PIB Headquarters

ಸ್ವಚ್ಛತಾ ಹಿ ಸೇವಾ' ಆಂದೋಲನ

Posted On: 20 SEP 2017 2:08PM by PIB Bengaluru

ವಿಶೇಷ ಲೇಖನ 

ಸ್ವಚ್ಛತಾ ಹಿ ಸೇವಾ' ಆಂದೋಲನ
                                                                                                                                                                                           

       

 

 

  -ವಿ ಶ್ರೀನಿವಾಸ್


ದೇಶದೆಲ್ಲೆಡೆ ನೈರ್ಮಲ್ಯವನ್ನು ಸಾಧಿಸುವ ಉದ್ದೇಶದ `ಸ್ವಚ್ಛತಾ ಹಿ ಸೇವಾ' ಆಂದೋಲನಕ್ಕೆ ಮಾನ್ಯ ರಾಷ್ಟ್ರಪತಿಗಳು ಸೆ.15, 2017ರಂದು ಉತ್ತರಪ್ರದೇಶದ ಕಾನ್ಪುರ ಸಮೀಪದ ಈಶ್ವರಗಂಜ್ ಗ್ರಾಮದಲ್ಲಿ ಚಾಲನೆ ನೀಡಿದರು. ಆ ಸಂದರ್ಭದಲ್ಲಿ ಅವರು, ನೈರ್ಮಲ್ಯದಿಂದ ಕೂಡಿದ ಆರೋಗ್ಯಕರ ಭಾರತವನ್ನು ನಿರ್ಮಿಸುವ `ಸ್ವಚ್ಛತಾ ಹಿ ಸೇವಾ' ಪ್ರತಿಜ್ಞೆಯನ್ನು ಬೋಧಿಸಿದರು. ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ರಾಷ್ಟ್ರಪತಿಗಳು, ``ಭಾರತವು ಶುಚಿತ್ವ ಮತ್ತು ಆರೋಗ್ಯಪೂರ್ಣ ಪರಿಸರವನ್ನು ನಿರ್ಮಿಸಬೇಕೆಂಬ ನಿರ್ಣಾಯಕ ಹೋರಾಟವನ್ನು ನಡೆಸುತ್ತಿದೆ. ಶುಚಿತ್ವವೆನ್ನುವುದು ಕೇವಲ ಪೌರಕಾರ್ಮಿಕರು ಮತ್ತು ಸರ್ಕಾರದ ಇಲಾಖೆಗಳ ಜವಾಬ್ದಾರಿಯಷ್ಟೇ ಅಲ್ಲ, ಇದರಲ್ಲಿ ದೇಶದ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕಾಗಿದೆ,'' ಎಂದು ಕರೆ ಕೊಟ್ಟರು.

ಮಹಾತ್ಮ ಗಾಂಧೀಜಿಯವರು ಒಮ್ಮೆ ``ರಾಜಕೀಯ ಸ್ವಾತಂತ್ರ್ಯಕ್ಕಿಂತ ನೈರ್ಮಲ್ಯವೇ ಮುಖ್ಯ,'' ಎಂದು ಹೇಳಿದ್ದರು. ಈ ಮಾತು, ಸಮಾಜದಲ್ಲಿ ನೈರ್ಮಲ್ಯವು ಎಷ್ಟೊಂದು ಮುಖ್ಯವೆನ್ನುವುದನ್ನು ತೋರಿಸುತ್ತದೆ. ಗಾಂಧೀಜಿಯವರ ಈ ಮಾತುಗಳಿಂದ ಸ್ಫೂರ್ತಿಗೊಂಡ ಮಾನ್ಯ ಪ್ರಧಾನಮಂತ್ರಿಗಳು 2014ರ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅಶುಚಿತ್ವ ಮತ್ತು ಬಯಲು ಬಹಿರ್ದೆಸೆಯ ವಿರುದ್ಧ ಹೋರಾಡಬೇಕೆಂಬ ಕರೆ ಕೊಟ್ಟರು. ಜತೆಗೆ, ಈ ಎರಡನ್ನೂ ನಿರ್ಮೂಲ ಮಾಡುವ ಮೂಲಕ 2019ರ ಹೊತ್ತಿಗೆ `ಸ್ವಚ್ಛ ಭಾರತ'ವನ್ನು ನಿರ್ಮಿಸಿ, ಆ ಮೂಲಕ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನವನ್ನು ಆಚರಿಸಬೇಕೆಂದೂ ಅವರು ಹೇಳಿದರು. ಮುಂದುವರಿದು ``ಮಹಿಳೆಯರ ಗೌರವವು ಇಂದು ನಮ್ಮ ಹಳ್ಳಿಗಳಲ್ಲಿ ತುಂಬಾ ಮುಖ್ಯ ವಿಚಾರವಾಗಿದೆ. ಹೀಗಾಗಿ, ಬಯಲು ಬಹಿರ್ದೆಸೆಯ ಹಳೆಯ ಪದ್ಧತಿಗೆ ವಿದಾಯ ಹೇಳಬೇಕಾಗಿದೆ. ಆದ್ದರಿಂದ ಶೌಚಾಲಯಗಳನ್ನು ಕಟ್ಟಬೇಕಲ್ಲದೆ, ಅವುಗಳನ್ನು ಕಡ್ಡಾಯವಾಗಿ ಬಳಸಬೇಕು,'' ಎಂದೂ ಅವರು ನುಡಿದರು. 

2019ರ ಅಕ್ಟೋಬರ್ 2ರ ಹೊತ್ತಿಗೆ ನೈರ್ಮಲ್ಯದಿಂದ ಕೂಡಿದ ಮತ್ತು ಬಯಲು ಬಹಿರ್ದೆಸೆ ಎಂಬ ಹೀನ ಪದ್ಧತಿಯ ಕುರುಹೂ ಇಲ್ಲದ ಭಾರತವನ್ನು ಕಾಣಬೇಕೆಂಬುದು `ಸ್ವಚ್ಛ ಭಾರತ' ಆಂದೋಲನದ ಗುರಿಯಾಗಿದೆ. ಇದಕ್ಕೆ ಪೂರಕವಾಗಿ ಶೌಚಾಲಯಗಳನ್ನು ನಿರ್ಮಿಸುವುದು ಮತ್ತು ಕುಟುಂಬದ ಪ್ರತಿಯೊಬ್ಬರೂ ಅವುಗಳನ್ನು ತಪ್ಪದೆ ಬಳಸುವುದು, ಜನರಲ್ಲಿ ನೈರ್ಮಲ್ಯದ ಬಗ್ಗೆ ಸರಿಯಾದ ಅರಿವು ಮೂಡಿಸುವುದು ಮತ್ತು ಘನ ಹಾಗೂ ದ್ರವರೂಪದ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ವಿಧಾನಗಳನ್ನು ಜಾರಿಗೆ ತರುವುದು ಇದರಲ್ಲಿ ಸೇರಿವೆ. ಇದನ್ನೆಲ್ಲ ಸಾಧಿಸಲೆಂದೇ ವರ್ಷದಿಂದ ವರ್ಷಕ್ಕೆ `ಸ್ವಚ್ಛ ಭಾರತ' ಆಂದೋಲನಕ್ಕೆ ಹೆಚ್ಚುಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. 2014-15ರಲ್ಲಿ ಇದಕ್ಕೆ 2,850 ಕೋಟಿ ರೂ.ಗಳನ್ನು ಎತ್ತಿಟ್ಟಿದ್ದರೆ, 2015-16ರಲ್ಲಿ ಇದನ್ನು 6,525 ಕೋಟಿ ರೂ.ಗಳಿಗೆ, 2016-17ರಲ್ಲಿ 10,500 ಕೋಟಿ ರೂ.ಗಳಿಗೆ ಮತ್ತು 2017-18ರಲ್ಲಿ 14,000 ಕೋಟಿ ರೂ.ಗಳಿಗೆ ಏರಿಸಲಾಗಿದೆ. ಅಲ್ಲದೆ, ಕಳೆದ ಮೂರು ವರ್ಷಗಳಲ್ಲಿ `ಸ್ವಚ್ಛ ಭಾರತ ಯೋಜನೆ'ಯಡಿ 48,264,304 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದರ ಪರಿಣಾಮವಾಗಿ, ಇಂದು ದೇಶದಲ್ಲಿ 2,38,966 ಹಳ್ಳಿಗಳು `ಬಯಲು ಬಹಿರ್ದೆಸೆಮುಕ್ತ ಗ್ರಾಮ'ಗಳಾಗಿವೆ. ಅಲ್ಲದೆ, 2014ರಲ್ಲಿ ಕೇವಲ ಶೇ.42ರಷ್ಟಿದ್ದ ಶೌಚಾಲಯಸಹಿತ ಪ್ರದೇಶದ ವ್ಯಾಪ್ತಿಯು 2017ರ ಹೊತ್ತಿಗೆ ಶೇ.64ಕ್ಕೆ ಏರಿದ್ದು, ಐದು ರಾಜ್ಯಗಳು ತಮ್ಮನ್ನು `ಬಯಲು ಬಹಿರ್ದೆಸೆಮುಕ್ತ ರಾಜ್ಯ'ವೆಂದು ಘೋಷಿಸಿಕೊಂಡಿವೆ. ಇದನ್ನು ಗಮನಿಸಿರುವ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯು, ಈಗಿನ ಪ್ರಗತಿಯು ಉತ್ತೇಜಕವಾಗಿದ್ದು 2019ರ ಅಕ್ಟೋಬರ್ 2ರ ಹೊತ್ತಿಗೆ `ಬಯಲು ಬಹಿರ್ದೆಸೆಮುಕ್ತ ಭಾರತ'ವನ್ನು ಕಾಣಬೇಕೆಂಬ ಕನಸು ಸಾಕಾರಗೊಳ್ಳಬಹುದು ಎಂದು ಹೇಳಿದೆ. 

ಸ್ವಚ್ಛ ಭಾರತ ಯೋಜನೆಯು ಮುಖ್ಯವಾಗಿ, ಬಯಲು ಬಹಿರ್ದೆಸೆಯಿಂದ ಆಗುವ ಪರಿಣಾಮಗಳನ್ನು ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಅವರ ವರ್ತನೆಗಳಲ್ಲಿ ಬದಲಾವಣೆ ತರುವ ಗುರಿಯನ್ನು ಇಟ್ಟುಕೊಂಡಿದೆ. ಅಲ್ಲದೆ, ಮುಟ್ಟಾಗುವ ಮಹಿಳೆಯರು, ವಯಸ್ಸಾದವರು, ದಿವ್ಯಾಂಗಚೇತನರು ಮತ್ತು ಸಣ್ಣ ಮಕ್ಕಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ವಿನ್ಯಾಸಗೊಳಿಸಲಾಗುತ್ತಿದ್ದು, ಈ ಮೂಲಕವೂ ಯೋಜನೆಯ ಗುರಿಯನ್ನು ಸಾಧಿಸಲಾಗುತ್ತಿದೆ. ಇನ್ನೊಂದೆಡೆ, ಈ ಯೋಜನೆಯಡಿಯಲ್ಲಿ ಲಿಂಗ ಸಂವೇದನೆ ಕುರಿತು ಮಾಹಿತಿ, ಶಿಕ್ಷಣ, ಮಾತುಕತೆ ಮೂಲಕ ವರ್ತನೆಗಳಲ್ಲಿ ಸಕಾರಾತ್ಮಕ ಪರಿವರ್ತನೆಯನ್ನು ತರಲಾಗುತ್ತಿದೆ. ಇದಕ್ಕಾಗಿ ಯೋಜನೆಯ ಕಾರ್ಯಕ್ರಮದಡಿ 2017ರಲ್ಲಿ ಲಿಂಗ ಸಂವೇದನೆ ಕುರಿತ ಮಾರ್ಗದರ್ಶಿ ಸೂತ್ರಗಳನ್ನೂ 2015ರಲ್ಲಿ ಮಹಿಳೆಯರ ಮಾಸಿಕ ಋತುಸ್ರಾವ ಕುರಿತ ನಿರ್ವಹಣೆಗೆ ಸಂಬಂಧಪಟ್ಟ ಮಾರ್ಗದರ್ಶಿ ಸೂತ್ರಗಳನ್ನೂ ಬಿಡುಗಡೆ ಮಾಡಲಾಗಿದೆ. 

ಸ್ವಚ್ಛ ಭಾರತ ಯೋಜನೆಯ ಸಾಧನೆಗಳ/ಪ್ರಗತಿಯ ಉಸ್ತುವಾರಿಗೆ ಮತ್ತು ಅದರ ಮೌಲ್ಯಮಾಪನಕ್ಕೆ ಕೂಡ ತಕ್ಕ ವ್ಯವಸ್ಥೆ ಇದೆ. ಇದರ ಪ್ರಕಾರ, ದೇಶದ ಗ್ರಾಮೀಣ ಭಾಗದಲ್ಲಿ `ಸ್ವಚ್ಛ ಸರ್ವೇಕ್ಷಣೆ'ಯನ್ನು ನಡೆಸಲಾಗಿದ್ದು ಇದರಿಂದ ಹಿಮಾಚಲ ಪ್ರದೇಶದ ಮಂಡಿ ಮತ್ತು ಮಹಾರಾಷ್ಟ್ರದ ಸಿಂಧೂದುರ್ಗ ಎರಡೂ `ದೇಶದ ಅತ್ಯಂತ ನಿರ್ಮಲ ಜಿಲ್ಲೆಗಳು' ಎನ್ನುವುದು ಗೊತ್ತಾಗಿದೆ. ಈ ಸರ್ವೇಕ್ಷಣೆಯನ್ನು ಒಟ್ಟಾರೆಯಾಗಿ ದೇಶದ 22 ಗುಡ್ಡಗಾಡು ಜಿಲ್ಲೆಗಳಲ್ಲಿ ಮತ್ತು 53 ಬಯಲು ಪ್ರದೇಶಗಳಲ್ಲಿ ಕೈಗೊಳ್ಳಲಾಗಿತ್ತು. ಇದಕ್ಕಾಗಿ, ನೈರ್ಮಲ್ಯ ಎಷ್ಟು ಪ್ರಮಾಣದಲ್ಲಿದೆ ಮತ್ತು ಬಯಲು ಬಹಿರ್ದೆಸೆಯ ಹೀನ ಪದ್ಧತಿ ಯಾವ್ಯಾವ ಕಡೆಗಳಲ್ಲಿ ಯಾವ ಪ್ರಮಾಣದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಎಂಬುದನ್ನು ಮಾದರಿ ಪರೀಕ್ಷೆ ನಡೆಸಲು ರಾಷ್ಟ್ರೀಯ ಮಟ್ಟದ ಪರಿಶೀಲನೆ ನಡೆಸಲಾಗಿದೆ. 

ಇದರಡಿಯಲ್ಲಿ ದೇಶಾದ್ಯಂತದ 4,626 ಹಳ್ಳಿಗಳ 92,000 ಮನೆಗಳನ್ನು ಸಂಪರ್ಕಿಸಿ, ಪರಿಶೀಲಿಸಲಾಗಿದೆ. ಇದರ ಜತೆಗೆ, ಗಂಗಾ ನದಿಯ ಅಂಚಿನಲ್ಲಿರುವ ಇನ್ನೂ 200 ಗ್ರಾಮಗಳಲ್ಲಿ ಕೂಡ ಈ ಸರ್ವೇಕ್ಷಣೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಲ್ಲದೆ, ಅಮಿತಾಭ್ ಬಚ್ಚನ್ ಅವರಂಥ ಖ್ಯಾತನಾಮರನ್ನು `ಸ್ವಚ್ಛ ಭಾರತ' ಯೋಜನೆಯ ಪ್ರಚಾರ ರಾಯಭಾರಿಯನ್ನಾಗಿ ಮಾಡಲಾಗಿದೆಯಲ್ಲದೆ, ಹೆಸರಾಂತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಪ್ರಸಿದ್ಧ ನಟ ಅಕ್ಷಯ್ ಕುಮಾರ್ ಅವರನ್ನು ಇದಕ್ಕೆ ಸಂಬಂಧಿಸಿದ ಉತ್ತೇಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ. ಇದಕ್ಕೆ ಪೂರಕವಾಗಿ, ಸೋಷಿಯಲ್ ಮೀಡಿಯಾಗಳಲ್ಲೂ ಸ್ವಚ್ಛ ಭಾರತ ಯೋಜನೆ ಕುರಿತು ಅರಿವನ್ನು ವಿಸ್ತರಿಸುವ ಕೆಲಸ ನಡೆಯುತ್ತಿದ್ದು, ನಿಯಮಿತವಾಗಿ `ಸ್ವಚ್ಛ ಸಮಾಚಾರ ಪತ್ರಿಕೆ'ಯನ್ನು ಕೂಡ ಪ್ರಕಟಿಸಲಾಗುತ್ತಿದೆ. ಇತ್ತೀಚೆಗೆ ತೆರೆ ಕಂಡ `ಟಾಯ್ಲೆಟ್-ಏಕ್ ಪ್ರೇಮ್ ಕಥಾ' ಎನ್ನುವ ಹಿಂದಿ ಸಿನಿಮಾ, ಸ್ವಚ್ಛ ಭಾರತ ಯೋಜನೆಯನ್ನು ಆಧರಿಸಿ ನಿರ್ಮಿಸಿದ ಚಿತ್ರವೇ ಆಗಿದ್ದು ಗಲ್ಲಾ ಪೆಟ್ಟಿಗೆಯಲ್ಲಿ ಕೂಡ ಇದು ತಕ್ಕ ಮಟ್ಟಿನ ಯಶಸ್ಸು ಕಂಡಿದೆ. 

ಸ್ವಚ್ಛ ಭಾರತ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಹಲವು ಸಚಿವಾಲಯಗಳು, ರಾಜ್ಯ ಸರಕಾರಗಳು, ಸ್ಥಳೀಯ ಸಂಸ್ಥೆಗಳು, ಸರ್ಕಾರೇತರ ಸೇವಾಸಂಸ್ಥೆಗಳು, ಅರೆಸರಕಾರಿ ಸಂಸ್ಥೆಗಳು, ಬಹುರಾಷ್ಟ್ರೀಯ ಉದ್ದಿಮೆಗಳು, ಎನ್‍ಜಿಓಗಳು, ಧಾರ್ಮಿಕ ಸಂಸ್ಥೆಗಳು ಮತ್ತು ಮಾಧ್ಯಮಗಳು ಕೂಡ ಸಹಭಾಗಿತ್ವ ಹೊಂದಿವೆ. ಸ್ವಚ್ಛತೆ ಎನ್ನುವುದು ಕೇವಲ ನೈರ್ಮಲ್ಯ ಸಚಿವಾಲಯ/ಇಲಾಖೆಗಳ ಕೆಲಸವಷ್ಟೇ ಅಲ್ಲ, ಇದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎನ್ನುವ ಮಾನ್ಯ ಪ್ರಧಾನಮಂತ್ರಿಗಳ ಕರೆಯ ಮೇರೆಗೆ ಹೀಗೆ ಎಲ್ಲರನ್ನೂ ಒಳಗೊಳ್ಳುವಂಥ ಈ ವಿಧಾನವನ್ನು ಅನುಸರಿಸಲಾಗುತ್ತಿದೆ. 

ಇದಕ್ಕಾಗಿ ತುಂಬಾ ಕ್ಷಿಪ್ರಗತಿಯಲ್ಲಿ ಹಲವು ವಿಶೇಷ ಉಪಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಲಾಗಿದೆ. ಅಂತರಸಚಿವಾಲಯ ಯೋಜನೆಗಳಾದ ಸ್ವಚ್ಛತಾ ಪಖ್ವಾಡಾ, ನಮಾಮಿ ಗಂಗೆ, ಸ್ವಚ್ಛತಾ ಕ್ರಿಯಾ ಯೋಜನೆ, ಸ್ವಚ್ಛ ಸ್ವಸ್ಥ ಸರ್ವತ್ರ ಆಂದೋಲನ, ಶಾಲೆಗಳಲ್ಲಿ ನೈರ್ಮಲ್ಯ ಆಂದೋಲನ, ಅಂಗನವಾಡಿಗಳಲ್ಲಿ ನೈರ್ಮಲ್ಯ ಆಂದೋಲನ, ರೈಲುಗಳಲ್ಲಿ ನೈರ್ಮಲ್ಯ ಸಾಧನೆ ಇತ್ಯಾದಿಗಳೆಲ್ಲವೂ ಇದರ ಭಾಗವೇ ಆಗಿವೆ. ಕೇಂದ್ರ ಸರಕಾರದ 76 ಸಚಿವಾಲಯಗಳು ಮತ್ತು ಇಲಾಖೆಗಳು ಸೇರಿಕೊಂಡು ಸ್ವಚ್ಛತಾ ಕ್ರಿಯಾ ಯೋಜನೆಯನ್ನು ರೂಪಿಸಿದ್ದು, ಇದರ ಅನುಷ್ಠಾನದ ಪ್ರಗತಿಯ ಮೇಲೆ ನಿಗಾ ಇಡಲು ವೆಬ್ ಪೋರ್ಟಲ್ ಅನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, `ಮಹಿಳಾ ಸ್ವಚ್ಛಾಗ್ರಹಿ'ಗಳನ್ನು ನೇಮಿಸಲಾಗಿದ್ದು, ಈ ಆಂದೋಲನದಲ್ಲಿ ಮಹಿಳೆಯರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ `ಸ್ವಚ್ಛ ಶಕ್ತಿ ಪುರಸ್ಕಾರ'ಗಳನ್ನು ಕೂಡ ಸ್ಥಾಪಿಸಲಾಗಿದೆ. ಮಲ ವಿಸರ್ಜನೆಗಾಗಿ ಕತ್ತಲಿನಲ್ಲಿ ಊರಿನಿಂದಾಚೆಗೆ ನಡೆದುಕೊಂಡು ಹೋಗುವುದನ್ನು ತಪ್ಪಿಸಿ, ಶೌಚಾಲಯದ ಸೌಲಭ್ಯ ಸಿಗುವಂತೆ ಮಾಡುವುದರಿಂದ ಹಳ್ಳಿಗಳ ಬದುಕಿನಲ್ಲಿ ಮಹತ್ತರ ಬದಲಾವಣೆ ತರಬಹುದೆನ್ನುವುದು `ಸ್ವಚ್ಛ ಭಾರತ' ಯೋಜನೆಯ ಯಶೋಗಾಥೆಗಳಿಂದ ದೃಢಪಟ್ಟಿದೆ. ಅಲ್ಲದೆ, ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ ತಗುಲುವ ಕಾಯಿಲೆಕಸಾಲೆಗಳ ಪ್ರಮಾಣವೂ ಇದರಿಂದ ಗಮನಾರ್ಹ ಮಟ್ಟದಲ್ಲಿ ಕಡಿಮೆಯಾಗಿದೆ. ಹೆಚ್ಚಿನ ಕುಟುಂಬಗಳೆಲ್ಲವೂ ಈಗ ಶೌಚಾಲಯವನ್ನು ಬಳಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. 

``ಒಂದು ಕಾರ್ಯಕ್ರಮವನ್ನು ಹೇಗೆ ಜನಾಂದೋಲನವನ್ನಾಗಿ ಪರಿವರ್ತಿಸಬಹುದು ಎನ್ನುವುದಕ್ಕೆ ಸ್ವಚ್ಛ ಭಾರತ ಯೋಜನೆಯೇ ಒಂದು ನಿದರ್ಶನವಾಗಿದೆ'' ಎಂದು ಮಾನ್ಯ ಉಪರಾಷ್ಟ್ರಪತಿಗಳು ಹೇಳಿದ್ದಾರೆ. ಈಗ ನಡೆಯುತ್ತಿರುವ `ಸ್ವಚ್ಛತಾ ಹಿ ಸೇವಾ' ಪ್ರಚಾರಾಂದೋಲನವು ಗಾಂಧೀ ಜಯಂತಿಗೆ ಮುಂಚಿನ ಹದಿನೈದು ದಿನಗಳ ಕಾಲ ಪ್ರತಿಯೊಬ್ಬರೂ ಮನೆಯಿಂದ ಹೊರಬಂದು ಶ್ರಮದಾನವನ್ನು ಮಾಡುವ ಮೂಲಕ `ಸ್ವಚ್ಛ ಭಾರತ' ಯೋಜನೆಯಲ್ಲಿ ನೇರವಾಗಿ ಪಾಲ್ಗೊಳ್ಳಬೇಕೆನ್ನುವ ಸದುದ್ದೇಶವನ್ನು ಹೊಂದಿದೆ.

ಬನ್ನಿ, ಎಲ್ಲರೂ `ಸ್ವಚ್ಛತಾ ಹಿ ಸೇವಾ' ಪ್ರಚಾರಾಂದೋಲನದಲ್ಲಿ ಕೈ ಜೋಡಿಸಿ!

....................

ಲೇಖಕರು 1989ನೇ ಬ್ಯಾಚ್‍ನ ಐಐಎಸ್ ಅಧಿಕಾರಿಗಳಾಗಿದ್ದು, ಸದ್ಯಕ್ಕೆ ರಾಜಾಸ್ಥಾನ ತೆರಿಗೆ ಮಂಡಳಿಯ ಮುಖ್ಯಸ್ಥರಾಗಿದ್ದಾರೆ. ಜತೆಗೆ, ಆ ರಾಜ್ಯದ ಕಂದಾಯ ಮಂಡಳಿಯ ಅಧ್ಯಕ್ಷರಾಗಿ ಹೆಚ್ಚುವರಿ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಲೇಖನದಲ್ಲಿರುವ ವಿಚಾರಗಳು/ಅಭಿಪ್ರಾಯಗಳು/ನಿಲುವುಗಳು ಇವರ ವೈಯಕ್ತಿಕ ಅಭಿಪ್ರಾಯಗಳಾಗಿವೆ.

 
.................................................
 



(Release ID: 1503402) Visitor Counter : 196


Read this release in: English