ಪ್ರಧಾನ ಮಂತ್ರಿಯವರ ಕಛೇರಿ

ಎಫ್.ಐ.ಸಿ.ಸಿ.ಐ.ನ 90ನೇ ವಾರ್ಷಿಕ ಸಾಮಾನ್ಯ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 13 DEC 2017 5:35PM by PIB Bengaluru

ಎಫ್.ಐ.ಸಿ.ಸಿ.ಐ.ನ 90ನೇ ವಾರ್ಷಿಕ ಸಾಮಾನ್ಯ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಮಂತ್ರಿಯವರ ಭಾಷಣ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎಫ್.ಐ.ಸಿ.ಸಿ.ಐ.ನ 90ನೇ ಸಾಮಾನ್ಯ ಸಭೆಯ ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. 

ಅಂದಿನ ಬ್ರಿಟಿಷ್ ಸರ್ಕಾರ ಸ್ಥಾಪಿಸಿದ್ದ ಸಿಮನ್ ಆಯೋಗದ ವಿರುದ್ಧ ಭಾರತೀಯ ಕೈಗಾರಿಕೆಗಳು ಒಗ್ಗೂಡಿ 1927ರ ಸುಮಾರಿನಲ್ಲಿ ಎಫ್.ಐ.ಸಿ.ಸಿ.ಐ. ಸ್ಥಾಪನೆ ಮಾಡಿದ ಸಮಯವನ್ನು ಅವರು ಸ್ಮರಿಸಿದರು.ಆ ಸಮಯದಲ್ಲಿ ರಾಷ್ಟ್ರೀಯ ಹಿತಕ್ಕಾಗಿ ಭಾರತೀಯ ಕೈಗಾರಿಕೆಯು ಭಾರತೀಯ ಸಮಾಜದ ಎಲ್ಲ ಇತರ ವರ್ಗಗಳೊಂದಿಗೆ ಸೇರಿತು ಎಂದು ತಿಳಿಸಿದರು. 

ದೇಶದ ಜನರು ರಾಷ್ಟ್ರದ ವಿಚಾರದಲ್ಲಿ ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಮುಂದೆ ಬರುತ್ತಿರುವ ಈ ಕಾಲದಲ್ಲಿಯೂ ಅದೇ ರೀತಿಯ ವಾತಾವರಣ ಮೂಡಿದೆ ಎಂದು ಪ್ರಧಾನಿ ಹೇಳಿದರು. ದೇಶವನ್ನು ಭ್ರಷ್ಟಾಚಾರ ಮತ್ತು ಕಪ್ಪುಹಣದಂಥ ಆಂತರಿಕ ಸಮಸ್ಯೆಗಳಿಂದ ಮುಕ್ತಗೊಳಿಸುವುದು ಜನರ ಆಶಯ ಮತ್ತು ವಿಶ್ವಾಸವಾಗಿದೆ ಎಂದರು. ರಾಜಕೀಯ ಪಕ್ಷಗಳು ಮತ್ತು ಕೈಗಾರಿಕಾ ಒಕ್ಕೂಟಗಳು ದೇಶದ ಅಗತ್ಯ ಮತ್ತು ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಅನುಗುಣವಾಗಿ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.

ಸ್ವಾತಂತ್ರ್ಯಾನಂತರ ಸಾಕಷ್ಟು ಸಾಧಿಸಲಾಗಿದೆ ಆದರೂ ಹಲವು ಸವಾಲುಗಳು ಉದ್ಭವಿಸಿವೆ ಎಂದು ಪ್ರಧಾನಿ ಹೇಳಿದರು. ಬ್ಯಾಂಕ್ ಖಾತೆಗಳು, ಅನಿಲ ಸಂಪರ್ಕ, ವಿದ್ಯಾರ್ಥಿ ವೇತನ, ಪಿಂಚಣಿ ಮುಂತಾದ ವಿಷಯಗಳಲ್ಲಿ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಬಡವರು ಹೋರಾಟ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರ ಈ ಹೋರಾಟಕ್ಕೆ ಕೊನೆ ಹಾಡಲು ಮತ್ತು ಪಾರದರ್ಶಕ ಹಾಗೂ ಸಂವೇದನಾತ್ಮಕ ವ್ಯವಸ್ಥೆ ರೂಪಿಸಲು ಕಾರ್ಯೋನ್ಮುಖವಾಗಿದೆ ಎಂದರು. ಜನ್ ಧನ್ ಯೋಜನಾ ಇದಕ್ಕೆ ಒಂದು ಉದಾಹರಣೆಯಾಗಿದ್ದು, ಸುಗಮ ಜೀವನ ನಡೆಸುವಿಕೆಯು ಕೇಂದ್ರ ಸರ್ಕಾರದ ಗಮನವಾಗಿದೆ ಎಂದರು. ಉಜ್ವಲ ಯೋಜನೆ, ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯಗಳ ನಿರ್ಮಾಣ ಮತ್ತು ಪ್ರಧಾನಮಂತ್ರಿ ವಸತಿ ಯೋಜನೆಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ತಾವು ಕೂಡ ಬಡತನದಿಂದ ಬಂದಿದ್ದು, ಬಡಜನರ ಮತ್ತು ದೇಶದ ಅಗತ್ಯಗಳಿಗೆ ಕೆಲಸ ಮಾಡುವ ಅಗತ್ಯವನ್ನು ಅರಿತಿರುವುದಾಗಿ ಹೇಳಿದರು. ಉದ್ಯಮಶೀಲರಿಗೆ ಮೇಲಾಧಾರ ರಹಿತ ಮುದ್ರಾ ಸಾಲ ಯೋಜನೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. 

ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದೂ ಪ್ರಧಾನಿ ಹೇಳಿದರು. ಎನ್.ಪಿ.ಎ. ವಿಚಾರವು ಪ್ರಸಕ್ತ ಸರ್ಕಾರಕ್ಕೆ ಬಳುವಳಿಯಾಗಿ ಬಂದಿದೆ ಎಂದು ಹೇಳಿದರು. ಹಣಕಾಸು ನಿಯಂತ್ರಣ ಮತ್ತು ಠೇವಣಿ ವಿಮೆ (ಎಫ್.ಆರ್.ಡಿ.ಐ.) ಮಸೂದೆಯ ಬಗ್ಗೆ ಈಗ ಊಹಾಪೋಹಗಳು ಹರಿದಾಡುತ್ತಿವೆ ಎಂದರು. ಕೇಂದ್ರ ಸರ್ಕಾರವು ಖಾತೆದಾರರ ಹಿತವನ್ನು ಕಾಪಾಡಲು ಶ್ರಮಿಸುತ್ತಿದೆ ಆದರೆ, ಹಬ್ಬುತ್ತಿರುವ ವದಂತಿಗಳು ಅದಕ್ಕೆ ತದ್ವಿರುದ್ಧವಾಗಿವೆ ಎಂದರು. ಇಂಥ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ಎಫ್.ಐ.ಸಿ.ಸಿ.ಐ.ನಂಥ ಸಂಸ್ಥೆಗಳ ಮೇಲಿದೆ ಎಂದು ಅವರು ಹೇಳಿದರು, ಅದೇ ರೀತಿ ಜಿಎಸ್ಟಿಯನ್ನು ಇನ್ನೂ ಹೆಚ್ಚು ಸಮರ್ಥಗೊಳಿಸುವಲ್ಲಿ ಎಫ್.ಐ.ಸಿ.ಸಿ.ಐ ಮಹತ್ವದ ಪಾತ್ರ ನಿರ್ವಹಿಸಬಹುದು ಎಂದರು. ಜಿಎಸ್ಟಿಯಲ್ಲಿ ಗರಿಷ್ಠ ವ್ಯಾಪಾರ ನೋಂದಣಿಯಾಗುವುದನ್ನು ಖಾತ್ರಿಪಡಿಸಿಕೊಳ್ಳುವ ಪ್ರಯತ್ನ ಸರ್ಕಾರದ್ದಾಗಿದೆ ಎಂದರು. ಹೆಚ್ಚು ಔಪಚಾರಿಕ ವ್ಯವಸ್ಥೆ ಆದರೆ, ಅದು ಹೆಚ್ಚು ಬಡವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಇದರಿಂದ ಸುಲಭವಾಗಿ ಬ್ಯಾಂಕ್ ಸಾಲ ದೊರೆಯುತ್ತದೆ ಮತ್ತು ಸಾರಿಗೆಯ ವೆಚ್ಚ ತಗ್ಗಿಸುತ್ತದೆ, ಆ ಮೂಲಕ ವಾಣಿಜ್ಯದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದರು. ಸಣ್ಣ ವ್ಯಾಪಾರಸ್ಥರಲ್ಲಿ ದೊಡ್ಡ ಪ್ರಮಾಣದ ಅರಿವು ಮೂಡಿಸುವ ಯೋಜನೆ ಎಫ್.ಐ.ಸಿ.ಸಿ.ಐ. ಹೊಂದಿದೆ ಎಂಬ ವಿಶ್ವಾಸ ನನಗಿದೆ ಎಂದೂ ಅವರು ಹೇಳಿದರು. ಶ್ರೀಸಾಮಾನ್ಯರನ್ನು ನಿರ್ಮಾಣದಾರರು ಶೋಷಣೆ ಮಾಡುವಂಥ ವಿಚಾರಗಳಲ್ಲಿ ಅಗತ್ಯಬಿದ್ದಾಗ ಎಫ್.ಐ.ಸಿ.ಸಿ.ಐ ಧ್ವನಿ ಎತ್ತಬೇಕು ಎಂದೂ ಹೇಳಿದರು. 

ಯೂರಿಯಾ, ಜವಳಿ, ನಾಗರಿಕ ವಿಮಾನಯಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ನೀತಿ ನಿರ್ಧಾರಗಳನ್ನು ಮತ್ತು ಅದರಿಂದ ಆದ ಪ್ರಯೋಜನದ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ರಕ್ಷಣೆ, ನಿರ್ಮಾಣ, ಆಹಾರ ಸಂಸ್ಕರಣೆ ಇತ್ಯಾದಿ ವಲಯಗಳ ಸುಧಾರಣೆಯ ಬಗ್ಗೆಯೂ ಅವರು ಪ್ರಸ್ತಾಪ ಮಾಡಿದರು. ಈ ಕ್ರಮಗಳಿಂದಾಗಿ, ವಿಶ್ವಬ್ಯಾಂಕ್ ನ ಸುಗಮ ವಾಣಿಜ್ಯ ನಡೆಸುವ ಶ್ರೇಣೀಕರಣದಲ್ಲಿ ಭಾರತ 142ರಿಂದ 100ನೇ ಸ್ಥಾನಕ್ಕೆ ಏರಿದೆ ಎಂದೂ ಹೇಳಿದರು. ಆರ್ಥಿಕ ಸ್ವಾಸ್ಥ್ಯವನ್ನು ಹೆಚ್ಚಿಸುವ ಇತರ ಸೂಚ್ಯಂಕಗಳ ಬಗ್ಗೆಯೂ ಪ್ರಸ್ತಾಪಿಸಿದರು. ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. 

ಆಹಾರ ಸಂಸ್ಕರಣೆ, ನವೋದ್ಯಮ, ಕೃತಕ ಬುದ್ಧಿಮತ್ತೆ, ಸೌರಶಕ್ತಿ, ಆರೋಗ್ಯರಕ್ಷಣೆ ಇತ್ಯಾದಿ ಕ್ಷೇತ್ರದಲ್ಲಿ ಎಫ್.ಐ.ಸಿ.ಸಿ.ಐ. ಮಹತ್ವದ ಪಾತ್ರ ವಹಿಸಬಹುದು ಎಂದು ಪ್ರಧಾನಿ ಹೇಳಿದರು. ಎಂ.ಎಸ್.ಎಂ.ಇ. ವಲಯದಲ್ಲಿ ಚಿಂತಕರ ಚಾವಡಿಯಂತೆ ಕಾರ್ಯ ನಿರ್ವಹಿಸುವಂತೆಯೂ ಎಫ್.ಐ.ಸಿಸಿ.ಐಗೆ ಪ್ರಧಾನಿ ಮನವಿ ಮಾಡಿದರು.


(Release ID: 1512583) Visitor Counter : 100


Read this release in: English