ನೀತಿ ಆಯೋಗ

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಸಂವಾದ

Posted On: 05 JAN 2018 8:11PM by PIB Bengaluru

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಸಂವಾದ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೀತಿ ಆಯೋಗ ಆಯೋಜಿಸಿದ್ದ ಸಮಾವೇಶದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಉಸ್ತುವಾರಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

2022ರ ಹೊತ್ತಿಗೆ ಭಾರತವನ್ನು ಪರಿವರ್ತಿಸುವ ಪ್ರಧಾನಮಂತ್ರಿಯವರ ಮುನ್ನೋಟವನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ಸರ್ಕಾರವು, ನಿರ್ದಿಷ್ಟ ಅಭಿವೃದ್ಧಿ ಮಾನದಂಡಗಳಲ್ಲಿ ಹಿಂದೆ ಉಳಿದಿರುವ 115 ಜಿಲ್ಲೆಗಳ ತ್ವರಿತ ಪರಿವರ್ತನೆಗಾಗಿ ಪ್ರಮುಖ ನೀತಿ ಉಪಕ್ರಮವನ್ನು ಆರಂಭಿಸಿದೆ.

ಅಧಿಕಾರಿಗಳ ಆರು ಗುಂಪುಗಳು ಪೌಷ್ಟಿಕತೆ, ಶಿಕ್ಷಣ, ಮೂಲಭೂತ ಮೂಲಸೌಕರ್ಯ, ಕೃಷಿ ಮತ್ತು ಜಲ ಸಂಪನ್ಮೂಲ, ಎಡಪಂಥೀಯ ವಿಧ್ವಂಸಕತೆಯ ನಿರ್ಮೂಲನೆ ಮತ್ತು ಹಣಕಾಸು ಪೂರಣ ಹಾಗೂ ಕೌಶಲ ಅಭಿವೃದ್ಧಿಯ ವಿಷಯಗಳ ಮೇಲೆ ಪ್ರಾತ್ಯಕ್ಷಿಕೆಗಳನ್ನು ನೀಡಿದರು.

ಹಲವು ಕೇಂದ್ರ ಸಚಿವರು ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಭಾಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಕಾರ್ಯಕ್ರಮ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಪ್ರಥಮ ಅಧಿಕೃತ ಕಾರ್ಯಕ್ರಮವಾಗಿದ್ದು, ಇದಕ್ಕೆ ವಿಶೇಷ ಮಹತ್ವವಿದೆ ಎಂದರು.

ಕೆಲವು ಪ್ರದೇಶಗಳ ಹಿಂದುಳಿಯುವಿಕೆಯಿಂದ ಆ ಪ್ರದೇಶಗಳ ಜನರಿಗೆ ಅನ್ಯಾಯವಾಗಿದೆಯೆಂದು ಅವರು ಹೇಳಿದರು. ಈ ನಿಟ್ಟಿನಲ್ಲಿ, 115 ಹಿಂದುಳಿದ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನವನ್ನು ಶೋಷಿತರ ಉನ್ನತೀಕರಣಕ್ಕೆ ಶ್ರಮಿಸಿದ ಡಾ. ಅಂಬೇಡ್ಕರ್ ಅವರ ಮುನ್ನೋಟವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ ಎಂದರು.

ಜನ್ ಧನ್ ಯೋಜನೆ, ಶೌಚಾಲಯಗಳ ನಿರ್ಮಾಣ ಮತ್ತು ಗ್ರಾಮೀಣ ವಿದ್ಯುದ್ದೀಕರಣದ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ನಮ್ಮಲ್ಲಿ ದೃಢ ಸಂಕಲ್ಪವಿದ್ದರೆ ನಮ್ಮ ದೇಶದಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದರು. ಮಣ್ಣಿನ ಪರೀಕ್ಷೆಯಂಥ ಸಂಪೂರ್ಣ ಹೊಸ ಉಪಕ್ರಮದ ಯಶಸ್ಸಿನ ಉದಾಹರಣೆಯನ್ನೂ ಅವರು ನೀಡಿದರು.

ಭಾರತದಲ್ಲಿ ಈಗ ಅಪರಿಮಿತ ಸಾಧ್ಯತೆಗಳಿವೆ, ಅಪರಿಮಿತ ಶಕ್ತಿಯಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ, ಸುಗಮ ವಾಣಿಜ್ಯ ನಡುಸುವುದರಲ್ಲಿ ಆಗಿರುವ ಸುಧಾರಣೆಯನ್ನು ಅವರು ಪ್ರಸ್ತಾಪಿಸಿದರು. ಈ ಯಶಸ್ಸಿಗಾಗಿ ಅವರು ಸರ್ಕಾರದ ಅಧಿಕಾರಿಗಳು ಮತ್ತು ಟೀಮ್ ಇಂಡಿಯಾವನ್ನು ಶ್ಲಾಘಿಸಿದರು.

ಮೇಲೆ-ಕೆಳಗಿನ ಪರಿಹಾರಗಳು ಫಲಶ್ರುತಿ ನೀಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು. ಹೀಗಾಗಿ ಕ್ಷೇತ್ರದಲ್ಲಿರುವ ಜನರು ಪರಿಹಾರಕ್ಕೆ ಕೊಡುಗೆ ನೀಡಬೇಕೆಂಬುದು ಈ ಪ್ರಯತ್ನ ಎಂದರು. ಈ ನಿಟ್ಟಿನಲ್ಲಿ, ಅವರು ಇಂದು ನೀಡಲಾದ ಪ್ರಾತ್ಯಕ್ಷಿಕೆಗಳಲ್ಲಿನ ಸ್ಪಷ್ಟ ಚಿಂತನೆ, ನಿರ್ಣಯದಲ್ಲಿನ ವಿಶ್ವಾಸದ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಪ್ರಾದೇಶಿಕ ಅಸಮತೋಲನ ಅನಿರ್ದಿಷ್ಟವಾಗಿ ಹೆಚ್ಚಳ ಆಗುವುದಕ್ಕೆ ಅವಕಾಶ ನೀಡಬಾರದು ಎಂದು ಪ್ರಧಾನಿ ಪ್ರತಿಪಾದಿಸಿದರು. ಹೀಗಾಗಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ಅನಿವಾರ್ಯವಾಗಿದೆ ಎಂದರು. ಯಶೋಗಾಥೆಗಳು ಈ ಕ್ಷೇತ್ರದಲ್ಲಿನ ನೇತ್ಯಾತ್ಮಕ ಮನಸ್ಸು ಮತ್ತು ಮನೋಸ್ಥಿತಿಯನ್ನು ಬದಲಾಯಿಸಲು ಮಹತ್ವದ್ದಾಗಿದೆ ಎಂದರು. ನಿರಾಶಾವಾದದ ಮನೋಸ್ಥಿತಿಯನ್ನು ಬದಲಾವಣೆ ಮಾಡಿ ಆಶಾವಾದವಾಗಿ ಪರಿವರ್ತಿಸುವುದು ಪ್ರಥಮ ಹೆಜ್ಜೆಯಾಗಬೇಕು ಎಂದು ವಿವರಿಸಿದರು.

ಅಭಿವೃದ್ಧಿಗಾಗಿ ಸಾರ್ವಜನಿಕರ ಚಳವಳಿಗಳಿಗೆ ಪ್ರಮುಖ ತಂಡದ ಮನಸ್ಸುಗಳ ಮಿಲನದ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿನ ಮಿದಿಳನ್ನು ಚುರುಕುಗೊಳಿಸುವಂತೆ ಸಲಹೆ ಮಾಡಿದರು. ಜನರನ್ನು ಪಾಲ್ಗೊಳ್ಳುವಂತೆ ವ್ಯವಸ್ಥಿತ ಏರ್ಪಾಡು ಮಾಡುವ ಅಗತ್ಯವಿದೆ ಎಂದ ಅವರು, ಸ್ವಚ್ಛ ಭಾರತ ಅಭಿಯಾನದ ಉದಾಹರಣೆ ನೀಡಿದರು. ಅಭಿವೃದ್ಧಿಯ ಗುರಿಗಳ ಸಾಧನೆಗಾಗಿ ಧನಾತ್ಮಕ ನಿರೂಪಣೆಗಳು ಮತ್ತು ಆಶಾವಾದ ನಿರ್ಮಾಣದ ಮಹತ್ವವನ್ನು ಅವರು ಪ್ರತಿಪಾದಿಸಿದರು.

ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗಾಗಿ ನಾವು ಜನರ ಆಶಯಗಳನ್ನು ಗುರುತಿಸಿ ಅದನ್ನು ಸರಿ ದಾರಿಯಲ್ಲಿ ನಡೆಸಬೇಕು ಎಂದು ಪ್ರಧಾನಿ ಹೇಳಿದರು. ಸಾರ್ವಜನಿಕರ ಸಹಭಾಗಿತ್ವವು, ಸರ್ಕಾರದ ಯೋಜನೆಗಳೊಂದಿಗೆ ಜನರ ಆಶಯಗಳು ಹೊಂದಿಸುವುದಕ್ಕೆ ಇಂಬು ನೀಡುವಂತಿರಬೇಕು ಎಂದರು. ಅಭಿವೃದ್ಧಿಯ ಉದ್ದೇಶಗಳನ್ನು ಪೂರೈಸುವ ಮೂಲಕ 115 ಮಹತ್ವಾಕಾಂಕ್ಷೆಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆತ್ಮತೃಪ್ತಿಯನ್ನು ಪಡೆಯುವ ಅವಕಾಶ ಸಿಕ್ಕಿದೆ ಎಂದು ಪ್ರಧಾನಿ ಹೇಳಿದರು. ಜೀವನದಲ್ಲಿ ಯಶಸ್ಸು ಸಾಧಿಸಲು ಸವಾಲುಗಳು ಮೆಟ್ಟಿಲುಗಳಾಗುತ್ತವೆ ಎಂದ ಪ್ರಧಾನಿ, ಈ ಜಿಲ್ಲಾಧಿಕಾರಿಗಳಿಗೆ ಇಂಥ ಅವಕಾಶ ದೊರೆತಿದೆ ಎಂದರು. ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಹೊತ್ತಿಗೆ ಮೂರು ತಿಂಗಳುಗಳಲ್ಲಿ ಕಣ್ಣಿಗೆ ಕಾಣುವಂಥ ಫಲಿತಾಂಶಕ್ಕಾಗಿ ಸಂಯೋಜಿತ ಪ್ರಯತ್ನಕ್ಕೆ ಅವರು ಕರೆ ನೀಡಿದರು. ಅಂಥ ಒಂದು ಉತ್ತಮ ಪ್ರದರ್ಶನದ ಜಿಲ್ಲೆಗೆ ಬರುವ ಏಪ್ರಿಲ್ ನಲ್ಲಿ ತಾವು ಸ್ವಯಂ ಭೇಟಿ ನೀಡಲು ಇಚ್ಛಿಸುವುದಾಗಿ ಹೇಳಿದರು. ಈ 115 ಜಿಲ್ಲೆಗಳು ನವ ಭಾರತದ ಅಭಿವೃದ್ಧಿಯ ಬುನಾದಿ ಆಗುತ್ತವೆ ಎಂದೂ ಅವರು ಹೇಳಿದರು.

 ***​



(Release ID: 1515938) Visitor Counter : 75


Read this release in: English