PIB Headquarters

ರಾಷ್ಟ್ರೀಯ ಏಕತಾ ದಿವಸ್ (31ನೇ ಅಕ್ಟೋಬರ್) ಸರ್ದಾರ್ ಪಟೇಲರ ಜನ್ಮದಿನಾಚರಣೆ ಸರ್ದಾರ್ ಪಟೇಲರ ಆರ್ಥಿಕ ಚಿಂತನೆಗಳು

Posted On: 25 OCT 2017 4:16PM by PIB Bengaluru

ವಿಶೇಷ ಲೇಖನ ;

ರಾಷ್ಟ್ರೀಯ ಏಕತಾ ದಿವಸ್ (31ನೇ ಅಕ್ಟೋಬರ್)

ಸರ್ದಾರ್ ಪಟೇಲರ ಜನ್ಮದಿನಾಚರಣೆ

                                                                  ಸರ್ದಾರ್ ಪಟೇಲರ ಆರ್ಥಿಕ ಚಿಂತನೆಗಳು                                                                  

                   

                     ಪೂಜಾ ಮೆಹ್ರಾ,

1917 ರಿಂದ 1950 ವರೆಗಿನ ಭಾರತೀಯ ರಾಜಕಾರಣದಲ್ಲಿ ಸರ್ದಾರ್ ಪಟೇಲ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮೊದಲನೆಯದಾಗಿ ಅವರು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದರು. ಮತ್ತು 1947  ರಲ್ಲಿ ಸ್ವಾತಂತ್ರ್ಯ ದೊರೆತ ಬಳಿಕ ಉಪಪ್ರಧಾನಿಯಾಗಿ ಅವರು ಸಂಕೀರ್ಣ ಮತ್ತು ನಿರ್ಣಾಯಕ ಖಾತೆಗಳಾದ ಗೃಹ, ರಾಜ್ಯಗಳು ಮತ್ತು ಮಾಹಿತಿ ಹಾಗು ಪ್ರಸಾರ ಖಾತೆಗಳನ್ನು ನಿರ್ವಹಿಸಿದ್ದರುಉಕ್ಕಿನ ಮನುಷ್ಯ ಎಂದು ಕರೆಯಲ್ಪಡುವ ಅವರು ಆಧುನಿಕ ಭಾರತದ ಸ್ಥಾಪಕರು, ಅವರು ಬಹು ಸಂಖ್ಯೆಯ ಅಧಿಕಾರಿಗಳು ಪಾಕಿಸ್ತಾನಕ್ಕೆ ವರ್ಗಾವಣೆಗೊಂಡ ಬಳಿಕ ಭಾರತೀಯ ಅಧಿಕಾರಶಾಹಿಯನ್ನು ಪುನಾರಚಿಸಿದರು, ರಾಜರಾಳ್ವಿಕೆಯ ರಾಜ್ಯಗಳನ್ನು ಭಾರತದ ಒಕ್ಕೂಟದಲ್ಲಿ ವಿಲಯನಗೊಳಿಸಿದವರು ಮತ್ತು ಭಾರತೀಯ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವರು.

   ಭೂಭಾಗಗಳ ಏಕೀಕರಣದ ಬಳಿಕ ಸರಕಾರದೆದುರು ಇದ್ದ  ತಕ್ಷಣದ ಕೆಲಸವೆಂದರೆ ಕೈಗಾರಿಕೋದ್ಯಮಿಗಳು ಮತ್ತು ಕಾರ್ಮಿಕರು ರಾಷ್ಟ್ರೀಯ ಪ್ರಯತ್ನವಾದ ಚೇತರಿಸಿಕೊಳ್ಳುವಿಕೆ ಮತ್ತು ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು. ದೇಶವಾಸಿಗಳ ಜೀವನ ಮಟ್ಟದಲ್ಲಿ ಸುಧಾರಣೆ ತರುವುದು ಇದರ ಉದ್ದೇಶವಾಗಿತ್ತು.. ಬ್ರಿಟಿಷರು ತಮಗೇನು ಬೇಕೋ ಅದನ್ನು ಕೊಂಡೊಯ್ದಿದ್ದರು, ಪಟೇಲರ ಮಾತಿನಲ್ಲಿ ಹೇಳುವುದಾದರೆ ಅವರ ಪ್ರತಿಮೆಗಳನ್ನು ಮಾತ್ರ ಬಿಟ್ಟು ಹೋಗಿದ್ದರು. ಬ್ರಿಟಿಷ್  ಸರಕಾರ ಯುದ್ಧಕ್ಕಾಗಿ ತಯಾರು ಮಾಡಲು ಜಾರಿ ಮಾಡಿದ್ದ ಆರ್ಥಿಕ ನಿಯಂತ್ರಣದ ಹಲವು ಸಲಕರಣೆಗಳು ಈಗಲೂ ಕಾರ್ಯಾಚರಿಸುತ್ತಿದ್ದವು. ಇದರಿಂದಾಗಿ ಆಮದನ್ನು ಗಂಭೀರವಾಗಿ ನಿರ್ಬಂಧಿಸಲಾಗಿತ್ತು. ಭಾರತದ ರಫ್ತಿನಿಂದ  ಯುದ್ಧಕ್ಕಾಗಿ ಗಳಿಸಿದ್ದ ವಿದೇಶೀ ವಿನಿಮಯವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್  ಇನ್ನೂ ಭಾರತೀಯ ರಿಸರ್ವ್ ಬ್ಯಾಂಕಿಗೆ ವರ್ಗಾಯಿಸಿರಲಿಲ್ಲ. ಇದರಿಂದಾಗಿ ದೊಡ್ಡ ಮೊತ್ತದ ಸ್ಟರ್ಲಿಂಗ್  ಶಿಲ್ಕು ಇತ್ತು, ಆದರೆ ಯುದ್ಧದಿಂದ ಹಾನಿಗೊಳಗಾದ ಇಂಗ್ಲೆಂಡ್ ಬಾಕಿಯನ್ನು ಪಾವತಿಸುವ ಸ್ಥಿತಿಯಲ್ಲಿರಲಿಲ್ಲ. ಹಣದುಬ್ಬರ  ಕೈಮೀರಿತ್ತು. ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟಕ್ ) ಸಮ್ಮೇಳನ ಇಂಧೋರ್ ನಲ್ಲಿ 1949 ಮೇ ತಿಂಗಳಲ್ಲಿ ನಡೆದಾಗ ಅಲ್ಲಿ ಮಾತನಾಡಿದ ಸರ್ದಾರ್ ಪಟೇಲರು ಭಾರತೀಯ ಆರ್ಥಿಕತೆಗೆ ಪುನಃಶ್ಚೇತನ ಕೊಡುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು. ಅವರು ಹೇಳಿದ್ದರು, “  ನಮ್ಮ ದೀರ್ಘ ಕಾಲದ ಗುಲಾಮಗಿರಿ  ಮತ್ತು ಇತ್ತೀಚಿನ ಯುದ್ದದ ಪರಿಣಾಮ ನಮ್ಮ ಆರ್ಥಿಕತೆಯ ಜೀವಾವಾಧಾರವಾದ ರಕ್ತವೇ ಹರಿದು ಹೋಗುವಂತೆ ಮಾಡಿದೆ. ನಾವೀಗ  ಅಧಿಕಾರಕ್ಕೇರಿದ್ದೇವೆ, ಅದನ್ನು ಪುನಃಶ್ಚೇತನಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ, ಹೊಸ ರಕ್ತವನ್ನು ಹನಿ ಹನಿಯಾಗಿ ಸೇರಿಸುತ್ತಾ ಹೋಗಬೇಕಿದೆ.” ಎಂದು

  ವಿಭಜನೆ ವಿಪತ್ತಿಗೆ ಈಡಾಗುವ ಸಾಧ್ಯತೆಗಳನ್ನು ಹೆಚ್ಚಿಸಿತ್ತು. ಮತ್ತು ಇದರಿಂದಾಗಿ ವ್ಯಾಪಾರೋದ್ಯಮದಲ್ಲಿ ವಿಶ್ವಾಸ ಮೂಡಿಸುವುದು ಸರ್ವಪ್ರಧಾನವಾಗಿತ್ತು. ವಿಭಜನೆ ಬಳಿಕ , ಕಲ್ಕತ್ತಾದ ಚಿಂತಾಕ್ರಾಂತ ವ್ಯಾಪಾರೋದ್ಯಮಿಗಳು ತಲೆಮಾರುಗಳಿಂದ ತಾವು ವ್ಯಾಪಾರೋದ್ಯಮ ನಡೆಸಿಕೊಂಡು ಬಂದ ಪಟ್ಟಣದಿಂದ ಹೊರ ಹೋಗಲು ಇಚ್ಚಿಸುತ್ತಿದ್ದರು. ಅವರ ಜತೆ ಮಾತುಕತೆ ನಡೆಸುವ ನಾಯಕತ್ವವನ್ನು ಸರ್ದಾರ್ ಅವರು ವಹಿಸಿಕೊಂಡರು ಮತ್ತು ವ್ಯಾಪಾರಿಗಳು ನಿರ್ಧಾರದಿಂದ ದೂರ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾದರು . ಹಾಗು ಅಲ್ಲಿಯೇ ನಿಲ್ಲುವಂತೆ ಮಾಡಿದರು. “ ನಾನು ಅವರಿಗೆ ಇಲ್ಲಿಯೇ ನಿಲ್ಲುವಂತೆ ಸಲಹೆ ಮಾಡಿದೆ, ಯಾಕೆಂದರೆ ಜಗತ್ತಿನ ಯಾವ ಶಕ್ತಿಯೂ ಕಲ್ಕತ್ತಾವನ್ನು ಭಾರತದಿಂದ ಪ್ರತ್ಯೇಕಿಸಲಾರದು ಎಂಬುದು ನನಗೆ ಖಚಿತವಾಗಿ ಗೊತ್ತಿದೆಎಂದವರು ಕಲ್ಕತ್ತಾದಲ್ಲಿ ಹೇಳಿದ್ದರು. ಅಲ್ಲಿಯ ಕಾರ್ಖಾನೆಗಳು ಅವಲಂಭಿಸಿದ್ದ ಸಣಬು ಬೆಳೆಯುವ ಪ್ರದೇಶಗಳು ವಿಭಜನೆ ಬಳಿಕ ಪಾಕಿಸ್ಥಾನಕ್ಕೆ ಸೇರಿದ್ದವು. ನೆರೆಯವರು ಒಪ್ಪಂದಗಳಿಗೆ ಬೆಲೆ ಕೊಡಲು ನಿರಾಕರಿಸಿದ್ದರು, ಮುಂಗಡ ಪಾವತಿ ಮಾಡಿದ್ದ ಸಣಬು ಪೂರೈಸುವುದಕ್ಕೆ ಕೂಡಾ ಒಪ್ಪಿರಲಿಲ್ಲ. ಸರ್ದಾರ್ ಪಟೇಲರಿಗೆ ಭಾರತಕ್ಕೆ ಇನ್ನು ಹೆಚ್ಚು ಕಾಲ ಕಾಯುವ ಪರಿಸ್ಥಿತಿ ಇಲ್ಲ ಎನ್ನುವ ಭಾವನೆ ಮೂಡಿತು, ಅವರು ಸ್ವಾವಲಂಬನೆಗೆ ಕರೆ ನೀಡಿದರು. 1950 ಜನವರಿಯಲ್ಲಿ ದಿಲ್ಲಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪಟೇಲರುಅವರು ಒಪ್ಪಂದಗಳನ್ನು ಜಾರಿಗೆ ತರುವ ಭರವಸೆ ಇಲ್ಲದಿದ್ದರೆ, ನಾವು ಅವರನ್ನು ಅವಲಂಬಿಸುವುದು ಸರಿಯಲ್ಲ. ನಾವು ಸಣಬು ಮತ್ತು ಹತ್ತಿ ಹಾಗು ಅಗತ್ಯದ ಒಳ್ಳೆಯ ಆಹಾರ ಧಾನ್ಯ ಬೆಳೆಯೋಣಎಂದು ಕರೆನೀಡಿದರು.

  ಸರ್ದಾರ್ ಪಟೇಲರ ಚಿಂತನೆ ಮತ್ತು ಧೋರಣೆಗಳು ಭಾರತದ ಆರ್ಥಿಕ ಸವಾಲುಗಳನ್ನು ದೊಡ್ಡ ಮಟ್ಟಿಗೆ ನಿಭಾಯಿಸಿದವು. ಕಾಲದ ಚಾರಿತ್ರಿಕ ಅಗತ್ಯ ಮತ್ತು ರಾಷ್ಟ್ರ ನಿರ್ಮಾಪಕರಾಗಿ ಅವರ ಪಾತ್ರ ಹಾಗು ರಾಷ್ಟ್ರದ ರಾಜಕೀಯ ಪ್ರಜಾಪ್ರಭುತ್ವದ ಸ್ಥಾಪಕರಾಗಿ ಅವರ ನಿಲುವುಗಳು ರಾಷ್ಟ್ರವನ್ನು ರೂಪಿಸಿದವು. ಸ್ವಾವಲಂಬನೆ ಅವರ ಆರ್ಥಿಕ ತತ್ವಶಾಸ್ತ್ರದ ಮುಖ್ಯ ಅಂಶಗಳಲ್ಲಿ ಒಂದಾಗಿತ್ತು. ಹಿನ್ನೆಲೆಯಲ್ಲಿ ಅವರ ಧ್ಯೇಯ ಧೋರಣೆಗಳು ಮಹಾತ್ಮಾ ಗಾಂಧೀಜಿಯವರಿಗಿಂತ ಪಂಡಿತ್ ನೆಹರೂ ಅವರ ಚಿಂತನೆಗೆ ಹತ್ತಿರವಾಗಿದ್ದವು. ಮಹಾತ್ಮಾ ಗಾಂಧಿಯವರು ಗ್ರಾಮ ಮಟ್ಟದಲ್ಲಿ ಸ್ವಾವಲಂಬನೆ ಆಗಬೇಕು ಎಂದು ಹೇಳುತ್ತಿದ್ದರು. ಅವರು ಸರಕಾರದ ಪಾತ್ರವನ್ನು ಕಲ್ಯಾಣ ರಾಜ್ಯ ನಿರ್ಮಾಣ ಎನ್ನುತ್ತಿದ್ದರು, ಆದರೆ ಇತರ ದೇಶಗಳು ಅಭಿವೃದ್ಧಿಯ ಕೆಲಸವನ್ನು  ಹೆಚ್ಚು ಆಧುನಿಕ ರೀತಿಯಲ್ಲಿ ಕೈಗೊಂಡಿರುವುದನ್ನು ನೋಡಿ ವಾಸ್ತವವನ್ನು ಅರ್ಥಮಾಡಿಕೊಂಡಿದ್ದರು. ಅವರು ಸಮಾಜವಾದದ ಘೋಷಣೆಗಳಿಂದ ಪ್ರಭಾವಿತರಾಗಿರಲಿಲ್ಲ. ಸಂಪತ್ತಿನಿಂದ ಏನು ಮಾಡುವುದು, ಅದರ ಹಂಚಿಕೆ ಹೇಗೆಎಂದು ಚರ್ಚಿಸುವುದಕ್ಕೆ ಮೊದಲು ಸಂಪತ್ತು ಸೃಷ್ಟಿ ಮಾಡುವ ಅಗತ್ಯ ಭಾರತಕ್ಕೆ ಇದೆ ಎಂದು ಆಗಾಗ ಹೇಳುತ್ತಿದ್ದರು. ರಾಷ್ಟ್ರೀಕರಣವನ್ನು ಅವರು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಕೈಗಾರಿಕೆಗಳು ವ್ಯಾಪಾರೋದ್ಯಮಿಗಳಲ್ಲಿರಲಿ ಎಂಬುದವರ ವಾದವಾಗಿತ್ತು. ಅವರು ಯೋಜನೆ, ಅದರಲ್ಲೂ  ವಿಶೇಷವಾಗಿ ಅಭಿವೃದ್ಧಿ ಹೊಂದಿದ ಮತ್ತು ಕೈಗಾರಿಕಾ ರಾಷ್ಟ್ರಗಳು ಅನುಸರಿಸುತ್ತಿದ್ದ ಮಾದರಿಯಲ್ಲಿ  ಅವರಿಗೆ ಬಲವಾದ ನಂಬಿಕೆ ಇರಲಿಲ್ಲ.

   ಅವರು ನಿಯಂತ್ರಣವಾದಿಯಾಗಿರಲಿಲ್ಲ. ಅವುಗಳನ್ನು ಜಾರಿ ಮಾಡಲು ಬೇಕಾದ ಸಿಬಂದಿಯೂ ಆಗ ಇರಲಿಲ್ಲ. ಹೆಚ್ಚಿನ ಅಧಿಕಾರಿಗಳು ಪಾಕಿಸ್ಥಾನಕ್ಕೆ ಹೋಗಲು ಬಯಸಿದ್ದರಿಂದ ಅವರು ಅತ್ಯಂತ ಕನಿಷ್ಟ ಆಡಳಿತ ಸಿಬಂದಿ ವ್ಯವಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದರು. ಹಿರಿಯ ನಾಗರಿಕ ಸೇವೆಯ ಅಧಿಕಾರಿಗಳು ವಿಶ್ವದಾದ್ಯಂತ ಹೊಸದಾಗಿ ಸ್ಥಾಪನೆಯಾದ ರಾಯಭಾರ ಕಚೇರಿಗಳಿಗೆ ನಿಯೋಜಿಸಲ್ಪಟ್ಟಿದ್ದರು. 1950 ರಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಅವರುನಾವು ದೇಶದ ಆಡಳಿತವನ್ನು , ಅಧಿಕಾರ ವಹಿಸಿಕೊಳ್ಳುವಾಗ ಇದ್ದ  ಸಿಬಂದಿಯ ನಾಲ್ಕನೇ ಒಂದರಷ್ಟು ಸಿಬಂದಿಗಳಿಂದ ನಡೆಸುತ್ತಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆ ನಿಭಾಯಿಸಲು , ಕೆಳಗಿನ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುವಂತೆ ಮಾಡಲು ಐವತ್ತು ಶೇಖಡಾ ಸಿಬಂದಿ ಬಲ ಸಾಕಾಗುತ್ತದೆ, ಅವಧಿ ಮೀರಿದ ಓವರ್ ಟೈಂ ಹೋಗಿದೆ ಎಂದಿದ್ದರು.

   ಅವರಿಗೆ ಲಾಭದ ಉದ್ದೇಶ/ಆಶಯ ಒಂದು ದೊಡ್ಡ ಆಕಾಂಕ್ಷೆಯಾಗಿತ್ತು. ಅವರು ಅದನ್ನು ಇಡೀಯಾಗಿ ಅಂಗೀಕರಿಸಿದ್ದರು ಮತ್ತು ಅದನ್ನು ಬಂಡವಾಳ ಶಾಹಿಯಲ್ಲದ ವರ್ಗದವರಲ್ಲು ಪ್ರಚುರಪಡಿಸಿದ್ದರು. ಮಧ್ಯಮ ವರ್ಗದವರಲ್ಲಿ, ಕಾರ್ಮಿಕರಲ್ಲಿ ಮತ್ತು ಕೃಷಿಕರಲ್ಲಿಯೂ ಅವರು ಇದನ್ನು ಹೇಳುತ್ತಿದ್ದರು. ಇದರರ್ಥ ಅವರು ಸಂಪತ್ತಿನ ಕೇಂದ್ರೀಕರಣ ಒಂದು ಸಾಮಾಜಿಕ ಸಮಸ್ಯೆ ಮತ್ತು ಅದು ಅನೈತಿಕ ಎಂದು ಪರಿಗಣಿಸಿರಲಿಲ್ಲವೆಂದಲ್ಲ. ಅವರು ಎಲ್ಲಾ ಉದ್ದೇಶಗಳನ್ನು  ನಾಗರಿಕ ಪ್ರಜ್ಞೆಯನ್ನು ಉದ್ದೀಪಿಸುವ ಮತ್ತು ರಾಷ್ಟ್ರೀಯ ಕರ್ತವ್ಯವನ್ನು ನಿಭಾಯಿಸುವ ದೃಷ್ಟಿಯಿದ ಮಾಡಿದರು. ಅವರ ವಾದದಲ್ಲಿ ಅದು ನೈತಿಕ ಮತ್ತು ದೇಶಾಭಿಮಾನ, ಮತ್ತು ಆರ್ಥಿಕವಾಗಿ ಪ್ರಾಯೋಗಿಕ/ ಪ್ರಯೋಜನಕಾರಿ. ಇರುವ ಸಂಪತ್ತನ್ನು  ಹೆಚ್ಚು ಹೆಚ್ಚು , ಖಚಿತವಾಗಿ ಪ್ರತಿಫಲ ಬರುವ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ಅವಶ್ಯ ಎನ್ನುತ್ತಿದ್ದರು ಅವರು. ಅತಿಯಾಸೆಯ ವಿರುದ್ಧ ಅವರು ಯಾವಾಗಲೂ  ಎಚ್ಚರಿಸುತ್ತಿದ್ದರು. ಕಾರ್ಮಿಕರಿಗೆ ಬರೇ ಪಾಲುದಾರಿಕೆ/ಶೇರು ಅಪೇಕ್ಷಿಸುವುದಕ್ಕಿಂತ ಸಂಪತ್ತಿನ ಸೃಷ್ಟಿಯಲ್ಲಿ ಪಾಲ್ಗೊಳ್ಳಿ ಎಂದು ಸತತವಾಗಿ ಸಲಹೆ ಮಾಡುತ್ತಿದ್ದರು. ಕಾರ್ಮಿಕ-ಉದ್ಯೋಗದಾತರಿಗೆ ಸಂಬಂಧಿಸಿದಂತೆ  ಗಾಂಧೀಜಿಯವರ ತತ್ವವನ್ನು ಅವರು ಪ್ರತಿಪಾದಿಸುತ್ತಿದ್ದರು. ಮಹಾತ್ಮಾ ಗಾಂಧಿಯವರ ವಿಧಾನ ಸಾಂವಿಧಾನಿಕ ಕ್ರಮದ ಮೂಲಕ ಕಾರ್ಮಿಕರಿಗೆ ಕಾನೂನು ಬದ್ಧ ಪ್ರತಿಫಲವನ್ನು ಕೊಡುತ್ತದೆ ಎಂದವರು ಹೇಳುತ್ತಿದ್ದರು.

 

  ಅವರಿಗೆ ಭಾರತವು ತ್ವರಿತವಾಗಿ ಕೈಗಾರಿಕಾ ರಾಷ್ಟ್ರವಾಗಬೇಕು ಎಂಬ ಆಶಯ ಇತ್ತು.. ಬಾಹ್ಯ ಸಂಪನ್ಮೂಲಗಳ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂಬುದು ಅವರ ಇರಾದೆಯಾಗಿತ್ತು. ಆಧುನಿಕ ಸೇನೆಯು ಶಸ್ತ್ರಾಸ್ತ್ರ, ಮದ್ದುಗುಂಡು, ಸಮವಸ್ತ್ರ, ದಾಸ್ತಾನುಮಳಿಗೆಗಳು, ಜೀಪುಗಳು, ಮೋಟಾರು ಕಾರುಗಳು, ವಿಮಾನಗಳು ಮತ್ತು ಪೆಟ್ರೋಲನ್ನು ಹೊಂದುವುದಕ್ಕಿಂತ ಹೊರತಾಗಿ ಇವುಗಳನ್ನು  ಉತ್ಪಾದಿಸುವ ಯಂತ್ರೋಪಕರಣಗಳನ್ನು ಹೊಂದುವುದು ಅವಶ್ಯ ವಾಗಿತ್ತು. . ಆದರೆ ದಟ್ಟವಾದ ಜನಸಂಖ್ಯೆ ಇರುವ ದೇಶದದೊಡ್ದ ಖಾಯಿಲೆಯಾಗಿರುವ ಸೋಮಾರಿತನವನ್ನು ಬಗೆಹರಿಸಲು ಯಂತ್ರೋಪಕರಣಗಳಿಂದಾಗದು. ಮಿಲಿಯಾಂತರ ಸೋಮಾರಿ ಕೈಗಳಿಗೆ ಕೆಲಸ ಇಲ್ಲದಿದ್ದರೆ, ಯಂತ್ರೋಪಕರಣಗಳಲ್ಲಿ  ಉದ್ಯೋಗ ದೊರೆಯದಿದ್ದರೆ, ಎಂಬ ಅಂಶವನ್ನು ಅವರು 1950 ರಲ್ಲಿ ಮುಖ್ಯಮಂತ್ರಿಗಳ ಸಭೆಯನ್ನುದ್ದೇಶ್ಸಿಸಿ ಮಾತನಾಡುವಾಗ ಪ್ರಸ್ತಾವಿಸಿದ್ದರು. ದೇಶವು ಪ್ರಾಥಮಿಕವಾಗಿ ಕೃಷಿ ರಾಷ್ಟ್ರವಾಗಿರುವುದರಿಂದ , ಕೃಷಿಗೆ ಪುನಃಶ್ಚೇತನ ನೀಡುವುದೂ ಪ್ರಾಥಮಿಕ ಮಹತ್ವದ್ದಾಗಿತ್ತು. ಕೈಗಾರಿಕೆಗಳಿಗೆ ಅವರು ಕೆಂಪು-ಪಟ್ಟಿಯಿಲ್ಲ, ಯಾವುದೇ ಅಡೆ-ತಡೆಗಳಿಲ್ಲ ಎಂದು ಪಂಡಿತ್ ಜವಾಹರ ಲಾಲ್ ನೆಹರೂ ಅವರ ಜನ್ಮದಿನವಾದ 1950 ನವೆಂಬರ್ 14 ರಂದು ರೇಡಿಯೋದಲ್ಲಿ ಮಾಡಿದ ಭಾಷಣದಲ್ಲಿ ಭರವಸೆ ನೀಡಿದ್ದರು.

  ಅದೇ ಬಾನುಲಿ ಪ್ರಸಾರದಲ್ಲಿ , ಅವರು ಹೂಡಿಕೆ ಆಧಾರಿತ ಅಭಿವೃದ್ಧಿಯನ್ನು ಪ್ರಸ್ತಾಪಿಸಿದ್ದಲ್ಲದೇ , ’ಕಡಿಮೆ ಖರ್ಚು ಮಾಡಿ, ಹೆಚ್ಚು ಉಳಿತಾಯ ಮಾಡಿ ಮತ್ತು ಸಾಧ್ಯವಾದಷ್ಟು ಹೆಚ್ಚು ಹೂಡಿಕೆ ಮಾಡುವುದು  ಪ್ರತೀ ನಾಗರಿಕರ ಧ್ಯೇಯವಾಗಬೇಕುಎಂದಿದ್ದರು. ಅವರು ಸಮಾಜದ ಎಲ್ಲ ವರ್ಗಗಳವರಿಗೂ-ವಕೀಲರು, ರೈತರು, ಕಾರ್ಮಿಕರು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ಸರಕಾರಿ ನೌಕರರು ಪ್ರತೀ ಆಣೆಯನ್ನು ಉಳಿತಾಯ ಮಾಡಬೇಕು ಮತ್ತು  ಉಳಿತಾಯವನ್ನು ರಾಷ್ಟ್ರ ನಿರ್ಮಾಣ ಕಾರ್ಯಕ್ಕಾಗಿ ಸರಕಾರದ ಕೈಗೆ ನೀಡಬೇಕು ಎನ್ನುತ್ತಿದ್ದರು. ಅದೇ ಭಾಷಣದಲ್ಲಿ ಅವರು , ಪ್ರತೀ ಪೈಸೆಯನ್ನು ಉಳಿತಾಯ ಮಾಡಬೇಕಾದ ಅಗತ್ಯವನ್ನು ಹೇಳುತ್ತಾ ಪ್ರತಿಪಾದಿಸಿದ್ದರು-“ ನಮ್ಮ ಬಳಿ ಬಂಡವಾಳ ಇರಬೇಕು ಮತ್ತು ಬಂಡವಾಳ ನಮ್ಮದೇ ದೇಶದಿಂದ ಬರಬೇಕು. ನಾವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಲ್ಲಿಂದ -ಇಲ್ಲಿಂದ ಎಂದು ಸಾಲ ಮಾಡಲು ಸಾಧ್ಯವಿರಬಹುದು, ಆದಾಗ್ಯೂ ನಾವು ನಮ್ಮ ದೈನಂದಿನ ಆರ್ಥಿಕತೆಯನ್ನು ವಿದೇಶೀ ಸಾಲದ ಮೇಲೆ ನಡೆಸುವಂತಿರಬಾರದುಎಂದು. ಸ್ವಯಂಸ್ಪೂರ್ತಿಯಿಂದ ಉಳಿತಾಯಕ್ಕೆ ಕರೆ ನೀಡಿದ್ದ ಅವರು, ಉಳಿತಾಯಗಾರರಿಗೆ ಅವರ ಹೂಡಿಕೆಯ ಆದ್ಯತಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲೂ ಹೇಳಿದ್ದರು.

  ಸರ್ದಾರ್ ಪಟೇಲರ ಧೋರಣೆ ಸಮತೋಲನದ್ದು, ಪ್ರಾಯೋಗಿಕ ಮತ್ತು  ಉದಾರೀಕರಣದ್ದಾಗಿತ್ತು. ಅವರಿಗೆ ಅರ್ಥಶಾಸ್ತ್ರವುತೀವೃವಾಗಿ ಪ್ರಾಯೋಗಿಕವಾದ/ಅನುಷ್ಟಾನಿಸಬೇಕಾದ ವಿಜ್ಞಾನವಾಗಿತ್ತು. ಇದರಲ್ಲಿ ಅಡ್ಡದಾರಿಗಳು ಮತ್ತು ತಾತ್ಕಾಲಿಕ ವಾದಸರಣಿಯ  ಪ್ರಮಾಣವಿಲ್ಲದ ನೀತಿಗಳು, ತಾತ್ಕಾಲಿಕ ಉಪಶಮನಗಳು ಅಥವಾ ದರಗಳಲ್ಲಿ ಕೃತಕವಾದ ಕಡಿತ ಅವರಿಗೆ ಸ್ವೀಕಾರಾರ್ಹವಾಗಿರಲಿಲ್ಲ. ಅವರು ಉತ್ಪಾದನೆ ಹೆಚ್ಚಳದ , ಕೈಗಾರಿಕಾ ಮತ್ತು ಕೃಷಿ ಹಾಗು ಸಂಪತ್ತು ವೃದ್ಧಿಯ ಖಚಿತವಾದ ಬುನಾದಿಯ ಮೇಲೆ ಭಾರತದ ಆರ್ಥಿಕತೆ ಕಟ್ಟಲ್ಪಡಬೇಕು ಎಂಬ ನಿಲುವನ್ನು ಹೊಂದಿದ್ದರು.

...............................

ಪೂಜಾ ಮೆಹ್ರಾ, ದಿಲ್ಲಿ ಮೂಲದ ಪತ್ರಕರ್ತರು,

ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳು



(Release ID: 1506988) Visitor Counter : 69


Read this release in: English