ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪರಶೋತ್ತಮ್ ರೂಪಲಾ ಮತ್ತು ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಕೇರಳ ಮತ್ತು ಲಕ್ಷದ್ವೀಪದಲ್ಲಿ ನಡೆಯುವ ಸಾಗರ ಪರಿಕ್ರಮ ಯಾತ್ರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ

ಈ ಇಬ್ಬರೂ ಸಚಿವರು ಪ್ರಗತಿಶೀಲ ಮೀನುಗಾರರಿಗೆ ಪ್ರಮಾಣೀಕರಣ ಮತ್ತು ಮಂಜೂರಾತಿ ಪತ್ರಗಳನ್ನು ನೀಡಲಿದ್ದಾರೆ

ಏಳನೇ ಹಂತದ ಸಾಗರ ಪರಿಕ್ರಮ ಯಾತ್ರೆಯು ನಾಳೆಯಿಂದ ಪ್ರಾರಂಭವಾಗಲಿದೆ

Posted On: 07 JUN 2023 12:45PM by PIB Bengaluru

ನಾಳೆಯಿಂದ ಈ ತಿಂಗಳ 12ರವರೆಗೆ ಕೇರಳ ಮತ್ತು ಲಕ್ಷದ್ವೀಪದಲ್ಲಿ ನಡೆಯಲಿರುವ ಸಾಗರ ಪರಿಕ್ರಮ ಯಾತ್ರಾ ಕಾರ್ಯಕ್ರಮದಲ್ಲಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪುರುಷೋತ್ತಮ್ ರೂಪಾಲ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕಾ ರಾಜ್ಯ ಸಚಿವ ಡಾ. ಎಲ್. ಮುರುಗನ್ ಭಾಗವಹಿಸಲಿದ್ದಾರೆ.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ ವೈ), ಕಿಸಾನ್ ಕ್ರೆಡಿಟ್ ಕಾರ್ಡ್ ಗೆ (ಕೆಸಿಸಿ) ಸಂಬಂಧಿಸಿದ ಪ್ರಮಾಣಪತ್ರಗಳು ಮತ್ತು ಮಂಜೂರಾತಿ ಪತ್ರಗಳನ್ನು ಪ್ರಗತಿಪರ ಮೀನುಗಾರರು, ಮೀನು ಕೃಷಿಕರು ಮತ್ತು ಯುವ ಮೀನುಗಾರಿಕಾ ಉದ್ಯಮಿಗಳಿಗೆ ವಿತರಿಸಲಾಗುವುದು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ, ಕೇಂದ್ರಾಡಳಿತ ಪ್ರದೇಶಗಳ ಯೋಜನೆಗಳು, ಇ-ಶ್ರಮ, ಎಫ್ಐಡಿಎಫ್ ಮತ್ತು ಕೆಸಿಸಿ ಕುರಿತಾದ ಮಾಹಿತಿಯನ್ನು ಸಮೂಹ ಮಾಧ್ಯಮಗಳ ಮೂಲಕ, ಯೋಜನೆಗಳ ವ್ಯಾಪಕ ಪ್ರಚಾರಕ್ಕಾಗಿ ಜಿಂಗಲ್ಸ್ ಮತ್ತು ಡಿಜಿಟಲ್ ಅಭಿಯಾನಗಳ ಮೂಲಕ ಜನಪ್ರಿಯಗೊಳಿಸಲಾಗುವುದು.

ಕೇರಳ ಮೀನುಗಾರಿಕಾ ಸಚಿವ ಶ್ರೀ ಸಾಜಿ ಚೆರಿಯನ್ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಆಡಳಿತ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಭಾರತೀಯ ಕೋಸ್ಟ್ ಗಾರ್ಡ್, ಭಾರತೀಯ ಮೀನುಗಾರಿಕಾ ಸಮೀಕ್ಷೆ ಮತ್ತು ಮೀನುಗಾರರ ಪ್ರತಿನಿಧಿಗಳು ಈ ಪರಿಕ್ರಮ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಕೇರಳವು 590 ಕಿ.ಮೀ ಉದ್ದದ ಶ್ರೀಮಂತ ಕರಾವಳಿ ಪ್ರದೇಶವನ್ನು ಹೊಂದಿದ್ದು, ಈ ಮೀನುಗಾರಿಕಾ ಕ್ಷೇತ್ರವು ರಾಜ್ಯದ ಆರ್ಥಿಕತೆ ಮತ್ತು ಮೀನುಗಾರರು ಮತ್ತು ಇತರ ಮಧ್ಯಸ್ಥಗಾರರ ಸಾಮಾಜಿಕ-ಆರ್ಥಿಕ ಸ್ಥಿತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೇರಳ ರಾಜ್ಯವು ಸುಮಾರು 222 ಸಮುದ್ರ ಮೀನುಗಾರಿಕಾ ಗ್ರಾಮಗಳನ್ನು ಹೊಂದಿದ್ದು, ಮೀನುಗಾರಿಕೆ ಮತ್ತು ಅದರ  ಅವಲಂಬಿತ ಕ್ರಿಯೆಗಳು ಕೇರಳ ರಾಜ್ಯದ ಬಹುಪಾಲು ಜನರಿಗೆ ಜೀವನೋಪಾಯವನ್ನು ಒದಗಿಸುತ್ತವೆ. ಕೇರಳದ ಜಲ ಜೀವವೈವಿಧ್ಯತೆ ಮತ್ತು ಮೀನುಗಾರಿಕಾ ಸಂಪತ್ತು 10 ಲಕ್ಷಕ್ಕೂ ಹೆಚ್ಚು ಮೀನುಗಾರರನ್ನು ಪೋಷಿಸುತ್ತಿದ್ದು, ವಾಣಿಜ್ಯ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಸೇರಿದಂತೆ ಹಲವಾರು ಹೆಚ್ಚುವರಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ.

ಲಕ್ಷದ್ವೀಪವು 4,200 ಚದರ ಕಿ.ಮೀ ವಿಸ್ತಾರವಾದ ಲಗೂನ್; 20,000 ಚದರ ಕಿ.ಮೀ ಪ್ರಾದೇಶಿಕ ಜಲಪ್ರದೇಶ; 4,00,000 ಲಕ್ಷ ಚದರ ಕಿ.ಮೀ ವಿಶೇಷ ಆರ್ಥಿಕ ವಲಯ (ಇಇಝಡ್) ಮತ್ತು ಸುಮಾರು 132 ಕಿ.ಮೀ ಕರಾವಳಿ ಪ್ರದೇಶವನ್ನು ಹೊಂದಿದೆ. ಲಕ್ಷದ್ವೀಪದ ಸುತ್ತಲಿನ ಸಮುದ್ರವು ಪೆಲಾಜಿಕ್ ಮೀನುಗಾರಿಕಾ ಸಂಪನ್ಮೂಲಗಳಾದ, ವಿಶೇಷವಾಗಿ ಟ್ಯೂನಾ ಮೀನು ಸಂಪನ್ಮೂಲಗಳಿಂದ ಸಮೃದ್ಧವಾಗಿದೆ.

ಮೀನುಗಾರರು, ಮೀನು ಕೃಷಿಕರು ಮತ್ತು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಭೇಟಿಯಾಗಲು ಪೂರ್ವನಿರ್ಧರಿತ ಸಮುದ್ರ ಮಾರ್ಗದ ಮೂಲಕ ಇಡೀ ದೇಶದ ಕರಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಮೀನುಗಾರರ ಅನುಕೂಲಕ್ಕಾಗಿ ದೇಶದಲ್ಲಿ ಮೀನುಗಾರಿಕಾ ಕ್ಷೇತ್ರವನ್ನು ಮತ್ತಷ್ಟು ಉದ್ದರಿಸಲು, ಮೀನುಗಾರರ ಸಮಸ್ಯೆಗಳು ಮತ್ತು ಸಲಹೆಗಳ ಬಗ್ಗೆ ಅವರ ಜೊತೆ ನೇರವಾಗಿ ಚರ್ಚಿಸಲು ಕೇಂದ್ರ ಸಚಿವ ಶ್ರೀ ಪುರುಷೋತ್ತಮ ರೂಪಾಲ ಅವರು "ಸಾಗರ ಪರಿಕ್ರಮ ಯಾತ್ರೆಯ" ವಿಶಿಷ್ಟ ಉಪಕ್ರಮವನ್ನು ಕೈಗೊಂಡಿದ್ದಾರೆ. "ಸಾಗರ ಪರಿಕ್ರಮ ಯಾತ್ರೆಯ" ಮೊದಲ ಹಂತವು 2022ರ ಮಾರ್ಚ್ 5ರಂದು ಗುಜರಾತ್ ನ ಮಾಂಡ್ವಿಯಿಂದ ಪ್ರಾರಂಭವಾಯಿತು. ಇದುವರೆಗೆ ಸಾಗರ ಪರಿಕ್ರಮ ಯಾತ್ರೆಯ ಆರು ಹಂತಗಳಲ್ಲಿ ಗುಜರಾತ್, ದಿಯು ಮತ್ತು ದಾಮನ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕರಾವಳಿ ಪ್ರದೇಶಗಳನ್ನು ಈ ಯಾತ್ರೆಯ ಅಡಿಯಲ್ಲಿ ಪೂರೈಸಲಾಗಿದೆ. ಮಂಗಳೂರು, ಕಾಸರಗೋಡು, ಮಡಕ್ಕರ, ಪಲ್ಲಿಕ್ಕರ, ಚಾಲಿಯಂ, ಕಾಞಂಗಾಡು, ಕೋಝಿಕೋಡ್, ಪುದುಚೇರಿಯ ಮಾಹೆ, ಬೇಪೋರ್, ತ್ರಿಶೂರ್, ಎರ್ನಾಕುಲಂ, ಕೊಚ್ಚಿ ಮತ್ತು ಲಕ್ಷದ್ವೀಪದ ಸಣ್ಣ ದ್ವೀಪಗಳಾದ ಕವರತ್ತಿ, ಬಂಗಾರಂ ಮತ್ತು ಅಗತ್ತಿ ಮುಂತಾದ ಸ್ಥಳಗಳು ಸೇರಿದಂತೆ ಕೇರಳ ಮತ್ತು ಲಕ್ಷದ್ವೀಪದ ಕರಾವಳಿ ಪ್ರದೇಶಗಳನ್ನು "ಸಾಗರ ಪರಿಕ್ರಮ ಯಾತ್ರೆಯ" ಏಳನೇ ಹಂತದಲ್ಲಿ ಪೂರೈಸಲಾಗುವುದು. 

ಜವಾಬ್ದಾರಿಯುತ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಮತ್ತು ಎಲ್ಲಾ ಮೀನುಗಾರರು ಮತ್ತು ಮಧ್ಯಸ್ಥಗಾರರ ನಡುವೆ ಒಗ್ಗಟ್ಟನ್ನು ಮೂಡಿಸಲು ಸರ್ಕಾರವು ಜಾರಿಗೆ ತರುತ್ತಿರುವ ಮೀನುಗಾರಿಕಾ ಸಂಬಂಧಿತ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಲು "ಸಾಗರ ಪರಿಕ್ರಮ ಯಾತ್ರೆಯು" ಉತ್ತಮ ಕೊಡುಗೆಯನ್ನು ನೀಡುತ್ತಿದೆ.

*****



(Release ID: 1930523) Visitor Counter : 21


Read this release in: English