ರಾಷ್ಟ್ರಪತಿಗಳ ಕಾರ್ಯಾಲಯ

2017ರ ಜೂನ್ 30ರಂದು ಸಂಸತ್ ಭವನದ ಕೇಂದ್ರೀಯ ಸಭಾಂಗಣದಲ್ಲಿ ಸರಕುಗಳು ಮತ್ತು ಸೇವಾ ತೆರಿಗೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಮಾನ್ಯ ರಾಷ್ಟ್ರಪತಿಯವರ ಭಾಷಣ

President of India addresses special function in Parliament organized to launch GST on 30th June 2017

Posted On: 01 JUL 2017 3:25AM by PIB Bengaluru
Press Release photo

1. ಇನ್ನು ಕೆಲವೇ ನಿಮಿಷಗಳಲ್ಲಿ ನಾವೆಲ್ಲರೂ ದೇಶಾದ್ಯಂತ ಜಾರಿಗೆ ಬರಲಿರುವ ನೂತನ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಉದ್ಘಾಟನೆಗೆ ಸಾಕ್ಷಿಯಾಗಲಿದ್ದೇವೆ. ಪರೋಕ್ಷ ತೆರಿಗಳನ್ನು ಕುರಿತು ಅಧ್ಯಯನ ಮಾಡಿದ ಕೇಳ್ಕರ್ ಕಾರ್ಯಪಡೆಯು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಯನ್ನು ರೂಪಿಸಬೇಕೆಂದು ಸಲಹೆ ನೀಡಿದ ನಂತರ 2002ರ ಡಿಸೆಂಬರಿನಲ್ಲಿ ಆರಂಭವಾದ ಹದಿನಾಲ್ಕು ವರ್ಷಗಳ ಪಯಣ ಈ ಐತಿಹಾಸಿಕ ಕ್ಷಣದೊಂದಿಗೆ ಮುಕ್ತಾಯವಾಗುತ್ತಿದೆ. ಕೇಳ್ಕರ್ ಕಾರ್ಯಪಡೆಯು ಮೌಲ್ಯವರ್ಧಿತ ತೆರಿಗೆ ತತ್ವದ ಆಧಾರದ ಮೇಲೆ ಈ ಜಿಎಸ್ ಟಿ ವ್ಯವಸ್ಥೆಯನ್ನು ರೂಪಿಸಬೇಕೆಂದು ಹೇಳಿತ್ತು. 2006-07ನೇ ಸಾಲಿನ ಬಜೆಟ್ ಭಾಷಣದಲ್ಲಿ ಮೊಟ್ಟಮೊದಲ ಬಾರಿಗೆ ಜಿಎಸ್ ಟಿ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಸ್ತಾಪ ಮಾಡಲಾಯಿತು. ಇದರಲ್ಲಿ ಕೇವಲ ಕೇಂದ್ರ ಸರ್ಕಾರ ವಿಧಿಸುವ ಪರೋಕ್ಷ ತೆರಿಗೆಗಳ ಪುನಾರಚನೆ ಮತ್ತು ಸುಧಾರಣೆ ಮಾತ್ರವೇ ಅಲ್ಲದೆ, ರಾಜ್ಯಗಳು ವಿಧಿಸುತ್ತಿದ್ದ ತೆರಿಗೆಗಳ ಸುಧಾರಣೆಯ ಅಂಶವೂ ಇತ್ತು. ಹೀಗಾಗಿ ನೂತನ ಜಿಎಸ್ ಟಿ ವ್ಯವಸ್ಥೆಯನ್ನು ರೂಪಿಸುವ ಮತ್ತು ಇದನ್ನು ಜಾರಿಗೆ ತರಲು ಅಗತ್ಯವಾದ ಕ್ರಿಯಾಯೋಜನೆಯನ್ನು ಸಿದ್ಧಪಡಿಸುವ ಹೊಣೆಗಾರಿಕೆಯನ್ನು ಈ ಮೊದಲೇ ಮೌಲ್ಯವರ್ಧಿತ ತೆರಿಗೆಯನ್ನು ಜಾರಿಗೆ ತರಲೆಂದು ರಚಿಸಲಾಗಿದ್ದ ರಾಜ್ಯ ಹಣಕಾಸು ಸಚಿವರುಗಳ ಉನ್ನತ ಸಮಿತಿಗೆ ವಹಿಸಲಾಯಿತು. ಈ ಸಮಿತಿಯು ಜಿಎಸ್ ಟಿ ಕುರಿತು ತಾನು ನಡೆಸಿದ ಚರ್ಚೆಯ ವರದಿಯನ್ನು 2009ರ ನವೆಂಬರಿನಲ್ಲಿ ಬಿಡುಗಡೆ ಮಾಡಿತು. 

ಸ್ನೇಹಿತರೇ, 

2. ಜಿಎಸ್ ಟಿ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವ ಈ ಕ್ಷಣವು ಇಡೀ ದೇಶಕ್ಕೇ ಅತ್ಯಂತ ಮಹತ್ವಪೂರ್ಣವಾಗಿದೆ. ಜೊತೆಗೆ, ವೈಯಕ್ತಿಕವಾಗಿ ನನಗೂ ಇದು ಘಳಿಗೆಯಾಗಿದೆ. ಏಕೆಂದರೆ, ಜಿಎಸ್ ಟಿ ವ್ಯವಸ್ಥೆಗೆ ಅಗತ್ಯವಾಗಿದ್ದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ನಾನೇ 2011ರ ಮಾರ್ಚ್22ರಂದು ಮಂಡಿಸಿದ್ದೆ. ಆಗ ನಾನು ಕೇಂದ್ರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವನಾಗಿದ್ದೆ. ಅಲ್ಲದೆ, ಜಿಎಸ್ ಟಿ ವ್ಯವಸ್ಥೆಯನ್ನು ರೂಪಿಸುವ ಮತ್ತು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ನಾನು ತುಂಬಾ ಸಕ್ರಿಯವಾಗಿ ಪಾಲ್ಗೊಂಡಿದ್ದೇನೆ. ಜೊತೆಗೆ, ಈ ಸಂಬಂಧ ರಾಜ್ಯ ಹಣಕಾಸು ಸಚಿವರುಗಳ ಉನ್ನತ ಸಮಿತಿಯ ಸದಸ್ಯರನ್ನು ಹದಿನಾರು ಬಾರಿ ಔಪಚಾರಿಕವಾಗಿಯೂ ಅನೌಪಚಾರಿಕವಾಗಿಯೂ ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಇಷ್ಟೇ ಅಲ್ಲದೆ, ಜಿಎಸ್ ಟಿ ಸಂಬಂಧ ನಾನು ಗುಜರಾತ್, ಬಿಹಾರ್, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರರಾಜ್ಯಗಳ ಮುಖ್ಯಮಂತ್ರಿಗಳನ್ನೂ ಅನೇಕ ಸಲ ಭೇಟಿ ಮಾಡಿದ್ದುಂಟು. ಆ ಭೇಟಿಗಳ ಮತ್ತು ಅಲ್ಲಿ ಚರ್ಚೆಗೆ ಬರುತ್ತಿದ್ದ ಹತ್ತಾರು ವಿಷಯಗಳ ನೆನಪು ನನ್ನಲ್ಲಿ ಹಚ್ಚಹಸುರಾಗಿದೆ. ಅಗಾಧವಾಗಿರುವ ಜಿಎಸ್ ಟಿ ವ್ಯವಸ್ಥೆಯನ್ನು ರೂಪಿಸುವುದು ಸಾಂವಿಧಾನಿಕ, ಕಾನೂನಾತ್ಮಕ, ಆರ್ಥಿಕ ಮತ್ತು ಆಡಳಿತಾತ್ಮಕ ವಿಚಾರಗಳನ್ನೆಲ್ಲ ಒಳಗೊಂಡಿದ್ದ ವಿದ್ಯಮಾನವಾಗಿತ್ತು. ಹೀಗಾಗಿ, ಇಲ್ಲಿ ಕಗ್ಗಂಟಿನಂತಿದ್ದ ಹಲವು ವಿಚಾರಗಳು ಇದ್ದುದು ಆಶ್ಚರ್ಯವೇನಲ್ಲ. ಆದರೂ ರಾಜ್ಯ ಹಣಕಾಸು ಸಚಿವರ ಉನ್ನತ ಸಮಿತಿಯ ಸಭೆಗಳಲ್ಲಿ ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಹಣಕಾಸು ಸಚಿವರು ಮತ್ತು ರಾಜ್ಯಗಳ ಅಧಿಕಾರಿಗಳೊಂದಿಗೆ ಮಾತುಕತೆಗಳಲ್ಲಿ ನಾನು ಪ್ರತಿಯೊಬ್ಬರೂ ಜಿಎಸ್ ಟಿ ವ್ಯವಸ್ಥೆಯ ಜಾರಿಯ ಪರವಾಗಿ ರಚನಾತ್ಮಕ ನಿಲುವು ಮತ್ತು ಬದ್ಧತೆಯನ್ನು ಹೊಂದಿರುವುದನ್ನು ಕಾಣುತ್ತಿದ್ದೆ. ಹೀಗಾಗಿ, ಜಿಎಸ್ ಟಿ ವ್ಯವಸ್ಥೆ ಜಾರಿಗೆ ಬರಲು ಕಾಲ ಕೂಡಿಬರಬೇಕಾಗಿದ್ದು, ಇಂದಲ್ಲ ನಾಳೆಯಾದರೂ ಇದು ಜಾರಿಗೆ ಬಂದೇಬರುತ್ತದೆ ಎನ್ನುವ ವಿಶ್ವಾಸ ನನಗಿತ್ತು. 2016ರ ಸೆಪ್ಟೆಂಬರ್ 8ರಂದು ಸಂಸತ್ತಿನ ಎರಡೂ ಸದನಗಳು ಜಿಎಸ್ ಟಿ ಮಸೂದೆಯನ್ನು ಅಂಗೀಕರಿಸಿದಾಗ ಮತ್ತು ದೇಶದ ಅರ್ಧಕ್ಕೂ ಹೆಚ್ಚು ರಾಜ್ಯಗಳ ಶಾಸನಸಭೆಗಳು ಇದನ್ನು ಒಪ್ಪಿಕೊಂಡಾಗ ನನ್ನ ಈ ವಿಶ್ವಾಸ ನ್ಯಾಯಸಮ್ಮತವಾದುದೆಂಬುದು ಸಾಬೀತಾಯಿತು. ಆನಂತರ ಈ ಸಂಬಂಧದ ಸಂವಿಧಾನ (ನೂರಾಒಂದನೇ ತಿದ್ದುಪಡಿ) ಕಾಯ್ದೆಗೆ ಅಂಕಿತ ಹಾಕುವ ಅವಕಾಶ ನನ್ನದಾಯಿತು. 

ಸ್ನೇಹಿತರೇ, 

3. ಈ ತಿದ್ದುಪಡಿಯ ನಂತರ ಸಂವಿಧಾನದ 279ಎ ವಿಧಿಯ ಪ್ರಕಾರ ಜಿಎಸ್ ಟಿ ಸಮಿತಿಯನ್ನು ರಚಿಸಲಾಯಿತು. ಜಿಎಸ್ ಟಿ ವ್ಯವಸ್ಥೆಗೆ ಸಂಬಂಧಿಸಿದಂತೆ ಅಗತ್ಯವಾದ ಎಲ್ಲಾ ಶಿಫಾರಸುಗಳನ್ನೂ ಮಾದರಿ ಶಾಸನಗಳು (ಕಾನೂನುಗಳು), ದರಗಳು ಮತ್ತು ವಿನಾಯಿತಿಗಳನ್ನೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಸಲ್ಲಿಸುವ ಹೊಣೆಗಾರಿಕೆ ಈ ಸಮಿತಿಯದಾಗಿತ್ತು. ಇದು ನಮ್ಮ ಸಂವಿಧಾನದ ಅನನ್ಯತೆಯಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಇರುವ ಒಂದು ಜಂಟಿ ವೇದಿಕೆಯಾಗಿದೆ. ಇಲ್ಲಿ ಒಂದನ್ನು ಬಿಟ್ಟು ಇನ್ನೊಂದು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದು ಸಾಧ್ಯವಿಲ್ಲ. ತುಂಬಾ ವಿಸ್ತಾರವಾದ ನೆಲೆಯಲ್ಲಿ ಸಮಿತಿಯು ತನ್ನ ತೀರ್ಮಾನಗಳನ್ನು ತೆಗೆದುಕೊಳ್ಳಲು ಮತ ಚಲಾವಣೆಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರೂ ಇದುವರೆಗೂ ನಡೆದಿರುವ 19 ಸಭೆಗಳಲ್ಲೂ ಒಮ್ಮತದ ತೀರ್ಮಾನಗಳನ್ನೇ ತೆಗೆದುಕೊಂಡಿರುವುದು ಅಸಾಧಾರಣವಾದ ಅಂಶವಾಗಿದೆ. 

ರಾಜ್ಯ-ರಾಜ್ಯಗಳ ನಡುವೆ ಇರುವ ಅಗಾಧ ವ್ಯತ್ಯಾಸವನ್ನು ಗಮನಿಸಿದಾಗ, ಸಾವಿರಾರು ಸರಕುಗಳಿಗೆ ಸಮರ್ಪಕವಾಗಿ ನಿಗದಿಪಡಿಸುವುದು ಜಿಎಸ್ ಟಿ ಸಮಿತಿಯಿಂದ ಸಾಧ್ಯವೇ ಎನ್ನುವ ಆತಂಕವಿತ್ತು. ಆದರೆ, ಈ ಸಮಿತಿಯು ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. 

ಸ್ನೇಹಿತರೇ, 

4. ಇನ್ನು ಕೆಲವೇ ಕ್ಷಣಗಳಲ್ಲಿ ನಾವು ಕಾಣಲಿರುವ ಹೊಸ ತೆರಿಗೆ ಯುಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿಶಾಲ ನೆಲೆಯ ಒಮ್ಮತದ ಫಲವಾಗಿದೆ. ಇದು ಸಾಕಷ್ಟು ಕಾಲವನ್ನಷ್ಟೇ ಅಲ್ಲ, ಸಾಕಷ್ಟು ಪ್ರಯತ್ನವನ್ನೂ ಒಳಗೊಂಡಿದೆ. ಹಲವು ರಾಜಕೀಯ ಹಿನ್ನೆಲೆಯ ವ್ಯಕ್ತಿಗಳು ಈ ನಿಟ್ಟಿನಲ್ಲಿ ತಮ್ಮತಮ್ಮ ಸಂಕುಚಿತ ಆದ್ಯತೆಗಳನ್ನು/ವಿಚಾರಗಳನ್ನು ಪಕ್ಕಕ್ಕಿಟ್ಟು, ದೇಶದ ಹಿತವೇ ಮೊದಲು ಎಂಬ ವಿಶಾಲ ಮನೋಭಾವನೆಯನ್ನು ಪ್ರದರ್ಶಿಸಿದ್ದಾರೆ. ಇದು ಭಾರತದ ಪ್ರಜಾಸತ್ತೆಯ ಪ್ರಬುದ್ಧತೆ ಮತ್ತು ವಿವೇಕಕ್ಕೆ ತೋರಿಸಿದ ಗೌರವವಾಗಿದೆ. 

ಸ್ನೇಹಿತರೇ, 

5. ತೆರಿಗೆ ನಿಗದಿ ಮತ್ತು ಆರ್ಥಿಕ ವಿಚಾರಗಳಲ್ಲಿ ಸಾಕಷ್ಟು ತನ್ಮಯನಾಗಿ ಕೆಲಸ ಮಾಡಿದ್ದೇನೆ. ಈ ಅನುಭವವಿರುವ ನನ್ನಂಥವನಿಗೂ ಕೂಡ ನಾವು ಕೈಗೊಂಡಿದ್ದ ಬದಲಾವಣೆಯ ಗಹನತೆಯು ನಿಜಕ್ಕೂ ತುಂಬಾ ಸವಾಲಿದ್ದಾಗಿತ್ತು. ಕೇಂದ್ರ ಅಬಕಾರಿ ಸುಂಕಕ್ಕಂತೂ ದೀರ್ಘ ಇತಿಹಾಸವಿದೆ. ಇದು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಪ್ರಮಾಣದ ಆದಾಯ ತರುವುದನ್ನು ಸ್ವತಃ ಹಲವು ಕಾಲಘಟ್ಟಗಳಲ್ಲಿ ಹಣಕಾಸು ಸಚಿವನಾಗಿದ್ದ ನಾನೇ ನೋಡಿದ್ದೇನೆ. ಇದಕ್ಕೆ ಹೋಲಿಸಿದರೆ ಸೇವಾ ತೆರಿಗೆ ಇತ್ತೀಚಿನದು, ನಿಜ. ಆದರೆ, ಆದಾಯದ ಪ್ರಮಾಣವನ್ನು ಗಮನದಲ್ಲಿ ಇಟ್ಟುಕೊಂಡು ನೋಡಿದರೆ ಇದು ಕ್ಷಿಪ್ರವಾಗಿ ಬೆಳೆದಿದೆ. ಆದರೆ ಜಿಎಸ್ ಟಿ ವ್ಯಾಪ್ತಿಗೆ ಸೇರದ ಕೆಲವೇ ಕೆಲವು ಸರಕುಗಳನ್ನು ಹೊರತುಪಡಿಸಿದರೆ ಇನ್ನುಮುಂದೆ ಯಾವುದರ ಮೇಲೂ ಇವೆರಡೂ ತೆರಿಗೆಗಳು ಇರುವುದಿಲ್ಲ. ಅಂದರೆ, ಇದುವರೆಗೂ ಜಾರಿಯಲ್ಲಿದ್ದ ಹೆಚ್ಚುವರಿ ಕಸ್ಟಮ್ಸ್ ಸುಂಕ, ವಿಶೇಷ ಹೆಚ್ಚುವರಿ ಕಸ್ಟಮ್ಸ್ ಸುಂಕ ಮತ್ತು ಇನ್ನಿತರ ಹತ್ತಾರು ಬಗೆಯ ಸೆಸ್ಗಳು ಮತ್ತು ಸರ್ಚಾರ್ಜುಗಳ ಜೊತೆಯಲ್ಲಿ ಕೇಂದ್ರ ಅಬಕಾರಿ ಸುಂಕ ಮತ್ತು ಸೇವಾ ತೆರಿಗೆ ಕೂಡ ಇತಿಹಾಸವನ್ನು ಸೇರಲಿವೆ. ಹಾಗೆಯೇ, ಜಿಎಸ್ ಟಿ ವ್ಯಾಪ್ತಿಗೆ ಬರಲಿರುವ ಸರಕುಗಳ ಮೇಲಿನ ಅಂತಾರಾಜ್ಯ ವಹಿವಾಟಿನ ಮೇಲೆ ಇದುವರೆಗೆ ವಿಧಿಸುತ್ತಿದ್ದ ಕೇಂದ್ರ ಮಾರಾಟ ತೆರಿಗೆಗೂ ತೆರೆ ಬೀಳಲಿದೆ. ಈ ವ್ಯವಸ್ಥೆಯಿಂದ ರಾಜ್ಯಗಳ ಮಟ್ಟದಲ್ಲಿ ಕೂಡ ಮಹತ್ತರವಾದ ಬದಲಾವಣೆ ಬರಲಿದೆ. ಮುಖ್ಯವಾಗಿ, ರಾಜ್ಯಗಳು ಇದುವರೆಗೂ ವಿಧಿಸುತ್ತಿದ್ದ ಮೌಲ್ಯವರ್ಧಿತ ತೆರಿಗೆ ಅಥವಾ ಮಾರಾಟ ತೆರಿಗೆ, ಪ್ರವೇಶ ತೆರಿಗೆ, ಜಾಹೀರಾತು ತೆರಿಗೆ, ಐಷಾರಾಮ ತೆರಿಗೆ, ಮನೋರಂಜನಾ ತೆರಿಗೆ ಮತ್ತು ಹತ್ತಾರು ತರಹದ ಮೇಲ್ತೆರಿಗೆಗಳು (ಸರ್ಚಾರ್ಜಸ್) ಹಾಗೂ ಸೆಸ್ ಗಳು ಇನ್ನು ಕೇವಲ ನೆನಪಾಗಲಿವೆ. 

ಸ್ನೇಹಿತರೇ, 

6. ಜಿಎಸ್ ಟಿ ವ್ಯವಸ್ಥೆಯು ನಮ್ಮ ರಫ್ತು ವಹಿವಾಟನ್ನು ಸ್ಪರ್ಧಾತ್ಮಕಗೊಳಿಸುವುದಷ್ಟೆ ಅಲ್ಲ, ಆಮದು ವಹಿವಾಟಿನಲ್ಲೂ ದೇಶೀಯ ಉದ್ಯಮಗಳಿಗೆ ಸರಿಸಮನಾದ ನೆಲೆಯನ್ನು ಒದಗಿಸಲಿದೆ. ಏಕೆಂದರೆ, ಈಗಿರುವ ಹಲವು ಅಡೆತಡೆಗಳಿಂದಾಗಿ ನಮ್ಮ ರಫ್ತು ವಹಿವಾಟಿನ ಮೇಲೆ ಅನೇಕ ತೆರಿಗೆಗಳ ಹೊರೆ ಬೀಳುತ್ತಿದೆ. ಇದರಿಂದಾಗಿ ನಮ್ಮ ರಫ್ತು ವಹಿವಾಟು ಹೆಚ್ಚು ಸ್ಪರ್ಧಾತ್ಮಕವಾಗಿಲ್ಲ. ಇದೇ ರೀತಿಯಲ್ಲಿ, ಸ್ಥಳೀಯ ಉದ್ಯಮದ ಮೇಲೆ ವಿಧಿಸಿರುವ ತೆರಿಗೆಗಳು ಕೂಡ ಅಪಾರದರ್ಶಕವಾಗಿದೆ. ಇದು, ನಮ್ಮ ವ್ಯವಸ್ಥೆಯಲ್ಲಿರುವ ದೋಷಗಳ ಅವ್ಯಕ್ತ ಪರಿಣಾಮವಾಗಿದೆ. ಆದರೆ ಜಿಎಸ್ ಟಿ ವ್ಯವಸ್ಥೆಯಡಿ ತೆರಿಗೆಯು ಪಾರದರ್ಶಕವಾಗಿರಲಿದ್ದು, ರಫ್ತು ವಹಿವಾಟಿನಲ್ಲಿರುವ ಅನಗತ್ಯ ತೆರಿಗೆ ಹೊರೆಯನ್ನು ನಿರ್ಮೂಲ ಮಾಡಲಿದೆ. ಅಲ್ಲದೆ, ಆಮದು ವಹಿವಾಟಿನ ಮೇಲೆ ಸರಿಯಾದ ವಿಧಾನದಲ್ಲಿ ತೆರಿಗೆ ವಿಧಿಸುವುದನ್ನು ಇದು ಸಾಧ್ಯವಾಗಿಸಲಿದೆ. 

ಸ್ನೇಹಿತರೇ, 

7. ವಿಶ್ವದರ್ಜೆಯ ಮಾಹಿತಿ ತಂತ್ರಜ್ಞಾನದ (ಐಟಿ) ಮೂಲಕ ಜಿಎಸ್ ಟಿ ವ್ಯವಸ್ಥೆಯನ್ನು ನಿರ್ವಹಿಸಲಾಗುವುದು ಎಂದು ನನಗೆ ತಿಳಿಸಲಾಗಿದೆ. ಈ ಜಿಎಸ್ ಟಿ ವ್ಯವಸ್ಥೆಗೆ ಅಗತ್ಯವಾದ ಮಾಹಿತಿ ತಂತ್ರಜ್ಞಾನವನ್ನು ರೂಪಿಸಲೆಂದು ಶ್ರೀ ನಂದನ್ ನೀಲೇಕಣಿ ಅವರ ನೇತೃತ್ವದಲ್ಲಿ 2010ರ ಜುಲೈನಲ್ಲಿ ಒಂದು ಉನ್ನತ ಸಮಿತಿಯನ್ನು ನಾನು ರಚಿಸಿದ್ದೆ ಎಂದು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ಬಳಿಕ 2012ರ ಏಪ್ರಿಲ್ ನಲ್ಲಿ ಜಿಎಸ್ ಟಿ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರವು ಜಿಎಸ್ ಟಿಎನ್ (ಜಿಎಸ್ ಟಿ ನೆಟ್ ವರ್ಕ್)ಗೆ ಅನುಮೋದನೆ ನೀಡಿತು. ಕಾಲವನ್ನು ವ್ಯರ್ಥ ಮಾಡಬಾರದೆಂಬುದು ಮತ್ತು ಜಿಎಸ್ ಟಿ ಜಾರಿಗೆ ಅಗತ್ಯವಾದ ಶಾಸನಾತ್ಮಕ ಕೆಲಸಗಳೆಲ್ಲ ಸಿದ್ಧವಾಗುವ ಹೊತ್ತಿಗೆ ಸರಿಯಾಗಿ ತಾಂತ್ರಿಕ ಮೂಲಸೌಲಭ್ಯ ಕೂಡ ಸಜ್ಜಾಗಿರಬೇಕೆಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ವ್ಯಾಪಾರ-ವಹಿವಾಟು ನಡೆಸುವವರು ಸರ್ಕಾರಕ್ಕೆ ತಾವು ಸಲ್ಲಿಸಬೇಕಾದ ತೆರಿಗೆಯನ್ನು ನಿಜವಾಗಿಯೂ ಸಲ್ಲಿಸಿದಾಗ ಮಾತ್ರ ಖರೀದಿ ಮಾಡುವ ಗ್ರಾಹಕರಿಗೆ ಈ ನೂತನ ತೆರಿಗೆ ಪದ್ಧತಿಯಲ್ಲಿ ಅದರ ಶ್ರೇಯಸ್ಸು ಸಿಗುತ್ತದೆ ಎಂದು ನನಗೆ ತಿಳಿಸಲಾಗಿದೆ. ಇದು, ಸಾರ್ವಜನಿಕರು ಇನ್ನುಮುಂದೆ ಯಾವ ವ್ಯಾಪಾರ-ವಹಿವಾಟುದಾರರು ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾರೋ ಅಂಥವರ ಬಳಿ ಮಾತ್ರ ಖರೀದಿಸುವ ವಾತಾವರಣವನ್ನು ಸೃಷ್ಟಿಸಲಿದೆ. ಒಂದೇ ತೆರಿಗೆಯ ಮೂಲಕ ಇಡೀ ದೇಶವನ್ನು ಒಂದೇ ಮಾರುಕಟ್ಟೆಯನ್ನಾಗಿ ಮಾಡುವ ಮೂಲಕ ಜಿಎಸ್ ಟಿ ವ್ಯವಸ್ಥೆಯು ಆರ್ಥಿಕ ದಕ್ಷತೆ, ತೆರಿಗೆ ಪಾವತಿ ಮತ್ತು ಸ್ಥಳೀಯ ಹಾಗೂ ವಿದೇಶೀ ಹೂಡಿಕೆಗೆ ಕೂಡ ದೊಡ್ಡ ಮಟ್ಟದಲ್ಲಿ ಬಲ ತುಂಬಲಿದೆ. 

ಸ್ನೇಹಿತರೇ, 

8. ಜಿಎಸ್ ಟಿ ವ್ಯವಸ್ಥೆಯು ಅಪಸ್ವರಗಳನ್ನು ಹುಟ್ಟುಹಾಕಿರುವ ಪರಿವರ್ತನೆಯಾಗಿದೆ, ನಿಜ. ಹಿಂದೆ ದೇಶದಲ್ಲಿ ವ್ಯಾಟ್ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಾಗಲೂ ಆರಂಭದಲ್ಲಿ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ಜಿಎಸ್ ಟಿಯಂಥ ವಿಶಾಲ ಹರವಿನ ಬದಲಾವಣೆಯನ್ನು ಕೈಗೊಂಡಾಗ ಕೂಡ, ಅದು ಎಷ್ಟೇ ಸಕಾರಾತ್ಮಕವಾಗಿದ್ದರೂ ಶುರುವಿನಲ್ಲಿ ಅಥವಾ ಮೊದಮೊದಲು ಕೆಲವು ಅಡೆತಡೆಗಳೂ ಕಷ್ಟಗಳೂ ಬಂದೇಬರುತ್ತವೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಮತ್ತು ಕ್ಷಿಪ್ರವಾಗಿ ಸ್ಪಂದಿಸುವ ಮೂಲಕ ನಾವು ಇವನ್ನೆಲ್ಲ ಬಗೆಹರಿಸಿಕೊಳ್ಳಬೇಕು. ಏಕೆಂದರೆ, ಈ ಬಗೆಯ ಅಡಚಣೆಗಳು ನಮ್ಮ ಆರ್ಥಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರಲು ಅವಕಾಶ ಮಾಡಿಕೊಡಬಾರದು. ಅಗಾಧ ಮತ್ತು ಮಹತ್ತರವಾದ ಬದಲಾವಣೆಗಳ ಯಶಸ್ಸು ಒಂದು ಹೊಸ ವ್ಯವಸ್ಥೆಯನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ ಎನ್ನುವುದನ್ನು ಅವಲಂಬಿಸಿದೆ. ಮುಂಬರುವ ತಿಂಗಳಲ್ಲಿ ಜಿಎಸ್ ಟಿ ಜಾರಿಗೊಳಿಸುವ ಹಾದಿಯಲ್ಲಿನ ಅನುಭವಗಳ ಆಧಾರದ ಮೇಲೆ ಜಿಎಸ್ ಟಿ ಸಮಿತಿ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ಜಿಎಸ್ ಟಿ ವ್ಯವಸ್ಥೆಯನ್ನು ಪರಾಮರ್ಶೆಗೆ ಒಡ್ಡಿ, ಅದಕ್ಕೆ ಅಗತ್ಯವಾದ ಸುಧಾರಣೆಗಳನ್ನು ತರಬೇಕು. ಈ ವಿಷಯದಲ್ಲಿ ಇವರೆಲ್ಲರೂ ಇದುವರೆಗೂ ತೋರಿಸಿಕೊಂಡು ಬಂದ ರಚನಾತ್ಮಕ ಉತ್ಸಾಹವನ್ನು ಮುಂದುವರಿಸಿಕೊಂಡು ಹೋಗಬೇಕು. 

9. ಅಂತಿಮವಾಗಿ, ಈ ಮಹತ್ವದ ಕಾಯಿದೆಯನ್ನು ರೂಪಿಸುವಲ್ಲಿ ಮಹತ್ತರವಾದ ಪ್ರಯತ್ನ ನಡೆಸಿದ ಎಲ್ಲರಿಗೆ ನನ್ನ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸಬಯಸುತ್ತೇನೆ. 

*****

Release ID:167055

 



(Release ID: 1494291) Visitor Counter : 130


This link will take you to a webpage outside this websiteinteractive page. Click OK to continue.Click Cancel to stop :   http://pibregional.nic.in/PressReleseDetail.aspx?P
Read this release in: English