ಸಂಪುಟ

ಇತರ ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ವಿಷಯಗಳ ಪರಾಮರ್ಶೆಗಾಗಿ ಆಯೋಗದ ಅವಧಿಯನ್ನು ವಿಸ್ತರಿಸಲು ಸಂಪುಟದ ಅನುಮೋದನೆ

Posted On: 20 DEC 2017 7:44PM by PIB Bengaluru

ಇತರ ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ವಿಷಯಗಳ ಪರಾಮರ್ಶೆಗಾಗಿ ಆಯೋಗದ ಅವಧಿಯನ್ನು ವಿಸ್ತರಿಸಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಇತರ ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ವಿಷಯಗಳ ಪರಾಮರ್ಶೆಗಾಗಿ ಆಯೋಗದ ಅವಧಿಯನ್ನು ಹನ್ನೆರೆಡು ವಾರಗಳ ಕಾಲ ಅಂದರೆ 2018ರ ಏಪ್ರಿಲ್ 2ರವರೆಗೆ ವಿಸ್ತರಿಸಲು ತನ್ನ ಅನುಮೋದನೆ ನೀಡಿದೆ. ಅವಧಿ ವಿಸ್ತರಣೆಯು ಓಬಿಸಿಗಳ ಉಪ ವರ್ಗೀಕರಣ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಬಾಧ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಸಮಗ್ರ ವರದಿ ಸಲ್ಲಿಸಲು ಆಯೋಗಕ್ಕೆ ಅವಕಾಶ ಮಾಡಿಕೊಡುತ್ತದೆ.

ಈ ಆಯೋಗವನ್ನು 2017ರ ಅಕ್ಟೋಬರ್ 2ರಂದು ಸಂವಿಧಾನದ 340ನೇ ವಿಧಿಯಡಿಯಲ್ಲಿ ರಾಷ್ಟ್ರಪತಿಯವರ ಅನುಮೋದನೆಯೊಂದಿಗೆ ಸ್ಥಾಪಿಸಲಾಗಿತ್ತು ಮತ್ತು ಆಯೋಗದ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ದಿನದಿಂದ 12 ವಾರಗಳ ಒಳಗಾಗಿ ತಮ್ಮ ವರದಿಯನ್ನು ಸಲ್ಲಿಸಲು ನಿರ್ಣಯಿಸಲಾಗಿತ್ತು.

ಹಿನ್ನೆಲೆ:

ನಿವೃತ್ತ ನ್ಯಾಯಮೂರ್ತಿ ಶ್ರೀಮತಿ ಜಿ. ರೋಹಿಣಿ ಅವರ ಅಧ್ಯಕ್ಷತೆಯ ಆಯೋಗವು 2017ರ ಅಕ್ಟೋಬರ್ 11ರಿಂದ ಕಾರ್ಯಾರಂಭ ಮಾಡಿದ್ದು, ಓಬಿಸಿಗಳಿಗೆ ಮೀಸಲು ಇರುವ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮತ್ತು ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗಗಳೊಂದಿಗೆ ಮಾತುಕತೆ ನಡೆಸಿದೆ.

ಇತರ ಹಿಂದುಳಿದ ವರ್ಗಗಳ ಕೇಂದ್ರ ಪಟ್ಟಿಗೆ ಸೇರಿದ ಜಾತಿ / ಸಮುದಾಯಗಳ ನಡುವೆ ಮೀಸಲಾತಿಗಳ ಪ್ರಯೋಜನಗಳ ಅಸಮರ್ಥ ಹಂಚಿಕೆಯನ್ನು ನಿರ್ಧರಿಸುವ ದೃಷ್ಟಿಯಿಂದ ಆಯೋಗವು, ಕಳೆದ ಮೂರು ವರ್ಷಗಳಲ್ಲಿ ಉನ್ನತ ಶಿಕ್ಷಣ ಕೋರ್ಸ್ ಗಳಲ್ಲಿ ಒಬಿಸಿಗಳ ಪ್ರವೇಶ ಕುರಿತಂತೆ 197 ಉನ್ನತ ಶಿಕ್ಷಣ ಸಂಸ್ಥೆಗಳಿಂದ ಮಾಹಿತಿಯ ದತ್ತಾಂಶ ಕೋರಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಮತ್ತು ಸಿಪಿಎಸ್.ಇ.ಗಳಲ್ಲಿ ಒಬಿಸಿ ವ್ಯಕ್ತಿಗಳ ನೇಮಕಾತಿ ಕುರಿತಂತೆಯೂ ಮಾಹಿತಿಯ ದತ್ತಾಂಶವನ್ನು ಕೇಳಿದೆ,

ಬೃಹತ್ ಗಾತ್ರದ ದತ್ತಾಂಶ ಮತ್ತು ಅದರ ವಿಶ್ಲೇಷಣೆಗೆ ಮತ್ತು ಸಮಗ್ರ ವರದಿಯನ್ನು ಸಿದ್ಧಪಡಿಸಲು ಸಮಯಾವಕಾಶದ ಅಗತ್ಯವನ್ನು ಮನಗಂಡು, ಆಯೋಗವು ತನ್ನ ಅವಧಿಯನ್ನು 12 ವಾರಗಳ ಕಾಲ ವಿಸ್ತರಣೆ ಮಾಡುವಂತೆ ಕೋರಿತ್ತು.

  ***



(Release ID: 1513547) Visitor Counter : 118


Read this release in: English