ಉಪರಾಷ್ಟ್ರಪತಿಗಳ ಕಾರ್ಯಾಲಯ

ಭಾರತದ ಉಪರಾಷ್ಟ್ರಪತಿ ಶ್ರೀ ಹಮೀದ್ ಅನ್ಸಾರಿ ಅವರು ಜೂನ್ 12ರಂದು ಬೆಂಗಳೂರಿನಲ್ಲಿ ನ್ಯಾಶನಲ್ ಹೆರಾಲ್ಡ್ ನ ಸ್ಮರಣಾರ್ಥ ಸಂಚಿಕೆ ಅನಾವರಣದ ಸಂದರ್ಭದಲ್ಲಿ ಮಾಡಿದ ಭಾಷಣ

Posted On: 12 JUN 2017 5:34PM by PIB Bengaluru
Press Release photo

ಭಾರತದ ಉಪರಾಷ್ಟ್ರಪತಿ ಶ್ರೀ ಹಮೀದ್ ಅನ್ಸಾರಿ ಅವರು ಜೂನ್ 12ರಂದು ಬೆಂಗಳೂರಿನಲ್ಲಿ ನ್ಯಾಶನಲ್ ಹೆರಾಲ್ಡ್ ನ ಸ್ಮರಣಾರ್ಥ ಸಂಚಿಕೆ ಅನಾವರಣದ ಸಂದರ್ಭದಲ್ಲಿ ಮಾಡಿದ ಭಾಷಣ

 

ಇಂದು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ವಿದ್ಯಮಾನವೊಂದರ ಪುನರುಜ್ಜೀವನ ಹಾಗೂ ಉದ್ದೇಶವೊಂದಕ್ಕೆ ಬದ್ಧರಾಗಿರುವ ಜನರ ಕೈಯಲ್ಲಿರುವ ಮಾಧ್ಯಮ, ಜನತೆಯನ್ನು ಪ್ರೇರೇಪಿಸುವಲ್ಲಿ ವಹಿಸಬಲ್ಲ ಪಾತ್ರದ ಬಗ್ಗೆ ಯುವ ಪೀಳಿಗೆಗೆ ನೆನಪಿಸುವ ಅವಿಸ್ಮರಣೀಯ ದಿನ.

ಇದು ನಮ್ಮ ಸ್ವಾತಂತ್ರ್ಯದ 70ನೇ ವರ್ಷ ಹಾಗೂ ನ್ಯಾಶನಲ್ ಹೆರಾಲ್ಡ್, ಸ್ಮರಣಾರ್ಥ ಸಂಚಿಕೆಯೊಂದಿಗೆ ಸಕ್ರಿಯ ಮಾಧ್ಯಮ ವಲಯಕ್ಕೆ ಹಿಂದಿರುಗುತ್ತಿರುವುದು ಸಂಭ್ರಮಾಚರಣೆಗೆ ಯೋಗ್ಯವೆನಿಸಿದೆ.

ಜವಹರಲಾಲ್ ನೆಹರು ಅವರ ಪರಿಕಲ್ಪನೆಯ ನ್ಯಾಶನಲ್ ಹೆರಾಲ್ಡ್ 1938ರಲ್ಲಿ ಲಖ್ನೌನಲ್ಲಿ ಪ್ರಕಟಣೆ ಆರಂಭಿಸಿ ಬಹುಬೇಗನೆ ನಮ್ಮ ಸ್ವಾತಂತ್ರ್ಯ ಚಳವಳಿಯ ದನಿಯಾಗಿ ರೂಪುಗೊಂಡಿತು. ‘ಗಂಡಾಂತರದಲ್ಲಿ ಸ್ವಾತಂತ್ರ್ಯ’ ಎಂಬ ಅದರ ಪ್ರಧಾನ ಶಿರೋನಾಮೆ ಪ್ರತಿರೋಧದ ಪ್ರಸ್ತುತತೆಯನ್ನು ಹೊಂದಿದೆ.

ಭಾರತದಲ್ಲಿ ಪತ್ರಿಕೋದ್ಯಮದ ಇತಿಹಾಸ ನಮ್ಮ ಸ್ವಾತಂತ್ರ್ಯ ಹೋರಾಟದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಭಾರತೀಯ ಪತ್ರಕರ್ತರು ಕೇವಲ ಸುದ್ದಿಯನ್ನು ನೀಡುವವರಷ್ಟೇ ಆಗಿರಲಿಲ್ಲ. ಅವರು ದೇಶವನ್ನು ವಿದೇಶಿ ಆಡಳಿತದಿಂದ ಪಾರುಮಾಡಲು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮಾತ್ರವಲ್ಲ, ನಮ್ಮ ಸಮಾಜದಿಂದ ಮೂಢನಂಬಿಕೆ, ಜಾತೀಯತೆ, ಕೋಮುವಾದ ಹಾಗೂ ತಾರತಮ್ಯ ತೊಡೆದುಹಾಕಲು ಪರಿಶ್ರಮಪಟ್ಟ ಸಾಮಾಜಿಕ ಕಾರ್ಯಕರ್ತರೂ ಆಗಿದ್ದರು.

ನಮ್ಮ ಜನರನ್ನು ಸುಶಿಕ್ಷಿತರನ್ನಾಗಿ ಮಾಡುವಲ್ಲಿ, ಅವರಲ್ಲಿ ಅರಿವು ಮೂಡಿಸಿ ಸಂಘಟಿಸುವಲ್ಲಿ ಪತ್ರಿಕಾರಂಗ ಮಹತ್ವದ ಪಾತ್ರ ವಹಿಸಿತ್ತು. 1885ರಲ್ಲಿ ಕಾಂಗ್ರೆಸ್ ನ ಅನೇಕ ಸಂಸ್ಥಾಪಕ ಸದಸ್ಯರ ಪೈಕಿ ಹಲವರು ಪತ್ರಕರ್ತರಾಗಿದ್ದರು. ಟ್ರಿಬ್ಯೂನ್, ಹಿಂದೂಸ್ತಾನ್, ಲೀಡರ್, ಸುಧಾರಕ್, ಕೇಸರಿ, ಅಕ್ಬಾರ್-ಇ-ಆಮ್, ದಿ ಹಿಂದೂ ಮತ್ತು ಸ್ವದೇಶ್ ಮೊದಲಾದ ಸ್ಫೂರ್ತಿದಾಯಕ ಪತ್ರಿಕೆಗಳನ್ನು ಪ್ರಮುಖ ನಾಯಕರಾದ ತಿಲಕ್, ಗೋಖಲೆ, ಸುಬ್ರಮಣ್ಯ ಅಯ್ಯರ್, ಲಜ್ ಪತ್ ರಾಯ್, ಮದನ್ ಮೋಹನ ಮಾಳವೀಯ ಹಾಗೂ ಅಗರ್ಕರ್ ಸಂಪಾದಿಸುತ್ತಿದ್ದರು. ಇದನ್ನು ಕವಿಯೊಬ್ಬರು ಹೀಗೆ ಕ್ರೋಡೀಕರಿಸಿದ್ದಾರೆ:

 

ಕೀಂಚೋ ನ ಕಮಾನೋಂಕೊ ನ ತಲ್ವಾರ್ ನಿಕಾಲೊ

ಜಬ್ ತೋಪ್ ಮುಖಾಬಿಲ್ ಹೊ ತೊ ಅಕ್ ಬಾರ್ ನಿಕಾಲೊ

(ಬಿಲ್ಲು ಹೂಡಬೇಡ ಖಡ್ಗ ಹಿರಿಯಲೂಬೇಡ

ಎದುರಾಳಿಯನ್ನು ಎದುರಿಸಬೇಕಾದಾಗ ವೃತ್ತಪತ್ರಿಕೆ ಹೊರಡಿಸು)

ಪತ್ರಿಕಾರಂಗ ರಾಷ್ಟ್ರೀಯ ಜಾಗೃತಿಗೆ ಒಂದು ಸಾಧನವಾಗಿ ಹೊರಹೊಮ್ಮಿತು. ಜನಸಮೂಹಕ್ಕೆ ರಾಷ್ಟ್ರೀಯತಾವಾದದ ರಾಜಕೀಯ ಪಾಲ್ಗೊಳ್ಳುವಿಕೆಗೆ ಅದೊಂದು ಮಾಧ್ಯಮವಾಯಿತು. ಪ್ರಜಾಸತ್ತೆ, ಸ್ವಾತಂತ್ರ್ಯ ಹಾಗೂ ಸಮಾನತೆಯ ಆಧುನಿಕ ಚಿಂತನೆಗಳನ್ನು ಹುಟ್ಟುಹಾಕಲು ಪತ್ರಿಕಾರಂಗ ಒಂದು ಮಾಧ್ಯಮವಾಯಿತು. ಇಂಗ್ಲೀಷ್ ಪತ್ರಿಕಾರಂಗ ದೇಶಾದ್ಯಂತ ರಾಷ್ಟ್ರೀಯತಾವಾದಿಗಳ ನಡುವಣ ಸಂವಹನ ಮಾಧ್ಯಮವಾಗಿ ಹೊರಹೊಮ್ಮಿದ್ದಲ್ಲದೆ ಭಾರತವನ್ನು ಒಂದು ದೇಶವಾಗಿ ಬೆಸೆಯುವಲ್ಲಿ ಮತ್ತು ಭಾರತೀಯರಲ್ಲಿ ರಾಷ್ಟ್ರೀಯ ಅನನ್ಯತೆಯ ಪ್ರಜ್ಞೆಯನ್ನು ಮೂಡಿಸುವಲ್ಲಿಯೂ ಪಾತ್ರ ವಹಿಸಿತು. ಇದು ಹಲವಾರು ರಾಷ್ಟ್ರೀಯತಾವಾದದ ಮತ್ತು ಸಾಮಾಜಿಕ ಉದ್ದೇಶಗಳಿಗೆ ಜನಸಮುದಾಯವನ್ನು ಸಂಘಟಿಸುವಲ್ಲಿ ನಿರ್ಣಾಯಕವಾಗಿತ್ತು.

ಗಾಂಧೀಜಿಯವರು ಆರು ಜರ್ನಲ್ ಗಳ ಜತೆ ಸಹಯೋಗ ಹೊಂದಿದ್ದರು ಹಾಗೂ ಎರಡು ಅತ್ಯಂತ ಪ್ರಭಾವಿ ಸಾಪ್ತಾಹಿಕಗಳ ಸಂಪಾದಕರಾಗಿದ್ದರು. ಅವರು ಜಾಹೀರಾತುಗಳನ್ನು ಪ್ರಕಟಿಸುತ್ತಿರಲಿಲ್ಲ; ಆದರೆ ತಮ್ಮ ವೃತ್ತಪತ್ರಿಕೆಗಳು ನಷ್ಟ ಅನುಭವಿಸಬಾರದೆಂಬುದು ಅವರ ಇರಾದೆಯಾಗಿತ್ತು. ‘ಯಂಗ್ ಇಂಡಿಯಾ’ ಹಾಗೂ ‘ಹರಿಜನ’ ಪತ್ರಿಕೆಗಳು ಎಲ್ಲ ವಿಷಯಗಳ ಕುರಿತು ಅವರ ದೃಷ್ಟಿಕೋನವನ್ನು ಬಿಂಬಿಸುವ ಶಕ್ತಿಶಾಲಿ ಸಾಧನಗಳಾಗಿದ್ದವು. ಅವರು ಎಲ್ಲ ವಿಷಯಗಳ ಕುರಿತು ಬರೆಯುತ್ತಿದ್ದರು. ಗಾಂಧೀಜಿಯವರಿಗೆ ಪತ್ರಿಕೋದ್ಯಮ ಒಂದು ಸಾರ್ವಜನಿಕ ಸೇವೆಯಾಗಿತ್ತು. ಅವರು ಹೇಳುವಂತೆ,

ನನ್ನ ವಿನಮ್ರ ಅಭಿಪ್ರಾಯದಂತೆ, ಪತ್ರಿಕೆಯನ್ನು ಜೀವನೋಪಾಯಕ್ಕಾಗಿ ಬಳಸುವುದು ತಪ್ಪು. ಕೆಲವೊಂದು ಕ್ಷೇತ್ರಗಳ ಕೆಲಸ ಎಂತಹ ಪರಿಣಾಮದ್ದಾಗಿರುತ್ತವೆ ಮತ್ತು ಸಾರ್ವಜನಿಕ ಕಲ್ಯಾಣದ ಮೇಲೆ ಎಂತಹ ಪ್ರಭಾವ ಬೀರುತ್ತವೆಯೆಂದರೆ ಅವುಗಳನ್ನು ಜೇವನೋಪಾಯಕ್ಕಾಗಿ ಬಳಸಿಕೊಂಡರೆ ಅವುಗಳ ಹಿಂದಿನ ಉದ್ದೇಶವೇ ಸೋಲುತ್ತದೆ. ಅಷ್ಟೇ ಅಲ್ಲ, ವೃತ್ತಪತ್ರಿಕೆಯನ್ನು ಲಾಭಗಳಿಕೆಯ ಸಾಧನವಾಗಿ ಪರಿಗಣಿಸಿದರೆ ಅದರ ಫಲಿತಾಂಶ ಗಂಭೀರ ಸ್ವರೂಪದ ಅಕ್ರಮಗಳಾಗುವ ಸಾಧ್ಯತೆಯಿದೆ. ಅಂತಹ ಅಕ್ರಮಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದನ್ನು ಪತ್ರಿಕೋದ್ಯಮದಲ್ಲಿ ಸ್ವಲ್ಪಮಟ್ಟಿನ ಅನುಭವ ಹೊಂದಿರುವವರಿಗೆ ಸಾಬೀತುಪಡಿಸುವ ಅಗತ್ಯವಿಲ್ಲ.”

ಗಾಂಧೀಜಿ, ಜವಹರಲಾಲ್ ನೆಹರು ಅವರನ್ನು ಹೀಗೆ ಬಣ್ಣಿಸಿದ್ದರು: ‘ನೆಹರು ಒಬ್ಬ ಕಲಾವಿದ, ಅಪ್ರತಿಮ ದೇಶಭಕ್ತ, ಮಾನವತಾವಾದಿ ಹಾಗೂ ಒಬ್ಬ ಅಂತಾರಾಷ್ಟ್ರೀಯವಾದಿ.’ ನೆಹರು ಅವರ ಪತ್ರಿಕಾಧರ್ಮ ಮಹಾತ್ಮ ಅವರ ಮೌಲ್ಯಗಳನ್ನು ಬಿಂಬಿಸುತ್ತಿದ್ದವು. ಮಾಧ್ಯಮ ಪ್ರಜಾಸತ್ತೆಯ ಆಧಾರಸ್ತಂಭವೆಂಬುದು ನೆಹರು ಅವರ ನಂಬಿಕೆಯಾಗಿತ್ತು. ಅವರು ಮುಕ್ತ, ಸ್ವತಂತ್ರ ಹಾಗೂ ಪ್ರಾಮಾಣಿಕ ಪತ್ರಿಕಾರಂಗದ ಪ್ರತಿಪಾದಕರಾಗಿದ್ದರು. ಅವರು ಸ್ವತಂತ್ರ ಭಾರತದಲ್ಲಿ ಮಾಧ್ಯಮ ರಂಗದಲ್ಲಿರುವವರ ಹಿತಾಸಕ್ತಿಯನ್ನು ಕಾಯುತ್ತಿದ್ದರು. ಪತ್ರಕರ್ತರಿಗೆ ತಕ್ಕಮಟ್ಟಿನ ರಕ್ಷಣೆ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ಕಾರ್ಯನಿರತ ಪತ್ರಕರ್ತರ ಕಾಯಿದೆ ಬಹುಮಟ್ಟಿಗೆ ಅವರದೇ ಕೊಡುಗೆ.  ನಾನಂದುಕೊಂಡಂತೆ ಈ ಕಾಯಿದೆ ಈಗ ಬಳಕೆಯಲ್ಲಿಲ್ಲ ಹಾಗೂ ಪತ್ರಕರ್ತರು ಪತ್ರಿಕೆಗಳಿಗೆ ‘ಬೇಕಾದ ರೀತಿಯಲ್ಲಿ’ ಬರೆಯುವಂತೆ ಮಾಡುವ ಅಲ್ಪಾವಧಿಯ ಗುತ್ತಿಗೆಗಳು ಸಾಮಾನ್ಯವಾಗಿವೆ.

‘ಜಾಹೀರಾತು ರೂಪದ ಸಂಪಾದಕೀಯಗಳು’ ಮತ್ತು ‘ಪ್ರತಿಕ್ರಿಯೆ ನುಡಿಚಿತ್ರಗಳು’ ಸಂಪಾದಕೀಯವನ್ನು ನೇಪಥ್ಯಕ್ಕೆ ಸರಿಸುತ್ತಿರುವ ‘ಸತ್ಯೋತ್ತರ’ ಮತ್ತು ‘ಪರ್ಯಾಯ ಸತ್ಯಾಂಶಗಳ’ ಈ ಕಾಲದಲ್ಲಿ ಪತ್ರಿಕಾರಂಗ ಗಣತಂತ್ರ ವ್ಯವಸ್ಥೆಯ ಕಾವಲುಗಾರನ ಪಾತ್ರ ವಹಿಸಬೇಕೆಂಬ ನೆಹರು ಅವರ ಮುನ್ನೋಟವನ್ನು ನೆನಪಿಸುವುದು ಹಾಗೂ ಅವರ ಪತ್ರಿಕೋದ್ಯಮವನ್ನು ಸಬಲಗೊಳಿಸಿದ ತತ್ವಾದರ್ಶಗಳನ್ನು ಗಮನಿಸುವುದು ಅಗತ್ಯವೆನಿಸುತ್ತದೆ.

ನಮ್ಮಂತಹ ಮುಕ್ತ ಸಮಾಜದಲ್ಲಿ ಅಧಿಕಾರವನ್ನು ಉತ್ತರದಾಯಿಯನ್ನಾಗಿ ಮಾಡಲು ಜವಾಬ್ದಾರಿಯುತ ಪತ್ರಿಕಾರಂಗ ಅಗತ್ಯ. ಆದ್ದರಿಂದಲೇ ಸಂವಿಧಾನದ 19 (1)(ಎ)  ವಿಧಿಯನ್ವಯ ಪತ್ರಿಕಾ ಸ್ವಾತಂತ್ರ್ಯವೆಂಬುದು ದೇಶದ ಸಾರ್ವಭೌಮತ್ವ ಮತ್ತು ಅಖಂಡತೆ, ದೇಶದ ಭದ್ರತೆ, ಕಾನೂನು ವ್ಯವಸ್ಥೆ, ಸಭ್ಯತೆ, ನ್ಯಾಯಾಲಯ ನಿಂದನೆ, ಮಾನನಷ್ಟ ಹಾಗೂ ಅಪರಾಧವೊಂದಕ್ಕೆ ಪ್ರಚೋದನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇವಲ ಸಕಾರಣ ನಿರ್ಬಂಧಗಳಿಗೆ ಒಳಪಟ್ಟಿದೆ.

‘ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವವನ್ನು ಕಾಪಿಡುವ ಪವಿತ್ರ ಸಂದೂಕು; ಯಾಕೆಂದರೆ ಸಾರ್ವಜನಿಕ ಟೀಕೆ ಪ್ರಜಾಸತ್ತೆಯ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅವಶ್ಯಕ ’ ಎಂದು  ಸರ್ವೋಚ್ಚ ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಇನ್ನೊಂದು ತೀರ್ಪು ಇದನ್ನೇ ಪುನರುಚ್ಚರಿಸಿದೆ:

“ಪ್ರಸಕ್ತ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹಾಗೂ ಸಂವಿಧಾನ ಪ್ರಜಾಸತ್ತಾತ್ಮಕ ಜೀವನಕ್ರಮಕ್ಕೆ ಅನುಗುಣವಾಗಿ ನೀಡಿರುವ ಕಾನೂನುಗಳ ನಡುವೆ ಸಮರ್ಪಕ ಸಮತೋಲನ ಸಾಧಿಸುವುದು ಅಗತ್ಯ. ಕಳೆದ ಕೆಲವು ದಶಕಗಳಲ್ಲಿ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮ ನಮ್ಮ ದೇಶದ ಬದುಕಿನ ಪ್ರಮುಖ ಅಂಶಗಳಾಗಿ ಹೊರಹೊಮ್ಮಿವೆ. ಅವು ಇನ್ನಷ್ಟು ವಿಸ್ತಾರಗೊಳ್ಳುತ್ತಿವೆ ಹಾಗೂ ಇನ್ನಷ್ಟು ಅನ್ವೇಷಣಶೀಲವಾಗುವ ಹಾದಿಯಲ್ಲಿವೆ. ಅಮೆರಿಕ ಮತ್ತು ಯುನೈಟೆಡ್ ಕಿಂಗ್ ಡಮ್ ನಲ್ಲಿರುವ ಆಡಳಿತ ವ್ಯವಸ್ಥೆಗಳಂತೆ ನಮ್ಮ ಆಡಳಿತ ವ್ಯವಸ್ಥೆ ಕೂಡ ಪತ್ರಿಕೆಗಳು  ಹಾಗೂ ಮಾಧ್ಯಮ ಅಧಿಕಾರ ಪ್ರಯೋಗದ ಮೇಲೆ ಸತತ ನಿಗಾ ಇಡುವುದನ್ನು ಬಯಸುತ್ತದೆ.”

ಈ ಮೂಲಕ ಸರ್ಕಾರದ ಕರ್ತವ್ಯ ಸ್ಪಷ್ಟವಾಗಿದೆ. ಮುಕ್ತ ಸಮಾಜಕ್ಕೆ ಸ್ವತಂತ್ರ ಮಾಧ್ಯಮ ಪ್ರಯೋಜನಕಾರಿ ಮಾತ್ರವಲ್ಲ, ಅವಶ್ಯ ಕೂಡ. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾದರೆ ಅದರಿಂದಾಗಿ ನಾಗರಿಕರ ಹಕ್ಕುಗಳು ಗಂಡಾಂತರಕ್ಕೀಡಾಗುತ್ತವೆ. ನ್ಯಾಯಸಮ್ಮತವಲ್ಲದ ನಿರ್ಬಂಧಗಳು ಹಾಗೂ ದಾಳಿಯ ಭೀತಿಯ ಸಂದರ್ಭದಲ್ಲಿ ಮಾಧ್ಯಮಗಳಲ್ಲಿನ ಸ್ವಯಂ ನಿಯಂತ್ರಣ ವ್ಯತಿರಿಕ್ತ ಪರಿಣಾಮ ಬೀರಿ ದುರಾಚಾರವನ್ನು ಮುಚ್ಚಿಹಾಕಲು ನೆರವಾಗುವುದಲ್ಲದೆ ಉಪೇಕ್ಷಿತ ಸಮುದಾಯಗಳಲ್ಲಿ ಹತಾಶೆಯನ್ನು ಹೆಚ್ಚಿಸಬಹುದು.

ಪತ್ರಿಕಾರಂಗ ಹಾಗೂ ಸಮಾಜದ ಸುಗಮ ಕಾರ್ಯನಿರ್ವಹಣೆಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ಸಾಂವಿಧಾನಿಕ ಚೌಕಟ್ಟು ಅವಕಾಶ ಕಲ್ಪಿಸಿದೆ. ಆದರೆ ಅಂತಹ ಕ್ರಮಗಳನ್ನು ವ್ಯಾಪಕ ಜನಸಮುದಾಯದ ಹಿತದೃಷ್ಟಿಯಿಂದ ಮಾತ್ರ ಕೈಗೊಳ್ಳಬೇಕಿದೆ. ಅದೇ ರೀತಿಯಲ್ಲಿ ನಾಗರಿಕರ ಹಕ್ಕುಗಳ ರಕ್ಷಣೆ ಹಾಗೂ ಉತ್ತೇಜನಕ್ಕೆ ಬಹಳಷ್ಟು ನೆರವಾಗಬಲ್ಲ ಮಾಹಿತಿಗಳ ಮುಕ್ತ ಹರಿವಿಗೆ ತಡೆಯೊಡ್ಡುವಂತಿಲ್ಲ.

ಮಾಧ್ಯಮ ರಂಗದ ನೈಜ ಉದ್ದೇಶ ಸಾಧನೆಗಾಗಿ ಈ ರೀತಿ ಮಾಡುವುದು ಅಗತ್ಯ.

ನ್ಯಾಶನಲ್ ಹೆರಾಲ್ಡ್ ಮುದ್ರಣ ಮತ್ತು ಡಿಜಿಟಲ್ ಎರಡೂ ಪ್ರಕಾರಗಳಲ್ಲಿ ಪ್ರಕಾಶನ ಪುನರಾರಂಭಿಸುತ್ತಿರುವುದು ಸಂತೋಷ. ಇದು ಜವಹರಲಾಲ್ ನೆಹರು ಅವರು ತಮ್ಮ ವೃತ್ತಪತ್ರಿಕೆಯಲ್ಲಿ ನೆಲೆಗೊಳಿಸಿದ್ದ ಪತ್ರಿಕೋದ್ಯಮದ ಗುಣಧರ್ಮಗಳನ್ನು ಎತ್ತಿಹಿಡಿಯುವ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ.

***

 

 



(Release ID: 1492579) Visitor Counter : 97


Read this release in: English