ಸಂಪುಟ

ರಾಷ್ಟ್ರೀಯ ಪೌಷ್ಟಿಕ ಅಭಿಯಾನ ಸ್ಥಾಪನೆಗೆ ಸಂಪುಟದ ಅನುಮೋದನೆ

Posted On: 01 DEC 2017 1:39PM by PIB Bengaluru

ರಾಷ್ಟ್ರೀಯ ಪೌಷ್ಟಿಕ ಅಭಿಯಾನ ಸ್ಥಾಪನೆಗೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2017-18ರಿಂದ ಆರಂಭವಾಗುವಂತೆ ಮೂರು ವರ್ಷಗಳ ಅವಧಿಗೆ 9046.17 ಕೋಟಿ ರೂಪಾಯಿಗಳ ಆಯವ್ಯಯದ ರಾಷ್ಟ್ರೀಯ ಪೌಷ್ಟಿಕ ಅಭಿಯಾನ (ಎನ್.ಎನ್.ಎಂ.) ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ. 

ಮುಖ್ಯಾಂಶಗಳು: 

1.ಎನ್.ಎನ್.ಎಂ. ಒಂದು ಉನ್ನತ ಕಾಯವಾಗಲಿದ್ದು, ಅದು ಸಚಿವಾಲಯಗಳ ನಡುವೆ ಪೌಷ್ಟಿಕತೆ ಕುರಿತಾದ ವಿಚಾರಗಳಿಗೆ ಸಂಬಂಧಿಸಿದಂತೆ ಗುರಿ ನಿಗದ ಪಡಿಸಿ, ಮಾರ್ಗದರ್ಶನ ಮಾಡಿ, ನಿಗಾ ಇಡುವುದರ ಜೊತೆಗೆ ಮೇಲುಸ್ತುವಾರಿಯನ್ನೂ ಮಾಡಲಿದೆ. 

2. ಈ ಪ್ರಸ್ತಾಪವು ಈ ಕೆಳಗಿನವುಗಳನ್ನು ಒಳಗೊಂಡಿದೆ 

• ಅಪೌಷ್ಟಿಕತೆ ಎದುರಿಸಲು ಕೊಡುಗೆ ನೀಡುತ್ತಿರುವ ವಿವಿಧ ಯೋಜನೆಗಳನ್ನು ಒಗ್ಗೂಡಿಸುವುದು. 

• ಬಹಳ ಬಲವಾದ ಸಮಗ್ರ ವ್ಯವಸ್ಥೆ ಪರಿಚಯಿಸುವುದು. 

• ಐಸಿಟಿ ಆಧಾರಿತ ಸಕಾಲದ ನಿಗಾ ವ್ಯವಸ್ಥೆ. 

• ರಾಜ್ಯಗಳಿಗೆ/ಕೇಂದ್ರಾಡಳಿತ ಪ್ರದೇಶಗಳಿಗೆ ಗುರಿ ತಲುಪಲು ಪ್ರೋತ್ಸಾಹಿಸುವುದು. 

• ಅಂಗನವಾಡಿ ಕಾರ್ಯಕರ್ತರಿಗೆ (ಎ.ಡಬ್ಲ್ಯು.ಡಬ್ಲ್ಯುಗಳು) ಐಟಿ ಆಧಾರಿತ ಸಾಧನ ಬಳಕೆಗೆ ಉತ್ತೇಜಿಸುವುದು. 

• ಎ.ಡಬ್ಲ್ಯು.ಡಬ್ಲ್ಯುಗಳು ಬಳಸುವ ದಾಖಲೆ ಪುಸ್ತಕ ತೆಗೆದುಹಾಕುವುದು. 

• ಅಂಗನವಾಡಿ ಕೇಂದ್ರ (ಎ.ಡಬ್ಲ್ಯುಸಿಗಳು)ಗಳಲ್ಲಿ ಮಕ್ಕಳ ಎತ್ತರ ಅಳಯುವುದನ್ನು ಪರಿಚಯಿಸುವುದು. 

• ಸಾಮಾಜಿಕ ಪರಿಶೋಧನೆ 

• ಪೌಷ್ಟಿಕತೆ ಕುರಿತ ವಿವಿಧ ಚಟುವಟಿಕೆಗಳಲ್ಲಿ ಇತರರೊಂದಿಗೆ ಪಾಲ್ಗೊಳ್ಳುವ ಮೂಲಕ ಹಾಗೂ ಜನ ಆಂದೋಲನದ ಮೂಲಕ ಮೆಸ್ ಗಳು ಒಳಗೊಂಡ ಪೌಷ್ಟಿಕ ಸಂಪನ್ಮೂಲ ಕೇಂದ್ರ ಸ್ಥಾಪನೆ. 

ಪ್ರಮುಖ ಪರಿಣಾಮಗಳು : 

ಈ ಕಾರ್ಯಕ್ರಮದ ಗುರಿಗಳ ಮೂಲಕ ಕುಪೋಷಣೆ, ಅಪೌಷ್ಟಿಕತೆ, ರಕ್ತಹೀನತೆ ಮತ್ತು ಕಡಿಮೆ ತೂಕದ ಶಿಶು ಜನನದ ಪ್ರಮಾಣವನ್ನು ತಗ್ಗಿಸಬಹುದಾಗಿದೆ. ಇದು ಉತ್ತಮ ನಿಗಾ ವ್ಯವಸ್ಥೆ ರೂಪಿಸುತ್ತದೆ, ಸಕಾಲದ ಕ್ರಮಕ್ಕಾಗಿ ಎಚ್ಚರಿಕೆಗಳನ್ನೂ ನೀಡುತ್ತದೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಉತ್ತಮ ಪ್ರದರ್ಶನ ನೀಡಲು ಉತ್ತೇಜಿಸುತ್ತದೆ ಮತ್ತು ಸಚಿವಾಲಯಗಳು ಹಾಗೂ ರಾಜ್ಯ/ಕೇಂದ್ರಡಳಿತ ಪ್ರದೇಶಗಳಿಗೆ ನಿಗದಿತ ಗುರಿ ಸಾಧಿಸಲು ಮಾರ್ಗದರ್ಶನ ಮಾಡುತ್ತದೆ ಹಾಗೂ ಉಸ್ತುವಾರಿ ನೋಡಿಕೊಳ್ಳುತ್ತದೆ. 

ಉಪಯೋಗಗಳು ಮತ್ತು ವ್ಯಾಪ್ತಿ: 

ಈ ಕಾರ್ಯಕ್ರಮದಿಂದ 10 ಕೋಟಿಗೂ ಹೆಚ್ಚು ಜನರಿಗೆ ಉಪಯೋಗವಾಗಲಿದೆ. ಎಲ್ಲ ರಾಜ್ಯಗಳು ಮತ್ತು ಜಿಲ್ಲೆಗಳನ್ನು ಹಂತಹಂತವಾಗಿ ಇದರ ವ್ಯಾಪ್ತಿಗೆ ತರಲಾಗುತ್ತದೆ. ಅಂದರೆ 2017-18ರಲ್ಲಿ 315 ಜಿಲ್ಲೆಗಳು, 2018-19ರಲ್ಲಿ 235 ಜಿಲ್ಲೆಗಳು ಹಾಗೂ ಉಳಿದ ಜಿಲ್ಲೆಗಳನ್ನು 2019-20ರಲ್ಲಿ ವ್ಯಾಪ್ತಿಗೆ ತರಲಾಗುತ್ತದೆ. 

ಹಣಕಾಸು ವೆಚ್ಚ: 

2017-18ರಿಂದ ಆರಂಭವಾಗುವಂತೆ 9046.17ಕೋಟಿ ರೂಪಾಯಿಗಳನ್ನು ಮೂರು ವರ್ಷಗಳ ಅವಧಿಯಲ್ಲಿ ವೆಚ್ಚ ಮಾಡಲಾಗುತ್ತದೆ. ಇದನ್ನು ಸರ್ಕಾರದ ಆಯವ್ಯಯ (ಶೇ.50) ಬೆಂಬಲದೊಂದಿಗೆ ಮತ್ತು ಶೇ.50ನ್ನು ಐಬಿಆರ್.ಡಿ ಅಥವಾ ಇತರ ಎಂ.ಡಿ.ಬಿ.ಯಲ್ಲಿ ನೀಡಲಾಗುತ್ತದೆ. ಸರ್ಕಾರದ ಆಯವ್ಯಯ ಬೆಂಬಲವು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ 60:40ಆಗಿರುತ್ತದೆ, ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳಿಗೆ ಅದು 90:10 ಆಗಿದ್ದು, ಶಾಸನ ಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಶೇ.100 ಆಗಿರುತ್ತದೆ. ಒಟ್ಟಾರೆಯಾಗಿ ಭಾರತ ಸರ್ಕಾರದ ಪಾಲು ಮೂರು ವರ್ಷಗಳ ಅವಧಿಯಲ್ಲಿ 2849.54 ಕೋಟಿ ರೂಪಾಯಿ ಆಗಿರುತ್ತದೆ. 

ಅನುಷ್ಠಾನದ ಕಾರ್ಯತಂತ್ರ ಮತ್ತು ಗುರಿಗಳು: 

ಅನುಷ್ಠಾನ ಕಾರ್ಯತಂತ್ರವು ವ್ಯಾಪಕ ನಿಗಾ ಮತ್ತು ಬೇರು ಮಟ್ಟದವರೆಗೆ ಸಂಘಟಿತ ಕ್ರಿಯಾ ಯೋಜನೆಯನ್ನು ಆಧರಿಸಿರುತ್ತದೆ. ಎನ್.ಎನ್.ಎಂ. ಅನ್ನು 2017-18ರಿಂದ 2019-20ರವರೆಗೆ ಮೂರು ಹಂತಗಳಲ್ಲಿ ಜಾರಿಗೊಳಿಸಲಾಗುತ್ತದೆ. ಎನ್.ಎನ್.ಎಂ. ಕುಪೋಷಣೆ, ಅಪೌಷ್ಟಿಕತೆ, ರಕ್ತಹೀನತೆ (ಚಿಕ್ಕ ಮಕ್ಕಳು, ಮಹಿಳೆಯರು ಮತ್ತು ಹರೆಯದ ಹುಡುಗಿಯರಲ್ಲಿ) ಮತ್ತು ಕಡಿಮೆ ತೂಕದ ಶಿಶು ಜನನ ಪ್ರಮಾಣವನ್ನು ಶೇ.2ರಷ್ಟು ತಗ್ಗಿಸುವ ಗುರಿ ಹೊಂದಿದೆ, ಅನುಕ್ರಮವಾಗಿ ವಾರ್ಷಿಕ ಶೇ.2, ಶೇ. 2 ಮತ್ತು ಶೇ.2 ಆಗಿರುತ್ತದೆ. ಕುಪೋಷಣೆಯನ್ನು ವಾರ್ಷಿಕ ಕನಿಷ್ಠ ಶೇ.2ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದ್ದರೂ, ಈ ಅಭಿಯಾನವು ಕುಪೋಷಣೆಯ ಪ್ರಮಾಣವನ್ನು 2022ರ ಹೊತ್ತಿಗೆ (2022ರ ಹೊತ್ತಿಗೆ 25 ಅಭಿಯಾನ) ಶೇ.38.4ರಿಂದ (ಎನ್.ಎಫ್.ಎಚ್.ಎಸ್.-4) ಶೇ.25ಕ್ಕೆ ತಗ್ಗಿಸಲು ಶ್ರಮಿಸಲಿದೆ. 

ಹಿನ್ನೆಲೆ: 

0ಯಿಂದ 6ವರ್ಷದೊಳಗಿನ ಮಕ್ಕಳ ಮತ್ತು ಗರ್ಭಿಣಿಯರ ಹಾಗೂ ಹಾಲುಣಿಸುವ ತಾಯಂದಿರ ಪೌಷ್ಟಿಕತೆಯ ಸ್ಥಿತಿಯನ್ನು ಸುಧಾರಿಸಲು ನೇರ/ಪರೋಕ್ಷವಾಗಿ ಹಲವು ಯೋಜನೆಗಳಿವೆ. ಇದರ ನಡುವೆಯೂ, ಅಪೌಷ್ಟಿಕತೆ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು ದೇಶದಲ್ಲಿ ದೊಡ್ಡದಾಗಿವೆ. ಯೋಜನೆಗಳಿಗೆ ಕೊರತೆ ಏನಿಲ್ಲ, ಆದರೂ, ಸಮಾನ ಗುರಿ ಸಾಧಿಸಲು ಪರಸ್ಪರರ ನಡುವೆ ಯೋಜನೆಗಳನ್ನು ಒಗ್ಗೂಡಿಸಲು, ಒಮ್ಮತ ಮೂಡಿಸಲು ಕೊರತೆ ಎದ್ದು ಕಾಣುತ್ತಿದೆ. ಎನ್.ಎನ್.ಎಂ. ಮೂಲಕ ಸಮಗ್ರ ವ್ಯವಸ್ಥೆಗೆ ಚೈತನ್ಯ ನೀಡಿ ಮತ್ತು ಇತರ ಸಾಧನಗಳನ್ನು ಒಗ್ಗೂಡಿಸಲು ಶ್ರಮಿಸಲಾಗುತ್ತದೆ. 
 

*****


(Release ID: 1511601) Visitor Counter : 125


Read this release in: English , Tamil