Others
ಭಾರತದ ವಿಕಸನಗೊಳ್ಳುತ್ತಿರುವ ಮಾಪನಶಾಸ್ತ್ರದ ಪರಿಸರ ವ್ಯವಸ್ಥೆ
ವ್ಯಾಪಾರ, ಪಾರದರ್ಶಕತೆ ಮತ್ತು ಗ್ರಾಹಕ ಸಂರಕ್ಷಣೆಯನ್ನು ಬಲಪಡಿಸುವುದು
Posted On:
20 MAY 2026 12:04PM
|
ಭಾರತದ ವಿಕಸನಗೊಳ್ಳುತ್ತಿರುವ ಮಾಪನಶಾಸ್ತ್ರದ ಪರಿಸರ ವ್ಯವಸ್ಥೆಯು ನ್ಯಾಯೋಚಿತ ವ್ಯಾಪಾರ, ಗ್ರಾಹಕ ಸಂರಕ್ಷಣೆ, ಕೈಗಾರಿಕಾ ಗುಣಮಟ್ಟ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತಿದೆ. ಪ್ರಾಚೀನ ಕಾಲದ ತೂಕ ಮತ್ತು ಅಳತೆಗಳ ಪದ್ಧತಿಯಿಂದ ವಿಕಸನಗೊಂಡಿರುವ ಆಧುನಿಕ ನಿಯಂತ್ರಣ ವ್ಯವಸ್ಥೆಗೆ 'ಕಾನೂನು ಮಾಪನಶಾಸ್ತ್ರ ಕಾಯ್ದೆ, 2009' ಪ್ರಮುಖ ಆಧಾರಸ್ತಂಭವಾಗಿದೆ. ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ಮತ್ತು ಪ್ರಾದೇಶಿಕ ಉಲ್ಲೇಖ ಗುಣಮಟ್ಟದ ಪ್ರಯೋಗಾಲಯಗಳಂತಹ ಸಂಸ್ಥೆಗಳು ರಾಷ್ಟ್ರೀಯ ಮಾಪನ ಮಾನದಂಡಗಳು ಮತ್ತು ಪರಿಶೀಲನಾ ವ್ಯವಸ್ಥೆಗಳನ್ನು ಬೆಂಬಲಿಸುತ್ತವೆ. 'ಇ-ಮಾಪ್ ಪೋರ್ಟಲ್', 'ಒನ್ ನೇಷನ್ ಒನ್ ಟೈಮ್' ಮತ್ತು 'ಒಐಎಂಎಲ್' ಪ್ರಮಾಣಪತ್ರವನ್ನು ನೀಡುವ ಅಧಿಕಾರದಂತಹ ಉಪಕ್ರಮಗಳು ಪಾರದರ್ಶಕತೆ, ದಕ್ಷತೆ ಮತ್ತು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುತ್ತಿವೆ. ಇವು ಜಾಗತಿಕ ಮಾಪನ ಮತ್ತು ಗುಣಮಟ್ಟದ ಮೂಲಸೌಕರ್ಯಗಳೊಂದಿಗೆ ಭಾರತವನ್ನು ಸಂಯೋಜಿಸುವ ಮೂಲಕ ಸುಲಭ ವ್ಯಾಪಾರಕ್ಕೂ ಬೆಂಬಲ ನೀಡುತ್ತಿವೆ.
|
ಮಾಪನಶಾಸ್ತ್ರ: ಮಾಪನ ವಿಜ್ಞಾನದ ಮೂಲಕ ವ್ಯಾಪಾರದಲ್ಲಿ ನಂಬಿಕೆಯ ದೃಢೀಕರಣ
ಆಧುನಿಕ ಆರ್ಥಿಕ ವ್ಯವಸ್ಥೆಗಳು, ಕೈಗಾರಿಕಾ ಉತ್ಪಾದನೆ, ವೈಜ್ಞಾನಿಕ ಪ್ರಗತಿ ಮತ್ತು ಗ್ರಾಹಕ ಸಂರಕ್ಷಣೆಗೆ ಮಾಪನವೇ ಮೂಲ ಅಡಿಪಾಯವಾಗಿದೆ. ಪ್ರಮಾಣೀಕೃತ ಮಾಪನಗಳು ವ್ಯಾಪಾರ, ಆರೋಗ್ಯ ರಕ್ಷಣೆ, ಮೂಲಸೌಕರ್ಯ, ದೂರಸಂಪರ್ಕ, ಇಂಧನ ವಿತರಣೆ ಮತ್ತು ಡಿಜಿಟಲ್ ತಂತ್ರಜ್ಞಾನಗಳಂತಹ ವಿವಿಧ ವಲಯಗಳಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕ ನಂಬಿಕೆಯನ್ನು ಖಚಿತಪಡಿಸುತ್ತವೆ. ಈ ನಿಟ್ಟಿನಲ್ಲಿ, ಮಾಪನದ ವಿಜ್ಞಾನವಾದ ‘ಮಾಪನಶಾಸ್ತ್ರ’ ಮತ್ತು ಮಾಪನಗಳ ನಿಯಂತ್ರಣ ವ್ಯವಸ್ಥೆಯಾದ ‘ಕಾನೂನು ಮಾಪನಶಾಸ್ತ್ರʼ, ವ್ಯಾಪಾರ ಮತ್ತು ವಾಣಿಜ್ಯದಲ್ಲಿ ನ್ಯಾಯೋಚಿತತೆಯನ್ನು ಖಾತರಿಪಡಿಸುತ್ತವೆ. ಮಾಪನಶಾಸ್ತ್ರವು ಘಟಕಗಳು ಮತ್ತು ಅಳೆಯುವ ಉಪಕರಣಗಳಿಗಾಗಿ ಸಾಮಾನ್ಯ ಮಾನದಂಡಗಳನ್ನು ರೂಪಿಸುತ್ತದೆ. ಸರಕುಗಳ ವ್ಯಾಪಾರದಲ್ಲಿ ಬಳಸಲಾಗುವ ಉದ್ದ, ತೂಕ, ಗಾತ್ರ, ಸಮಯ, ತಾಪಮಾನ ಮತ್ತು ಇತರ ಭೌತಿಕ ಪ್ರಮಾಣಗಳಂತಹ ವಿವಿಧ ರೀತಿಯ ಮಾಪನಗಳಿಗಾಗಿ ಈ ಪ್ರಮಾಣೀಕೃತ ಘಟಕಗಳನ್ನು ಸ್ಥಾಪಿಸಲಾಗಿದೆ. ಇದು ನೌಕಾಯಾನ, ನಿರ್ಮಾಣ ಕ್ಷೇತ್ರ, ಉತ್ಪನ್ನ ಅಭಿವೃದ್ಧಿ, ಪರಿಸರ ಮೇಲ್ವಿಚಾರಣೆ, ವೈದ್ಯಕೀಯ ಮತ್ತು ಆಹಾರ ಸಂಸ್ಕರಣೆ ಸೇರಿದಂತೆ ವ್ಯಾಪಕ ಶ್ರೇಣಿಯ ಅನ್ವಯಿಕೆಗಳನ್ನು ಹೊಂದಿದೆ.
ಮಾಪನಶಾಸ್ತ್ರವು ಮಾಪನದ ವಿಜ್ಞಾನ ಮತ್ತು ನಿಖರತೆಯ ಮೇಲೆ ಗಮನ ಹರಿಸುತ್ತದೆ. ಮತ್ತೊಂದೆಡೆ, ಕಾನೂನು ಮಾಪನಶಾಸ್ತ್ರವು ಸಾರ್ವಜನಿಕ ರಕ್ಷಣೆ ಮತ್ತು ನ್ಯಾಯೋಚಿತ ವ್ಯಾಪಾರಕ್ಕಾಗಿ ತೂಕ ಹಾಗೂ ಮಾಪನಗಳಲ್ಲಿ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುವುದರ ಮೇಲೆ ಗಮನ ಹರಿಸುತ್ತದೆ. ಪ್ರಗತಿಪರ ಶಾಸಕಾಂಗ ಸುಧಾರಣೆಗಳು, ಸಾಂಸ್ಥಿಕ ಬಲವರ್ಧನೆ ಮತ್ತು ಡಿಜಿಟಲ್ ಆಡಳಿತದ ಉಪಕ್ರಮಗಳ ಮೂಲಕ ಭಾರತವು ಒಂದು ಸಮಗ್ರ ಕಾನೂನು ಮಾಪನಶಾಸ್ತ್ರದ ಚೌಕಟ್ಟನ್ನು ಅಭಿವೃದ್ಧಿಪಡಿಸಿದೆ. ಪ್ರಾಚೀನ ಕಾಲದ ತೂಕ ಮತ್ತು ಅಳತೆಗಳ ಪದ್ಧತಿಯಿಂದ ಹಿಡಿದು 'ಕಾನೂನು ಮಾಪನಶಾಸ್ತ್ರ ಕಾಯ್ದೆ, 2009' ರ ಜಾರಿವರೆಗೆ, ಭಾರತದ ಮಾಪನ ಪರಿಸರ ವ್ಯವಸ್ಥೆಯು ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಈ ವಿಕಸನಗೊಳ್ಳುತ್ತಿರುವ ಚೌಕಟ್ಟು ಬದಲಾಗುತ್ತಿರುವ ವ್ಯಾಪಾರ ಪದ್ಧತಿಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಹೆಚ್ಚುತ್ತಿರುವ ಗ್ರಾಹಕ ಸಂರಕ್ಷಣೆಯ ಅಗತ್ಯತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.
|
ವಿಶ್ವ ಮಾಪನಶಾಸ್ತ್ರ ದಿನ
ಪ್ರತಿ ವರ್ಷ ಮೇ 20 ರಂದು ಆಚರಿಸಲಾಗುವ ವಿಶ್ವ ಮಾಪನಶಾಸ್ತ್ರ ದಿನವು ಆಧುನಿಕ ಸಮಾಜದಲ್ಲಿ ಮಾಪನ ವಿಜ್ಞಾನದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ದಿನವನ್ನು 1999 ರಲ್ಲಿ 'ತೂಕ ಮತ್ತು ಅಳತೆಗಳ ಅಂತರರಾಷ್ಟ್ರೀಯ ಸಮಿತಿ' ಸ್ಥಾಪಿಸಿತು. ಇದು 1875 ರ ಮೇ 20 ರಂದು 'ಮೀಟರ್ ಸಮಾವೇಶ'ಕ್ಕೆ ಸಹಿ ಹಾಕಿದ ನೆನಪನ್ನು ಸ್ಮರಿಸುತ್ತದೆ. ಈ ಸಮಾವೇಶವು ಜಾಗತಿಕವಾಗಿ ಏಕರೂಪದ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಮೆಟ್ರಿಕ್ ಮಾಪನ ಪದ್ಧತಿಗೆ ಸಾಂಸ್ಥಿಕ ಮತ್ತು ವೈಜ್ಞಾನಿಕ ಅಡಿಪಾಯವನ್ನು ಹಾಕಿತು. 'ಅಂತರರಾಷ್ಟ್ರೀಯ ತೂಕ ಮತ್ತು ಅಳತೆಗಳ ಬ್ಯೂರೋ' ಮತ್ತು 'ಅಂತರರಾಷ್ಟ್ರೀಯ ಕಾನೂನು ಮಾಪನಶಾಸ್ತ್ರ ಸಂಸ್ಥೆ' ಜಂಟಿಯಾಗಿ ಈ ಆಚರಣೆಗಳನ್ನು ಸಂಯೋಜಿಸುತ್ತವೆ. ಈ ವರ್ಷದ ವಿಷಯವಾದ "ಮಾಪನಶಾಸ್ತ್ರ: ನೀತಿ ನಿರೂಪಣೆಯಲ್ಲಿ ನಂಬಿಕೆಯ ದೃಢೀಕರಣ" ಎಂಬುದು ಸಾಕ್ಷ್ಯಾಧಾರಿತ ಮತ್ತು ಪಾರದರ್ಶಕ ಆಡಳಿತದಲ್ಲಿ ಮಾಪನಶಾಸ್ತ್ರದ ಪಾತ್ರವನ್ನು ಉಲ್ಲೇಖಿಸುತ್ತದೆ.
|
ದೈನಂದಿನ ಜೀವನದಲ್ಲಿ ಮಾಪನಶಾಸ್ತ್ರ: ನಿಖರತೆ, ನಂಬಿಕೆ ಮತ್ತು ನ್ಯಾಯೋಚಿತತೆಯನ್ನು ಖಚಿತಪಡಿಸುವುದು
ದೈನಂದಿನ ವಹಿವಾಟುಗಳು ಮತ್ತು ಸಾರ್ವಜನಿಕ ಸೇವೆಗಳಲ್ಲಿ ನಿಖರತೆ, ವಿಶ್ವಾಸಾರ್ಹತೆ ಹಾಗೂ ನ್ಯಾಯೋಚಿತತೆಯನ್ನು ಖಾತರಿಪಡಿಸುವ ಮೂಲಕ ಮಾಪನಶಾಸ್ತ್ರವು ದೈನಂದಿನ ಜೀವನದ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ಕಾನೂನು ಮಾಪನಶಾಸ್ತ್ರದ ವ್ಯವಸ್ಥೆಗಳು ವಿವಿಧ ರೀತಿಯ ತೂಕ ಮತ್ತು ಅಳತೆ ಉಪಕರಣಗಳನ್ನು ನಿಯಂತ್ರಿಸುತ್ತವೆ. ಇವುಗಳಲ್ಲಿ ಪೆಟ್ರೋಲ್ ಪಂಪ್‌ಗಳು, ಕಿರಾಣಿ ಅಂಗಡಿಗಳು, ಚಿನ್ನದ ಅಂಗಡಿಗಳು, ಆಸ್ಪತ್ರೆಗಳು, ವಿದ್ಯುತ್ ಮೀಟರ್‌ಗಳು, ನೀರು ಸರಬರಾಜು ವ್ಯವಸ್ಥೆಗಳು ಮತ್ತು ಪ್ಯಾಕ್ ಮಾಡಲಾದ ಸರಕುಗಳಲ್ಲಿ ಬಳಸುವ ಉಪಕರಣಗಳು ಸೇರಿವೆ. ಗ್ರಾಹಕರು ತಾವು ಖರೀದಿಸುವ ವಸ್ತುಗಳು ಮತ್ತು ಪಡೆಯುವ ಸೇವೆಗಳಿಗೆ ಸರಿಯಾದ ಪ್ರಮಾಣ ಹಾಗೂ ಮೌಲ್ಯವನ್ನು ಪಡೆಯುವುದನ್ನು ಇದು ಖಚಿತಪಡಿಸುತ್ತದೆ. ಈ ವ್ಯವಸ್ಥೆಗಳು ಕಡಿಮೆ ಪ್ರಮಾಣದ ವಿತರಣೆ, ತಪ್ಪಾದ ಬಿಲ್ಲಿಂಗ್ ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ; ಆ ಮೂಲಕ ದೈನಂದಿನ ವಾಣಿಜ್ಯ ವಹಿವಾಟುಗಳಲ್ಲಿ ಗ್ರಾಹಕರ ವಿಶ್ವಾಸವನ್ನು ಬಲಪಡಿಸುತ್ತವೆ.
ನಿಖರವಾದ ಮಾಪನ ವ್ಯವಸ್ಥೆಗಳು ಸಾರ್ವಜನಿಕ ಕಲ್ಯಾಣ ಮತ್ತು ಸುರಕ್ಷತೆಗೂ ಕೊಡುಗೆ ನೀಡುತ್ತವೆ. ಸೇವೆ ಒದಗಿಸಲು ಬಳಸುವ ತಾಂತ್ರಿಕ ಉಪಕರಣಗಳು, ಮಾಪನ ಘಟಕಗಳು ಮತ್ತು ಯಂತ್ರಗಳ ಪ್ರಮಾಣೀಕರಣವನ್ನು ಮಾಪನಶಾಸ್ತ್ರವು ಖಚಿತಪಡಿಸುತ್ತದೆ. ಇದು ನಿಖರವಾದ ವೈದ್ಯಕೀಯ ತಪಾಸಣೆ ಮತ್ತು ರೋಗನಿರ್ಣಯ, ವಿದ್ಯುತ್, ನೀರು ಹಾಗೂ ಅನಿಲ ಬಳಕೆಯ ವಿಶ್ವಾಸಾರ್ಹ ಉಸ್ತುವಾರಿ, ಮತ್ತು ವೇಗ ಮಾಪನ ಸಾಧನಗಳ ಮೂಲಕ ಪರಿಣಾಮಕಾರಿ ರಸ್ತೆ ಸುರಕ್ಷತೆಯ ಜಾರಿಯನ್ನು ಖಾತ್ರಿಗೊಳಿಸುತ್ತದೆ. ಹೀಗೆ, ಏಕರೂಪದ ಮಾನದಂಡಗಳು ಮತ್ತು ಪರಿಶೀಲನಾ ಕಾರ್ಯವಿಧಾನಗಳನ್ನು ಕಾಯ್ದುಕೊಳ್ಳುವ ಮೂಲಕ, ಮಾಪನಶಾಸ್ತ್ರವು ದೈನಂದಿನ ಆರ್ಥಿಕ ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲಿ ನಂಬಿಕೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ.
ಪ್ರಾಚೀನ ಭಾರತದ ಮಾಪನ ಪರಂಪರೆ ಮತ್ತು ವಾಣಿಜ್ಯ ವ್ಯವಸ್ಥೆಗಳು
ಪ್ರಾಚೀನ ಭಾರತವು ಅತ್ಯಂತ ಸುಸಂಘಟಿತವಾದ ತೂಕ ಮತ್ತು ಅಳತೆಗಳ ಪದ್ಧತಿಯನ್ನು ಹೊಂದಿತ್ತು. ಇವು ವ್ಯಾಪಾರ, ವಾಣಿಜ್ಯ, ತೆರಿಗೆ, ಆಭರಣ ತಯಾರಿಕೆ, ಕೃಷಿ ಮತ್ತು ದೈನಂದಿನ ಆರ್ಥಿಕ ವಹಿವಾಟುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಈ ವ್ಯವಸ್ಥೆಗಳು ಬೀಜಗಳು, ಧಾನ್ಯಗಳು, ದೇಹದ ಅಳತೆಗಳು ಮತ್ತು ಗಣಿತದ ಅನುಪಾತಗಳಿಂದ ಪಡೆದ ಪ್ರಮಾಣೀಕೃತ ಘಟಕಗಳನ್ನು ಆಧರಿಸಿದ್ದವು. ಈ ಆಚರಣೆಗಳು ಕಾಲಕ್ರಮೇಣ ವ್ಯವಸ್ಥಿತ ಹಾಗೂ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ವಾಣಿಜ್ಯ ಮಾಪನ ಮಾನದಂಡಗಳಾಗಿ ವಿಕಸನಗೊಂಡವು.
ಪ್ರಾಚೀನ ಭಾರತದಲ್ಲಿ ವಾಣಿಜ್ಯ ಮತ್ತು ಪ್ರಾಯೋಗಿಕ ಉದ್ದೇಶಗಳಿಗಾಗಿ ಹಲವಾರು ಪ್ರಮಾಣೀಕೃತ ಘಟಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು:
- ರತಿ: ಮುಖ್ಯವಾಗಿ ಚಿನ್ನ, ರತ್ನಗಳು ಮತ್ತು ಇತರ ಅಮೂಲ್ಯ ವಸ್ತುಗಳನ್ನು ತೂಗಲು ಬಳಸಲಾಗುತ್ತಿದ್ದ ಬೀಜ ಆಧಾರಿತ ಸಣ್ಣ ಘಟಕ.
- ಮಾಷ: ನಿರ್ದಿಷ್ಟ ಸಂಖ್ಯೆಯ 'ರತಿ'ಗಳಿಂದ ಪಡೆದ ಅದಕ್ಕಿಂತ ದೊಡ್ಡದಾದ ಒಂದು ಘಟಕ.
- ತೋಲ: ವಾಣಿಜ್ಯ ವಹಿವಾಟುಗಳು ಮತ್ತು ಅಮೂಲ್ಯ ಲೋಹಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತಿದ್ದ ಒಂದು ಘಟಕ.
- ಸೇರು (Seer): ವ್ಯಾಪಾರ ಮತ್ತು ಮಾರುಕಟ್ಟೆ ವಹಿವಾಟುಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿದ್ದ ದೊಡ್ಡ ಘಟಕ.
- ಮಣ ಮತ್ತು ಕ್ಯಾಂಡಿ: ಸಗಟು ವ್ಯಾಪಾರ, ದಾಸ್ತಾನು ಮತ್ತು ಕೃಷಿ ವಹಿವಾಟುಗಳಿಗಾಗಿ ಬಳಸಲಾಗುತ್ತಿದ್ದ ಬೃಹತ್ ಪ್ರಮಾಣದ ಘಟಕಗಳು.

ಪ್ರಾಚೀನ ಭಾರತದ ಮಾಪನ ಪದ್ಧತಿಗಳು ಇವುಗಳನ್ನೂ ಒಳಗೊಂಡಿದ್ದವು:
- ಉದ್ದ, ತೂಕ ಮತ್ತು ಸಾಮರ್ಥ್ಯವನ್ನು ಅಳೆಯುವ ವಿವಿಧ ವ್ಯವಸ್ಥೆಗಳು.
- ಮೊಳ ಮತ್ತು ಗೇಣುಗಳಂತಹ ದೇಹ ಆಧಾರಿತ ಮಾಪನಗಳು.
- ಲೆಕ್ಕಾಚಾರ ಮತ್ತು ಪ್ರಮಾಣಾನುಗುಣ ವಿಭಜನೆಗಾಗಿ ಬೈನರಿ (ದ್ವಿಮಾನ), ಡೆಸಿಮಲ್ (ದಶಮಾಂಶ) ಮತ್ತು ಆಕ್ಟನರಿ (ಅಷ್ಟಮಾನ) ಸಂಖ್ಯಾ ಪದ್ಧತಿಗಳ ಬಳಕೆ.
ಸಿಂಧೂ ಕಣಿವೆ ನಾಗರಿಕತೆಯು ಅತ್ಯಂತ ಪ್ರಮಾಣೀಕೃತ ಮಾಪನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿತ್ತು; ಇದು ಅವರ ಮುನ್ನಡೆದ ನಗರಾಭಿವೃದ್ಧಿ ಯೋಜನೆ, ವ್ಯಾಪಾರ ಮತ್ತು ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಮೌರ್ಯ ಸಾಮ್ರಾಜ್ಯದ ಅವಧಿಯಲ್ಲಿ (ಕ್ರಿ.ಪೂ. 322-185), ಆಡಳಿತ, ತೆರಿಗೆ ಮತ್ತು ವ್ಯಾಪಾರ ನಿಯಂತ್ರಣಕ್ಕಾಗಿ ಸುಸಂಘಟಿತ ತೂಕ ಮತ್ತು ಅಳತೆಗಳ ಪದ್ಧತಿಗಳನ್ನು ಪರಿಚಯಿಸಲಾಯಿತು. ನಂತರ, ಶೇರ್ ಶಾ ಸೂರಿಯು ತೂಕ ಮತ್ತು ಅಳತೆಗಳನ್ನು ಪ್ರಮಾಣೀಕರಿಸಿದನು ಹಾಗೂ 'ರುಪಿಯಾ' ನಾಣ್ಯವನ್ನು ಪರಿಚಯಿಸಿದನು, ಇದು ಆಧುನಿಕ ರೂಪಾಯಿಗೆ ಮುನ್ಸೂಚನೆಯಾಯಿತು.
ಭಾರತದ ಕಾನೂನು ಮಾಪನಶಾಸ್ತ್ರ ಚೌಕಟ್ಟಿನ ವಿಕಸನ
ಭಾರತದ ಆಧುನಿಕ ಮಾಪನಶಾಸ್ತ್ರದ ಪ್ರಯಾಣವು 1947 ರಲ್ಲಿ ರಾಷ್ಟ್ರೀಯ ಭೌತಿಕ ಪ್ರಯೋಗಾಲಯದ ಸ್ಥಾಪನೆಯೊಂದಿಗೆ ರೂಪುಗೊಳ್ಳಲು ಪ್ರಾರಂಭಿಸಿತು. ಇದರ ಬೆನ್ನಲ್ಲೇ, ದೇಶಾದ್ಯಂತ ಏಕರೂಪತೆಯನ್ನು ತರಲು 'ತೂಕ ಮತ್ತು ಅಳತೆಗಳ ಮಾನದಂಡಗಳ ಕಾಯ್ದೆ, 1956' ಅನ್ನು ಜಾರಿಗೆ ತರಲಾಯಿತು. ಭಾರತವು 1957-58ರ ಅವಧಿಯಲ್ಲಿ 'ಮೀಟರ್ ಸಮಾವೇಶ'ಕ್ಕೆ ಸಹಿ ಹಾಕುವ ಮೂಲಕ ಮತ್ತು ಅಂತರರಾಷ್ಟ್ರೀಯ ಘಟಕಗಳ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಜಾಗತಿಕ ಹೊಂದಾಣಿಕೆಯನ್ನು ಇನ್ನಷ್ಟು ಬಲಪಡಿಸಿತು. ತದನಂತರದ ಶಾಸಕಾಂಗ ಸುಧಾರಣೆಗಳು, ಅಂದರೆ 1976 ಮತ್ತು 2009 ರಲ್ಲಿ ಜಾರಿಗೆ ತರಲಾದ ಕಾನೂನುಗಳು, ಭಾರತದ ಕಾನೂನು ಮಾಪನಶಾಸ್ತ್ರದ ಚೌಕಟ್ಟನ್ನು ಮತ್ತಷ್ಟು ಆಧುನೀಕರಿಸಿದವು ಮತ್ತು ಬಲಪಡಿಸಿದವು.
|
ಅಂತರರಾಷ್ಟ್ರೀಯ ಘಟಕಗಳ ವ್ಯವಸ್ಥೆ
'ಎಸ್‌ಐ' ಘಟಕಗಳು ಪ್ರಪಂಚದಾದ್ಯಂತ ಮಾಪನಕ್ಕಾಗಿ ಬಳಸಲಾಗುವ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ಪ್ರಮಾಣೀಕೃತ ಘಟಕಗಳಾಗಿವೆ. ಈ ಘಟಕಗಳನ್ನು ಎಂದಿಗೂ ಬದಲಾಗದ ನಿರ್ದಿಷ್ಟ ವೈಜ್ಞಾನಿಕ ಸ್ಥಿರಾಂಕಗಳನ್ನು ಬಳಸಿ ವ್ಯಾಖ್ಯಾನಿಸಲಾಗಿದೆ. ಇದು ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಮಾಪನಗಳು ನಿಖರವಾಗಿ, ಏಕರೂಪವಾಗಿ ಮತ್ತು ವಿಶ್ವಾಸಾರ್ಹವಾಗಿರುವುದನ್ನು ಖಚಿತಪಡಿಸುತ್ತದೆ. ಮೀಟರ್, ಕಿಲೋಗ್ರಾಂ ಮತ್ತು ಸೆಕೆಂಡ್‌ಗಳಂತಹ ಘಟಕಗಳು ಈ 'ಎಸ್‌ಐ' ವ್ಯವಸ್ಥೆಯ ಭಾಗವಾಗಿವೆ. ಈ ವ್ಯವಸ್ಥೆಯು ವಿಜ್ಞಾನ, ವ್ಯಾಪಾರ, ಕೈಗಾರಿಕೆ ಮತ್ತು ದೈನಂದಿನ ಜೀವನದಲ್ಲಿ ನಿರಂತರ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
|

ರಾಷ್ಟ್ರೀಯ ಭೌತಿಕ ಪ್ರಯೋಗಾಲಯ - 1947
ರಾಷ್ಟ್ರೀಯ ಭೌತಿಕ ಪ್ರಯೋಗಾಲಯವು ಭಾರತದ ರಾಷ್ಟ್ರೀಯ ಮಾಪನ ಸಂಸ್ಥೆಯಾಗಿ ಮತ್ತು ಮೀಟರ್ ಹಾಗೂ ಕಿಲೋಗ್ರಾಂನ ರಾಷ್ಟ್ರೀಯ ಮೂಲಮಾದರಿಗಳ ಪಾಲಕ ಸಂಸ್ಥೆಯಾಗಿ ಹೊರಹೊಮ್ಮಿತು. ವಿವಿಧ ರಾಜ್ಯಗಳಾದ್ಯಂತ ಪ್ರಮಾಣೀಕರಣ ಮತ್ತು ಪರಿಶೀಲನಾ ವ್ಯವಸ್ಥೆಗಳನ್ನು ಬಲಪಡಿಸಲು ಪ್ರಾದೇಶಿಕ ಉಲ್ಲೇಖ ಗುಣಮಟ್ಟದ ಪ್ರಯೋಗಾಲಯಗಳನ್ನು ಸ್ಥಾಪಿಸಲಾಯಿತು. ಇವು ಪ್ರಯೋಗಾಲಯಗಳಲ್ಲಿ ಮತ್ತು ವಾಣಿಜ್ಯ ವ್ಯಾಪಾರ ಚಟುವಟಿಕೆಗಳಲ್ಲಿ ಬಳಸಲಾಗುವ ಮಾನದಂಡಗಳನ್ನು ಹೋಲಿಸಿ ಪರಿಶೀಲಿಸುತ್ತವೆ.
|
ರಾಷ್ಟ್ರೀಯ ಭೌತಿಕ ಪ್ರಯೋಗಾಲಯದ ಕೆಲವು ಗಮನಾರ್ಹ ಸಾಧನೆಗಳು
ಭಾರತದ ಎನ್‌ಪಿಎಲ್, 'ಏಷ್ಯಾ ಪೆಸಿಫಿಕ್ ಮಾಪನಶಾಸ್ತ್ರ ಕಾರ್ಯಕ್ರಮ'ದ ಸ್ಥಾಪಕ ಸದಸ್ಯ ಸಂಸ್ಥೆಯಾಗಿ ಕಾರ್ಯನಿರ್ವಹಿಸಿದೆ. ಎಪಿಎಂಪಿ ಎಂಬುದು ಏಷ್ಯಾ-ಪೆಸಿಫಿಕ್ ವಲಯದ ರಾಷ್ಟ್ರೀಯ ಮಾಪನಶಾಸ್ತ್ರ ಸಂಸ್ಥೆಗಳ ಒಂದು ಒಕ್ಕೂಟವಾಗಿದೆ. ಈ ಸಂಸ್ಥೆಗಳು ತಮ್ಮ ಪರಿಣತಿ ಹಾಗೂ ತಾಂತ್ರಿಕ ಸೇವೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಪ್ರಾದೇಶಿಕ ಮಾಪನ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ತೊಡಗಿಸಿಕೊಂಡಿವೆ.
ಚುನಾವಣೆಗಳಲ್ಲಿ ಬಳಸಲಾಗುವ, ಜಾಗತಿಕವಾಗಿ ಮನ್ನಣೆ ಪಡೆದಿರುವ 'ಅಳಿಸಲಾಗದ ಶಾಯಿ'ಯನ್ನು ಎನ್‌ಪಿಎಲ್ ಅಭಿವೃದ್ಧಿಪಡಿಸಿದೆ. ವಿಶ್ವದ 37 ದೇಶಗಳ ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಈ ಶಾಯಿಯು, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಜಾಪ್ರಭುತ್ವದ ಪ್ರಭಾವವನ್ನು ಬಿಂಬಿಸುತ್ತದೆ.
ಇದರೊಂದಿಗೆ, ಎನ್‌ಪಿಎಲ್ ಪರಿಸರ ಮೇಲ್ವಿಚಾರಣಾ ಸಾಧನಗಳಿಗಾಗಿ ಭಾರತದ ಮೊದಲ ಪ್ರಮಾಣೀಕರಣ ಸೌಲಭ್ಯವನ್ನು ಮತ್ತು ವಿಶ್ವದರ್ಜೆಯ ಸೌರ ಕೋಶ ಮಾಪನಾಂಕ ನಿರ್ಣಯ ಸೌಲಭ್ಯವನ್ನು ಸ್ಥಾಪಿಸಿದೆ; ಹಾಗೂ ಆಯಕಟ್ಟಿನ ವಲಯಗಳಿಗಾಗಿ ಕಾರ್ಬನ್ ಕಾಂಪೋಸಿಟ್ ವಸ್ತುಗಳನ್ನು ಅಭಿವೃದ್ಧಿಪಡಿಸಿದೆ. ಈ ಪ್ರಗತಿಗಳು ಭಾರತದ ಕೈಗಾರಿಕಾ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವುದಲ್ಲದೆ, ದೇಶದ ನವೀಕರಿಸಬಹುದಾದ ಇಂಧನ ಹಾಗೂ ಸುಸ್ಥಿರತೆಯ ಗುರಿಗಳೊಂದಿಗೆ ಹೊಂದಿಕೆಯಾಗುತ್ತವೆ.
|
ತೂಕ ಮತ್ತು ಅಳತೆಗಳ ಮಾನದಂಡಗಳ ಕಾಯ್ದೆ, 1956 ಮತ್ತು 1976
ಭಾರತದಲ್ಲಿ ಏಕರೂಪದ, ವೈಜ್ಞಾನಿಕ ಮತ್ತು ಪ್ರಮಾಣೀಕೃತ ಮಾಪನ ವ್ಯವಸ್ಥೆಯನ್ನು ಸ್ಥಾಪಿಸಲು 'ತೂಕ ಮತ್ತು ಅಳತೆಗಳ ಮಾನದಂಡಗಳ ಕಾಯ್ದೆ, 1956' ಅನ್ನು ಜಾರಿಗೆ ತರಲಾಯಿತು. ಇದು ಮೆಟ್ರಿಕ್ ಪದ್ಧತಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ಮಾಪನ ಮಾನದಂಡಗಳನ್ನು ಆಧರಿಸಿದೆ. ಈ ಶಾಸನವು ಎಸ್‌ಐ ಘಟಕಗಳು ಮತ್ತು ಭಾರತವು ಸದಸ್ಯ ರಾಷ್ಟ್ರವಾಗಿರುವ 'ಅಂತರರಾಷ್ಟ್ರೀಯ ಕಾನೂನು ಮಾಪನಶಾಸ್ತ್ರ ಸಂಸ್ಥೆ' ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಜಾಗತಿಕ ಕಾನೂನು ಮಾಪನಶಾಸ್ತ್ರದ ಪದ್ಧತಿಗಳೊಂದಿಗೆ ಭಾರತವು ಹೊಂದಿಕೊಳ್ಳುವುದನ್ನು ಸುಗಮಗೊಳಿಸಿತು.
ಈ ಕಾಯ್ದೆಯನ್ನು 1976 ರಲ್ಲಿ ತಿದ್ದುಪಡಿ ಮಾಡಲಾಯಿತು, ಇದು 'ತೂಕ ಮತ್ತು ಅಳತೆಗಳ ಮಾನದಂಡಗಳ ಕಾಯ್ದೆ, 1976' ರ ಜಾರಿಗೆ ಕಾರಣವಾಯಿತು. ಇದು ಈ ಕೆಳಗಿನವುಗಳನ್ನು ಒಳಗೊಂಡಿತ್ತು:
- ಭಾರತೀಯ ಅಂಕಿಗಳ ಅಂತರರಾಷ್ಟ್ರೀಯ ರೂಪಕ್ಕೆ ಅನುಗುಣವಾಗಿ ಪ್ರಮಾಣೀಕೃತ ಸಂಖ್ಯಾ ಪದ್ಧತಿಯನ್ನು ಪರಿಚಯಿಸುವುದು.
- ತೂಕಗಳು, ಅಳತೆಗಳು ಮತ್ತು ಪ್ಯಾಕ್ ಮಾಡಲಾದ ಸರಕುಗಳನ್ನು ಒಳಗೊಂಡಿರುವ ರಾಜ್ಯಗಳ ನಡುವಿನ ವ್ಯಾಪಾರ ಮತ್ತು ವಾಣಿಜ್ಯದ ನಿಯಂತ್ರಣ.
- ತೂಕ ಮತ್ತು ಅಳತೆ ಉಪಕರಣಗಳ ಅನುಮೋದನೆ ಮತ್ತು ಪ್ರಮಾಣೀಕರಣ.
- ನಿರೀಕ್ಷಕರು ಮತ್ತು ಕಾನೂನು ಮಾಪನಶಾಸ್ತ್ರ ಅಧಿಕಾರಿಗಳಿಗೆ ತರಬೇತಿ ನೀಡಲು 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಮೆಟ್ರಾಲಜಿ' ಸ್ಥಾಪನೆಗೆ ಚಾಲನೆ ನೀಡುವುದು.
- ತೂಕ ಮತ್ತು ಅಳತೆಗಳ ಕಾನೂನುಗಳಿಗೆ ಸಂಬಂಧಿಸಿದ ಉಲ್ಲಂಘನೆಗಳಿಗಾಗಿ ದಂಡಗಳು ಮತ್ತು ಶಿಕ್ಷೆಗಳ ವಿಧಿಸುವಿಕೆ.
ಕಾನೂನು ಮಾಪನಶಾಸ್ತ್ರ ಕಾಯ್ದೆ, 2009
ಭಾರತದಲ್ಲಿ ತೂಕ ಮತ್ತು ಅಳತೆಗಳ ಮಾನದಂಡಗಳನ್ನು ಸ್ಥಾಪಿಸಲು ಮತ್ತು ಜಾರಿಗೊಳಿಸಲು 'ಕಾನೂನು ಮಾಪನಶಾಸ್ತ್ರ ಕಾಯ್ದೆ, 2009' ಅನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯು ತಂತ್ರಜ್ಞಾನದ ಪ್ರಗತಿಗಳು, ಆಧುನಿಕ ವ್ಯಾಪಾರ ಪದ್ಧತಿಗಳು ಮತ್ತು ಮಾಪನ ಹಾಗೂ ಪ್ರಮಾಣೀಕರಣದ ವಿಕಸನಗೊಳ್ಳುತ್ತಿರುವ ಮಾನದಂಡಗಳನ್ನು ತನ್ನಲ್ಲಿ ಒಳಗೊಂಡಿದೆ. ತೂಕ, ಅಳತೆ ಅಥವಾ ಸಂಖ್ಯೆಯ ಆಧಾರದ ಮೇಲೆ ಮಾರಾಟವಾಗುವ ಸರಕುಗಳ ವ್ಯಾಪಾರ ಮತ್ತು ವಾಣಿಜ್ಯವನ್ನು ಒಂದು ಆಧುನಿಕ ಕಾನೂನು ಚೌಕಟ್ಟಿನ ಮೂಲಕ ನಿಯಂತ್ರಿಸುವುದು ಇದರ ಉದ್ದೇಶವಾಗಿತ್ತು. ವಾಣಿಜ್ಯ ವಹಿವಾಟುಗಳಲ್ಲಿ ನಿಖರತೆ, ಪಾರದರ್ಶಕತೆ ಮತ್ತು ಗ್ರಾಹಕರ ಸಂರಕ್ಷಣೆಯನ್ನು ಖಾತರಿಪಡಿಸುವುದು ಇದರ ಮುಖ್ಯ ಉದ್ದೇಶಗಳಾಗಿದ್ದವು. ಈ ಕಾಯ್ದೆಯನ್ನು ಏಪ್ರಿಲ್ 1, 2011 ರಿಂದ ಜಾರಿಗೆ ತರಲಾಯಿತು. ಇದರ ಜಾರಿಯೊಂದಿಗೆ, 'ತೂಕ ಮತ್ತು ಅಳತೆಗಳ ಮಾನದಂಡಗಳ ಕಾಯ್ದೆ, 1976' ಮತ್ತು 'ತೂಕ ಮತ್ತು ಅಳತೆಗಳ (ಜಾರಿ) ಕಾಯ್ದೆ, 1985' ಅನ್ನು ರದ್ದುಗೊಳಿಸಲಾಯಿತು.
ಕಾನೂನು ಮಾಪನಶಾಸ್ತ್ರ ಕಾಯ್ದೆ, 2009 ರ ಪ್ರಮುಖ ವೈಶಿಷ್ಟ್ಯಗಳು ಇಂತಿವೆ:
- ಭಾರತದಾದ್ಯಂತ ಮೆಟ್ರಿಕ್ ಪದ್ಧತಿ ಮತ್ತು ಪ್ರಮಾಣೀಕೃತ ಮಾಪನ ಘಟಕಗಳ ಕಡ್ಡಾಯ ಅಳವಡಿಕೆ.
- ವ್ಯಾಪಾರ ಮತ್ತು ವಾಣಿಜ್ಯ ವಹಿವಾಟುಗಳಲ್ಲಿ ಬಳಸಲಾಗುವ ತೂಕ ಹಾಗೂ ಅಳತೆ ಉಪಕರಣಗಳ ನಿಯಂತ್ರಣ.
- ವಾಣಿಜ್ಯ ಬಳಕೆಗೆ ಮುನ್ನ ತೂಕ ಮತ್ತು ಅಳತೆಗಳ ಕಡ್ಡಾಯ ಪರಿಶೀಲನ ಮತ್ತು ಮುದ್ರೆ ಒತ್ತುವಿಕೆ.
- ಮುಂಚಿತವಾಗಿ ಪ್ಯಾಕ್ ಮಾಡಲಾದ ಸರಕುಗಳ ಮೇಲೆ ಪ್ರಮಾಣ, ತೂಕ ಮತ್ತು ಮಾಪನದ ವಿವರಗಳು ಸೇರಿದಂತೆ ಕಡ್ಡಾಯ ಘೋಷಣೆಗಳನ್ನು ಪ್ರದರ್ಶಿಸುವುದು.
- ತೂಕದ ಉಪಕರಣಗಳ ತಯಾರಕರು, ವಿತರಕರು, ದುರಸ್ತಿ ಮಾಡುವವರು ಮತ್ತು ಆಮದುದಾರರಿಗೆ ನೋಂದಣಿ ಸೌಲಭ್ಯವನ್ನು ಒದಗಿಸುವುದು.
- ತಪಾಸಣೆ, ಶೋಧನೆ, ವಶಪಡಿಸಿಕೊಳ್ಳುವಿಕೆ ಮತ್ತು ಇತರ ಜಾರಿ ಕ್ರಮಗಳನ್ನು ಕೈಗೊಳ್ಳಲು ಕಾನೂನು ಮಾಪನಶಾಸ್ತ್ರ ಅಧಿಕಾರಿಗಳಿಗೆ ಅಧಿಕಾರ ನೀಡುವುದು.
- ಅಪ್ರಮಾಣಿತ ಅಥವಾ ಪರಿಶೀಲನೆಗೆ ಒಳಪಡದ ತೂಕ ಮತ್ತು ಅಳತೆಗಳ ಬಳಕೆಗೆ ದಂಡಗಳನ್ನು ವಿಧಿಸುವುದು.
ಕಾನೂನು ಮಾಪನಶಾಸ್ತ್ರ ಕಾಯ್ದೆಯಡಿ ಒಳಪಡುವ ಪ್ರಮುಖ ಸರಕುಗಳು
ಕಾನೂನು ಮಾಪನಶಾಸ್ತ್ರ ಕಾಯ್ದೆಯ ನಿಯಮಗಳ ಅಡಿಯಲ್ಲಿ ಸೇರಿಸಲಾದ ಪ್ರಮುಖ ಸರಕುಗಳು ಈ ಕೆಳಗಿನಂತಿವೆ:
- ತೂಕದ ಉಪಕರಣಗಳು: ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ಬಳಸುವ ತೂಕದ ಯಂತ್ರಗಳನ್ನು ಕಾನೂನು ಮಾಪನಶಾಸ್ತ್ರ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಿ, ಮುದ್ರೆ (stamped) ಒತ್ತಿರಬೇಕು. ಇದು ಗ್ರಾಹಕರು ತಾವು ಪಾವತಿಸುವ ಹಣಕ್ಕೆ ಸರಿಯಾದ ಪ್ರಮಾಣದ ವಸ್ತುವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ ಮತ್ತು ಯಂತ್ರಗಳನ್ನು ತಿರುಚುವುದನ್ನು ಅಥವಾ ಕಡಿಮೆ ತೂಕ ನೀಡುವುದನ್ನು ತಡೆಯುತ್ತದೆ.
- ಪ್ಯಾಕ್ ಮಾಡಲಾದ ಸರಕುಗಳು: ಆಹಾರ ಪದಾರ್ಥಗಳು, ಔಷಧಿಗಳು ಮತ್ತು ಗೃಹಬಳಕೆಯ ಉತ್ಪನ್ನಗಳಂತಹ ಪ್ಯಾಕ್ ಮಾಡಲಾದ ಸರಕುಗಳ ಮೇಲೆ ಅವುಗಳ ಪ್ರಮಾಣ, ಗರಿಷ್ಠ ಚಿಲ್ಲರೆ ಬೆಲೆ (MRP), ತಯಾರಿಕಾ ದಿನಾಂಕ ಮತ್ತು ತಯಾರಕರ ವಿವರಗಳಿಗೆ ಸಂಬಂಧಿಸಿದ ಕಡ್ಡಾಯ ಘೋಷಣೆಗಳಿರಬೇಕು. ಈ ವಿವರಗಳು ಗ್ರಾಹಕರು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತವೆ ಮತ್ತು ದಿಕ್ಕು ತಪ್ಪಿಸುವ ಪ್ಯಾಕೇಜಿಂಗ್ ಪದ್ಧತಿಗಳನ್ನು ತಡೆಯುತ್ತವೆ.
- ಇಂಧನ ವಿತರಕ ಯಂತ್ರಗಳು: ಪೆಟ್ರೋಲ್ ಪಂಪ್‌ಗಳಲ್ಲಿನ ಇಂಧನ ವಿತರಣಾ ಯಂತ್ರಗಳನ್ನು ನಿಯಮಿತವಾಗಿ ಪರಿಶೀಲಿಸಿ, ಮಾಪನಾಂಕ ನಿರ್ಣಯ ಮಾಡಲಾಗುತ್ತದೆ. ಇದು ಗ್ರಾಹಕರು ಯಂತ್ರದ ಪರದೆಯ ಮೇಲೆ ಪ್ರದರ್ಶಿಸಲಾದ ಇಂಧನದ ನಿಖರವಾದ ಪ್ರಮಾಣವನ್ನೇ ಪಡೆಯುವುದನ್ನು ಖಾತ್ರಿಗೊಳಿಸುತ್ತದೆ.
- ನೀರು ಮತ್ತು ವಿದ್ಯುತ್ ಮೀಟರ್ಗಳು: ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತತೆಯನ್ನು ಉತ್ತೇಜಿಸಲು ನೀರು ಹಾಗೂ ವಿದ್ಯುತ್ ಮೀಟರ್‌ಗಳು ಬಳಕೆಯಾಗುವ ಪ್ರಮಾಣವನ್ನು ನಿಖರವಾಗಿ ದಾಖಲಿಸಬೇಕು.
- ಕ್ಲಿನಿಕಲ್ ಮತ್ತು ವೈದ್ಯಕೀಯ ಉಪಕರಣಗಳು: ಥರ್ಮಾಮೀಟರ್‌ಗಳು (ತಾಪಮಾನ ಮಾಪಕ), ರಕ್ತದೊತ್ತಡದ ಮಾನಿಟರ್‌ಗಳು (BP ಯಂತ್ರಗಳು) ಮತ್ತು ತೂಕದ ಯಂತ್ರಗಳಂತಹ ವೈದ್ಯಕೀಯ ಉಪಕರಣಗಳನ್ನು ಕಾನೂನು ಮಾಪನಶಾಸ್ತ್ರದ ಕಾಯ್ದೆಗಳ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗೆ ನಿಖರವಾದ ಮಾಪನಗಳು ಅತ್ಯಗತ್ಯ.
- ದೂರಸಂಪರ್ಕ ಮತ್ತು ಡಿಜಿಟಲ್ ಸೇವೆಗಳು: ಮೊಬೈಲ್ ನೆಟ್‌ವರ್ಕ್‌ಗಳು, ಇಂಟರ್ನೆಟ್ ಸೇವೆಗಳು ಮತ್ತು ಆನ್‌ಲೈನ್ ಪಾವತಿ ವೇದಿಕೆಗಳಂತಹ ಡಿಜಿಟಲ್ ವ್ಯವಸ್ಥೆಗಳಿಗೆ ಅತ್ಯಂತ ನಿಖರವಾದ ಸಮಯ ಮತ್ತು ಸಿಗ್ನಲ್ ಮಾಪನಗಳ ಅಗತ್ಯವಿರುತ್ತದೆ. ನಿಖರವಾದ ಮಾಪನವು ಸುಗಮ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಡಿಜಿಟಲ್ ಸಂವಹನವನ್ನು ಖಚಿತಪಡಿಸುತ್ತದೆ.
- ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ತಯಾರಿಕೆ : ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್ ಟೆಲಿವಿಷನ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳು ಸೂಕ್ಷ್ಮ ಹಾಗೂ ನಿಖರವಾದ ತಯಾರಿಕೆಯನ್ನು ಅವಲಂಬಿಸಿವೆ. ಮಾಪನಶಾಸ್ತ್ರವು ಸೆಮಿಕಂಡಕ್ಟರ್ (ಅರ್ಧವಾಹಕ) ಉತ್ಪಾದನೆಯ ಸಮಯದಲ್ಲಿ ನಿಖರತೆಯನ್ನು ಖಾತರಿಪಡಿಸುತ್ತದೆ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಸರಿಯಾದ ಕಾರ್ಯನಿರ್ವಹಣೆಗೆ ಬೆಂಬಲ ನೀಡುತ್ತದೆ.
ಈ ಕಾಯ್ದೆಯಡಿ ರೂಪಿಸಲಾದ ನಿಯಮಗಳು (2011 ಮತ್ತು 2013)
ವಿವಿಧ ಸರಕುಗಳನ್ನು ನಿಯಂತ್ರಿಸಲು ಈ ಕಾಯ್ದೆಯಡಿ ಒಟ್ಟು 7 ನಿಯಮಗಳನ್ನು ರೂಪಿಸಲಾಗಿದೆ:
- ಕಾನೂನು ಮಾಪನಶಾಸ್ತ್ರ (ಸಾಮಾನ್ಯ) ನಿಯಮಗಳು: ಇವು ಎಲೆಕ್ಟ್ರಾನಿಕ್ ತೂಕದ ಯಂತ್ರಗಳು, ಪೆಟ್ರೋಲ್ ಪಂಪ್‌ಗಳು, ವೇಬ್ರಿಡ್ಜ್‌ಗಳು (ತೂಕದ ಸೇತುವೆಗಳು), ವಾಟರ್ ಮೀಟರ್‌ಗಳು, ಕ್ಲಿನಿಕಲ್ ಥರ್ಮಾಮೀಟರ್‌ಗಳು ಮತ್ತು ಸ್ಪಿಗ್ಮೋಮಾನೋಮೀಟರ್‌ಗಳು (ರಕ್ತದೊತ್ತಡ ಮಾಪಕ) ಸೇರಿದಂತೆ ಸುಮಾರು 40 ರೀತಿಯ ತೂಕ ಹಾಗೂ ಅಳತೆ ಉಪಕರಣಗಳನ್ನು ಒಳಪಡಿಸಿಕೊಳ್ಳುತ್ತವೆ.
- ಕಾನೂನು ಮಾಪನಶಾಸ್ತ್ರ (ಪ್ಯಾಕ್ ಮಾಡಲಾದ ಸರಕುಗಳು) ನಿಯಮಗಳು:ಈ ನಿಯಮಗಳು ಮುಂಚಿತವಾಗಿ ಪ್ಯಾಕ್ ಮಾಡಲಾದ ಸರಕುಗಳ ಮಾರಾಟವನ್ನು ನಿಯಂತ್ರಿಸುತ್ತವೆ ಮತ್ತು ಗ್ರಾಹಕರು ಖರೀದಿಸುವ ಮುನ್ನ ಉತ್ಪನ್ನಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪಡೆಯುವುದನ್ನು ಖಚಿತಪಡಿಸುತ್ತವೆ.
- ಕಾನೂನು ಮಾಪನಶಾಸ್ತ್ರ (ಮಾದರಿಗಳ ಅನುಮೋದನೆ) ನಿಯಮಗಳು: ಇವು ನಿರ್ದಿಷ್ಟಪಡಿಸಿದ ತೂಕ ಮತ್ತು ಅಳತೆ ಉಪಕರಣಗಳ ತಯಾರಕರು ಹಾಗೂ ಆಮದುದಾರರು ಅಂತಹ ಉಪಕರಣಗಳನ್ನು ತಯಾರಿಸುವ ಅಥವಾ ಆಮದು ಮಾಡಿಕೊಳ್ಳುವ ಮೊದಲು ಸರ್ಕಾರದಿಂದ ಕಡ್ಡಾಯವಾಗಿ ಮಾದರಿ ಅನುಮೋದನೆಯನ್ನು ಪಡೆಯುವುದನ್ನು ಕಡ್ಡಾಯಗೊಳಿಸುತ್ತವೆ.
- ಕಾನೂನು ಮಾಪನಶಾಸ್ತ್ರ (ರಾಷ್ಟ್ರೀಯ ಮಾನದಂಡಗಳು) ನಿಯಮಗಳು: ಈ ನಿಯಮಗಳ ಅಡಿಯಲ್ಲಿ, ತೂಕ ಮತ್ತು ಅಳತೆಗಳ ರಾಷ್ಟ್ರೀಯ ಮೂಲಮಾದರಿಗಳನ್ನು ಮತ್ತು ಪ್ರಾಥಮಿಕ ಮಾನದಂಡಗಳನ್ನು 'ರಾಷ್ಟ್ರೀಯ ಭೌತಿಕ ಪ್ರಯೋಗಾಲಯ'ದಲ್ಲಿ ನಿರ್ವಹಿಸಲಾಗುತ್ತದೆ.
- ಕಾನೂನು ಮಾಪನಶಾಸ್ತ್ರ (ಸಂಖ್ಯಾ ಲೇಖನ) ನಿಯಮಗಳು: ಈ ನಿಯಮಗಳ ಅಡಿಯಲ್ಲಿ, ಸಂಖ್ಯಾ ಲೇಖನ ವ್ಯವಸ್ಥೆಯನ್ನು ರೂಪಿಸಲು ಮತ್ತು ಅಂಕಿಗಳನ್ನು ಬರೆಯಬೇಕಾದ ಸರಿಯಾದ ವಿಧಾನದ ಬಗ್ಗೆ ನಿಬಂಧನೆಗಳನ್ನು ಅಳವಡಿಸಲಾಗಿದೆ.
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಮೆಟ್ರಾಲಜಿ ನಿಯಮಗಳು: ರಾಂಚಿಯಲ್ಲಿರುವ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಮೆಟ್ರಾಲಜಿ' ಸಂಸ್ಥೆಯು ಭಾರತದಲ್ಲಿನ ಕಾನೂನು ಮಾಪನಶಾಸ್ತ್ರ ಅಧಿಕಾರಿಗಳಿಗೆ ತರಬೇತಿ ನೀಡುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ನಿಯಮಗಳು ತರಬೇತಿ ಕೋರ್ಸ್‌ಗಳು, ಸಂಸ್ಥೆಯ ಕಾರ್ಯಗಳು ಮತ್ತು ಸಂಸ್ಥೆಗೆ ಪ್ರವೇಶ ಪಡೆಯಲು ಅಗತ್ಯವಿರುವ ಅರ್ಹತೆಗಳ ಕುರಿತು ನಿಬಂಧನೆಗಳನ್ನು ಸೂಚಿಸುತ್ತವೆ.
- ಕಾನೂನು ಮಾಪನಶಾಸ್ತ್ರ (ಸರ್ಕಾರ ಅನುಮೋದಿತ ಪರೀಕ್ಷಾ ಕೇಂದ್ರ) ನಿಯಮಗಳು: ನಿರ್ದಿಷ್ಟ ತೂಕ ಮತ್ತು ಅಳತೆಗಳ ಪರಿಶೀಲನೆಗಾಗಿ ಖಾಸಗಿ ವ್ಯಕ್ತಿಗಳು ಸ್ಥಾಪಿಸುವ ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳ ಅನುಮೋದನೆಗಾಗಿ ಈ ನಿಯಮಗಳನ್ನು ರೂಪಿಸಲಾಗಿದೆ.

ಈ ನಿಯಮಗಳಿಗೆ ಅನುಗುಣವಾಗಿ, ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ 'ಜಾರಿ ನಿಯಮಗಳನ್ನು' ರೂಪಿಸಿಕೊಂಡಿವೆ.
ವ್ಯಾಪಾರ ಮತ್ತು ತಂತ್ರಜ್ಞಾನದ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ನಿಯಮಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗುತ್ತದೆ. ಇತ್ತೀಚೆಗೆ, ಅಕ್ಟೋಬರ್ 2025 ರಲ್ಲಿ, ಸರ್ಕಾರಿ ಅನುಮೋದಿತ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಅದರಲ್ಲಿ ವಾಟರ್ ಮೀಟರ್‌ಗಳು, ಗ್ಯಾಸ್ ಮೀಟರ್‌ಗಳು, ಎನರ್ಜಿ (ವಿದ್ಯುತ್) ಮೀಟರ್‌ಗಳು ಮತ್ತು ಸ್ಪಿಗ್ಮೋಮಾನೋಮೀಟರ್‌ಗಳು (ರಕ್ತದೊತ್ತಡ ಮಾಪಕ) ಸೇರಿದಂತೆ 18 ವಿಭಾಗಗಳ ಮಾಪನ ಉಪಕರಣಗಳನ್ನು ಸೇರಿಸಲಾಗಿದೆ.
ಜನ ವಿಶ್ವಾಸ ಕಾಯ್ದೆ, 2023 ಮತ್ತು ಜನ ವಿಶ್ವಾಸ ಕಾಯ್ದೆ, 2026
'ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ, 2023' ವಿವಿಧ ಸಚಿವಾಲಯಗಳ ಅಡಿಯಲ್ಲಿನ ಹಲವಾರು ಕಾನೂನುಗಳಿಗೆ ತಿದ್ದುಪಡಿಗಳನ್ನು ತಂದಿತು; ಇದರಲ್ಲಿ 'ಕಾನೂನು ಮಾಪನಶಾಸ್ತ್ರ ಕಾಯ್ದೆ, 2009' ಕೂಡ ಸೇರಿದೆ. ಈ ಸುಧಾರಣೆಗಳ ಅಡಿಯಲ್ಲಿ, ಕಾನೂನು ಮಾಪನಶಾಸ್ತ್ರ ಕಾಯ್ದೆಯ ಏಳು ಸೆಕ್ಷನ್ಗಳನ್ನು ಅಪರಾಧ ಮುಕ್ತಗೊಳಿಸಲಾಯಿತು. ಅಂದರೆ ಆಯ್ದ ಪ್ರಕರಣಗಳಲ್ಲಿ ಜೈಲು ಶಿಕ್ಷೆಯ ನಿಬಂಧನೆಗಳ ಬದಲಿಗೆ ವಿತ್ತೀಯ ದಂಡಗಳನ್ನು ವಿಧಿಸುವ ವ್ಯವಸ್ಥೆಯನ್ನು ತರಲಾಯಿತು. ಕಾನೂನು ಮಾಪನಶಾಸ್ತ್ರ ಕಾಯ್ದೆಗೆ ತರಲಾದ ಈ ತಿದ್ದುಪಡಿಗಳು 1 ಅಕ್ಟೋಬರ್ 2023 ರಿಂದ ಜಾರಿಗೆ ಬಂದವು. ಈ ಸುಧಾರಣೆಗಳು ಸುಲಭ ವ್ಯಾಪಾರವನ್ನು ಸುಧಾರಿಸುವ, ನಿಯಮಗಳ ಪಾಲನೆಯ ಹೊರೆಯನ್ನು ಕಡಿಮೆ ಮಾಡುವ ಮತ್ತು ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ; ಅದೇ ಸಮಯದಲ್ಲಿ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದನ್ನು ಮತ್ತು ವ್ಯಾಪಾರ ಹಾಗೂ ಮಾಪನ ವ್ಯವಸ್ಥೆಗಳಲ್ಲಿ ಹೊಣೆಗಾರಿಕೆಯನ್ನು ಕಾಯ್ದುಕೊಳ್ಳುವುದನ್ನು ಮುಂದುವರಿಸುತ್ತವೆ.
'ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ, 2026' ನಿಯಮಗಳ ಪಾಲನೆಯ ಹೊರೆಯನ್ನು ಕಡಿಮೆ ಮಾಡಲು ಮತ್ತಷ್ಟು ಸುಧಾರಣೆಗಳನ್ನು ಪರಿಚಯಿಸಿತು. ಇದು ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸುಲಭ ವ್ಯಾಪಾರ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ಈ ತಿದ್ದುಪಡಿಗಳು ವ್ಯವಹಾರಗಳು ಯಾವುದೇ ತಕ್ಷಣದ ದಂಡನಾತ್ಮಕ ಕ್ರಮ ಎದುರಿಸದೆಯೇ ತಮ್ಮ ಕಾರ್ಯವಿಧಾನದ ಲೋಪದೋಷಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡುವ ಮೂಲಕ ಸ್ವಯಂಪ್ರೇರಿತ ಅನುಸರಣೆಯನ್ನು ಪ್ರೋತ್ಸಾಹಿಸಲು ಮುಂದಾಗಿವೆ. ಕಾನೂನು ಮಾಪನಶಾಸ್ತ್ರ ಕಾಯ್ದೆ, 2009 ರ ಹಿಂದಿನ ನಿಬಂಧನೆಗಳ ಅಡಿಯಲ್ಲಿ, ನಿಗದಿಪಡಿಸಿದ ದಾಖಲೆಗಳನ್ನು ನಿರ್ವಹಿಸಲು ಅಥವಾ ಸಲ್ಲಿಸಲು ವಿಫಲವಾದರೆ ನೇರ ದಂಡವನ್ನು ವಿಧಿಸಲಾಗುತ್ತಿತ್ತು. ಆದರೆ ಈ ತಿದ್ದುಪಡಿಗಳು ಮೊದಲ ಬಾರಿಗೆ ಆಗುವ ಲೋಪಗಳಿಗಾಗಿ "ಸುಧಾರಣಾ ನೋಟಿಸ್" ವಿಧಾನವನ್ನು ಪರಿಚಯಿಸಿವೆ. ಇದು ಎಂಎಸ್‌ಎಂಇ ಆಮದುದಾರರು ಮತ್ತು ವ್ಯವಹಾರಗಳಿಗೆ ದಂಡ ವಿಧಿಸುವ ಮುನ್ನ, ಒಂದು ನಿರ್ದಿಷ್ಟ ಅವಧಿಯೊಳಗೆ ತಮ್ಮ ಅನುಸರಣೆಯ ಕೊರತೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುತ್ತದೆ. ಈ ಸುಧಾರಣೆಯು ನಂಬಿಕೆ ಆಧಾರಿತ ಆಡಳಿತ, ಸುಗಮ ನಿಯಂತ್ರಣ ಜಾರಿ ಮತ್ತು ಉದ್ಯಮಸ್ನೇಹಿ ನಿಯಮ ಪಾಲನೆಯ ಚೌಕಟ್ಟಿನ ಕಡೆಗಿನ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.
ಮಾಪನಶಾಸ್ತ್ರ ಮತ್ತು ಕಾನೂನು ಮಾಪನಶಾಸ್ತ್ರದಲ್ಲಿ ಸರ್ಕಾರದ ಪ್ರಮುಖ ಉಪಕ್ರಮಗಳು
ಇ-ಮಾಪ್ ಪೋರ್ಟಲ್ ಗ್ರಾಹಕ ವ್ಯವಹಾರಗಳ ಇಲಾಖೆಯು ಪ್ರಾರಂಭಿಸಿರುವ 'ಇ-ಮಾಪ್' ಪೋರ್ಟಲ್, ಸುಲಭ ವ್ಯಾಪಾರವನ್ನು ಹೆಚ್ಚಿಸುವ ಮತ್ತು G2B (ಸರ್ಕಾರದಿಂದ ವ್ಯವಹಾರಗಳಿಗೆ) ಸೇವೆಗಳ ವಿತರಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಪೋರ್ಟಲ್ ಕಾನೂನು ಮಾಪನಶಾಸ್ತ್ರ ಕಾಯ್ದೆಯಡಿ ಬರುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಸರಳಗೊಳಿಸುತ್ತದೆ ಮತ್ತು ತರ್ಕಬದ್ಧಗೊಳಿಸುತ್ತದೆ. ಇದು ದಕ್ಷ ಮತ್ತು ಪಾರದರ್ಶಕ ಆಡಳಿತವನ್ನು ಸಕ್ರಿಯಗೊಳಿಸಲು ಮಾಹಿತಿ ತಂತ್ರಜ್ಞಾನವನ್ನು ಬಳಸುತ್ತದೆ. ಈ ಪೋರ್ಟಲ್ ಎಲ್ಲಾ ರಾಜ್ಯಗಳ ಕಾನೂನು ಮಾಪನಶಾಸ್ತ್ರ ವ್ಯವಸ್ಥೆಗಳನ್ನು ಕೇಂದ್ರ ವೇದಿಕೆಯೊಂದಿಗೆ ಸಂಯೋಜಿಸುತ್ತದೆ. ಈ ಪೋರ್ಟಲ್ ದೇಶಾದ್ಯಂತ ಇರುವ ತಯಾರಕರು, ವಿತರಕರು, ದುರಸ್ತಿ ಮಾಡುವವರು, ಆಮದುದಾರರು, ಪ್ಯಾಕರ್‌ಗಳು ಮತ್ತು ಪ್ಯಾಕ್ ಮಾಡಲಾದ ಸರಕುಗಳ ಉತ್ಪಾದಕರಿಗೆ ಆನ್ಲೈನ್ ನೋಟಿಸ್/ನೋಂದಣಿ ಸೇವೆಗಳನ್ನು ಒದಗಿಸುತ್ತದೆ.

ಒಂದು ದೇಶ, ಒಂದು ಸಮಯ ಉಪಕ್ರಮ
ಭಾರತವು ದೇಶಾದ್ಯಂತ ಮಿಲಿಸೆಕೆಂಡ್‌ನಿಂದ ಮೈಕ್ರೋಸೆಕೆಂಡ್ ನಿಖರತೆಯೊಂದಿಗೆ ಭಾರತೀಯ ಪ್ರಮಾಣಿತ ಸಮಯವನ್ನು ಪ್ರಸಾರ ಮಾಡಲು ‘ಒಂದು ದೇಶ, ಒಂದು ಸಮಯ’ ಉಪಕ್ರಮವನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಗ್ರಾಹಕ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ಮತ್ತು ಇಸ್ರೋ ಸಹಯೋಗದೊಂದಿಗೆ, ಭಾರತದಾದ್ಯಂತ ಇರುವ ಐದು ಕಾನೂನು ಮಾಪನಶಾಸ್ತ್ರ ಪ್ರಯೋಗಾಲಯಗಳ ಮೂಲಕ ಅನುಷ್ಠಾನಗೊಳಿಸುತ್ತಿದೆ.
ಈ ಉಪಕ್ರಮವು ದೂರಸಂಪರ್ಕ, ಬ್ಯಾಂಕಿಂಗ್, ನ್ಯಾವಿಗೇಷನ್ (ಸಂಚರಣೆ), ಪವರ್ ಗ್ರಿಡ್ಗಳು, ಡಿಜಿಟಲ್ ಆಡಳಿತ, 5G ಸೇವೆಗಳು, ಕೃತಕ ಬುದ್ಧಿಮತ್ತೆ, ಐಒಟಿ ಮತ್ತು ವೈಜ್ಞಾನಿಕ ಸಂಶೋಧನೆಯಂತಹ ವಲಯಗಳಾದ್ಯಂತ ಏಕರೂಪದ, ಅತ್ಯಂತ ನಿಖರವಾದ ಸಮಯ ಸಿಂಕ್ರೊನೈಸೇಶನ್ (ಸಮಯ ಹೊಂದಾಣಿಕೆ) ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದು ಜಿಪಿಎಸ್ ನಂತಹ ವಿದೇಶಿ ಸಮಯದ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಭದ್ರತೆ, ನಿರ್ಣಾಯಕ ಮೂಲಸೌಕರ್ಯ ನಿರ್ವಹಣೆ, ನಿಖರವಾದ ಆರ್ಥಿಕ ವಹಿವಾಟುಗಳು, ತುರ್ತು ಸಂದರ್ಭಗಳ ಸಂಯೋಜನೆ, ಕೈಗಾರಿಕಾ ದಕ್ಷತೆ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸೇವೆಗಳನ್ನು ಬಲಪಡಿಸಲು ಶ್ರಮಿಸುತ್ತದೆ.
ಒಐಎಂಎಲ್ ಪ್ರಮಾಣೀಕರಣದ ಮಾನ್ಯತೆಯ ಮೂಲಕ ಜಾಗತಿಕ ವ್ಯಾಪಾರದ ಬಲವರ್ಧನೆ
ಭಾರತವು 1956 ರಲ್ಲಿ ಅಂತರರಾಷ್ಟ್ರೀಯ ಕಾನೂನು ಮಾಪನಶಾಸ್ತ್ರ ಸಂಸ್ಥೆಯ ಸದಸ್ಯ ರಾಷ್ಟ್ರವಾಯಿತು. 2023 ರಲ್ಲಿ, ಇದು ತೂಕ ಮತ್ತು ಅಳತೆ ಉಪಕರಣಗಳಿಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ಒಐಎಂಎಲ್ ಅನುಮೋದನೆ ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ಪಡೆದ ವಿಶ್ವದ 13 ನೇ ದೇಶವಾಗಿ ಹೊರಹೊಮ್ಮಿತು. ಈ ಜಾಗತಿಕ ಮಾನ್ಯತೆಯು ಭಾರತೀಯ ತಯಾರಕರು ಯಾವುದೇ ಹೆಚ್ಚುವರಿ ಅಂತರರಾಷ್ಟ್ರೀಯ ಪರೀಕ್ಷಾ ವೆಚ್ಚಗಳಿಲ್ಲದೆ ತಮ್ಮ ಉಪಕರಣಗಳನ್ನು ಪ್ರಪಂಚದಾದ್ಯಂತ ರಫ್ತು ಮಾಡಲು ಅನುವು ಮಾಡಿಕೊಡುತ್ತದೆ; ಮತ್ತು ಇದರೊಂದಿಗೆ ಜಾಗತಿಕ ವ್ಯಾಪಾರ, ಮಾನದಂಡಗಳ ನಿರ್ಣಯ ಹಾಗೂ ಕಾನೂನು ಮಾಪನಶಾಸ್ತ್ರದ ಆಡಳಿತದಲ್ಲಿ ಭಾರತದ ಪಾತ್ರವನ್ನು ಬಲಪಡಿಸುತ್ತದೆ.

ಪ್ರಾದೇಶಿಕ ಉಲ್ಲೇಖ ಗುಣಮಟ್ಟದ ಪ್ರಯೋಗಾಲಯಗಳ ಬೆಂಬಲ ಹೊಂದಿರುವ ಈ ಪ್ರಮಾಣೀಕರಣ ವ್ಯವಸ್ಥೆಯು, ಭಾರತವು ವಿದೇಶಿ ತಯಾರಕರಿಗೆ ಪ್ರಮಾಣೀಕರಣ ಸೇವೆಗಳನ್ನು ಒದಗಿಸಲು, ವಿದೇಶಿ ವಿನಿಮಯ ಗಳಿಕೆಯನ್ನು ವೃದ್ಧಿಸಲು ಮತ್ತು ಅಂತರರಾಷ್ಟ್ರೀಯ ಒಐಎಂಎಲ್ ನೀತಿ ಹಾಗೂ ಕಾರ್ಯತಂತ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ.
ಸುಸ್ಥಿರತೆಯ ಮಾಪನ: ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಮಾಪನಶಾಸ್ತ್ರದ ಬೆಂಬಲ
ಮಾಪನಶಾಸ್ತ್ರವು ನಿಖರವಾದ, ವಿಶ್ವಾಸಾರ್ಹವಾದ ಮತ್ತು ಪ್ರಮಾಣೀಕೃತ ಮಾಪನಗಳನ್ನು ಖಚಿತಪಡಿಸುವ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡುತ್ತದೆ. ಇದು ವಿಶ್ವಾಸಾರ್ಹ ಮಾಪನ ವ್ಯವಸ್ಥೆಗಳ ಮೂಲಕ ನ್ಯಾಯೋಚಿತ ವ್ಯಾಪಾರ ಪದ್ಧತಿಗಳು, ಪಾರದರ್ಶಕ ಬೆಲೆ ನಿಗದಿ ಮತ್ತು ಗ್ರಾಹಕರ ರಕ್ಷಣೆಯನ್ನು ಉತ್ತೇಜಿಸುವ ಮೂಲಕ ಎಸ್‌ಡಿಜಿ 1 (ಬಡತನ ನಿರ್ಮೂಲನೆ) ಅನ್ನು ಬೆಂಬಲಿಸುತ್ತದೆ. ಎಸ್‌ಡಿಜಿ 3 (ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ) ರ ಅಡಿಯಲ್ಲಿ, ಮಾಪನಶಾಸ್ತ್ರವು ನಿಖರವಾದ ವೈದ್ಯಕೀಯ ರೋಗನಿರ್ಣಯ, ಕ್ಲಿನಿಕಲ್ ಮಾಪನಗಳು ಮತ್ತು ಸುರಕ್ಷಿತ ಚಿಕಿತ್ಸಾ ಪದ್ಧತಿಗಳ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ದಕ್ಷ ಇಂಧನ ವಿತರಣೆ, ನವೀಕರಿಸಬಹುದಾದ ಇಂಧನ ಸಂಯೋಜನೆ ಮತ್ತು ನಿಖರವಾದ ಇಂಧನ ಮೇಲ್ವಿಚಾರಣೆ ಹಾಗೂ ಬಿಲ್ಲಿಂಗ್ ಅನ್ನು ಸಕ್ರಿಯಗೊಳಿಸುವ ಮೂಲಕ SDG 7 (ಕೈಗೆಟುಕುವ ಮತ್ತು ಸ್ವಚ್ಛ ಇಂಧನ) ಅನ್ನು ಉತ್ತೇಜಿಸುತ್ತದೆ. ಮಾಪನಶಾಸ್ತ್ರವು ಕೈಗಾರಿಕಾ ಗುಣಮಟ್ಟ, ಮಾಪನಾಂಕ ನಿರ್ಣಯ, ಪರೀಕ್ಷೆ ಮತ್ತು ತಾಂತ್ರಿಕ ಆವಿಷ್ಕಾರಗಳನ್ನು ಸುಧಾರಿಸುವ ಮೂಲಕ ಎಸ್‌ಡಿಜಿ 9 (ಕೈಗಾರಿಕೆ, ಆವಿಷ್ಕಾರ ಮತ್ತು ಮೂಲಸೌಕರ್ಯ) ಕ್ಕೂ ಕೊಡುಗೆ ನೀಡುತ್ತದೆ. ಇದಲ್ಲದೆ, ಇದು ನಿಖರವಾದ ಪರಿಸರ ಮೇಲ್ವಿಚಾರಣೆ, ಹವಾಮಾನ ಸಂಶೋಧನೆ ಮತ್ತು ವಾತಾವರಣ ಹಾಗೂ ಪರಿಸರ ಬದಲಾವಣೆಗಳ ವೈಜ್ಞಾನಿಕ ಮೌಲ್ಯಮಾಪನದ ಮೂಲಕ SDG 13 (ಹವಾಮಾನ ಕ್ರಮ) ಅನ್ನು ಬೆಂಬಲಿಸುತ್ತದೆ.
ಪಾರದರ್ಶಕ ಮತ್ತು ಗ್ರಾಹಕ-ಕೇಂದ್ರಿತ ಮಾಪನ ಪರಿಸರ ವ್ಯವಸ್ಥೆಯ ನಿರ್ಮಾಣ
ಭಾರತದ ಕಾನೂನು ಮಾಪನಶಾಸ್ತ್ರದ ಚೌಕಟ್ಟು ತಂತ್ರಜ್ಞಾನದ ಪ್ರಗತಿಗಳು, ಬದಲಾಗುತ್ತಿರುವ ವ್ಯಾಪಾರ ಪದ್ಧತಿಗಳು ಮತ್ತು ಉದಯೋನ್ಮುಖ ಗ್ರಾಹಕ ಅಗತ್ಯಗಳಿಗೆ ಅನುಗುಣವಾಗಿ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಸರ್ಕಾರವು ಇತ್ತೀಚೆಗೆ ಕೈಗೊಂಡಿರುವ ಉಪಕ್ರಮಗಳು ನಿಯಮಗಳ ಪಾಲನೆಯ ಹೊರೆಯನ್ನು ಕಡಿಮೆ ಮಾಡುವುದು, ಏಕರೂಪದ ಮಾಪನ ಮಾನದಂಡಗಳನ್ನು ಖಚಿತಪಡಿಸುವುದು, ನಿಖರತೆಯನ್ನು ಸುಧಾರಿಸುವುದು ಮತ್ತು ಡಿಜಿಟಲ್ ಆಡಳಿತದ ಕಾರ್ಯವಿಧಾನಗಳ ಮೂಲಕ ನಿಯಂತ್ರಕ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದರ ಮೇಲೆ ಗಮನ ಹರಿಸಿವೆ.

ಮುಂಚಿತವಾಗಿ ಪ್ಯಾಕ್ ಮಾಡಲಾದ ಸರಕುಗಳ ಮೇಲೆ ಕಡ್ಡಾಯ ಘೋಷಣೆಗಳ ಅಗತ್ಯತೆಗಳು ಮತ್ತು ಇ-ಕಾಮರ್ಸ್ ವೇದಿಕೆಗಳಿಗಾಗಿ 1 ಜುಲೈ 2027 ರಿಂದ ಜಾರಿಗೆ ಬರಲಿರುವ 'ಮೂಲ ದೇಶದ ಪ್ರಕಟಣೆ' ನಿಬಂಧನೆಗಳ ಪರಿಚಯದ ಮೂಲಕ ಗ್ರಾಹಕ ರಕ್ಷಣಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಒಟ್ಟಾರೆಯಾಗಿ, ಈ ಸುಧಾರಣೆಗಳು ಹೆಚ್ಚಿನ ಪಾರದರ್ಶಕತೆ, ವರ್ಧಿತ ಸುಲಭ ವ್ಯಾಪಾರ, ಬಲವಾದ ಗ್ರಾಹಕ ವಿಶ್ವಾಸ ಮತ್ತು ಭಾರತದ ಒಟ್ಟಾರೆ ಗುಣಮಟ್ಟದ ಮೂಲಸೌಕರ್ಯ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ.
References
Ministry of Consumer Affairs, Food & Public Distribution
https://emaap.gov.in/about_us
https://iilm.gov.in/more/act-rules
https://consumeraffairs.gov.in/pages/legal-metrology-act
https://consumeraffairs.gov.in/pages/legal-metrology-overview
https://www.pib.gov.in/PressReleasePage.aspx?PRID=2096622®=3&lang=2
https://www.pib.gov.in/PressReleasePage.aspx?PRID=2033114®=3&lang=2
https://www.pib.gov.in/PressReleasePage.aspx?PRID=2183777®=3&lang=1
https://www.pib.gov.in/PressReleasePage.aspx?PRID=2188363®=3&lang=2
https://www.pib.gov.in/PressReleasePage.aspx?PRID=2184053®=3&lang=2
https://www.pib.gov.in/PressReleaseIframePage.aspx?PRID=1957429®=3&lang=2
Ministry of Culture
https://ignca.gov.in/Asi_data/2517.pdf
Ministry of Science & Technology
https://www.pib.gov.in/PressReleaseIframePage.aspx?PRID=2078069®=3&lang=2
https://www.nplindia.in/wp-content/uploads/2021/10/Angela-Historical-perspective-20171129-APMP-2017-NPLI-Symposiumfin.pdf
United Nations
https://www.unesco.org/en/days/metrology
https://www.unido.org/sites/default/files/files/2020-08/The_role_of_Metrology_in_the_context_of_SDGs.pdf
International Organization of Legal Metrology (OIML)
https://www.oiml.org/en/files/pdf_e/e002-e03.pdf
https://www.worldmetrologyday.org/press_release.html
https://www.oiml.org/en/publications/oiml-bulletin/online-bulletin-1/2024-07/the-importance-of-metrology-from-early-civilization-to-digitalisation-the-indian-perspective
International Bureau of Weights and Measures (BIPM)
https://share.google/xMAPHbZcQO1eHojmD
Asia Pacific Metrology Programme
https://www.apmpweb.org/portal/list/channel/id/3.html
Government of NCT of Delhi
https://weightnmeasures.delhi.gov.in/weightnmeasures/about-us
Government of Kerala
https://lmd.kerala.gov.in/2025/06/04/2-meter-convention/
PIB Backgrounder
https://www.pib.gov.in/PressNoteDetails.aspx?NoteId=158002&ModuleId=3®=3&lang=3
Click here to see pdf
*****
(Explainer ID: 158664)
आगंतुक पटल : 27
Provide suggestions / comments