ಪ್ರಧಾನ ಮಂತ್ರಿಯವರ ಕಛೇರಿ

ಜಾಗತಿಕ ಉದ್ಯಮಶೀಲತಾ ಶೃಂಗಸಭೆ 2017ರಲ್ಲಿ ಪ್ರಧಾನಿಯವರ ಭಾಷಣ

Posted On: 29 NOV 2017 11:11AM by PIB Bengaluru

ಜಾಗತಿಕ ಉದ್ಯಮಶೀಲತಾ ಶೃಂಗಸಭೆ 2017ರಲ್ಲಿ ಪ್ರಧಾನಿಯವರ ಭಾಷಣ

ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರದ ಸಹಯೋಗದಲ್ಲಿ 2017ನೇ ಸಾಲಿನ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯ ಆಯೋಜಿಸಿ ಆತಿಥ್ಯ ವಹಿಸಲು ನಾವು ಸಂತೋಷ ಪಡುತ್ತೇವೆ.

ಇದೇ ಮೊದಲ ಬಾರಿಗೆ ದಕ್ಷಿಣ ಏಷ್ಯಾದಲ್ಲಿ ಈ ಶೃಂಗಸಭೆ ನಡೆಯುತ್ತಿದೆ. ಇದು ಜಾಗತಿಕ ಉದ್ಯಮಶೀಲತಾ ಪರಿಸರವನ್ನು ಮುನ್ನಡೆಸಲು ವಿಶ್ವದ ಪ್ರಮುಖ ಹೂಡಿಕೆದಾರರು, ಉದ್ದಿಮೆದಾರರು, ಶಿಕ್ಷಣ ತಜ್ಞರು, ಚಿಂತಕರ ಚಾವಡಿ ಸದಸ್ಯರು ಮತ್ತು ಇತರ ಬಾಧ್ಯಸ್ಥರನ್ನು ಒಟ್ಟಿಗೆ ತಂದಿದೆ.

ಈ ಕಾರ್ಯಕ್ರಮ ಹೈದ್ರಾಬಾದ್ ನೊಂದಿಗೆ ಸಿಲಿಕಾನ್ ಕಣಿವೆಯನ್ನಷ್ಟೇ ಸಂಪರ್ಕಿಸುತ್ತಿಲ್ಲ ಜೊತೆಗೆ ಭಾರತ ಮತ್ತು ಅಮೆರಿಕಾ ನಡುವಿನ ಆಪ್ತ ಬಾಂಧವ್ಯವನ್ನು ಪ್ರದರ್ಶಿಸಿದೆ. ಇದು ನಾವಿನ್ಯತೆ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ನಮ್ಮ ಹಂಚಿಕೆಯ ಬದ್ಧತೆಯನ್ನೂ ಒತ್ತಿ ಹೇಳಿದೆ.

ಈ ವರ್ಷದ ಶೃಂಗಸಭೆಗೆ ಆಯ್ಕೆ ಮಾಡಿರುವ ವಿಷಯಗಳಲ್ಲಿ ಆರೋಗ್ಯ ರಕ್ಷಣೆ ಮತ್ತು ಜೀವನ ವಿಜ್ಞಾನ; ಡಿಜಿಟಲ್ ಆರ್ಥಿಕತೆ ಮತ್ತು ಹಣಕಾಸು ತಂತ್ರಜ್ಞಾನ; ಇಂಧನ ಮತ್ತು ಮೂಲಸೌಕರ್ಯ; ಮತ್ತು ಮಾಧ್ಯಮ ಮತ್ತು ಮನರಂಜನೆಯೂ ಸೇರಿವೆ. ಈ ಇವೆಲ್ಲವೂ ಮನುಕುಲದ ಸಮೃದ್ಧಿ ಮತ್ತು ಕ್ಷೇಮಕ್ಕೆ ಸೂಕ್ತ ಮತ್ತು ಮಹತ್ವದ ವಿಷಯಗಳಾಗಿವೆ.

ಜಿಇಎಸ್ ನ ಈ ಆವೃತ್ತಿಯ ಘೋಷವಾಕ್ಯ ‘ಮಹಿಳೆ ಮೊದಲು, ಸರ್ವರ ಸಮೃದ್ಧಿ’ ಎಂಬುದಾಗಿದೆ. ಭಾರತೀಯ ಪುರಾಣಗಳಲ್ಲಿ ಸ್ತ್ರೀಯನ್ನು ಶಕ್ತಿ ದೇವತೆಯ ರೂಪ ಎಂದು ಬಣ್ಣಿಸಲಾಗಿದೆ. ನಾವು ನಮ್ಮ ಅಭಿವೃದ್ಧಿಗೆ ಮಹಿಳಾ ಸಬಲೀಕರಣ ಮುಖ್ಯ ಎಂದು ನಂಬಿದ್ದೇವೆ.

ನಮ್ಮ ಇತಿಹಾಸದಲ್ಲಿ ಅಪ್ರತಿಮ ಪ್ರತಿಭೆ ಪ್ರದರ್ಶಿಸಿದ ಮಹಿಳೆಯರ ಉಲ್ಲೇಖವಿದೆ. ಕ್ರಿಸ್ತ ಪೂರ್ವ 7ನೇ ಶತಮಾನದ ಗಾರ್ಗಿ ಎಂಬ ಪ್ರಾಚೀನ ತತ್ವಜ್ಞಾನಿ, ಪುರುಷ ಋಷಿಗೆ ಸವಾಲು ಹಾಕಿ ತತ್ವಜ್ಞಾನ ಪ್ರದರ್ಶಿಸಿದರು, ಇದು ಆ ಕಾಲದಲ್ಲಿ ಕಂಡು ಕೇಳರಿಯದ ವಿಷಯವಾಗಿತ್ತು. ನಮ್ಮ ಶೌರ್ಯವಂತ ರಾಣಿಯರಾದ ರಾಣಿ ಅಹಲ್ಯಾಬಾರಿ ಹೋಲ್ಕರ್ ಮತ್ತು ರಾಣಿ ಲಕ್ಷ್ಮೀಬಾಯಿ ತಮ್ಮ ಸಂಸ್ಥಾನಗಳನ್ನು ಕಾಪಾಡಿಕೊಳ್ಳಲು ಹೋರಾಟ ನಡೆಸಿದ್ದರು. ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಇಂಥ ಪ್ರೇರೇಪಣೆಯ ನಿದರ್ಶನಗಳಿವೆ.

ಭಾರತೀಯ ಮಹಿಳೆಯರು ವಿವಿಧ ವಿಭಾಗಗಳಲ್ಲಿ ಮುನ್ನಡೆಯುತ್ತಿದ್ದಾರೆ. ಮಂಗಳಯಾನ ಸೇರಿದಂತೆ ನಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಮಹಿಳಾ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ. ಅಮೆರಿಕದ ಬಾಹ್ಯಾಕಾಶ ಕಾರ್ಯಕ್ರಮದ ಭಾಗವಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಇಬ್ಬರೂ ಭಾರತೀಯ ಮೂಲದವರಾಗಿದ್ದಾರೆ.

ಅತ್ಯಂತ ಹಳೆಯ ನಾಲ್ಕು ಹೈಕೋರ್ಟ್ ಗಳ ಪೈಕಿ ಮೂರು ಹೈಕೋರ್ಟ್ ಗಳಲ್ಲಿ ಮಹಿಳಾ ನ್ಯಾಯಮೂರ್ತಿಗಳು ಮುಖ್ಯಸ್ಥರಾಗಿದ್ದಾರೆ. ನಮ್ಮ ಮಹಿಳಾ ಕ್ರೀಡಾಪಟುಗಳು ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಹೈದ್ರಾಬಾದ್ ನಗರ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಮತ್ತು ಸಾನಿಯಾ ಮಿರ್ಜಾ ಅವರ ತವರೂ ಆಗಿದೆ. ಇವರೆಲ್ಲರೂ ಭಾರತಕ್ಕೆ ಪ್ರಶಸ್ತಿ ತಂದಿದ್ದಾರೆ.

ಭಾರತದಲ್ಲಿ, ಭಾರತದಲ್ಲಿ ನಾವು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೂರನೇ ಒಂದು ಭಾಗಕ್ಕೆ ಕಡಿಮೆ ಇಲ್ಲದಂತೆ ಮಹಿಳಾ ಪ್ರಾತಿನಿಧ್ಯ ನೀಡಿದ್ದು, ತಳಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಿದ್ದೇವೆ.

ನಮ್ಮ ಕೃಷಿ ಮತ್ತು ಪೂರಕ ವಲಯದಲ್ಲಿ ಶೇಕಡ 60ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಗುಜರಾತ್ ನಲ್ಲಿರುವ ಹಾಲು ಸಹಕಾರ ಒಕ್ಕೂಟಗಳಲ್ಲಿ ಮತ್ತು ಶ್ರೀ ಮಹಿಳಾ ಗೃಹ ಉದ್ಯೋಗ ಲಿಜತ್ ಪಾಪಡ್ ಗಳು ಜಾಗತಿಕವಾಗಿ ಮನ್ನಣೆ ಪಡೆದ ಹೆಚ್ಚು ಯಶಸ್ವಿಯಾದ ಮಹಿಳಾ ಸಹಕಾರಿ ಚಳವಳಿಗೆ ಉದಾಹರಣೆಗಳಾಗಿವೆ.

ಸ್ನೇಹಿತರೆ,

ಈ ಜಿಇಎಸ್ ನಲ್ಲಿ ಶೇಕಡ 50ಕ್ಕೂ ಹೆಚ್ಚು ಪ್ರತಿನಿಧಿಗಳು ಮಹಿಳೆಯರಾಗಿದ್ದಾರೆ. ಮುಂದಿನ ಎರಡು ದಿನಗಳ ಕಾಲ, ನೀವು ಜೀವನದಲ್ಲಿ ತಮ್ಮದೇ ಆದ ಹಂತಗಳಲ್ಲಿ ವಿಭಿನ್ನವಾಗಿರಲು ಧೈರ್ಯ ಮಾಡಿದ ಅನೇಕ ಮಹಿಳೆಯರನ್ನು ಭೇಟಿಯಾಗಲಿದ್ದೀರಿ. ಈಗ ಅವರು ಹೊಸ ಪೀಳಿಗೆಯ ಮಹಿಳಾ ಉದ್ದಿಮೆದಾರರಿಗೆ ಸ್ಫೂರ್ತಿಯಾಗಿದ್ದಾರೆ. ಈ ಶೃಂಗಸಭೆಯಲ್ಲಿನ ಸಮಾಲೋಚನೆಗಳು ಮಹಿಳಾ ಉದ್ಯಮಶೀಲತೆಗೆ ಹೆಚ್ಚಿನ ಬೆಂಬಲ ಹೇಗೆ ನೀಡಬೇಕು ಎಂಬುದರ ಬಗ್ಗೆ ಗಮನ ಹರಿಸಲಿವೆ ಎಂದು ಭಾವಿಸುತ್ತೇನೆ.

ಮಾನ್ಯರೇ ಮತ್ತು ಮಹಿಳೆಯರೇ,

ಭಾರತವು ನಾವಿನ್ಯತೆ ಮತ್ತು ಉದ್ಯಮಶೀಲತೆಗೆ ಯುಗಗಳಿಂದಲೂ ಮೂಲ ನೆಲೆಯಾಗಿದೆ. ಭಾರತದ ಪ್ರಾಚೀನ ಗ್ರಂಥ ಚರಕ ಸಂಹಿತೆ ಜಗತ್ತಿಗೆ ಆಯುರ್ವೇದವನ್ನು ಪರಿಚಯಿಸಿತು. ಯೋಗ ಭಾರತದ ಮತ್ತೊಂದು ಪುರಾತನ ನಾವಿನ್ಯತೆಯಾಗಿದೆ. ಈಗ ಪ್ರತಿ ವರ್ಷ ಜೂನ್ 21ರಂದು ಯೋಗ ದಿನ ಆಚರಿಸಲು ಇಡೀ ವಿಶ್ವವೇ ಒಗ್ಗೂಡುತ್ತಿದೆ. ಯೋಗ, ಆಧ್ಯಾತ್ಮಿಕತೆ ಮತ್ತು ಸಾಂಪ್ರದಾಯಿಕ ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ಹಲವು ಉದ್ದಿಮೆದಾರರು ಭಾಗಿಯಾಗಿದ್ದಾರೆ.

ನಾವು ಇಂದು ವಾಸಿಸುತ್ತಿರುವ ಡಿಜಿಟಲ್ ಪ್ರಪಂಚವು 0 ಮತ್ತು 1ರ  (ಬೈನರಿ) ವ್ಯವಸ್ಥೆಯನ್ನು ಆಧರಿಸಿದೆ. ಈ ಬೈನರಿ ವ್ಯವಸ್ಥೆಯ ಅಡಿಪಾಯವಾದ ಶೂನ್ಯವು ಭಾರತದಲ್ಲಿ ಆರ್ಯಭಟನ ಕಾರ್ಯದಿಂದ ಆದುದಾಗಿದೆ. ಅದೇ ರೀತಿ ಆಧುನಿಕ ಯುಗದ ಆರ್ಥಿಕ ನೀತಿ, ತೆರಿಗೆ ವ್ಯವಸ್ಥೆ ಮತ್ತು ಸಾರ್ವಜನಿಕ ಹಣಕಾಸು ನೀತಿಗಳ ಹಲವು ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ನಮ್ಮ ಪ್ರಾಚೀನ ಗ್ರಂಥ ಕೌಟಿಲ್ಯನ  ಅರ್ಥಶಾಸ್ತ್ರದಲ್ಲಿ ಒತ್ತಿ ಹೇಳಲಾಗಿದೆ.

ಭಾರತದ ಪ್ರಾಚೀನ ಲೋಹಶಾಸ್ತ್ರದ ತಜ್ಞತೆಯೂ ಜನಜನಿತವಾಗಿದೆ. ನಮ್ಮ ಹಲವು ಬಂದರುಗಳು ಮತ್ತು ಲೋಥಲ್ ನ ವಿಶ್ವದ ಹಳೆಯ ಹಡಗುಕಟ್ಟೆ ಚಲನಶೀಲ ವಾಣಿಜ್ಯ ನಂಟಿಗೆ ಸಾಕ್ಷಿಯಾಗಿವೆ. ಭಾರತದ ವಣಿಕರು ವಿದೇಶಗಳಿಗೆ ಪ್ರಯಾಣಿಸುತ್ತಿದ್ದರು ಎಂಬ ಕಥೆಗಳು ನಮ್ಮ ಪೂರ್ವಜರ ಉದ್ಯಮಶೀಲತೆಯ ಸ್ವಭಾವ ಮತ್ತು ಸ್ಫೂರ್ತಿಯನ್ನು ಬಿಂಬಿಸುತ್ತವೆ.

ಉದ್ಯಮಶೀಲರನ್ನು ಗುರುತಿಸುವ ಪ್ರಮುಖ ಗುಣಗಳಾದರೂ ಏನು?

ಉದ್ಯಮಶೀಲ ತನ್ನ ಜ್ಞಾನ ಮತ್ತು ಕೌಶಲವನ್ನು ತನ್ನ ಉದ್ದೇಶ ಪೂರ್ಣಗೊಳಿಸಲು ಬಳಸುತ್ತಾನೆ. ಉದ್ದಿಮೆದಾರರು ವೈರುಧ್ಯದಲ್ಲೂ ಅವಕಾಶವನ್ನು ಹುಡುಕುತ್ತಾರೆ. ಅಂತಿಮ ಬಳಕೆದಾರರಿಗೆ ಪ್ರಕ್ರಿಯೆಗಳನ್ನು ಹೆಚ್ಚು ಅನುಕೂಲಕರವಾಗಿ ಮತ್ತು ಆರಾಮದಾಯಕವಾಗಿಸುವ ಮೂಲಕ ಭಾವನಾತ್ಮಕ ಅಗತ್ಯಗಳನ್ನು ಪೂರೈಸಲು ಅವರು ಪ್ರಯತ್ನಿಸುತ್ತಾರೆ. ಅವರು ದೃಢ ಮತ್ತು ತಾಳ್ಮೆಯಿಂದಿರುತ್ತಾರೆ. ಸ್ವಾಮಿ ವಿವೇಕಾನಂದರು ಹೇಳುವಂತೆ ಪ್ರತಿಯೊಂದು ಕೆಲಸವೂ – ಹಾಸ್ಯಾಸ್ಪದ, ಪ್ರತಿರೋಧ ಮತ್ತು ಸಮ್ಮತಿ ಎಂಬ ಮೂರು ಹಂತಗಳನ್ನು ದಾಟಿ ಸಾಗುತ್ತವೆ. ತಮ್ಮ ಕಾಲಕ್ಕಿಂತ ಮುಂದೆ ಯಾರು ಯೋಚಿಸುತ್ತಾರೋ ಅವರು ತಪ್ಪಾಗಿ ಅರ್ಥೈಸಿಕೊಂಡಿರುತ್ತಾರೆ. ಬಹುತೇಕ ಉದ್ದಿಮೆದಾರರು ಇದಕ್ಕೆ ಚಿರಪರಿಚಿತರಾಗಿದ್ದಾರೆ.

ಮನುಕುಲದ ಒಳಿತಿಗಾಗಿ ವಿಭಿನ್ನವಾಗಿ ಮತ್ತು ತಮ್ಮ ಕಾಲಕ್ಕೆ ಮುಂಚೆಯೇ ಯೋಚಿಸುವ ಶಕ್ತಿಯು ಉದ್ಯಮಶೀಲರನ್ನು ದೂರವೇ ಉಳಿಸುತ್ತದೆ. ಇಂದಿನ ಯುವ ಪೀಳಿಗೆಯಲ್ಲಿ ಈ ಶಕ್ತಿಯನ್ನು ನಾನು ಕಂಡಿದ್ದೇನೆ. ವಿಶ್ವವನ್ನು ಉತ್ತಮ ತಾಣವಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಬಲ್ಲ 800 ದಶಲಕ್ಷ ಸಮರ್ಥ ಉದ್ದಿಮೆದಾರರನ್ನು ನಾನು ನೋಡಿದ್ದೇನೆ.  2018ರ ವೇಳೆಗೆ ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ 500 ದಶಲಕ್ಷವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇದು  ಉದ್ಯೋಗ ಸೃಷ್ಟಿ ಮತ್ತು ವ್ಯಾಪ್ತಿಯ ವಿಷಯದಲ್ಲಿ ಯಾವುದೇ ಉದ್ಯಮಕ್ಕೆ ಬೃಹತ್ ಸಾಮರ್ಥ್ಯ ವೃದ್ಧಿಯ ಅವಕಾಶವನ್ನು ಒದಗಿಸುತ್ತದೆ.  

ನಮ್ಮ ನವೋದ್ಯಮ ಭಾರತ ಕಾರ್ಯಕ್ರಮವು ಉದ್ಯಮಶೀಲತೆ ಹೆಚ್ಚಿಸುವ ಮತ್ತು ನಾವಿನ್ಯತೆಯನ್ನು ಉತ್ತೇಜಿಸುವ ಸಮಗ್ರ ಕ್ರಿಯಾ ಯೋಜನೆಯಾಗಿದೆ. ಇದು ನಿಯಂತ್ರಣ ಹೊರೆಗಳನ್ನು ಕಡಿಮೆ ಮಾಡಿ ಮತ್ತು ನವೋದ್ಯಮಗಳಿಗೆ ಬೆಂಬಲ ಒದಗಿಸುವ ಗುರಿ ಹೊಂದಿದೆ. ಭಾರತದಲ್ಲಿ 1200  ಅನುಪಯುಕ್ತ ಕಾನೂನುಗಳನ್ನು ರದ್ದು ಮಾಡಲಾಗಿದೆ, ಎಫ್.ಡಿ.ಐ ಗೆ ಸಂಬಂಧಿಸಿದಂತೆ 21 ವಲಯಗಳಲ್ಲಿ 87 ನಿಯಮಗಳನ್ನು ಸರಳ ಮಾಡಲಾಗಿದೆ ಮತ್ತು ಸರ್ಕಾರದ ಹಲವು ಪ್ರಕ್ರಿಯೆಗಳನ್ನು ಆನ್ ಲೈನ್ ಮಾಡಲಾಗಿದೆ.

ನಮ್ಮ ಸರ್ಕಾರ ವಾಣಿಜ್ಯ ವಾತಾವರಣವನ್ನು ಸುಧಾರಣೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿದೆ. ಮೂರು ವರ್ಷಗಳ ಈ ಪ್ರಯತ್ನದ ಫಲವಾಗಿ ವಿಶ್ವಬ್ಯಾಂಕ್ ನ ಸುಗಮ ವ್ಯಾಪಾರ ವರದಿಯಲ್ಲಿ ಭಾರತದ ಶ್ರೇಣಿ 142ರಿಂದ 100ನೇ ಸ್ಥಾನಕ್ಕೆ ಏರಿದೆ. ನಿರ್ಮಾಣ ಅನುಮತಿ, ಸಾಲ ಪಡೆಯುವಿಕೆ, ಅಲ್ಪಸಂಖ್ಯಾತ ಹೂಡಿಕೆದಾರರ ರಕ್ಷಣೆ, ತೆರಿಗೆ ಪಾವತಿ, ಒಪ್ಪಂದಗಳ ಜಾರಿ ಮತ್ತು ದಿವಾಳಿತನ ಪರಿಹಾರದಂಥ ಸೂಚ್ಯಂಕಗಳಲ್ಲಿ ಸುಧಾರಣೆ ಮಾಡಿದ್ದೇವೆ.

ಈ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಈ ಕ್ಷೇತ್ರದಲ್ಲಿ 100ನೇ ಶ್ರೇಯಾಂಕದಿಂದ ನಾವು ತೃಪ್ತಿ ಹೊಂದಿಲ್ಲ. ನಾವು 50ನೇ ಶ್ರೇಯಾಂಕದತ್ತ ನೋಡುತ್ತಿದ್ದೇವೆ.

ನಾವು ಉದ್ದಿಮೆದಾರರಿಗೆ 10 ಲಕ್ಷ ರೂಪಾಯಿಗಳವರೆಗೆ ಸಾಲ ಒದಗಿಸಲು ಮುದ್ರಾ ಯೋಜನೆಯನ್ನು ಆರಂಭಿಸಿದ್ದೇವೆ. 2015ರಲ್ಲಿ ಯೋಜನೆ ಆರಂಭವಾದ ದಿನದಿಂದ 90 ದಶಲಕ್ಷ ಜನಿಗೆ 4.28 ಟ್ರಿಲಿಯನ್ ರೂಪಾಯಿ ಮೌಲ್ಯದ ಸಾಲವನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 70 ದಶಲಕ್ಷ ಸಾಲವನ್ನು ಮಹಿಳಾ ಉದ್ದಿಮೆದಾರರಿಗೆ ನೀಡಲಾಗಿದೆ.

ನನ್ನ ಸರ್ಕಾರ ಅಟಲ್ ನಾವಿನ್ಯ ಅಭಿಯಾನವನ್ನು ಆರಂಭಿಸಿದೆ. ನಾವು ಮಕ್ಕಳಲ್ಲಿ ನಾವಿನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು 900ಕ್ಕೂ ಹೆಚ್ಚು ಶಾಲೆಗಳಲ್ಲಿ ಟಿಂಕರಿಂಗ್ ಪ್ರಯೋಗಾಲಯಗಳನ್ನು ತೆರೆಯುತ್ತಿದ್ದೇವೆ. ನಮ್ಮ ಮೆಂಟರ್ ಇಂಡಿಯಾ ಉಪಕ್ರಮವು ಈ ಟಿಂಕರಿಂಗ್ ಪ್ರಯೋಗಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ನಾಯಕರನ್ನು ನಿಯುಕ್ತಿಗೊಳಿಸುತ್ತದೆ. ಇದರ ಜೊತೆಗೆ 19 ಇಂಕ್ಯುಬೇಷನ್ ಕೇಂದ್ರಗಳನ್ನು ವಿವಿಧ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ರಚಿಸಲಾಗಿದೆ. ಇವು ನಾವಿನ್ಯಪೂರ್ಣ ನವೋದ್ಯಮ ವಾಣಿಜ್ಯವನ್ನು ಸುಸ್ಥಿರ ಮತ್ತು ಮೇಲ್ಮುಖವಾಗಿ ಸಾಗಿಸುತ್ತದೆ.

ನಾವು ಆಧಾರ್ ಅನ್ನು ಆರಂಭಿಸಿದ್ದೇವೆ –ಇದು ವಿಶ್ವದ ಅತಿ ದೊಡ್ಡ ಬಯೋಮೆಟ್ರಿಕ್ ಆಧಾರಿತ ಡಿಜಿಟಲ್ ದತ್ತಾಂಶವಾಗಿದೆ. ಪ್ರಸ್ತುತ ಇದು 1.15 ಶತಕೋಟಿ ಜನರನ್ನು ವ್ಯಾಪಿಸಿದೆ ಮತ್ತು ಪ್ರತಿನಿತ್ಯ 40 ದಶಲಕ್ಷ ವಹಿವಾಟುಗಳನ್ನು ಡಿಜಿಟಲ್ ಮೂಲಕ ದೃಢೀಕರಿಸುತ್ತದೆ. ನಾವು ಈಗ ಆಧಾರ್ ಬಳಕೆ ಮಾಡಿಕೊಂಡು ಸರ್ಕಾರದ ವಿವಿಧ ಯೋಜನೆಗಳ ಆರ್ಥಿಕ ಸವಲತ್ತುಗಳನ್ನು ಫಲಾನುಭವಿಗಳಿಗೆ ನೇರವಾಗಿ ವರ್ಗಾವಣೆ ಮಾಡತ್ತಿದ್ದೇವೆ.

ಜನ್ ಧನ್ ಮೂಲಕ ತೆರೆಯಲಾಗಿರುವ ಬಹುತೇಕ 300 ದಶಲಕ್ಷ ಬ್ಯಾಂಕ್ ಖ್ಯಾತೆಗಳಲ್ಲಿ 685 ಶತಕೋಟಿ ಅಥವಾ 10 ಶತಕೋಟಿ ಡಾಲರ್ ಜಮೆ ಆಗಿದೆ. ಇದು ಈ ಹಿಂದೆ ಸಮಾಜದ ಬ್ಯಾಂಕ್ ಸೌಲಭ್ಯ ವಂಚಿತ ಸಮುದಾಯವಾಗಿತ್ತು. ಈ ಪೈಕಿ ಶೇ.53ರಷ್ಟು ಖಾತೆಗಳು ಮಹಿಳೆಯರದಾಗಿವೆ.

ನಾವು ಕಡಿಮೆ ನಗದು ವಹಿವಾಟಿನತ್ತ ಕಾರ್ಯೋನ್ಮುಕವಾಗಿದ್ದು, ಏಕೀಕೃತ ಪಾವತಿ ಅಪ್ಲಿಕೇಷನ್ ಭೀಮ್ ಗೆ ಚಾಲನೆ ನೀಡಿದ್ದೇವೆ. ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಈ ವೇದಿಕೆಯಲ್ಲಿ ಬಹುತೇಕ 280 ಸಾವಿರ ವಹಿವಾಟು ನಿತ್ಯ ನಡೆಯುತ್ತಿದೆ.

ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡುವ ಕಾರ್ಯಕ್ರಮ ಬಹುತೇಕ ಮುಕ್ತಾಯದ ಹಂತದಲ್ಲಿದೆ. ನಾವು ಸೌಭಾಗ್ಯ ಯೋಜನೆ ಆರಂಭಿಸಿದ್ದು, ಇದು 2018ರ ಡಿಸೆಂಬರ್ ಅಂತ್ಯದ ಹೊತ್ತಿಗೆ ಎಲ್ಲ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಿದೆ.

2019ರ ಮಾರ್ಚ್ ಹೊತ್ತಿಗೆ ಎಲ್ಲ ಗ್ರಾಮೀಣ ಪ್ರದೇಶಗಳಿಗೂ ಇಂಟರ್ ನೆಟ್ ಹೈ ಸ್ಪೀಡ್ ಬ್ರಾಡ್ ಬ್ಯಾಂಡ್ ಒದಗಿಸಲು ಕಾರ್ಯಕ್ರಮ ರೂಪಿಸಿದ್ದೇವೆ.

ನಮ್ಮ ಶುದ್ಧ ಇಂಧನ ಕಾರ್ಯಕ್ರಮದ ಅಡಿ ಕೇವಲ 3 ವರ್ಷಗಳಲ್ಲಿ, ನಾವು ನವೀಕರಿಸಬಹುದಾದ ಇಂಧನದ ಸಾಮರ್ಥ್ಯವನ್ನು 30 ಸಾವಿರ ಮೆಗಾ ವ್ಯಾಟ್ ಗಳಿಂದ ಸುಮಾರು 60 ಸಾವಿರ ಮೆಗಾ ವ್ಯಾಟ್ ಗಳಿಗೆ ಹೆಚ್ಚಿಸಿದ್ದೇವೆ. ಸೌರ ಇಂಧನ ಉತ್ಪಾದನೆ ಸಹ ಕಳೆದ ವರ್ಷ ಶೇ.80ರಷ್ಟು ಹೆಚ್ಚಳವಾಗಿದೆ. ನಾವು ರಾಷ್ಟ್ರೀಯ ಅನಿಲ ಗ್ರಿಡ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಸಮಗ್ರ ರಾಷ್ಟ್ರೀಯ ಇಂಧನ ನೀತಿ ಸಹ ಕಾರ್ಯರೂಪಕ್ಕೆ ಬರುತ್ತಿದೆ. ನಮ್ಮ ಸ್ವಚ್ಛ ಭಾರತ ಅಭಿಯಾನ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಸುಧಾರಿಸುತ್ತಿದೆ ಮತ್ತು ಗ್ರಾಮೀಣ ಮತ್ತು ನಗರ ವಸತಿ ಯೋಜನೆಗಳು ಗೌರವಯುತ ಜೀವನದ ನಮ್ಮ ಬದ್ಧತೆಯನ್ನು ಒತ್ತಿ ಹೇಳುತ್ತವೆ.

ಸಾಗರಮಾಲಾ ಮತ್ತು ಭಾರತಮಾಲಾದಂಥ ನಮ್ಮ ಮೂಲಸೌಕರ್ಯ ಹಾಗೂ ಸಂಪರ್ಕ ಕಾರ್ಯಕ್ರಮಗಳು ಉದ್ದಿಮೆದಾರರಿಗೆ ಹೂಡಿಕೆಗೆ ಹಲವು ವಾಣಿಜ್ಯಾವಕಾಶಗಳನ್ನು ಒದಗಿಸುತ್ತಿವೆ.

ನಮ್ಮ ಇತ್ತೀಚಿನ ಭಾರತದ ವಿಶ್ವ ಆಹಾರ ಉಪಕ್ರಮವು ಆಹಾರ ಸಂಸ್ಕರಣಾ ಕೈಗಾರಿಕೆ ಮತ್ತು ಕೃಷಿ ತ್ಯಾಜ್ಯ ವಲಯದ ಉದ್ದಿಮೆದಾರರೊಂದಿಗೆ ತೊಡಗಿಕೊಳ್ಳಲು ನೆರವಾಗಿದೆ.

ಪಾರದರ್ಶಕ ನೀತಿಗಳ ಮತ್ತು ಕಾನೂನಿನ ಆಡಳಿತದ ಭೂಮಿಕೆಯು ಉದ್ಯಮಶೀಲತೆಯ ವಿಕಾಸಕ್ಕೆ ಅಗತ್ಯ ಎಂಬುದನ್ನು ನನ್ನ ಸರ್ಕಾರ ಮನಗಂಡಿದೆ.

ಐತಿಹಾಸಿಕ ಸಂಪೂರ್ಣ ತೆರಿಗೆ ಪದ್ಧತಿಯನ್ನು ಇತ್ತೀಚೆಗೆ ಕೈಗೊಳ್ಳಲಾಗಿದ್ದು, ದೇಶದಾದ್ಯಂತ ಸರಕು ಮತ್ತು ಸೇವೆಗಳ ತೆರಿಗೆಯನ್ನು ತರಲಾಗಿದೆ. 2016ರಲ್ಲಿ ಜಾರಿಗೆ ತಂದ ದಿವಾಳಿತನ ಮತ್ತು ದಿವಾಳಿ ಸಂಹಿತೆ, ಒತ್ತಡದ ಬಂಡವಾಳಕ್ಕೆ ಸಕಾಲದ ಪರಿಹಾರ ಒದಗಿಸುವ ಕ್ರಮವಾಗಿದೆ. ಒತ್ತಡದ ಆಸ್ತಿಗಾಗಿ ಉದ್ದೇಶಪೂರ್ವಕ ಸುಸ್ತಿದಾರರಾಗುವುದನ್ನು ತಪ್ಪಿಸಲು  ನಾವು ಇತ್ತೀಚೆಗೆ ಇದನ್ನು ಮತ್ತಷ್ಟು ಸುಧಾರಿಸಿದ್ದೇವೆ.

ಪರ್ಯಾಯ ಆರ್ಥಿಕತೆಯನ್ನು ಎದುರಿಸಲು ಅಳವಡಿಸಿಕೊಂಡಿರುವ ಕ್ರಮಗಳು, ತೆರಿಗೆ ವಂಚನೆ ತಪ್ಪಿಸಿದ್ದು, ಕಪ್ಪುಹಣವನ್ನು ನಿಯಂತ್ರಿಸಿವೆ.

ನಮ್ಮ ಪ್ರಯತ್ನಗಳನ್ನು ಮೂಡಿ ಗುರುತಿಸಿದ್ದು, ಭಾರತ ಸರ್ಕಾರದ ಬಾಂಡ್ ಗಳ ಶ್ರೇಯಾಂಕ ಮೇಲೇರಿದೆ. ಈ ಮೇಲ್ದರ್ಜೆಯು 14 ವರ್ಷಗಳ ನಂತರ ಬಂದಿದೆ.  

ಭಾರತವು ವಿಶ್ವಬ್ಯಾಂಕ್ ಸಾಗಣೆ ಸಾಮರ್ಥ್ಯ ಪ್ರದರ್ಶನ ಸೂಚ್ಯಂಕದಲ್ಲಿ 2014ರಲ್ಲಿದ್ದ 54ನೇ ಸ್ಥಾನದಿಂದ 2016ರಲ್ಲಿ 35ನೇ ಸ್ಥಾನಕ್ಕೆ ಬಂದಿದೆ. ಇದು ದೇಶದೊಳಗೆ ಮತ್ತು ಹೊರಗೆ ಸಮರ್ಥವಾಗಿ ಸರಕುಗಳು ಸಂಚರಿಸುವುದನ್ನು ಪ್ರಚುರಪಡಿಸುತ್ತದೆ.

ಬೃಹತ್ ಆರ್ಥಿಕತೆಯ ದೃಷ್ಟಿಯಿಂದ ಸ್ಥಿರವಾದ ಹೂಡಿಕೆ ಸ್ನೇಹಿ ವಾತಾವರಣದ ಅಗತ್ಯವಿದೆ. ವಿತ್ತೀಯ ಮತ್ತು ಚಾಲ್ತಿ ಖಾತೆ ಕೊರತೆ ಹಾಗೂ ಹಣದುಬ್ಬರ ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ವಿದೇಶೀ ವಿನಿಮಯ ಮೀಸಲು 400 ಶತಕೋಟಿ ಡಾಲರ್ ದಾಟಿದೆ ಮತ್ತು ನಾವು ದೊಡ್ಡ ಪ್ರಮಾಣದ ವಿದೇಶೀ ಬಂಡವಾಳ ಹರಿವು ಆಕರ್ಷಿಸುತ್ತಿದ್ದೇವೆ.

ನನ್ನ ಭಾರತದ ಯುವ ಉದ್ಯಮಶೀಲರಿಗೆ ನಾನು ಹೇಳಬಯಸುವುದೇನೆಂದರೆ: ನೀವೆಲ್ಲರೂ 2022ರ ಹೊತ್ತಿಗೆ ನವಭಾರತ ನಿರ್ಮಾಣ ಮಾಡಲು ಏನಾದರೂ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದೀರಿ. ನೀವು ಭಾರತ ಪರಿವರ್ತನೆಯಲ್ಲಿ ಬದಲಾವಣೆಯ ಚಾಲಕ ಶಕ್ತಿ ಮತ್ತು ಸಾಧನವಾಗಿದ್ದೀರಿ.

ಜಗತ್ತಿನಾದ್ಯಂತದಿಂದ ಆಗಮಿಸಿರುವ ನನ್ನ ಉದ್ಯಮಶೀಲತೆಯ ಗೆಳೆಯರೇ, ನಾನು ನಿಮಗೆ ಹೇಳ ಬಯಸುವುದೇನೆಂದರೆ: ಬನ್ನಿ, ಮೇಕ್ ಇನ್ ಇಂಡಿಯಾದಲ್ಲಿ ಭಾಗಿಯಾಗಿ, ಭಾರತಕ್ಕಾಗಿ- ಮತ್ತು ವಿಶ್ವಕ್ಕಾಗಿ ಭಾರತದಲ್ಲಿ ಹೂಡಿಕೆ ಮಾಡಿ. ನಾನು ನಿಮ್ಮೆಲ್ಲರನ್ನೂ ಭಾರತದ ಪ್ರಗತಿಯ ಗಾಥೆಯಲ್ಲಿ ಪಾಲುದಾರರಾಗುವಂತೆ ಆಹ್ವಾನಿಸುತ್ತೇನೆ. ಮತ್ತು ಮತ್ತೊಮ್ಮೆ ನಿಮಗೆ ಹೃತ್ಪೂರ್ವಕವಾದ ಬೆಂಬಲದ ಭರವಸೆ ನೀಡುತ್ತೇನೆ.

ಅಧ್ಯಕ್ಷ ಟ್ರಂಪ್ ಅವರು ನವೆಂಬರ್ 2017ನ್ನು ಉದ್ಯಮಶೀಲತೆಯ ಮಾಸ ಎಂದು ಘೋಷಿಸಿರುವುದಾಗಿ ನನಗೆ ತಿಳಿಸಲಾಗಿದೆ. ಅಮೆರಿಕ ಸಹ ನವೆಂಬರ್ 21ರಂದು ರಾಷ್ಟ್ರೀಯ ಉದ್ಯಮಶೀಲರ ದಿನವನ್ನು ಆಚರಿಸಿದೆ. ಈ ಶೃಂಗಸಭೆಯು ಸಹ ಆ ದ್ಯೇಯಗಳನ್ನು ಅನುರಣಿಸಿದೆ.  ಈ ಶೃಂಗಸಭೆಯಲ್ಲಿ ನೀವು ಫಲಪ್ರದ, ಆಕರ್ಷಕ ಮತ್ತು ಉಪಯುಕ್ತ ಚರ್ಚೆಗಳನ್ನು ಮಾಡಿ ಎಂದು ಹೇಳುವ ಮೂಲಕ ನನ್ನ ಭಾಷಣವನ್ನು ಸಮಾಪ್ತಿಗೊಳಿಸುತ್ತೇನೆ.

ಧನ್ಯವಾದಗಳು

****



(Release ID: 1511198) Visitor Counter : 99


Read this release in: English