ಮಾಡಿ ತೋರಿಸಿದೆ. ಮೇಘಾಲಯದ ನಮ್ಮ ಕೃಷಿಕರು 2015 – 16 ನೇ ವರ್ಷದಲ್ಲಿ ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ಒಂದು ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಗುರಿ ನಿರ್ಧಾರಿತವಾಗಿದ್ದರೆ, ಧೈರ್ಯವಿದ್ದರೆ, ಮನದಲ್ಲಿ ಮಾಡಿದ ಸಂಕಲ್ಪವನ್ನು ಸಾಧಿಸಬಹುದು, ಸಾಧಿಸಿ ತೋರಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇಂದು ಕೃಷಿಕರ ಪರಿಶ್ರಮಕ್ಕೆ ತಾಂತ್ರಿಕತೆಯ ನೆರವು ಸಿಗುತ್ತಿದೆ, ಇದರಿಂದ ಕೃಷಿ-ಉತ್ಪಾದಕರಿಗೆ ಬಹಳಷ್ಟು ಬಲ ಬಂದಂತಾಗಿದೆ. ನನ್ನ ಬಳಿ ಬಂದಿರುವ ಪತ್ರಗಳನ್ನು ನೋಡುತ್ತಿದ್ದಾಗ, ಬಹಳಷ್ಟು ಜನ ರೈತರು MSP (Minimum Support price)) ನ ಬಗ್ಗೆ ಬರೆದಿದ್ದಾರೆ ಮತ್ತು ನಾನು ಇದರ ಬಗ್ಗೆ ಅವರೊಂದಿಗೆ ವಿವರವಾಗಿ ಮಾತನಾಡಬೇಕು ಎಂದು ಬಯಸುತ್ತಿದ್ದಾರೆ. 

ಸೋದರ ಸೋದರಿಯರೇ, ಈ ವರ್ಷದ ಬಜೆಟ್ ನಲ್ಲಿ ರೈತರಿಗೆ ತಮ್ಮ ಫಸಲಿಗೆ ನ್ಯಾಯೋಚಿತವಾದ ಬೆಲೆಯನ್ನು ಕೊಡಿಸಲು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸೂಚಿಸಲಾದ ಫಸಲುಗಳಿಗೆ ಒSP ಯು ಅದಕ್ಕೆ ತಗುಲಿದ ವೆಚ್ಚದ ಕನಿಷ್ಠ ಒಂದೂವರೆ ಪಟ್ಟು ಎಂದು ಘೋಸಿಸಬೇಕು ಎಂದು ನಿರ್ಧರಿಸಲಾಗಿದೆ. ಇದನ್ನು ನಾನು ವಿವರವಾಗಿ ಹೇಳಬೇಕೆಂದರೆ, ಒSP ಯಲ್ಲಿ ಬೇರೆ ಕಾರ್ಮಿಕರು ಪಡುವ ಪರಿಶ್ರಮಕ್ಕೆ ಕೊಡುವ ಕೂಲಿ, ನಿಮ್ಮ ಜಾನುವಾರು, ಯಂತ್ರಗಳು ಅಥವಾ ಬಾಡಿಗೆಗೆ ತಂದಿರುವ ಜಾನುವಾರು ಮತ್ತು ಯಂತ್ರಗಳ ಖರ್ಚು, ಬೀಜದ ಮೌಲ್ಯ, ಉಪಯೋಗಿಸಿರುವ ಎಲ್ಲಾ ರೀತಿಯ ಗೊಬ್ಬರಗಳ ಮೌಲ್ಯ, ನೀರಾವರಿಯ ಖರ್ಚು, ರಾಜ್ಯ ಸರ್ಕಾರಗಳಿಗೆ ಕೊಟ್ಟಿರುವ ಕಂದಾಯ, ಮೂಲಧನದ ಮೇಲೆ ಕೊಟ್ಟಿರುವ ಬಡ್ಡಿ, ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದರೆ ಅದರ ಬಾಡಿಗೆ ಮತ್ತು ಇದಲ್ಲದೆ ಸ್ವತಃ ರೈತರು ಮಾಡುವ ಕೆಲಸ ಅಥವಾ ಅವನ ಪರಿವಾರದಲ್ಲಿ ಯಾರೇ ಕೃಷಿ ಕಾರ್ಯದಲ್ಲಿ ಶ್ರಮದಾನ ಮಾಡಿದರೆ ಅದರ ಕೂಲಿಯನ್ನು ಸಹ ಉತ್ಪಾದನಾ ವೆಚ್ಚಕ್ಕೆ ಸೇರಿಸಲಾಗುತ್ತದೆ. ಇದರ ಜೊತೆಗೆ, ರೈತರ ಬೆಳೆಗೆ ನ್ಯಾಯೋಚಿತವಾದ ಬೆಲೆ ಸಿಗಬೇಕು ಎನ್ನುವ ದೃಷ್ಟಿಯಿಂದ Agriculture Marketing Reform ನ ಬಗ್ಗೆಯೂ ದೇಶದಲ್ಲಿ ಬಹಳ ವ್ಯಾಪಕವಾಗಿ ಕೆಲಸಗಳು ನಡೆಯುತ್ತಿವೆ. ಗ್ರಾಮಗಳ ಸ್ಥಳೀಯ ಮಂಡಿಗಳನ್ನು ಸಗಟು ಮಾರುಕಟ್ಟೆ ಮತ್ತು ಜಾಗತಿಕ ಮಾರುಕಟ್ಟೆಗಳ ಜೊತೆಗೆ ಸೇರಿಸುವ ಪ್ರಯತ್ನಗಳು ಸಹ ಆಗುತ್ತಿದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬಹಳಷ್ಟು ದೂರ ಹೋಗುವುದನ್ನು ತಪ್ಪಿಸಲು ದೇಶದ 22 ಸಾವಿರ ಗ್ರಾಮೀಣ ಮಾರುಕಟ್ಟೆಗಳನ್ನು ಅಗತ್ಯ ಮೂಲಸೌಕರ್ಯಗಳೊಂದಿಗೆ ಮೇಲ್ದರ್ಜೆಗೇರಿಸಿ APMC ಮತ್ತು e-NAM platform ಗಳೊಂದಿಗೆ ಸೇರಿಸಲಾಗುತ್ತದೆ. ಅಂದರೆ ಒಂದು ರೀತಿಯಲ್ಲಿ ‘ಕೃಷಿ ಭೂಮಿಯಿಂದ ದೇಶದ ಯಾವುದೇ ಮಾರುಕಟ್ಟೆಯ ಜೊತೆ ಸಂಪರ್ಕ’ – ಇಂತಹ ವ್ಯವಸ್ಥೆ ಮಾಡಲಾಗುತ್ತಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಈ ವರ್ಷ ಮಹಾತ್ಮಾ ಗಾಂಧಿಯವರ 150 ನೇ ಜಯಂತಿಯ ವರ್ಷಾಚರಣೆಯ ಆರಂಭವಾಗುತ್ತದೆ. ಇದು ಒಂದು ಐತಿಹಾಸಿಕ ಸಂದರ್ಭ. ದೇಶ ಹೇಗೆ ಈ ಉತ್ಸವವನ್ನು ಆಚರಿಸಬೇಕು? ಸ್ವಚ್ಚ ಭಾರತವಂತೂ ನಮ್ಮ ಸಂಕಲ್ಪವಾಗಿಯೇ ಇದೆ. ಇದಲ್ಲದೆ 125 ಕೋಟಿ ದೇಶವಾಸಿಗಳು ಭುಜಕ್ಕೆ ಭುಜ ಕೊಟ್ಟು ಗಾಂಧೀಜಿಯವರಿಗೆ ಹೇಗೆ ಅತ್ಯುತ್ತಮವಾದ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಬೇಕು? ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಬಹುದೇ? ಹೊಸ ಹೊಸ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಬಹುದೇ? ಒಥಿಉov ಮಾಧ್ಯಮದ ಮೂಲಕ ಈ ವಿಷಯದ ಬಗ್ಗೆ ನಿಮ್ಮ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಎಂಬುದು ನಿಮ್ಮಲ್ಲಿ ನನ್ನ ವಿನಂತಿಯಾಗಿದೆ. ‘ಗಾಂಧಿ 150’ ಇದರ ಲೋಗೋ ಏನಾಗಿರಬೇಕು? ಸ್ಲೋಗನ್ ಅಥವಾ ಮಂತ್ರ ಅಥವಾ ಘೋಷ ವಾಕ್ಯ ಏನಾಗಿರಬೇಕು? ಇದರ ಬಗ್ಗೆ ನೀವು ನಿಮ್ಮ ಸಲಹೆ ನೀಡಿ. ನಾವೆಲ್ಲರೂ ಸೇರಿ ಬಾಪೂರವರಿಗೆ ನೆನಪಿನಲ್ಲಿ ಉಳಿಯುವಂತಹ ಒಂದು ಶ್ರದ್ಧಾಂಜಲಿ ಸಲ್ಲಿಸಬೇಕಾಗಿದೆ ಮತ್ತು ಬಾಪೂರವರನ್ನು ಸ್ಮರಿಸಿಕೊಂಡು, ಅವರಿಂದ ಪ್ರೇರಣೆ ಪಡೆದುಕೊಂಡು ನಮ್ಮ ದೇಶವನ್ನು ಹೊಸ ಎತ್ತರಕ್ಕೆ ತಲುಪಿಸಬೇಕಾಗಿದೆ. 

### (ಫೋನ್) “ಆದರಣೀಯ ಪ್ರಧಾನಮಂತ್ರಿಗಳೇ, ನಮಸ್ಕಾರ.... ನಾನು ಪ್ರೀತಿ ಚತುರ್ವೇದಿ, ಗುರುಗ್ರಾಮದಿಂದ ಮಾತನಾಡುತ್ತಿದ್ದೇನೆ... ಪ್ರಧಾನಮಂತ್ರಿಗಳೇ, ಹೇಗೆ ನೀವು ‘ಸ್ವಚ್ಚ-ಭಾರತ’ ಅಭಿಯಾನವನ್ನು ಒಂದು ಸಫಲಪೂರ್ಣ ಅಭಿಯಾನವನ್ನಾಗಿ ಮಾಡಿದ್ದೀರೋ, ಹಾಗೆಯೇ ಈಗ ‘ಸ್ವಸ್ಥ ಭಾರತ’ ಅಭಿಯಾನವನ್ನು ಅದೇ ರೀತಿ ಸಫಲಗೊಳಿಸುವ ಕಾಲವು ಬಂದಿದೆ... ಈ ಅಭಿಯಾನಕ್ಕೆ ನೀವು ಜನರನ್ನು, ಸರ್ಕಾರವನ್ನು, ಸಂಸ್ಥೆಗಳನ್ನು ಯಾವ ರೀತಿ ಸಜ್ಜುಗೊಳಿಸುತ್ತಿದ್ದೀರಿ, ಇದರ ಬಗ್ಗೆ ನಮಗೆ ಸ್ವಲ್ಪ ಹೇಳಿ.. ಧನ್ಯವಾದಗಳು...” 

ಧನ್ಯವಾದಗಳು. ನೀವು ಸರಿಯಾಗಿ ಹೇಳಿದ್ದೀರಿ; ಸ್ವಚ್ಚ ಭಾರತ ಮತ್ತು ಸ್ವಸ್ಥ ಭಾರತ ಎರಡೂ ಒಂದಕ್ಕೊಂದು ಪೂರಕವಾಗಿವೆ ಎಂದು ನಾನು ಒಪ್ಪಿಕೊಳ್ಳುತ್ತೇನೆ, ಆರೋಗ್ಯದ ಕ್ಷೇತ್ರದಲ್ಲಿ ಇಂದು ದೇಶ conventional approach ನೊಂದಿಗೆ ಮುಂದೆ ಹೋಗಿದೆ. ದೇಶದಲ್ಲಿ ಆರೋಗ್ಯದ ಜೊತೆ ಬೆಸೆದುಕೊಂಡಿರುವ ಯಾವ ಕೆಲಸಗಳು ಈ ಮೊದಲು ಬರೀ ಅರೋಗ್ಯ ಸಚಿವಾಲಯದ ಜವಾಬ್ದಾರಿಯಾಗಿತ್ತೋ, ಅದು ಈಗ ಎಲ್ಲಾ ವಿಭಾಗಗಳು ಹಾಗೂ ಸಚಿವಾಲಯಗಳು – ಅದು ಸ್ವಚ್ಚತಾ ಸಚಿವಾಲಯವಾಗಿರಲಿ, ಆಯುಷ್ ಸಚಿವಾಲಯವಾಗಿರಲಿ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವಾಗಿರಲಿ, ಗ್ರಾಹಕ ಸಚಿವಾಲಯವಾಗಿರಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವಾಗಿರಲಿ ಅಥವಾ ರಾಜ್ಯ ಸರ್ಕಾರಗಳಾಗಿರಲಿ, ಇವೆಲ್ಲವುಗಳ ಜವಾಬ್ದಾರಿಯಾಗಿದೆ. ಇವುಗಳೆಲ್ಲ ಒಟ್ಟಿಗೆ ಸೇರಿ ಸ್ವಸ್ಥ-ಭಾರತಕ್ಕಾಗಿ ಕೆಲಸ ಮಾಡುತ್ತಿವೆ ಮತ್ತು preventive health ನ ಜೊತೆಜೊತೆಗೆ affordable health ನ ಬಗ್ಗೆ ಒತ್ತು ನೀಡಲಾಗುತ್ತಿದೆ. preventive health-care ಎಲ್ಲಕ್ಕಿಂತ ಅಗ್ಗವಾಗಿದೆ ಹಾಗೂ ಎಲ್ಲಕ್ಕಿಂತ ಸುಲಭವಾಗಿಯೂ ಇದೆ. preventive health-care ನ ಬಗ್ಗೆ ನಾವು ಎಷ್ಟು ಜಾಗರೂಕರಾಗಿರುತ್ತೇವೆಯೋ ಅದರಿಂದ ಅಷ್ಟೇ ಲಾಭ ವ್ಯಕ್ತಿಗೆ, ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕೂಡ ಇದೆ. ಜೀವನ ಆರೋಗ್ಯಪೂರ್ಣವಾಗಿರಬೇಕಾದರೆ ಇರಬೇಕಾದ ಮೊದಲ ಅವಶ್ಯಕತೆ ಎಂದರೆ ಅದು ಸ್ವಚ್ಚತೆ. ನಾವೆಲ್ಲರೂ ಒಂದೇ ದೇಶ ಎನ್ನುವ ಪರಿಕಲ್ಪನೆಯಲ್ಲಿ ಮುಷ್ಠಿ ಎತ್ತಿದ್ದೆವು, ಅದರ ಪರಿಣಾಮ – ಕಳೆದ ಸುಮಾರು 4 ವರ್ಷಗಳಲ್ಲಿ sanitation coverage ಎರಡರಷ್ಟಾಗಿ ಶೇಕಡಾ 80 ರ ಆಸುಪಾಸಿನಷ್ಟು ಆಗಿದೆ. ಇದಲ್ಲದೆ ದೇಶದೆಲ್ಲೆಡೆ ಆರೋಗ್ಯ ಸ್ವಾಸ್ಥ್ಯ ಕೇಂದ್ರಗಳನ್ನು (Health Wellness Centres) ತೆರೆಯುವ ದಿಕ್ಕಿನಲ್ಲಿ ಬಹಳ ತ್ವರಿತವಾಗಿ ಕೆಲಸ ನಡೆಯುತ್ತಿದೆ. Preventive health-care ನ ರೂಪದಲ್ಲಿ ಯೋಗವು ಹೊಸ ರೀತಿಯಲ್ಲಿ ಜಗತ್ತಿನ ತುಂಬಾ ತನ್ನ ಹೆಗ್ಗುರುತನ್ನು ಮೂಡಿಸಿದೆ. ಯೋಗ, ftness ಮತ್ತು wellness ಇವೆರಡಕ್ಕೂ ಭರವಸೆ ನೀಡುತ್ತದೆ. ಯೋಗವು ಇಂದು ಒಂದು mass movement ಆಗಿ, ಮನೆ ಮನೆಯನ್ನು ತಲುಪಿರುವುದು ನಮ್ಮೆಲ್ಲರ ಬದ್ಧತೆಯ ಪರಿಣಾಮವಾಗಿದೆ. ಈ ವರ್ಷದ ಅಂತರ್ರಾಷ್ಟ್ರೀಯ ಯೋಗ ದಿವಸವಾದ ಜೂನ್ 21 ಕ್ಕೆ 100 ದಿನಗಳಿಗೂ ಕಡಿಮೆ ದಿನಗಳು ಉಳಿದಿವೆ. ಹಿಂದಿನ ಮೂರು ಅಂತರ್ರಾಷ್ಟ್ರೀಯ ಯೋಗ ದಿನಗಳಲ್ಲಿ ದೇಶ ಮತ್ತು ಜಗತ್ತಿನ ಪ್ರತಿಯೊಂದು ಜಾಗದಲ್ಲಿಯೂ ಜನರು ಸಾಕಷ್ಟು ಉತ್ಸಾಹದಿಂದ ಇದರಲ್ಲಿ ಭಾಗವಹಿಸಿದ್ದರು. ಈ ಬಾರಿಯೂ ಸಹ ನಾವು ಸ್ವತಃ ಯೋಗ ಮಾಡುತ್ತೇವೆ ಎಂದು ನಿಶ್ಚಯಸಿಕೊಳ್ಳಬೇಕು ಮತ್ತು ಕುಟುಂಬದ ಸದಸ್ಯರು, ಸ್ನೇಹಿತರು ಎಲ್ಲರನ್ನೂ ಯೋಗ ಮಾಡಲು ಇಂದಿನಿಂದಲೇ ಪ್ರೇರೇಪಣೆಗೊಳಿಸಬೇಕು. ಆಸಕ್ತಿದಾಯಕ ರೀತಿಯಲ್ಲಿ ಯೋಗವನ್ನು ಮಕ್ಕಳಲ್ಲಿ, ಯುವಕರಲ್ಲಿ, ಹಿರಿಯ ನಾಗರೀಕರಲ್ಲಿ – ಎಲ್ಲಾ ವಯಸ್ಸಿನವರಲ್ಲಿ, ಪುರುಷರಾಗಿರಲಿ, ಮಹಿಳೆಯಾಗಿರಲಿ ಎಲ್ಲರಲ್ಲೂ ಜನಪ್ರಿಯಗೊಳಿಸಬೇಕಾಗಿದೆ. ಹಾಗೆಯೇ ದೇಶದ ಖಿಗಿ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ವರ್ಷಪೂರ್ತಿ ಯೋಗಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತವೆ. ಆದರೆ ಇಂದಿನಿಂದ ಪ್ರಾರಂಭಿಸಿ ಯೋಗ ದಿನದವರೆಗೆ ಒಂದು ಅಭಿಯಾನದ ರೂಪದಲ್ಲಿ ಯೋಗದ ವಿಷಯದಲ್ಲಿ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗುತ್ತದೆಯೇ? 

ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಯೋಗ ಶಿಕ್ಷಕನಲ್ಲ. ಆದರೆ ನಾನು ಯೋಗಾಭ್ಯಾಸ ಮಾಡುತ್ತೇನೆ. ಆದರೆ ಕೆಲವು ಜನರು ತಮ್ಮ ಸೃಜನಶೀಲತೆಯ ಮೂಲಕ ನನ್ನನ್ನು ಯೋಗ ಶಿಕ್ಷಕನನ್ನಾಗಿ ಸಹ ಮಾಡಿದ್ದಾರೆ ಮತ್ತು ನಾನು ಯೋಗ ಮಾಡುತ್ತಿರುವಂತೆ 3ಆ ಅನಿಮೇಟೆಡ್ ವೀಡಿಯೊ ಗಳನ್ನೂ ಸಹ ಮಾಡಿದ್ದಾರೆ. ನಾನು ನಿಮ್ಮೆಲ್ಲರೊಂದಿಗೆ ಈ ವೀಡಿಯೊ ಹಂಚಿಕೊಳ್ಳುತ್ತೇನೆ, ಅದರಿಂದ ನಾವು ಜೊತೆಜೊತೆಯಾಗಿ ಆಸನ, ಪ್ರಾಣಾಯಾಮ ಇವುಗಳ ಅಭ್ಯಾಸ ಮಾಡಬಹುದು. ಅರೋಗ್ಯ ರಕ್ಷಣೆ accessible ಮತ್ತು affordable ಇದ್ದು ಜನ ಸಾಮಾನ್ಯರಿಗೆ ಅಗ್ಗವಾಗಿ ಮತ್ತು ಸುಲಭವಾಗಿರಲಿ ಎನ್ನುವುದರ ಸಲುವಾಗಿ ಕೂಡ ತ್ವರಿತವಾಗಿ ವಿವಿಧ ಹಂತಗಳಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇಂದು ದೇಶದೆಲ್ಲೆಡೆ 3 ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಅವುಗಳಲ್ಲಿ 800 ಕ್ಕೂ ಅಧಿಕ ಔಷಧಿಗಳು ಕಡಿಮೆ ದರದಲ್ಲಿ ಸಿಗುವಂತೆ ಮಾಡಲಾಗುತ್ತಿದೆ. ಇನ್ನಷ್ಟು ಹೊಸ ಕೇಂದ್ರಗಳನ್ನೂ ಸಹ ತೆರೆಯಲಾಗುತ್ತಿದೆ. ಮನದ ಮಾತು ಕಾರ್ಯಕ್ರಮದ ಶ್ರೋತೃಗಳಲ್ಲಿ ನನ್ನ ಮನವಿ ಏನೆಂದರೆ: ಅವಶ್ಯಕತೆ ಇರುವವರಿಗೆ ಈ ಜನೌಷಧಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡಿ, ಇದರಿಂದ ಅವರ ಔಷಧಿಯ ಖರ್ಚು ಬಹಳಷ್ಟು ಕಡಿಮೆಯಾಗುತ್ತದೆ. ಅವರಿಗೆ ಬಹಳಷ್ಟು ಉಪಕಾರವಾಗುತ್ತದೆ. ಹೃದ್ರೋಗಿಗಳಿಗಾಗಿ ಹಾರ್ಟ್ ಸ್ಟೆಂಟ್ ನ ಬೆಲೆಯನ್ನು ಶೇಕಡಾ 85 ರಷ್ಟು ಕಡಿಮೆಗೊಳಿಸಲಾಗಿದೆ. ಮಂಡಿ ಚಿಪ್ಪಿನ ಬದಲಾವಣೆಯ ಶಸ್ತ್ರಚಿಕಿತ್ಸೆಯ ವೆಚ್ಚವನ್ನೂ ಸಹ ನಿಯಂತ್ರಣಗೊಳಿಸಿ ಶೇಕಡಾ 50 ರಿಂದ 70 ರಷ್ಟು ಕಡಿಮೆಗೊಳಿಸಲಾಗಿದೆ. ‘ಆಯುಷ್ಮಾನ್ ಭಾರತ ಯೋಜನೆ’ ಇದರ ಅಂಗವಾಗಿ ಸುಮಾರು 10 ಕೋಟಿ ಕುಟುಂಬಗಳು ಅಂದರೆ ಸುಮಾರು 50 ಕೋಟಿ ನಾಗರೀಕರಿಗೆ, ಭಾರತ ಸರ್ಕಾರ ಮತ್ತು ವಿಮಾ ಕಂಪನಿಗಳು ಸೇರಿ ಒಂದು ವರ್ಷದಲ್ಲಿ 5 ಲಕ್ಷದಷ್ಟು ಚಿಕಿತ್ಸಾ ವೆಚ್ಚವನ್ನು ಕೊಡುತ್ತವೆ. ದೇಶದಲ್ಲಿರುವ 479 ವೈದ್ಯಕೀಯ ಕಾಲೇಜುಗಳಲ್ಲಿ MBBS ಸೀಟುಗಳ 

ಸಂಖ್ಯೆಯನ್ನು ಹೆಚ್ಚಿಸಿ ಸುಮಾರು 68 ಸಾವಿರದಷ್ಟು ಮಾಡಲಾಗಿದೆ. ದೇಶದ ಎಲ್ಲ ಜನರಿಗೂ ಉತ್ತಮ ಚಿಕಿತ್ಸೆ ಮತ್ತು ಅರೋಗ್ಯ ಸೌಲಭ್ಯಗಳು ಸಿಗಲಿ ಎನ್ನುವ ಉದ್ದೇಶದಿಂದ ಬೇರೆ ಬೇರೆ ರಾಜ್ಯಗಳಲ್ಲಿ ಹೊಸ AIIMS ಗಳನ್ನು ತೆರೆಯಲಾಗುತ್ತಿದೆ. ಪ್ರತಿ 3 ಜಿಲ್ಲೆಗಳ ಮಧ್ಯದಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜು ತೆರೆಯಲಾಗುವುದು. ದೇಶವನ್ನು 2025 ರ ಹೊತ್ತಿಗೆ ಕ್ಷಯರೋಗ ಮುಕ್ತವನ್ನಾಗಿ ಮಾಡಲು ಗುರಿ ನಿಗದಿಪಡಿಸಲಾಗಿದೆ. ಇದು ಒಂದು ಬಹು ದೊಡ್ಡ ಕೆಲಸ. ಪ್ರತಿ ಜನರಿಗೂ ಈ ಜಾಗೃತಿಯನ್ನು ತಲುಪಿಸಲು ನಿಮ್ಮ ಸಹಾಯ ಬೇಕು. ಕ್ಷಯ ರೋಗದಿಂದ ಮುಕ್ತಿ ಪಡೆಯಲು ನಾವೆಲ್ಲರೂ ಒಟ್ಟಾಗಿ ಪ್ರಯತ್ನ ಮಾಡಬೇಕಾಗುತ್ತದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಏಪ್ರಿಲ್ 14 ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ಜಯಂತಿ. ಬಹಳ ವರ್ಷಗಳ ಹಿಂದೆಯೇ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತದ ಔದ್ಯೋಗೀಕರಣದ ಬಗ್ಗೆ ಮಾತನಾಡಿದ್ದರು. ಅವರ ಪ್ರಕಾರ ಉದ್ಯೋಗವು ಬಡವರಲ್ಲಿ ಬಡವನಾದ ವ್ಯಕ್ತಿಗೆ ಕೆಲಸ ದೊರೆಯುವಂತೆ ಮಾಡುವ ಒಂದು ಪ್ರಭಾವೀ ಮಾಧ್ಯಮವಾಗಿತ್ತು. ಇಂದು ದೇಶದಲ್ಲಿ Make in India ದ ಅಭಿಯಾನ ಸಫಲವಾಗಿ ನಡೆಯುತ್ತಿದೆಯೆಂದರೆ ಅದಕ್ಕೆ ಡಾ. ಅಂಬೇಡ್ಕರ್ ಅವರು ತಮ್ಮ ದೂರದೃಷ್ಟಿಯಿಂದ industrial super power ನ ರೂಪದಲ್ಲಿ ಕನಸು ಕಂಡ ಭಾರತ ಪ್ರೇರಣೆಯಾಗಿದೆ, ಇಂದು ಭಾರತವು ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದೆ ಮತ್ತು ಇಡೀ ವಿಶ್ವದಲ್ಲೇ ಎಲ್ಲಕ್ಕಿಂತ ಹೆಚ್ಚು ವಿದೇಶೀ ನೇರ ಹೂಡಿಕೆ (Foreign Direct Investment), FDI ಭಾರತಕ್ಕೆ ಬರುತ್ತಿದೆ. ಇಡೀ ವಿಶ್ವವು ಭಾರತವನ್ನು ಹೂಡಿಕೆ, ಅವಿಷ್ಕಾರ ಮತ್ತು ಅಭಿವೃದ್ಧಿ ಕೇಂದ್ರದ ರೂಪದಲ್ಲಿ ನೋಡುತ್ತಲಿದೆ. ಉದ್ಯೋಗಗಳ ಅಭಿವೃದ್ಧಿ ಪಟ್ಟಣಗಳಲ್ಲಿ ಮಾತ್ರ ಸಾಧ್ಯ ಎನ್ನುವ ಯೋಚನೆಯಿಂದಲೇ ಡಾ. ಅಂಬೇಡ್ಕರ್ ರವರು ಭಾರತದ ನಗರೀಕರಣವನ್ನು ನಂಬಿಕೊಂಡಿದ್ದರು. ಅವರ ಈ ದೂರದೃಷ್ಟಿಯನ್ನು ಮುಂದುವರೆಸಿ ದೇಶದ ದೊಡ್ಡ ನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಪ್ರತಿಯೊಂದು ರೀತಿಯ ಸೌಲಭ್ಯಗಳು – ಅದು ಒಳ್ಳೆಯ ರಸ್ತೆಯಾಗಲಿ, ನೀರಿನ ವ್ಯವಸ್ಥೆಯಾಗಲಿ, ಆರೋಗ್ಯ ಸೌಲಭ್ಯಗಳಾಗಲಿ, ಶಿಕ್ಷಣ ಅಥವಾ ಡಿಜಿಟಲ್ ಸಂಪರ್ಕವಾಗಲಿ, ಇವುಗಳನ್ನು ದೊರೆಯುವಂತೆ ಮಾಡುವುದಕ್ಕಾಗಿಯೇ ಇಂದು ದೇಶದಲ್ಲಿ smart cities mission ಮತ್ತು urban mission ಇವುಗಳನ್ನು ಪ್ರಾರಂಭಿಸಲಾಗಿದೆ. ಬಾಬಾ ಸಾಹೇಬ್ ಅವರಿಗೆ ತಮ್ಮ ಸ್ವಾವಲಂಬನೆ ಮತ್ತು ಸ್ವಯಂ ಪೂರ್ಣತೆ ಇವುಗಳಲ್ಲಿ ದೃಢ ವಿಶ್ವಾಸವಿತ್ತು. ಯಾವುದೇ ವ್ಯಕ್ತಿಯು ಯಾವಾಗಲೂ ಬಡತನದಲ್ಲಿ ತನ್ನ ಜೀವನವನ್ನು ನಡೆಸುವುದನ್ನು ಅವರು ಇಚ್ಚಿಸುತ್ತಿರಲಿಲ್ಲ. ಇದರ ಜೊತೆಗೆ ಬಡವರಿಗೆ ಬರೀ ಏನಾದರೊಂದು ಹಂಚಿಕೊಡುವುದರಿಂದ ಅವರ ಬಡತನ ದೂರವಾಗುವುದಿಲ್ಲ ಎಂದು ಕೂಡ ಅವರು ತಿಳಿದಿದ್ದರು. ಇಂದು ಮುದ್ರಾ ಯೋಜನೆ, Start Up India, Stand Up India initiatives ಗಳು ನಮ್ಮ ಯುವ ಅವಿಷ್ಕಾರಿಗಳನ್ನು, ಯುವ ಉದ್ಯಮಿಗಳನ್ನು ಹುಟ್ಟು ಹಾಕುತ್ತಿದೆ. 1930 ಮತ್ತು 1940 ರ ದಶಕದಲ್ಲಿ ಭಾರತದಲ್ಲಿ ಬರೀ ರಸ್ತೆ ಮತ್ತು ರೈಲ್ವೆ ಯ ಬಗ್ಗೆ ಮಾತನಾಡಲಾಗುತ್ತಿದ್ದ ಕಾಲದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬಂದರು ಮತ್ತು ಜಲಮಾರ್ಗಗಳ ಬಗ್ಗೆ ಮಾತನಾಡಿದ್ದರು. ಜಲಶಕ್ತಿಯನ್ನು ರಾಷ್ಟ್ರಶಕ್ತಿಯ ರೂಪದಲ್ಲಿ ನೋಡಿದವರು ಡಾ. ಬಾಬಾ ಸಾಹೇಬ್ ಮಾತ್ರ. ದೇಶದ ಅಭಿವೃದ್ಧಿಗಾಗಿ ನೀರಿನ ಉಪಯೋಗಕ್ಕೆ ಒತ್ತು ಕೊಟ್ಟರು. ವಿಭಿನ್ನ ನದಿ- ಕಣಿವೆ ಅಥಾರಿಟಿಗಳು, ನೀರಿಗೆ ಸಂಬಂಧಿಸಿದ ಬೇರೆ ಬೇರೆ ಆಯೋಗಗಳು ಇವೆಲ್ಲವೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರದೃಷ್ಟಿಯ ಫಲವಾಗಿದೆ. ಇಂದು ದೇಶದಲ್ಲಿ ಜಲಮಾರ್ಗ ಮತ್ತು ಬಂದರುಗಳಿಗೆ ಐತಿಹಾಸಿಕ ಪ್ರಯತ್ನಗಳು ನಡೆಯುತ್ತಿವೆ. ಭಾರತದ ಬೇರೆ ಬೇರೆ ಸಮುದ್ರ ತೀರಗಳಲ್ಲಿ ಹೊಸ ಹೊಸ ಬಂದರುಗಳು ನಿರ್ಮಾಣವಾಗುತ್ತಿವೆ ಮತ್ತು ಹಳೆಯ ಬಂದರುಗಳ ಮೂಲಸೌಕರ್ಯಗಳನ್ನು ಬಲಪಡಿಸಲಾಗುತ್ತಿದೆ. 40 ರ ದಶಕದ ಕಾಲಘಟ್ಟದಲ್ಲಿ 2 ನೇ ಮಹಾಯುದ್ಧ, ನಡೆಯಬಹುದಾದ ಶೀತಲ ಸಮರಗಳು ಮತ್ತು ದೇಶ ವಿಭಜನೆ ಇವುಗಳ ಕುರಿತಾಗಿ ಹೆಚ್ಚು ಚರ್ಚೆಗಳು ನಡೆಯುತ್ತಿದ್ದವು. ಅಂತಹ ಸಮಯದಲ್ಲಿ ಡಾ. ಅಂಬೇಡ್ಕರ್ ರವರು ಒಂದು ರೀತಿಯಲ್ಲಿ team India ದ spirit ಗೆ ಅಡಿಪಾಯ ಹಾಕಿದರು. ಅವರು federalism ಅಂದರೆ, ಸಾಂಘಿಕ ವ್ಯವಸ್ಥೆಯ ಮಹತ್ವದ ಬಗ್ಗೆ ಮಾತನಾಡಿದರು ಮತ್ತು ದೇಶದ ಉನ್ನತಿಗಾಗಿ ಕೇಂದ್ರ ಮತ್ತು ರಾಜ್ಯಗಳು ಜೊತೆ ಸೇರಿ ಕೆಲಸ ಮಾಡುವ ಬಗ್ಗೆ ಒತ್ತು ನೀಡಿದರು. ಇಂದು ನಾವು ಶಾಸನದ ಪ್ರತಿ ಹೆಜ್ಜೆಯಲ್ಲೂ ಸಹಕಾರಿ ಸಂಘವಾದ ಅಂದರೆ co-operative federalism ಮತ್ತು ಅದಕ್ಕೂ ಮುಂದೆ ಹೋಗಿ ಮತ್ತು ಅದಕ್ಕೂ ಮುಂದೆ ಹೋಗಿ competitive cooperative federalism ನ ಮಂತ್ರವನ್ನು ನಮ್ಮದಾಗಿಸಿಕೊಂಡಿದ್ದೇವೆ. ಎಲ್ಲಕ್ಕಿಂತ ಮಹತ್ವಪೂರ್ಣವಾದ ವಿಷಯವೆಂದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹಿಂದುಳಿದ ವರ್ಗಗಳೊಂದಿಗೆ ಬೆಸೆದುಕೊಂಡ ನನ್ನಂಥಹ ಕೋಟಿ ಕೋಟಿ ಜನರಿಗೆ ಒಂದು ಪ್ರೇರಣೆಯಾಗಿದ್ದಾರೆ. ಜೀವನದಲ್ಲಿ ಮುಂದೆ ಬರಲು ದೊಡ್ಡ ಅಥವಾ ಶ್ರೀಮಂತ ಕುಟುಂಬದಲ್ಲಿ ಹುಟ್ಟಬೇಕಾಗಿಲ್ಲ, ಬದಲಾಗಿ ಭಾರತದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಜನರು ಸಹ ತಮ್ಮ ಕನಸು ಕಾಣಬಹುದು, ಆ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸಬಹುದು ಮತ್ತು ಸಫಲತೆಯನ್ನು ಸಹ ಪಡೆದುಕೊಳ್ಳಬಹುದು ಎಂದು ಅವರು ನಮಗೆ ತೋರಿಸಿಕೊಟ್ಟಿದ್ದಾರೆ. ಬಹಳಷ್ಟು ಜನರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಹಾಸ್ಯ ಮಾಡಿದ್ದೂ ಸಹ ನಡೆಯಿತು. ಅವರನ್ನು ಹಿಂದೆ ತಳ್ಳಲು ಪ್ರಯತ್ನ ಪಟ್ಟರು. ಬಡ ಮತ್ತು ಹಿಂದುಳಿದ ಕುಟುಂಬದಿಂದ ಬಂದವನು ಮುಂದೆ ಬರಬಾರದು, ಜೀವನದಲ್ಲಿ ಏನೂ ಆಗಬಾರದು, ಏನೂ ಸಾಧಿಸಬಾರದು ಎಂದು ಪ್ರತಿಯೊಂದು ರೀತಿಯ ಪ್ರಯತ್ನವನ್ನೂ ಮಾಡಲಾಯಿತು. ಆದರೆ ನವ ಭಾರತದ ಚಿತ್ರಣ ಖಂಡಿತವಾಗಿಯೂ ಬೇರೆಯೇ ಆಗಿದೆ. ಇಂತಹ ಭಾರತ ಅಂಬೇಡ್ಕರ್ ಬಯಸಿದ ಭಾರತವಾಗಿದೆ, ಬಡವರು ಮತ್ತು ಹಿಂದುಳಿದವರ ಭಾರತವಾಗಿದೆ. ಡಾ. ಅಂಬೇಡ್ಕರ್ ರವರ ಜನ್ಮ ಜಯಂತಿಯ ಸಂದರ್ಭದಲ್ಲಿ ಏಪ್ರಿಲ್ 14 ರಿಂದ ಮೇ 5 ರವರೆಗೆ ‘ಗ್ರಾಮ-ಸ್ವರಾಜ್ ಅಭಿಯಾನ’ ವನ್ನು ಆಯೋಜಿಸಲಾಗುತ್ತಿದೆ. ಇದರ ಅಂಗವಾಗಿ ಇಡೀ ಭಾರತದಲ್ಲಿ ಗ್ರಾಮೀಣಾಭಿವೃದ್ಧಿ, ಬಡವರ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಇವುಗಳ ಬಗ್ಗೆ ಬೇರೆ ಬೇರೆ ಕಾರ್ಯಕ್ರಮಗಳು ನಡೆಯುತ್ತವೆ. ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಮುಂದಿನ ಕೆಲವು ದಿನಗಳಲ್ಲಿ ಭಗವಾನ್ ಮಹಾವೀರ ಜಯಂತಿ, ಹನುಮಾನ್ ಜಯಂತಿ, ಈಸ್ಟರ್, ಬೈಸಾಖಿ ಹೀಗೆ ಬಹಳಷ್ಟು ಹಬ್ಬಗಳು ಬರುತ್ತಿವೆ. ಭಗವಾನ್ ಮಹಾವೀರ ಜಯಂತಿಯು ಮಹಾವೀರರ ತ್ಯಾಗ ಮತ್ತು ತಪಸ್ಸಿನ ನೆನಪು ಮಾಡಿಕೊಳ್ಳುವ ದಿನವಾಗಿದೆ. ಅಹಿಂಸೆಯ ಸಂದೇಶ ಸಾರಿದ ಭಗವಾನ್ ಮಹಾವೀರರ ಜೀವನ, ಅವರ ದರ್ಶನ ನಮಗೆಲ್ಲರಿಗೂ ಪ್ರೇರಣೆ ಕೊಡುತ್ತದೆ. ಸಮಸ್ತ ದೇಶವಾಸಿಗಳಿಗೆ ಮಹಾವೀರ ಜಯಂತಿಯ ಶುಭಾಷಯಗಳು. ಈಸ್ಟರ್ ನ ಚರ್ಚೆ ಆಗುತ್ತಿದ್ದಂತೆ ಪ್ರಭು ಏಸು ಕ್ರಿಸ್ತನ ಪ್ರೇರಣಾದಾಯಕ ಉಪದೇಶವು ನೆನಪಿಗೆ ಬರುತ್ತದೆ. ಅವರು ಯಾವಾಗಲೂ ಮಾನವತೆಗೆ ಶಾಂತಿ, ಸದ್ಭಾವ, ನ್ಯಾಯ, ದಯೆ ಮತ್ತು ಕರುಣೆಯ ಸಂದೇಶಗಳನ್ನು ನೀಡಿದ್ದಾರೆ. ಏಪ್ರಿಲ್ ನಲ್ಲಿ ಪಂಜಾಬ್ ಮತ್ತು ಪಶ್ಚಿಮ ಭಾರತದಲ್ಲಿ ಬೈಸಾಖಿಯ ಉತ್ಸವವನ್ನು ಆಚರಿಸಲಾಗುತ್ತದೆ. ಮತ್ತು ಅದೇ ದಿನಗಳಲ್ಲಿ ಬಿಹಾರದಲ್ಲಿ ಜುಡ್ ಶೀತಲ್ ಮತ್ತು ಸತುವಾಯಿನ್, ಅಸ್ಸಾಂ ನಲ್ಲಿ ಬಿಹೂವಾದರೆ ಪಶ್ಚಿಮ ಬಂಗಾಳದಲ್ಲಿ ಪೋಯ್ಲಾ ವೈಸಾಖ್ ನ ಹರ್ಷೋಲ್ಲಾಸ ತುಂಬಿರುತ್ತದೆ. ಈ ಎಲ್ಲಾ ಹಬ್ಬಗಳೂ ಒಂದಿಲ್ಲೊಂದು ರೂಪದಲ್ಲಿ ನಮ್ಮ ಕೃಷಿ ಕಣಜಕ್ಕೆ ಮತ್ತು ಅನ್ನದಾತರೊಂದಿಗೆ ಬೆಸೆದುಕೊಂಡಿರುತ್ತದೆ. ಈ ಹಬ್ಬಗಳ ಮೂಲಕ ನಾವು ಧಾನ್ಯಗಳ ರೂಪದಲ್ಲಿ ದೊರೆಯುವ ಅಮೂಲ್ಯವಾದ ಉಡುಗೊರೆಗಳಿಗೆ ಪ್ರಕೃತಿ ಮಾತೆಗೆ ಧನ್ಯವಾದಗಳನ್ನು ತಿಳಿಸುತ್ತೇವೆ. 

ಮತ್ತೊಮ್ಮೆ ನಿಮ್ಮೆಲ್ಲರಿಗೂ ಮುಂಬರುವ ಎಲ್ಲಾ ಹಬ್ಬಗಳಿಗಾಗಿ ಹಾರ್ದಿಕ ಶುಭಾಷಯಗಳು. 

ಅನಂತಾನಂತ ಧನ್ಯವಾದಗಳು. 
 

***


 

(Release ID :177992)



(Release ID: 1527078) Visitor Counter : 208